ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಹ್ಯಾಟ್ರಿಕ್ ಜಯದ ವಿಶ್ವಾಸ

ಯುಎಇ ವಿರುದ್ಧದ ಪಂದ್ಯ ಇಂದು; ಸುಲಭ ಗೆಲುವಿನ ನಿರೀಕ್ಷೆಯಲ್ಲಿ ದೋನಿ ಬಳಗ
Last Updated 27 ಫೆಬ್ರುವರಿ 2015, 20:21 IST
ಅಕ್ಷರ ಗಾತ್ರ

ಪರ್ತ್‌: ವಿಶ್ವಕಪ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಭಾರತ ತಂಡ ‘ಹ್ಯಾಟ್ರಿಕ್‌’ ಗೆಲುವಿನ ನಿರೀಕ್ಷೆಯಲ್ಲಿದೆ.

ವಾಕಾ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ‘ಬಿ’ ಗುಂಪಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್‌ ದೋನಿ ಬಳಗ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ತಂಡವನ್ನು ಎದುರಿಸಲಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ನಿರೀಕ್ಷೆಗಿಂತಲೂ ಉತ್ತಮವಾಗಿ ಆಡುತ್ತಿರುವ ಹಾಲಿ ಚಾಂಪಿಯನ್ನರಿಗೆ ಯುಎಇ ಸುಲಭದ ತುತ್ತಾಗಿ ಪರಿಣಮಿಸಿದರೆ ಅಚ್ಚರಿಯಿಲ್ಲ.

ಹಿಂದಿನ ಪಂದ್ಯಗಳಲ್ಲಿ ಪ್ರಬಲ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳನ್ನು ಸುಲಭವಾಗಿ ಮಣಿಸಿದ್ದ ಭಾರತ ತಂಡಕ್ಕೆ  ಅರಬ್‌ ನಾಡಿನ ತಂಡ ಯಾವ ರೀತಿಯಲ್ಲೂ ಸಾಟಿಯಾಗದು. ಆದರೆ ಕ್ರಿಕೆಟ್‌ನಲ್ಲಿ ಏನು ಬೇಕಾದರೂ ನಡೆಯಬಹುದು. ಈ ಕಾರಣ ದೋನಿ ಬಳಗ ಎದುರಾಳಿಗಳನ್ನು ಹಗುರವಾಗಿ ಪರಿಗಣಿಸಲು ಸಿದ್ಧವಿಲ್ಲ.

ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 76 ರನ್‌ಗಳ ಜಯ ಪಡೆದಿದ್ದ ಭಾರತ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 130 ರನ್‌ಗಳಿಂದ ಮಣಿಸಿತ್ತು. ಪಂದ್ಯದಿಂದ ಪಂದ್ಯಕ್ಕೆ ಭಾರತದಿಂದ ಉತ್ತಮ ಆಟ ಮೂಡಿಬರುತ್ತಿರುವುದಕ್ಕೆ ಈ ಎರಡು ಫಲಿತಾಂಶಗಳೇ ನಿದರ್ಶನ. ಯುಇಎ ವಿರುದ್ಧ ಆಟದ ಗುಣಮಟ್ಟ ಮತ್ತಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ.

ಮೊದಲು ಬ್ಯಾಟ್‌ ಮಾಡುವ ಅವಕಾಶ ಲಭಿಸಿದರೆ ಬೃಹತ್‌ ಮೊತ್ತ ಪೇರಿಸುವುದು ಭಾರತದ ಗುರಿ. ಅತ್ಯುತ್ತಮ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ, ಶಿಖರ್‌ ಧವನ್‌ ಮತ್ತು ಅಜಿಂಕ್ಯ ರಹಾನೆ ಎದುರಾಳಿ ಬೌಲರ್‌ಗಳಿಗೆ ಬೆದರಿಕೆ ಹುಟ್ಟಿಸಿದ್ದಾರೆ. ಕೊಹ್ಲಿ (107, 46) ಮತ್ತು ಧವನ್‌ (73, 137) ಮೊದಲ ಎರಡು ಪಂದ್ಯಗಳಲ್ಲಿ ಒಟ್ಟು 363 ರನ್‌ ಗಳಿಸಿದ್ದಾರೆ.

ರೋಹಿತ್‌ ಶರ್ಮ ಮತ್ತು ಮಹೇಂದ್ರ ಸಿಂಗ್‌ ದೋನಿ ಅವರಿಗೆ ಲಯ ಕಂಡುಕೊಳ್ಳಲು ಈ ಪಂದ್ಯ ಉತ್ತಮ ವೇದಿಕೆ ಎನಿಸಿಕೊಂಡಿದೆ. ಇವರಿಬ್ಬರು ಮೊದಲ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದರು. ಬ್ಯಾಟ್‌ ಮಾಡುವ ಅವಕಾಶ ಸಿಕ್ಕರೆ ರನ್‌ ಮಳೆ ಸುರಿಸುವುದು ಸುರೇಶ್‌ ರೈನಾ ಗುರಿ.

ಶಮಿ ಅಲಭ್ಯ: ವೇಗದ ಬೌಲರ್‌ ಮೊಹಮ್ಮದ್‌ ಶಮಿ ಈ ಪಂದ್ಯದಲ್ಲಿ ಆಡುವುದಿಲ್ಲ. ಮಂಡಿನೋವಿನಿಂದ ಬಳಲುತ್ತಿರುವ ಕಾರಣ ಅವರಿಗೆ ವಿಶ್ರಾಂತಿ ನೀಡಲು ತಂಡದ ಆಡಳಿತ ನಿರ್ಧರಿಸಿದೆ. ಶಮಿ ಬದಲು ಸ್ಟುವರ್ಟ್‌ ಬಿನ್ನಿ ಅಥವಾ ಭುವನೇಶ್ವರ್‌ ಕುಮಾರ್‌ ಕಣಕ್ಕಿಳಿಯುವ ಸಾಧ್ಯತೆಯಿದೆ.

ಆಡಿದ ಎರಡು ಪಂದ್ಯಗಳಲ್ಲಿ ಶಮಿ ಆರು ವಿಕೆಟ್‌ ಪಡೆದಿದ್ದಾರೆ. ಯುಎಇ ದುರ್ಬಲ ಎದುರಾಳಿ ಆಗಿರುವುದರಿಂದ ಅವರ ಅನುಪಸ್ಥಿತಿ ತಂಡದ ಮೇಲೆ ಹೆಚ್ಚಿನ ಪರಿಣಾಮ ಬೀರದು ಎಂದು ನಿರೀಕ್ಷಿಸಲಾಗಿದೆ. ಉಮೇಶ್‌ ಯಾದವ್‌ ಮತ್ತು ಮೋಹಿತ್‌ ಶರ್ಮ ಈಗಾಗಲೇ ತಮ್ಮ ಸಾಮರ್ಥ್ಯ ತೋರಿದ್ದಾರೆ.

ಯುಎಇ ಪೈಪೋಟಿ ನೀಡುವುದೇ?:  ಮೊದಲ ಎರಡು ಪಂದ್ಯಗಳಲ್ಲಿ ಸೋತರೂ ಯುಎಇ ತಂಡ ಎದುರಾಳಿಗಳಿಗೆ ತಕ್ಕ ಪೈಪೋಟಿ ನೀಡಿತ್ತು. ಎರಡೂ ಪಂದ್ಯಗಳಲ್ಲಿ 275ಕ್ಕಿಂತ ಅಧಿಕ ಮೊತ್ತ ಕಲೆಹಾಕಿತ್ತು. ಆದರೆ ಬೌಲರ್‌ಗಳ ಅನುಭವದ ಕೊರತೆಯಿಂದ ಸೋಲು ಎದುರಾಗಿತ್ತು. ಭಾರತದ ವಿರುದ್ಧವೂ ತಂಡವನ್ನು ಈ ಕೊರತೆ ಕಾಡಬಹುದು.

ಬ್ಯಾಟಿಂಗ್‌ನಲ್ಲಿ ಶೈಮನ್‌ ಅನ್ವರ್‌ ತಂಡದ ಬಲ ಎನಿಸಿಕೊಂಡಿದ್ದಾರೆ. ಜಿಂಬಾಬ್ವೆ ವಿರುದ್ಧ 67 ರನ್ ಗಳಿಸಿದ್ದ ಅವರು ಐರ್ಲೆಂಡ್‌ ಎದುರು 83 ಎಸೆತಗಳಲ್ಲಿ 106 ರನ್‌ ಕಲೆಹಾಕಿದ್ದರು.  ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಸ್ವಪ್ನಿಲ್‌ ಪಾಟೀಲ್‌ ಕೂಡಾ ಭರವಸೆ ಮೂಡಿಸಿದ್ದಾರೆ.
ಅಸಂಕಾ ಗುರುಗೆ, ಮೊಹಮ್ಮದ್‌ ನವೀದ್‌ ಮತ್ತು ಅಮ್ಜದ್‌ ಜಾವೇದ್‌ ಅವರನ್ನೊಳಗೊಂಡ ಬೌಲಿಂಗ್‌ ವಿಭಾಗಕ್ಕೆ ಈ ಪಂದ್ಯದಲ್ಲಿ ಅಗ್ನಿಪರೀಕ್ಷೆ ಎದುರಾಗಲಿದೆ. ಭಾರತದ ಬ್ಯಾಟ್ಸ್‌ಮನ್‌ಗಳ ಮೇಲೆ ಕಡಿವಾಣ ಹಾಕುವಷ್ಟು ಶಕ್ತಿ ಇವರ ಬೌಲಿಂಗ್‌ನಲ್ಲಿ ಇಲ್ಲವೆಂದೇ ಹೇಳಬಹುದು.

ಎರಡು ಬಾರಿಯ ಚಾಂಪಿಯನ್ನರನ್ನು ಮಣಿಸುವುದು ಕಷ್ಟ ಎಂಬುದು ಯುಎಇಗೆ ತಿಳಿದಿದೆ. ಆದರೂ ಪಟ್ಟುಬಿಡದೆ ಹೋರಾಡಿ ಸೋಲಿನಲ್ಲೂ ಗಮನ ಸೆಳೆಯುವುದು ಈ ತಂಡದ ಲೆಕ್ಕಾಚಾರ.

ತಂಡಗಳು
ಭಾರತ:
ಮಹೇಂದ್ರ ಸಿಂಗ್‌ ದೋನಿ (ನಾಯಕ), ರೋಹಿತ್‌ ಶರ್ಮ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ಸುರೇಶ್‌ ರೈನಾ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಆರ್‌. ಅಶ್ವಿನ್‌, ಮೋಹಿತ್‌ ಶರ್ಮ, ಉಮೇಶ್‌ ಯಾದವ್‌, ಅಕ್ಷರ್‌ ಪಟೇಲ್‌, ಅಂಬಟಿ ರಾಯುಡು, ಸ್ಟುವರ್ಟ್‌ ಬಿನ್ನಿ, ಭುವನೇಶ್ವರ್‌ ಕುಮಾರ್‌

ಯುಎಇ: ಮೊಹಮ್ಮದ್‌ ತೌಖಿರ್‌ (ನಾಯಕ), ಅಮ್ಜದ್‌ ಅಲಿ, ಅಮ್ಜದ್‌ ಜಾವೇದ್‌, ಆ್ಯಂಡ್ರಿ ಬೆರೆಂಗೆರ್‌, ಫಹದ್‌ ಅಲ್‌ಹಾಶ್ಮಿ, ಅಸಂಕಾ ಗುರುಗೆ, ಖುರ್ರಮ್ ಖಾನ್‌, ಕಮ್ರನ್‌ ಶೆಹಜಾದ್‌, ಕೃಷ್ಣ ಚಂದ್ರನ್‌, ಮೊಹಮ್ಮದ್‌ ನವೀದ್‌, ನಾಸಿರ್ ಅಜೀಜ್‌, ಸ್ವಪ್ನಿಲ್‌ ಪಾಟೀಲ್‌, ಶೈಮನ್‌ ಅನ್ವರ್‌, ರೋಹನ್‌ ಮುಸ್ತಫಾ, ಸಕ್ಲೈನ್‌ ಹೈದರ್‌
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌
ಮತ್ತು ಡಿಡಿ

ಅಭ್ಯಾಸದ ವೇಳೆ ದೋನಿಗೆ ಗಾಯ
ಪೆರ್ತ್‌ (ಪಿಟಿಐ):
ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ  ಶುಕ್ರವಾರ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯಗೊಂಡಿದ್ದಾರೆ.

ಶನಿವಾರ ಯುಎಇ ತಂಡದ ಎದುರು ವಿಶ್ವಕಪ್ ಪಂದ್ಯ ನಡೆಯಲಿರುವುದರಿಂದ ಅಭ್ಯಾಸದಲ್ಲಿ ತೊಡಗಿದ್ದ ದೋನಿ ಬೆರಳಿಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ.

‘ದೋನಿ ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಅವರು ಆರೋಗ್ಯವಾಗಿದ್ದಾರೆ’ ಎಂದು ತಂಡದ ಮ್ಯಾನೇಜರ್‌ ಆರ್‌.ಎನ್‌ ಬಾಬಾ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT