ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜಯಕ್ಕೆ ಏಳೇ ಮೆಟ್ಟಿಲು

ಟೆಸ್ಟ್‌ ಕ್ರಿಕೆಟ್‌: ಕುತೂಹಲ ಮೂಡಿಸಿದ ಕೊನೆಯ ದಿನದಾಟ, ಮತ್ತೆ ಮಿಂಚಿದ ಇಶಾಂತ್
Last Updated 31 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಕೊಲಂಬೊ: ಎರಡನೇ ಇನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡಕ್ಕೆ ಆರಂಭಿಕ ಪೆಟ್ಟು ನೀಡಿರುವ ಭಾರತ ಕ್ರಿಕೆಟ್‌ ತಂಡ 22 ವರ್ಷಗಳ ಬಳಿಕ ಸಿಂಹಳೀಯ ನಾಡಿನಲ್ಲಿ ಟೆಸ್ಟ್ ಸರಣಿ ಜಯಿಸುವ ಅಪೂರ್ವ ಕ್ಷಣಕ್ಕಾಗಿ ಕಾಯುತ್ತಿದೆ.

ಈ ಆಸೆ ಈಡೇರಬೇಕಾದರೆ ಪ್ರವಾಸಿ ತಂಡ ಕೊನೆಯ ದಿನದಾಟದಲ್ಲಿ ಏಳು ವಿಕೆಟ್‌ಗಳನ್ನು ಉರುಳಿಸಬೇಕು. ಆದ್ದ ರಿಂದ ಮಂಗಳವಾರದ ಆಟ ಕುತೂಹಲದ ಗಣಿಯಾಗಿದೆ.

ತವರಿನಲ್ಲಿ ಸರಣಿ ಸೋಲಿನ ಮುಖ ಭಂಗ  ತಪ್ಪಿಸಿಕೊಳ್ಳಲು ಏಂಜೆಲೊ ಮ್ಯಾಥ್ಯೂಸ್‌ ಸಾರಥ್ಯದ ಲಂಕಾ ತಂಡ ಹೆಣಗಾಡುತ್ತಿದೆ. ಈ ತಂಡ ಸೋಮವಾರದ ದಿನದಾಟದ ಅಂತ್ಯಕ್ಕೆ 18.1 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಆತಿಥೇಯ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಉಫುಲ್‌ ತರಂಗ, ದಿಮುತ್‌ ಕರುಣಾರತ್ನೆ ಮತ್ತು ದಿನೇಶ್‌ ಚಾಂಡಿಮಾಲ್ ಔಟಾಗಿದ್ದಾರೆ. ತಂಡ ವನ್ನು ಸೋಲಿನ ಸುಳಿಯಿಂದ ಪಾರು ಮಾಡಲು ಕೌಶಲ್‌ ಸಿಲ್ವಾ (ಬ್ಯಾಟಿಂಗ್‌ 24) ಮತ್ತು ನಾಯಕ ಮ್ಯಾಥ್ಯೂಸ್‌ (ಬ್ಯಾಟಿಂಗ್‌ 22) ಹೋರಾಟ ನಡೆಸುತ್ತಿದ್ದಾರೆ.

ದೆಹಲಿಯ ವಿರಾಟ್‌ ಕೊಹ್ಲಿ ಟೆಸ್ಟ್ ತಂಡದ ನಾಯಕರಾದ ಬಳಿಕ ಭಾರತ ಆಡುತ್ತಿರುವ ಪೂರ್ಣ ಪ್ರಮಾಣದ ಮೊದಲ ಸರಣಿ ಇದಾಗಿದೆ. ಮೂರು ಪಂದ್ಯಗಳ ಸರಣಿ 1–1ರಲ್ಲಿ ಸಮವಾಗಿದೆ. ಆದ್ದರಿಂದ ಮೂರನೇ ಮತ್ತು ಅಂತಿಮ ಟೆಸ್ಟ್ ಉಭಯ ತಂಡಗಳಿಗೂ ‘ಫೈನಲ್‌’ ಹೋರಾಟವೆನಿಸಿದೆ. ಆದ್ದರಿಂದ ಪಂದ್ಯದ ಕುತೂಹಲವೂ ಹೆಚ್ಚಿದೆ.

ರೋಹಿತ್‌–ಅಶ್ವಿನ್ ಆಸರೆ:  ದ್ವಿತೀಯ ಇನಿಂಗ್ಸ್‌ನಲ್ಲಿ ಪ್ರವಾಸಿ ತಂಡದ ಆರಂಭಿಕ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರು. ಆದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ರೋಹಿತ್ ಶರ್ಮಾ, ಕರ್ನಾಟಕದ ಸ್ಟುವರ್ಟ್‌ ಬಿನ್ನಿ  ಮತ್ತು ಆರ್‌. ಅಶ್ವಿನ್‌ ಆಸರೆಯಾದರು.

ಭಾನುವಾರದ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್‌ ಕಳೆದುಕೊಂಡಿದ್ದ ಭಾರತಕ್ಕೆ ನಾಲ್ಕನೇ ದಿನವೂ ಬೇಗೆನೆ ಆಘಾತ ಕಾಡಿತು. ಕೊಹ್ಲಿ ಮತ್ತೆ ವೈಫಲ್ಯ ಅನುಭವಿಸಿದರು. 63 ಎಸೆತಗಳಲ್ಲಿ 21 ರನ್ ಗಳಿಸಿ ಪೆವಿಲಿಯನ್‌ ಸೇರಿದರು.  ಮೊದಲ ಇನಿಂಗ್ಸ್‌ನಲ್ಲಿ ಅವರು 18 ರನ್‌ಗೆ ಔಟಾಗಿದ್ದರು. ಈ ಕಾರಣಕ್ಕಾಗಿ ಐದನೇ ವಿಕೆಟ್‌ಗೆ ಮೂಡಿಬಂದ ರೋಹಿತ್‌ ಮತ್ತು ಬಿನ್ನಿ ನಡುವಿನ ಜೊತೆಯಾಟ ಭಾರಿ ಮಹತ್ವ ಪಡೆದುಕೊಂಡಿತು.  ಈ ಜೋಡಿ 54 ರನ್ ಕಲೆ ಹಾಕಿ ಚೇತರಿಕೆ ನೀಡಿತು.

72 ಎಸೆತಗಳನ್ನು ಆಡಿದ ರೋಹಿತ್‌ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 50 ರನ್ ಗಳಿಸಿದರು. ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ರೋಹಿತ್ ಗಳಿಸಿದ ಚೊಚ್ಚಲ ಅರ್ಧಶತಕವಿದು.

ಕೊಲಂಬೊದಲ್ಲಿಯೇ ನಡೆದಿದ್ದ ಎರಡನೇ ಟೆಸ್ಟ್‌ನಲ್ಲೂ ಅವರು ಅರ್ಧಶತಕ ಬಾರಿಸಿದ್ದರು. ಆದರೆ, ಬಲಗೈ ಬ್ಯಾಟ್ಸ್‌ಮನ್‌ ಬಿನ್ನಿ ಅರ್ಧಶತಕಕ್ಕೆ ಒಂದು ರನ್ ಅಗತ್ಯವಿದ್ದಾಗ ಧಮ್ಮಿಕಾ ಪ್ರಸಾದ್‌ ಬೌಲಿಂಗ್‌ನಲ್ಲಿ ಔಟಾದರು. ಬಿನ್ನಿ 62 ಎಸೆತಗಳಲ್ಲಿ ಏಳು ಬೌಂಡರಿ ಸಿಡಿಸಿದರು.

ಎಂಟನೇ ವಿಕೆಟ್‌ಗೆ ಮೂಡಿ ಬಂದ ಇನ್ನೊಂದು ಮಹತ್ವದ ಜೊತೆಯಾಟ ದಿಂದ ಭಾರತಕ್ಕೆ 350ಕ್ಕಿಂತಲೂ ಹೆಚ್ಚು ರನ್ ಗುರಿ ನೀಡಲು ಸಾಧ್ಯವಾಯಿತು. ಅಶ್ವಿನ್ ಮತ್ತು ಅಮಿತ್‌ ಮಿಶ್ರಾ ಈ ಜೊತೆಯಾಟವಾಡಿದರು. ಅಶ್ವಿನ್‌ 87 ಎಸೆತಗಳಲ್ಲಿ 58 ರನ್ ಗಳಿಸಿದರು.

ಗಮನ ಸೆಳೆದ ಮಿಶ್ರಾ:  ಆಫ್‌ ಸ್ಪಿನ್ನರ್ ಅಮಿತ್‌ ಮಿಶ್ರಾ ಎರಡನೇ ಇನಿಂಗ್ಸ್‌ನಲ್ಲೂ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಪ್ರಥಮ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಅಮಿತ್ 39 ರನ್ ಬಾರಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಅಶ್ವಿನ್‌ ಆಟಕ್ಕೆ ಬೆಂಬಲ ನೀಡಿದರು. ಬಲಗೈ ಆಟಗಾರ ಅಮಿತ್‌ 62 ಎಸೆತಗಳನ್ನು ಆಡಿ 39 ರನ್  ಕಲೆ ಹಾಕಿದರು. ವೇಗಿಗಳಾದ ಧಮ್ಮಿಕಾ ಪ್ರಸಾದ್ ಮತ್ತು ನುವಾನ್‌ ಪ್ರದೀಪ್‌ ತಲಾ ನಾಲ್ಕು ವಿಕೆಟ್‌ ಉರುಳಿಸಿದರು.

ಮಿಂಚುವರೇ ಸ್ಪಿನ್ನರ್‌ಗಳು: ಭಾರತ ತಂಡ ಎರಡನೇ ಟೆಸ್ಟ್ ಗೆಲ್ಲಲು ಕಾರಣ ರಾಗಿದ್ದ ಸ್ಪಿನ್ನರ್‌ಗಳು ಕೊನೆಯ ದಿನ  ಮಹತ್ವದ ಪಾತ್ರ ವಹಿಸಬೇಕಿದೆ. ಹಿಂದಿನ ಪಂದ್ಯದಲ್ಲಿ ಅವರು ಪ್ರಾಬಲ್ಯ ಮರೆದಿ ದ್ದರು. ಒಟ್ಟು ಹತ್ತು ವಿಕೆಟ್‌ಗಳಲ್ಲಿ ಎಂಟು ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾಗಿದ್ದವು. ಅಶ್ವಿನ್ ಐದು ಮತ್ತು ಅಮಿತ್‌ ಮಿಶ್ರಾ ಮೂರು ವಿಕೆಟ್‌ ಕಬಳಿಸಿ ಗೆಲುವು ತಂದುಕೊಟ್ಟಿದ್ದರು.

ಸರಣಿಯ ಆರಂಭದ ಪಂದ್ಯ ದಿಂದಲೂ ಆಫ್‌ ಸ್ಪಿನ್ನರ್ ಅಶ್ವಿನ್‌ ಶ್ರೇಷ್ಠ ಬೌಲಿಂಗ್ ಸಾಮರ್ಥ್ಯ ತೋರುತ್ತಿದ್ದಾರೆ. ಮೂರು ಪಂದ್ಯಗಳಿಂದ ಅವರು 17 ವಿಕೆಟ್‌ ಉರುಳಿಸಿದ್ದಾರೆ. ಮಿಶ್ರಾ ಒಟ್ಟು 14 ವಿಕೆಟ್ ಪಡೆದಿದ್ದರು. ಆದ್ದರಿಂದ ಕೊನೆಯ ದಿನ ಇವರ ಸ್ಪಿನ್ ಮೋಡಿ ಹೇಗಿರಲಿದೆ ಎನ್ನುವ  ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಭಾರತದ ಜಯದ ನೆನಪು...
ಭಾರತಕ್ಕೆ ಸರಣಿ ಜಯಿಸುವ ತವಕ. ಲಂಕಾಕ್ಕೆ ತವರಿನಲ್ಲಿ ಅವಮಾನದಿಂದ ಪಾರಾಗುವ ತುಡಿತ. ಹೀಗಾಗಿ ಮೂರನೇ ಟೆಸ್ಟ್‌ನ ಕೊನೆಯ ದಿನದಾಟ ಉಭಯ ತಂಡಗಳಿಗೂ ಮಹತ್ವವೆನಿಸಿದೆ. ಎರಡನೇ ಟೆಸ್ಟ್‌ನಲ್ಲಿ ಪಡೆದಿದ್ದ ಜಯವೂ ಭಾರತ ತಂಡಕ್ಕೆ ಸ್ಫೂರ್ತಿಯಾಗಿದೆ. ಹಿಂದಿನ ಟೆಸ್ಟ್‌ನಲ್ಲಿ ಭಾರತ ತಂಡ ಲಂಕಾ ಗೆಲುವಿಗೆ 413 ರನ್‌ ಗುರಿ ನೀಡಿತ್ತು. ಆಗ ಆತಿಥೇಯರು 134 ರನ್‌ಗೆ ಆಲೌಟ್‌ ಆಗಿದ್ದರು. ಈ ಬಾರಿಯೂ ಪ್ರವಾಸಿ ತಂಡ ಕೊನೆಯ ದಿನದಾಟದಲ್ಲಿ ಬೌಲಿಂಗ್‌ನಲ್ಲಿ ಮೋಡಿ ಮಾಡುವುದೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಇದೇ ಕ್ರೀಡಾಂಗಣದಲ್ಲಿ 1998ರಲ್ಲಿ ನಡೆದಿದ್ದ ಪಂದ್ಯದಲ್ಲಿ ಲಂಕಾ ತಂಡ ಜಿಂಬಾಬ್ವೆ ಎದುರು ನಾಲ್ಕನೇ ಇನಿಂಗ್ಸ್‌ನಲ್ಲಿ 326 ರನ್‌ ಗುರಿ ಮುಟ್ಟಿ ಗೆಲುವು ಪಡೆದಿತ್ತು. ಇದು ಇಲ್ಲಿನ ಕ್ರೀಡಾಂಗಣದ ಗರಿಷ್ಠ ದಾಖಲೆ ಎನಿಸಿದೆ. ಒಂದು ವೇಳೆ ಲಂಕಾ ತಂಡ 386 ರನ್ ಕಲೆ ಹಾಕಿದರೆ ಎಸ್‌ಎಸ್‌ಸಿ ಅಂಗಳದಲ್ಲಿ ಹೊಸ ದಾಖಲೆ ನಿರ್ಮಾಣವಾಗಲಿದೆ.

ಭಾರತ  ಪ್ರಥಮ ಇನಿಂಗ್ಸ್‌  312 (100.1 ಓವರ್‌ಗಳಲ್ಲಿ)
ಶ್ರೀಲಂಕಾ  ಮೊದಲ ಇನಿಂಗ್ಸ್‌    201 (52.2  ಓವರ್‌ಗಳಲ್ಲಿ)
ಭಾರತ  ಎರಡನೇ ಇನಿಂಗ್ಸ್‌  274  (76  ಓವರ್‌ಗಳಲ್ಲಿ)
(ಭಾನುವಾರದ ಅಂತ್ಯಕ್ಕೆ 3ಕ್ಕೆ21, 8.1 ಓವರ್‌)

ವಿರಾಟ್‌ ಕೊಹ್ಲಿ ಸಿ ಉಫುಲ್‌ ತರಂಗ ಬಿ ನುವಾನ್‌ ಪ್ರದೀಪ್‌  21
ರೋಹಿತ್ ಶರ್ಮಾ ಸಿ ನುವಾನ್‌ ಪ್ರದೀಪ್‌ ಬಿ ಧಮ್ಮಿಕಾ ಪ್ರಸಾದ್‌  50
ಸ್ಟುವರ್ಟ್ ಬಿನ್ನಿ ಸಿ ಉಫುಲ್‌ ತರಂಗ ಬಿ ಧಮ್ಮಿಕಾ ಪ್ರಸಾದ್  49
ನಮನ್‌ ಓಜಾ ಸಿ ದಿಮುತ್‌ ಕರುಣಾರತ್ನೆ ಬಿ ರಂಗನಾ ಹೆರಾತ್‌  35
ಅಮಿತ್ ಮಿಶ್ರಾ ರನ್ ಔಟ್‌ (ಕೌಶಲ್‌ ಸಿಲ್ವಾ)  39
ರವಿಚಂದ್ರನ್‌ ಅಶ್ವಿನ್  ಸಿ ಕುಶಾಲ್‌ ಪೆರೇರಾ ಬಿ ಧಮ್ಮಿಕಾ ಪ್ರಸಾದ್‌  58
ಉಮೇಶ್ ಯಾದವ್‌ ಸಿ ರಂಗನಾ ಹೆರಾತ್‌ ಬಿ ನುವಾನ್ ಪ್ರದೀಪ್‌  04
ಇಶಾಂತ್‌ ಶರ್ಮಾ ಔಟಾಗದೆ  02
ಇತರೆ:  (ಬೈ–1, ಲೆಗ್‌ ಬೈ–1, ವೈಡ್‌–3, ನೋ ಬಾಲ್‌–5)  10

ವಿಕೆಟ್ ಪತನ:  4–64 (ಕೊಹ್ಲಿ; 22.2), 5–118 (ರೋಹಿತ್‌; 32.5), 6–160 (ಬಿನ್ನಿ; 44.2), 7–179 (ಓಜಾ; 51.3), 8–234 (ಮಿಶ್ರಾ; 67.2) 9–269 (ಯಾದವ್‌; 74.6), 10–274 (ಅಶ್ವಿನ್‌; 75.6)
ಬೌಲಿಂಗ್‌:  ಧಮ್ಮಿಕಾ ಪ್ರಸಾದ್‌ 19–3–69–4, ನುವಾನ್‌ ಪ್ರದೀಪ್‌ 17–2–62–4, ರಂಗನಾ ಹೆರಾತ್‌ 22–0–89–1, ಏಂಜೆಲೊ ಮ್ಯಾಥ್ಯೂಸ್‌ 6–3–11–0, ತಿರಿಂದು ಕೌಶಲ್‌ 12–2–41–0.
ಶ್ರೀಲಂಕಾ ಎರಡನೇ ಇನಿಂಗ್ಸ್‌  3 ಕ್ಕೆ 67  (18.1  ಓವರ್‌ಗಳಲ್ಲಿ)
ಉಫುಲ್‌ ತರಂಗ ಸಿ ನಮನ್‌ ಓಜಾ ಬಿ ಇಶಾಂತ್ ಶರ್ಮಾ  00
ಕುಶಾಲ್‌ ಸಿಲ್ವಾ ಬ್ಯಾಟಿಂಗ್  24
ದಿಮುತ್‌ ಕರುಣಾರತ್ನೆ ಸಿ ನಮನ್‌ ಓಜಾ ಬಿ ಉಮೇಶ್‌ ಯಾದವ್‌  00
ದಿನೇಶ್ ಚಾಂಡಿಮಾಲ್‌ ಸಿ ವಿರಾಟ್‌ ಕೊಹ್ಲಿ ಬಿ ಇಶಾಂತ್‌ ಶರ್ಮಾ  18
ಏಂಜೆಲೊ ಮ್ಯಾಥ್ಯೂಸ್‌ ಬ್ಯಾಟಿಂಗ್‌  22
ಇತರೆ:  (ಲೆಗ್‌ ಬೈ–2, ನೋ ಬಾಲ್‌–1)  03

ವಿಕೆಟ್ ಪತನ:  1–1 (ತರಂಗ; 0.6), 2–2 (ಕರುಣಾರತ್ನೆ; 3.2), 3–21 (ಚಾಂಡಿಮಾಲ್‌; 6.6)
ಬೌಲಿಂಗ್‌:  ಇಶಾಂತ್ ಶರ್ಮಾ 7–2–14–2, ಉಮೇಶ್ ಯಾದವ್‌ 5–1–32–1, ಸ್ಟುವರ್ಟ್‌ ಬಿನ್ನಿ 4–1–13–0, ಅಮಿತ್‌ ಮಿಶ್ರಾ 2–0–2–0, ರವಿಚಂದ್ರನ್‌ ಅಶ್ವಿನ್‌ 0.1–0–4–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT