ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ನಿಷ್ಠುರ ನಿಲುವು

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ವಿಶ್ವ ವಾಣಿಜ್ಯ ಸಂಘಟನೆಯ ಮಾತು­ಕತೆಗೆ (ಡಬ್ಲ್ಯುಟಿಒ) ಸಂಬಂಧಿ­ಸಿದಂತೆ ಜಿನಿವಾದಲ್ಲಿ ನಡೆದ ಸಭೆಯಲ್ಲಿ  ಆಹಾರ ಭದ್ರತೆ ಕುರಿತು ಭಾರತ ತನ್ನ ದೃಢ ನಿಲುವು ಸ್ಪಷ್ಟಪಡಿಸಿ,ಒಪ್ಪಂದಕ್ಕೆ ಸಹಿ ಹಾಕದಿರಲು ನಿರ್ಧರಿಸಿದೆ. ಡಿಸೆಂಬರ್‌ನಲ್ಲಿ ಬಾಲಿಯಲ್ಲಿ ನಡೆದಿದ್ದ ಒಪ್ಪಂದಕ್ಕೆ  ಸಮ್ಮತಿ ಮುದ್ರೆ ಒತ್ತ­ಬೇಕಾಗಿದ್ದ ಈ ಸಭೆಯಲ್ಲಿ, ಭಾರತ ತನ್ನ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿ­ರು­­ವುದರಲ್ಲಿ ದೇಶದ ರೈತರ, ಬಡವರ ಹಿತಾಸಕ್ತಿ ರಕ್ಷಣೆಯೇ ಮುಖ್ಯವಾಗಿ­ರುವುದು ಸರಿಯಾಗಿಯೇ ಇದೆ. ಬಾಲಿ ಸಮಾ­ವೇಶದ ಆಶಯಕ್ಕೆ  ಬೆಂಬಲ ಸಿಗದಿ­ರು­ವುದರಿಂದ ಭಾರತ ಸಹಜವಾಗಿಯೇ ಪಟ್ಟು ಸಡಿಲಿಸಿಲ್ಲ.

ಭಾರತ ತಳೆದಿರುವ ನಿಲುವಿನಿಂದಾಗಿ,  ಈ ತಿಂಗಳ ಅಂತ್ಯ­ದೊಳಗೆ ವಾಣಿಜ್ಯ ಸೌಲಭ್ಯ ಒಪ್ಪಂದಕ್ಕೆ (ಟಿಎಫ್ಎ) ಎಲ್ಲ ಸದಸ್ಯ ದೇಶಗಳಿಂದ ಸಹಿ ಹಾಕಿಸಿ­ಕೊಳ್ಳುವ ಉದ್ದೇಶಕ್ಕೆ ಈಗ ಮತ್ತೊಂದು ವಿಘ್ನ ಎದುರಾಗಿದೆ. ನನೆಗುದಿಗೆ ಬಿದ್ದಿದ್ದ  ಮಾತುಕತೆಗಳಿಗೆ ಚಾಲನೆ ಸಿಕ್ಕ ಸಂದರ್ಭದಲ್ಲಿಯೇ ಈ ಅಡ್ಡಿ ಎದುರಾಗಿ­ರುವುದು ಅಪೇಕ್ಷಣೀ­ಯ­ವಲ್ಲ­.  ದೇಶಗಳ ಮಧ್ಯೆ ಆಹಾರ ಧಾನ್ಯಗಳ ತ್ವರಿತ­ಗತಿಯ ಆಮದು – ರಫ್ತಿಗೆ   ಅವಕಾಶ ಕಲ್ಪಿಸಿ­ಕೊಡುವುದೇ ಟಿಎಫ್‌ಎ ಮುಖ್ಯ ಉದ್ದೇಶ. ಇಲ್ಲಿ  ಸದಸ್ಯ ದೇಶಗಳ ಸಮಾನ ಹಿತಾಸಕ್ತಿ ರಕ್ಷ­ಣೆಯೂ ಮುಖ್ಯವಾಗಿ­ರಬೇಕು. ಈ ಒಪ್ಪಂದವು ಅಭಿವೃದ್ಧಿ ಹೊಂದು­ತ್ತಿ­ರುವ ಭಾರತದಂತಹ ದೇಶಗಳ ಬಡವರ ಆಹಾರ ಭದ್ರತೆಗೆ ಬೆದರಿಕೆ ಒಡ್ಡಲಿದೆ. ಯಾವುದೇ ದೇಶವು ತನ್ನ ಕೃಷಿ ಉತ್ಪನ್ನಗಳಿಗೆ ನೀಡುವ ಸಬ್ಸಿಡಿಯು ಕೃಷಿ ಉತ್ಪಾ­ದನೆಯ ಒಟ್ಟು ಮೌಲ್ಯದ ಶೇ 10ಕ್ಕಿಂತ ಹೆಚ್ಚಿಗೆ ಇರ­ಬಾರದು ಎನ್ನುವ ಷರತ್ತು ಉಲ್ಲಂಘಿ­ಸಿದರೆ ವಾಣಿಜ್ಯ ನಿಷೇಧದ ದಂಡನೆ ಇರುವುದೇ ಬಡ ದೇಶಗಳ ಚಿಂತೆಗೆ ಕಾರಣವಾಗಿದೆ.

ನಮ್ಮಲ್ಲಿ ಪಡಿತರ ವ್ಯವಸ್ಥೆ ಮೂಲಕ ಅಗ್ಗದ ದರದಲ್ಲಿ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಕನಿಷ್ಠ ಬೆಂಬಲ ಬೆಲೆಗೆ ಕೃಷಿ ಉತ್ಪನ್ನ­ಗಳನ್ನು ಖರೀದಿಸಲಾಗುತ್ತದೆ. ವಿದ್ಯುತ್, ರಸ­ಗೊಬ್ಬರ ಖರೀದಿಯಲ್ಲಿಯೂ  ಸಬ್ಸಿಡಿ ನೀಡುತ್ತಿ­ರುವಾಗ ಶೇ 10 ಮಿತಿ ಪಾಲನೆ ಸಾಧ್ಯವಾಗುವುದಿಲ್ಲ ಎನ್ನು­ವುದು ಭಾರತದ ನಿಲುವಾಗಿದೆ.   ಇದಕ್ಕೆ ಕಿವಿಗೊಡದ ಶ್ರೀಮಂತ ದೇಶಗಳು ತಮ್ಮ  ವ್ಯಾಪಾರ ಹಿತಾಸಕ್ತಿಗೆ ಆದ್ಯತೆ ನೀಡಿ, ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಹಕ್ಕೊತ್ತಾಯಕ್ಕೆ ಕಿವಿಗೊಡು­ತ್ತಿಲ್ಲ.  ರೈತರಿಗೆ ಸಬ್ಸಿಡಿ ನೀಡಿಕೆ ಮತ್ತು ಆಹಾರ ಸಂಗ್ರಹ ವಿಚಾರದಲ್ಲಿ ಡಬ್ಲ್ಯುಟಿಒ, ಶ್ರೀಮಂತ ದೇಶ­ಗಳ ಮರ್ಜಿ ಕಾಯು­ವುದನ್ನೂ ಬಿಟ್ಟು, ಸ್ಪಷ್ಟ ನಿಲುವು ತಳೆಯಬೇಕಾಗಿದೆ.

ಜಾಗತಿಕ ವ್ಯಾಪಾರ ಸುಧಾರಣೆ ಪ್ರಯತ್ನಗಳಿಗೆ ಭಾರತ ನೇತೃತ್ವದಲ್ಲಿನ ಬಡ ದೇಶಗಳ  ನಿಲುವು ಪ್ರಮುಖ ಅಡ್ಡಿಯಾಗಬಾರದು ಎಂದರೆ, ಅಭಿ­ವೃದ್ಧಿ ಹೊಂದಿದ ದೇಶಗಳೂ ವ್ಯಾಪಾರ ಮತ್ತು ಸಬ್ಸಿಡಿಗೆ ಸಂಬಂಧಿ­ಸಿದಂತೆ ತಮ್ಮದೇ ಹಿತಾಸಕ್ತಿ ರಕ್ಷಿಸುವ ಮತ್ತು ಇತರ ದೇಶಗಳ ಬೇಡಿಕೆ ನಿರ್ಲಕ್ಷಿಸುವ ನಿಲುವನ್ನು ಕೈಬಿಡ­ಬೇಕಾ­ಗುತ್ತದೆ.   ತನ್ನ ಪ್ರಜೆಗಳಿಗೆ ಆಹಾರ ಭದ್ರತೆ ಒದಗಿಸುವ  ಭಾರತದ ಬದ್ಧತೆಯನ್ನು ಆರ್ಥಿಕವಾಗಿ ಸದೃಢವಾ­ಗಿರುವ ದೇಶಗಳು   ಗೌರವಿಸ­ಲೇ­ಬೇಕು.  ಬಹುರಾಷ್ಟ್ರೀಯ ವ್ಯಾಪಾರ ಒಪ್ಪಂದವು ಮತ್ತೆ ನನೆಗುದಿಗೆ ಬೀಳ­ದಂತೆ  ನೋಡಿಕೊಳ್ಳಲು ಸಂಘಟಿತ ಪ್ರಯತ್ನ­ ಮಾಡಿದರೆ ಮಾತ್ರ ವಿಶ್ವ ವಾಣಿಜ್ಯ ಸುಧಾರಣಾ ಪ್ರಯತ್ನಗಳು ಮತ್ತೆ ಸರಿ­ದಾರಿಗೆ ಬಂದಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT