ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಆಟಕ್ಕೆ ಲಾಯ್ಡ್‌ ಮೆಚ್ಚುಗೆ

‘ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ, ಕೊಹ್ಲಿ, ಧವನ್‌ ಪಂದ್ಯ ಗೆಲ್ಲಿಸಿಕೊಡಬಲ್ಲರು’
Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಪರ್ತ್‌ (ಪಿಟಿಐ): ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಮತ್ತು ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡ ಕಳಪೆ ಆಟವಾಡಿ ಎಲ್ಲರ ಟೀಕೆಗೆ ಗುರಿಯಾಗಿತ್ತು. ಈಗ ದೋನಿ ಬಳಗ ವಿಶ್ವಕಪ್‌ನಲ್ಲಿ ಉತ್ತಮ ಆಟವಾಡಿ ಮೆಚ್ಚುಗೆಗೆ ಪಾತ್ರವಾಗಿದೆ. ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್‌ ಬ್ರಾಡ್ ಹಾಗ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡದ ಮಾಜಿ ನಾಯಕ ಕ್ಲೈವ್‌ ಲಾಯ್ಡ್‌ ಅವರು ಹಾಲಿ ಚಾಂಪಿಯನ್‌ ತಂಡದ ಆಟವನ್ನು ಶ್ಲಾಘಿಸಿದ್ದಾರೆ.

‘ವಿರಾಟ್‌ ಕೊಹ್ಲಿ ಹಾಗೂ ಶಿಖರ್‌ ಧವನ್‌ ಸೇರಿದಂತೆ ಎಲ್ಲಾ ಆಟಗಾರರು ಉತ್ತಮ ಆಟವಾಡುತ್ತಿದ್ದಾರೆ. ವೇಗದ ಬೌಲಿಂಗ್‌ ವಿಭಾಗವೂ ಬಲಿಷ್ಠವಾಗಿದೆ.  ಆರ್‌. ಅಶ್ವಿನ್‌ ಸ್ಪಿನ್‌ ವಿಭಾಗದ ಹೊಣೆಗಾರಿಕೆಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಇದರಿಂದ ಭಾರತಕ್ಕೆ ಪ್ರತಿ ಪಂದ್ಯದಲ್ಲಿಯೂ ಆಲ್‌ರೌಂಡ್‌ ಆಟವಾಡಲು ಸಾಧ್ಯವಾಗುತ್ತಿದೆ’ ಎಂದು ವಿಂಡೀಸ್‌ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರೂ ಆದ ಲಾಯ್ಡ್‌ ಹೇಳಿದ್ದಾರೆ.

ಭಾರತ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ವಿಶ್ವಕಪ್‌ ಟೂರ್ನಿಯಲ್ಲಿ ಶುಕ್ರವಾರ (ಮಾರ್ಚ್‌ 6) ಪೈಪೋಟಿ ನಡೆಸಲಿವೆ. ಈ ಪಂದ್ಯಕ್ಕಾಗಿ ಕೆರಿಬಿಯನ್‌ ನಾಡಿನ ಆಟಗಾರರು ಅಭ್ಯಾಸ ನಡೆಸಿದರು. ಇದೇ ವೇಳೆ ಅವರು ಮಾಧ್ಯಮದವರ ಜೊತೆ ಮಾತನಾಡಿದರು.
‘ಕಳೆದ ಎರಡು ವರ್ಷಗಳಿಂದ ಕೊಹ್ಲಿ ಆಟವನ್ನು ಗಮನಿಸುತ್ತಿದ್ದೇನೆ. ಅವರು ಅಸಾಧಾರಣ ಆಟಗಾರ. ಧವನ್‌ ಕೂಡಾ ಕೊಹ್ಲಿ ಹಾದಿಯಲ್ಲಿ ಸಾಗುತ್ತಿದ್ದಾರೆ. ವಿಶ್ವಕಪ್‌ನ ಮೊದಲ ಮೂರೂ ಪಂದ್ಯಗಳಲ್ಲಿ ಆಲ್‌ರೌಂಡ್‌ ಆಟವಾಡಿ ಭಾರತ ಗೆಲುವು ಪಡೆದಿದೆ. ಆದರೆ, ನಮ್ಮ ತಂಡದ ಎದುರು ಅದೇ ರೀತಿ ಆಡಲು ಅವಕಾಶ ನೀಡುವುದಿಲ್ಲ’ ಎಂದು ನಗೆ ಬೀರಿದರು.

ಎಂ.ಎಸ್. ದೋನಿ ನಾಯಕತ್ವದ ಭಾರತ ತಂಡ ವಿಶ್ವಕಪ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ಪಡೆದಿದೆ. ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿತ್ತು. ನಂತರದ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಯುಎಇ ಎದುರು ಜಯ ಸಾಧಿಸಿತ್ತು.

ವಿಂಡೀಸ್ ತಂಡಕ್ಕೆ ಭಾರತ ಪ್ರಬಲ ಎದುರಾಳಿಯಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ‘ನಮ್ಮ ತಂಡದಲ್ಲಿಯೂ ಉತ್ತಮ ಆಟಗಾರರಿದ್ದಾರೆ. ಇದು ಕ್ರಿಕೆಟ್ ಏನು ಬೇಕಾದರೂ ಆಗಬಹುದು’ ಎಂದರು. ಲಾಯ್ಡ್‌ ನಾಯಕತ್ವದಲ್ಲಿ ವಿಂಡೀಸ್ ತಂಡ 1975 ಮತ್ತು 79ರ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿತ್ತು.

ನೆಚ್ಚಿನ ತಂಡ: ‘ಫೀಲ್ಡಿಂಗ್‌ ವಿಭಾಗದಲ್ಲಿ ಚುರುಕಾಗಿರುವ ಭಾರತ ತಂಡ ಈ ಬಾರಿ ಟ್ರೋಫಿ ಉಳಿಸಿಕೊಳ್ಳುವ ನೆಚ್ಚಿನ ತಂಡವಾಗಿದೆ’ ಎಂದು ಬ್ರಾಡ್‌ ಹಾಗ್‌ ಹೇಳಿದ್ದಾರೆ. ಇದಕ್ಕೆ ಅವರು ದಕ್ಷಿಣ ಆಫ್ರಿಕಾ ಎದುರಿನ ಪಂದ್ಯವನ್ನು ಉದಾಹರಣೆಯಾಗಿ ನೀಡಿದ್ದಾರೆ.
‘ದಕ್ಷಿಣ ಆಫ್ರಿಕಾ ಎದುರು ಭಾರತ ಅತ್ಯುತ್ತಮ ಫೀಲ್ಡಿಂಗ್‌ ಮಾಡಿತು. ಪ್ರಮುಖ ಆಟಗಾರರಾದ ಎ.ಬಿ. ಡಿವಿಲಿಯರ್ಸ್‌ ಮತ್ತು ಡೇವಿಡ್‌
ಮಿಲ್ಲರ್‌ ಅವರನ್ನು ರನ್‌ ಔಟ್‌ ಮಾಡಿ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿತು. ಇದರಿಂದ ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು.

ವಿಶ್ವಕಪ್‌ ಟೂರ್ನಿಗೆ ಎರಡು ತಿಂಗಳು ಮುಂಚಿತವೇ ಇಲ್ಲಿಗೆ ಬಂದಿರುವ ಭಾರತ ತಂಡ ಸ್ಥಳೀಯ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಂಡಿದೆ. ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಹೇಗೆ ಬೌಲಿಂಗ್‌ ಮಾಡಬೇಕು ಎನ್ನುವುದನ್ನೂ ಕಲಿತುಕೊಂಡಿದೆ. ವೇಗ ಮತ್ತು ಸ್ಪಿನ್‌ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ’ ಎಂದು ಹಾಗ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT