ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಹರಿಣಗಳ ಬಳಗದ ಸವಾಲು

ಕ್ರಿಕೆಟ್‌: ಇಂದು ಭಾರತ–ದಕ್ಷಿಣ ಆಫ್ರಿಕಾ ನಡುವಣ ಮೊದಲ ಟ್ವೆಂಟಿ–20 ಪಂದ್ಯ
Last Updated 1 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಧರ್ಮಶಾಲಾ (ಪಿಟಿಐ/ ಐಎಎನ್‌ಎಸ್‌): ಒಂದೆಡೆ ಮಹೇಂದ್ರ ಸಿಂಗ್‌ ದೋನಿ. ಇನ್ನೊಂದೆಡೆ ಫಾಫ್‌ ಡು ಪ್ಲೆಸಿಸ್‌. ಇವರಿಬ್ಬರಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದು ಈಗ ಕ್ರಿಕೆಟ್‌ ಪ್ರಿಯರನ್ನು ಕಾಡುತ್ತಿರುವ ಪ್ರಶ್ನೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಆಡುವ ಉಭಯ ಆಟಗಾರರು ಈಗ ತಮ್ಮ ತಮ್ಮ ರಾಷ್ಟ್ರ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಐಪಿಎಲ್‌ನಲ್ಲಿ  ಆಡುವಾಗ ದೋನಿ ಅವರಿಂದ ನಾಯಕತ್ವದ ಪಾಠಗಳನ್ನು ಕಲಿತಿರುವ ಪ್ಲೆಸಿಸ್‌ ಈಗ ‘ಕ್ಯಾಪ್ಟನ್‌ ಕೂಲ್‌’ಗೆ ಚಳ್ಳೆ ಹಣ್ಣು ತಿನ್ನಿಸಲು ಸಜ್ಜಾಗಿದ್ದಾರೆ.

ಭಾರತ ಮತ್ತು ದಕ್ಷಿಣ  ಆಫ್ರಿಕಾ ನಡುವಣ ಮಹಾತ್ಮ ಗಾಂಧಿ –ನೆಲ್ಸನ್‌ ಮಂಡೇಲಾ ಕಪ್‌ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಶುಕ್ರವಾರ ನಡೆಯಲಿದ್ದು ಇದಕ್ಕೆ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ (ಎಚ್‌ಪಿಸಿಎ) ಮೈದಾನದಲ್ಲಿ ವೇದಿಕೆಯೂ ಸಜ್ಜಾಗಿದೆ.

ಈ ವರ್ಷದ ಆರಂಭದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ದೋನಿ ಮೂರು ತಿಂಗಳ ಬಿಡುವಿನ ಬಳಿಕ ಆಡುತ್ತಿರುವ ಮೊದಲ ಚುಟುಕು ಕ್ರಿಕೆಟ್‌ ಪಂದ್ಯ ಇದು. ಹೀಗಾಗಿ ಅವರು ಈ ಪಂದ್ಯದಲ್ಲಿ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬ ಕುತೂಹಲವೂ ಗರಿಗೆದರಿದೆ.

ಈ ಪಂದ್ಯಕ್ಕೂ ಮುನ್ನ ನಡೆದ ಏಕೈಕ ಅಭ್ಯಾಸ ಪಂದ್ಯದಲ್ಲಿ ಭಾರತ ‘ಎ’ ತಂಡ  ಹರಿಣಗಳ ನಾಡಿನ ಬಳಗವನ್ನು ಮಣಿಸಿತ್ತು. ಎದುರಾಳಿ ತಂಡ ನೀಡಿದ್ದ  190ರನ್‌ಗಳ ಬೆಟ್ಟದಂತಹ ಗುರಿಯನ್ನು ಭಾರತದ ಯುವ ಪಡೆ ನಿರಾಯಾಸವಾಗಿ ಮೆಟ್ಟಿ ನಿಂತಿತ್ತು.

ಮುಂದಿನ ವರ್ಷ ತವರಿನಲ್ಲಿ ಟ್ವೆಂಟಿ–20 ವಿಶ್ವಕಪ್‌ ಟೂರ್ನಿ ನಡೆಯಲಿದ್ದು ಮಹತ್ವದ ಟೂರ್ನಿಗೆ ಸಜ್ಜಾಗಲೂ ಮಹಿ ಬಳಗಕ್ಕೆ ಈ ಸರಣಿ ವೇದಿಕೆ ಎನಿಸಿದೆ. ಹೀಗಾಗಿ ದೋನಿ ಈ ಪಂದ್ಯದಲ್ಲಿ ಕೆಲ ಬದಲಾವಣೆಗಳಿಗೆ ಕೈ ಹಾಕಿದರೂ ಅಚ್ಚರಿಯಿಲ್ಲ.

ಗಾಯಕ್ಕೊಳಗಾಗಿದ್ದ  ಎಡಗೈ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಗುಣಮುಖರಾಗಿರುವುದು ಭಾರತದ ಪಾಲಿಗೆ ಶುಭ ಸೂಚನೆ. ಧವನ್‌  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಬಾಂಗ್ಲಾ ‘ಎ’ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಶತಕ ಗಳಿಸಿ ಮಿಂಚಿದ್ದರು.

ಧವನ್‌ ಜತೆ ಇನಿಂಗ್ಸ್‌ ಆರಂಭಿಸುವವರು ಯಾರೂ ಎಂಬುದೂ ಕುತೂಹಲ ಹುಟ್ಟುಹಾಕಿದೆ. ರೋಹಿತ್‌ ಶರ್ಮಾ ಮತ್ತು ಅಜಿಂಕ್ಯ ರಹಾನೆ ನಡುವೆ ಆರಂಭಿಕ ಆಟಗಾರನ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಪ್ರಯೋಗಶೀಲ ನಾಯಕ  ಎಂದೇ ಕರೆಯಿಸಿಕೊಳ್ಳುವ ದೋನಿ ಅವರು ಧವನ್‌ ಜತೆ ರಹಾನೆ ಅವರನ್ನು ಕಣಕ್ಕಿಳಿಸಲೂಬಹುದು. ಹೀಗಾದಲ್ಲಿ ರೋಹಿತ್‌ ಮೂರನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ.

ಮಧ್ಯಮ ಕ್ರಮಾಂಕದಲ್ಲಿ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಸುರೇಶ್‌ ರೈನಾ ಮತ್ತು ದೋನಿ ಭಾರತದ ಆಧಾರ ಸ್ತಂಭಗಳಾಗಿದ್ದಾರೆ. ಇವರು ಹರಿಣಗಳ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲಬಲ್ಲ ಛಾತಿ ಹೊಂದಿದ್ದಾರೆ.

ಬೌಲಿಂಗ್‌ ವಿಷಯಕ್ಕೆ ಬಂದರೆ  ಭುವನೇಶ್ವರ್‌ ಕುಮಾರ್‌ ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವುದು ಖಚಿತ ಎನಿಸಿದೆ. ಆರು ತಿಂಗಳ ಬಳಿಕ ಮೊದಲ ಪಂದ್ಯ ಆಡುತ್ತಿರುವ ಅವರು ತಮ್ಮ ಸ್ವಿಂಗ್‌ ಎಸೆತಗಳ ಮೂಲಕ ಪ್ರವಾಸಿ ಬಳಗದ ಬ್ಯಾಟ್ಸ್‌ಮನ್‌ಗಳನ್ನು ಕಾಡಬಲ್ಲರು. ಇನ್ನು ಎರಡನೇ ವೇಗಿಯ ಸ್ಥಾನದಲ್ಲಿ ಕರ್ನಾಟಕದ ಎಸ್‌.ಅರವಿಂದ್‌ ಮತ್ತು  ಮೋಹಿತ್‌ ಶರ್ಮಾ ನಡುವೆ ಸ್ಪರ್ಧೆ ಇದೆ.

ಎಚ್‌ಪಿಸಿಎ ಪಿಚ್‌ನಲ್ಲಿ ಚೆಂಡು ಹೆಚ್ಚು ತಿರುವು ಪಡೆಯುತ್ತದೆ. ಹೀಗಾಗಿ ತಂಡದಲ್ಲಿ ಇಬ್ಬರು ಸ್ಪಿನ್ನರ್‌ಗಳಿಗೆ ಸ್ಥಾನ ಸಿಗುವುದು ಖಚಿತ. ಆದರೆ ಆ ಅದೃಷ್ಟ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕು. ಈ ಎರಡು ಸ್ಥಾನಕ್ಕಾಗಿ ರವಿಚಂದ್ರನ್‌ ಅಶ್ವಿನ್‌, ಹರಭಜನ್‌ ಸಿಂಗ್‌, ಅಕ್ಷರ್‌ ಪಟೇಲ್‌ ಮತ್ತು ಅಮಿತ್‌ ಮಿಶ್ರಾ ನಡುವೆ ಪೈಪೋಟಿ ಏರ್ಪಟ್ಟಿರುವುದಂತೂ  ದಿಟ.

ಈ ನಾಲ್ವರು ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ ಮೂಲಕವೂ ತಂಡಕ್ಕೆ ನೆರವಾಗಬಲ್ಲರು. ಹೀಗಾಗಿ ಆಡುವ ಹನ್ನೊಂದರ ಬಳಗದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬುದು ನಾಯಕ ದೋನಿಗೆ ತಲೆನೋವಾಗಿ ಪರಿಣಮಿಸಿದೆ.

ಡಿವಿಲಿಯರ್ಸ್‌ ಭಯದಲ್ಲಿ ಆತಿಥೇಯರು:  ಎಬಿ ಡಿವಿಲಿಯರ್ಸ್‌, ಡು ಪ್ಲೆಸಿಸ್‌, ಜೆ.ಪಿ. ಡುಮಿನಿ, ಕ್ವಿಂಟನ್‌ ಡಿ ಕಾಕ್‌ ಅವರನ್ನು ಹೊಂದಿರುವ ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ ವಿಭಾಗದಲ್ಲಿ  ಬಲಿಷ್ಠವಾಗಿದೆ.

ಈ ತಂಡದಲ್ಲಿರುವ ಬಹುತೇಕ ಆಟಗಾರರು ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಇಲ್ಲಿನ ಪಿಚ್‌ಗಳ ಅರಿವೂ ಅವರಿಗಿದೆ.  ಆಟಕ್ಕೆ ಕುದುರಿಕೊಂಡರೆ ಡಿವಿಲಿಯರ್ಸ್‌ ಹೇಗೆ ಅಬ್ಬರಿಸಬಲ್ಲರು ಎಂಬುದು ಭಾರತದ ಬೌಲರ್‌ಗಳಿಗೂ ಚೆನ್ನಾಗಿ ಗೊತ್ತು. ಅವರನ್ನು ಕಟ್ಟಿಹಾಕಲು ಮಹಿ ಯಾವ ಅಸ್ತ್ರ ಪ್ರಯೋಗಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕು.

ಇನ್ನೂ ಡು ಪ್ಲೆಸಿಸ್‌, ಹಾಶಿಮ್‌ ಆಮ್ಲಾ, ಡೇವಿಡ್‌ ಮಿಲ್ಲರ್‌, ಡುಮಿನಿ ಕೂಡಾ ಅಪಾಯಕಾರಿ. ಚುಟುಕು ಕ್ರಿಕೆಟ್‌ನ ಪರಿಣತರೆಂದೇ ಗುರುತಿಸಿಕೊಂಡಿರುವ ಇವರನ್ನು ಭಾರತದ ಬೌಲರ್‌ಗಳು ಎಷ್ಟು ಸಾಧ್ಯವೊ ಅಷ್ಟೊ ಬೇಗ ನಿಯಂತ್ರಿಸುವುದು ಒಳಿತು. ಇಲ್ಲವಾದಲ್ಲಿ ಕ್ರೀಡಾಂಗಣದಲ್ಲಿ ರನ್‌ ಮಳೆ ಸುರಿಯುವುದರಲ್ಲಿ ಅನುಮಾನವಿಲ್ಲ.

ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ಕೈಲ್‌ ಅಬಾಟ್‌, ಕ್ರಿಸ್‌ ಮೊರಿಸ್‌ ಮತ್ತು ಲೆಗ್‌ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಚುಟುಕು ಕ್ರಿಕೆಟ್‌ನಲ್ಲಿ ಆಡಿದ ಅನುಭವ ಹೊಂದಿರುವ ಇವರು ತಮ್ಮ ಕೈಚಳಕದ ಮೂಲಕ ಭಾರತದ ಬ್ಯಾಟ್ಸ್‌ಮನ್‌ಗಳ ಘರ್ಜನೆಯನ್ನು ಅಡಗಿಸಬಲ್ಲರು. ಡೇವಿಡ್‌ ವೈಸಿ ಗಾಯಗೊಂಡಿರುವ ಕಾರಣ ತಂಡದಲ್ಲಿ ಸ್ಥಾನ ಪಡೆದಿರುವ ಅಲ್ಬಿ ಮಾರ್ಕಲ್‌ ಕೂಡಾ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಹೀಗಾಗಿ ವಿಶ್ವದ ಎರಡು ಬಲಿಷ್ಠ ತಂಡಗಳ  ನಡುವಣ ಈ ಹೋರಾಟದಲ್ಲಿ ಫಲಿತಾಂಶ ಏನೇ ಆಗಲಿ, ಯಾರ ಪರವೇ ಬರಲಿ. ಅಭಿಮಾನಿಗಳಂತೂ ಮನರಂಜನೆಯ ಹೊಳೆಯಲ್ಲಿ ಮಿಂದೇಳುವುದಂತೂ ನಿಜ.

ತಂಡದಲ್ಲಿ ರಾಜ್ಯದ ಇಬ್ಬರು: ತಂಡದಲ್ಲಿ ರಾಜ್ಯದ ಎಸ್‌. ಅರವಿಂದ್‌ ಮತ್ತು ಸ್ಟುವರ್ಟ್‌ ಬಿನ್ನಿ ಇದ್ದಾರೆ. ಇವರಿಬ್ಬರಲ್ಲಿ ಬಿನ್ನಿಗೆ ಆಲ್‌ರೌಂಡರ್‌ ರೂಪದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎನಿಸಿದೆ.

ಐಪಿಎಲ್‌ ಹಾಗೂ ಬಾಂಗ್ಲಾ ‘ಎ’ ವಿರುದ್ಧದ ಸರಣಿಯಲ್ಲಿ ಅರವಿಂದ್‌ ಉತ್ತಮ ಸಾಮರ್ಥ್ಯ ನೀಡಿದ್ದಾರೆ. ಒಂದೊಮ್ಮೆ ದೋನಿ ಈ ಪಂದ್ಯದಲ್ಲಿ ಬದಲಾವಣೆಗೆ ಮುಂದಾದರೆ  ಅರವಿಂದ್‌ಗೆ ಅಂತಿಮ ಹನ್ನೊಂದರಲ್ಲಿ ಸ್ಥಾನ ಸಿಗಬಹುದು.

ಟಾಸ್‌  ಪಾತ್ರ ಬಹುಮುಖ್ಯ: ಈ ಪಂದ್ಯದಲ್ಲಿ ಟಾಸ್‌ ಬಹುಮುಖ್ಯ  ಪಾತ್ರ ವಹಿಸಲಿದೆ. ರಾತ್ರಿ 9 ಗಂಟೆಯ ಬಳಿಕ ಕ್ರೀಡಾಂಗಣದಲ್ಲಿ ಇಬ್ಬನಿ ಬೀಳುವ ಕಾರಣ ಟಾಸ್‌ ಗೆಲ್ಲುವ ನಾಯಕರು  ಮೊದಲು ಬ್ಯಾಟಿಂಗ್‌ ನಡೆಸಲು ಮುಂದಾಗುವುದು ಖಚಿತ.

ಪಂದ್ಯದ ವೇಳೆ ಬೀಳುವ ಇಬ್ಬನಿಯಿಂದ  ಆಟಕ್ಕೆ ಅಡಚಣೆಯುಂಟಾಗದಂತೆ  ಎಚ್‌ಪಿಸಿಎ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಇಬ್ಬನಿ ನಿಯಂತ್ರಿಸಲು ನಾಲ್ಕು ಸೂಪರ್‌ ಸಾಪರ್‌ ಯಂತ್ರಗಳನ್ನು ತರಿಸಲಾಗಿದೆ.

ತಂಡಗಳು ಇಂತಿವೆ
ಭಾರತ: ಮಹೇಂದ್ರ ಸಿಂಗ್‌ ದೋನಿ (ನಾಯಕ/ ವಿಕೆಟ್‌ ಕೀಪರ್‌), ಎಸ್‌.ಅರವಿಂದ್‌, ರವಿಚಂದ್ರನ್‌ ಅಶ್ವಿನ್‌, ಸ್ಟುವರ್ಟ್‌ ಬಿನ್ನಿ, ಶಿಖರ್‌ ಧವನ್‌, ಹರಭಜನ್‌ ಸಿಂಗ್‌, ವಿರಾಟ್‌ ಕೊಹ್ಲಿ, ಭುವನೇಶ್ವರ್‌ ಕುಮಾರ್‌, ಅಮಿತ್‌ ಮಿಶ್ರಾ, ಅಕ್ಷರ್‌ ಪಟೇಲ್‌, ಅಜಿಂಕ್ಯ ರಹಾನೆ, ಸುರೇಶ್‌ ರೈನಾ, ಅಂಬಟಿ ರಾಯುಡು, ಮೋಹಿತ್‌ ಶರ್ಮಾ ಮತ್ತು ರೋಹಿತ್‌ ಶರ್ಮಾ.

ದಕ್ಷಿಣ ಆಫ್ರಿಕಾ: ಫಾಫ್‌ ಡು ಪ್ಲೆಸಿಸ್‌ (ನಾಯಕ), ಕೈಲ್‌ ಅಬಾಟ್‌, ಹಾಶಿಮ್‌ ಆಮ್ಲಾ, ಫರ್ಹಾನ್‌ ಬೆಹಾರ್ಡೀನ್‌, ಕ್ವಿಂಟನ್‌ ಡಿ ಕಾಕ್‌ (ವಿಕೆಟ್‌ ಕೀಪರ್‌), ಮರ್ಚಂಟ್‌ ಡೆ ಲಾಂಗೆ, ಎಬಿ ಡಿವಿಲಿಯರ್ಸ್‌, ಜೆ.ಪಿ. ಡುಮಿನಿ, ಇಮ್ರಾನ್‌ ತಾಹಿರ್‌, ಎಡ್ಡೀ ಲೆಯಿ, ಡೇವಿಡ್‌ ಮಿಲ್ಲರ್‌, ಅಲ್ಬಿ ಮಾರ್ಕಲ್‌, ಕ್ರಿಸ್‌ ಮೊರಿಸ್‌, ಕಾಗಿಸೊ ರಬಾಡ ಮತ್ತು ಖಾಯಾ ಜೊಂಡೊ.

ಆರಂಭ: ರಾತ್ರಿ 7ಕ್ಕೆ, ನೇರ ಪ್ರಸಾರ

***

ನಮ್ಮ ತಂಡ ಸಮತೋಲಿತವಾಗಿದೆ. ಏಕದಿನ ಮತ್ತು ಟೆಸ್ಟ್‌ ಮಾದರಿಗಳಿಗಿಂತಲೂ ಟ್ವೆಂಟಿ–20 ಭಿನ್ನ. ಇದಕ್ಕೆ ಅನುಗುಣವಾಗಿ ಯೋಜನೆ ರೂಪಿಸಿ ಕಣಕ್ಕಿಳಿಯುತ್ತೇವೆ.
-ಮಹೇಂದ್ರ ಸಿಂಗ್‌ ದೋನಿ

***

ಟೂರ್ನಿ ಯಾವುದೇ ಇರಲಿ ಭಾರತದಲ್ಲಿ ಆಡಲು ತುಂಬಾ ಖುಷಿಯಾಗುತ್ತದೆ. ಐಪಿಎಲ್‌ನಲ್ಲಿ ಆಡಿರುವುದರಿಂದ ಇಲ್ಲಿನ ಪರಿಸ್ಥಿತಿಯ ಅರಿವಿದೆ. ಸರಣಿಯಲ್ಲಿ ಶುಭಾರಂಭ ಮಾಡುವುದು ನಮ್ಮ ಉದ್ದೇಶ.
-ಫಾಫ್‌ ಡು ಪ್ಲೆಸಿಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT