ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಸರಣಿ ಗೆಲ್ಲುವ ಕನಸು ಭಗ್ನ

ಫುಟ್‌ಬಾಲ್‌: ಪಾಕಿಸ್ತಾನ ತಂಡಕ್ಕೆ 2–0 ಗೋಲುಗಳ ಜಯ, ಚೆಟ್ರಿ ಬಳಗಕ್ಕೆ ನಿರಾಸೆ
Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಾಕಿಸ್ತಾನ ವಿರುದ್ಧದ ಸೌಹಾರ್ದ ಫುಟ್‌ಬಾಲ್‌ನಲ್ಲಿ  ಭಾರತದ ಸರಣಿ ಗೆಲ್ಲುವ ಕನಸು ನನಸಾಗಲಿಲ್ಲ. ಇಲ್ಲಿ ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಆತಿಥೇಯರು 0–2 ಗೋಲುಗಳಿಂದ ಸೋತಿದ್ದರಿಂದ ಸರಣಿ 1–1ರಿಂದ ಸಮಗೊಂಡಿತು.

ಎರಡೂ ತಂಡಗಳು ಮುಂಬರುವ ಏಷ್ಯನ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವುದರಿಂದ ಉಭಯ ದೇಶಗಳ ಆಟಗಾರರಿಗೂ ಇದು ಬರೇ ‘ಸೌಹಾರ್ದ ಪಂದ್ಯ’ವಾಗಿರಲಿಲ್ಲ. ತಮ್ಮ ಆತ್ಮ ವಿಶ್ವಾಸ ವೃದ್ಧಿಸಿಕೊಳ್ಳುವ ಪಂದ್ಯವಾಗಿತ್ತು. ಹೀಗಾಗಿ ಪಂದ್ಯದ ಪ್ರತಿ ಕ್ಷಣವೂ ರೋಚಕವಾಗಿತ್ತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕ್‌ ಆಟಗಾರರು ಆರಂಭದ ನಿಮಿಷಗಳಿಂದಲೂ ತೋರಿದ ಆಕ್ರಮಣ ಕಾರಿ ತಂತ್ರ ಮತ್ತು ರೂಪಿಸಿಕೊಂಡಿದ್ದ ಪ್ರಬಲ ರಕ್ಷಣವ್ಯೂಹದ ಎದುರು ಭಾರತ ಪರದಾಡಿತು. ನಾಯಕನಿಗೆ ತಕ್ಕ ಆಟವಾಡಿದ ಕಲಿಮುಲ್ಲಾ 39ನೇ ನಿಮಿಷದಲ್ಲಿ ತಮಗೆ ಸಿಕ್ಕಿದ ಫ್ರೀಕಿಕ್‌ ಅವಕಾಶದಲ್ಲಿ ಚೆಂಡನ್ನು ಬಲು ಚಾಕಚಕ್ಯತೆಯಿಂದ ಗುರಿ ಮುಟ್ಟಿಸಿದರು.  ಆಟ ಮುಗಿಯಲು ಇನ್ನೇನು ಒಂದು ನಿಮಿಷವಿದೆ ಎನ್ನುವಾಗ ಸದ್ದಾಮ್‌ ಹುಸೇನ್‌ ಪಾಕ್‌ ಗೆಲುವಿನ ಅಂತರವನ್ನು ಎರಡು ಗೋಲುಗಳಿಗೆ ಏರಿಸಿದರು.

ಮೊದಲ ಇಪ್ಪತ್ತು ನಿಮಿಷಗಳಲ್ಲಿ ಭಾರತ ಹಲವು ಸಲ ಎದುರಾಳಿ ಆವರಣದೊಳಗೆ ದಾಳಿ ನಡೆಸಿತು. ಒಮ್ಮೆ ಸುನಿಲ್‌ ಚೆಟ್ರಿ ಗುರಿ ಇಟ್ಟು ಒದ್ದ ಚೆಂಡನ್ನು ಪಾಕ್‌ ಗೋಲ್‌ಕೀಪರ್‌ ಮುಜಾಮ್ಮಿಲ್‌ ಹುಸೇನ್‌ ಅವರು ಅಡ್ಡಗಟ್ಟಿದರು. ಭಾರತದ ಇತರ ಆಟಗಾರರೂ ಕೆಲವು ಸಲ ಪಾಕ್‌ ಆವರಣದತ್ತ ಚೆಂಡನ್ನು ಕೊಂಡೊಯ್ದರಾದರೂ, ಗುರಿ ಮುಟ್ಟಿಸುವ ಯತ್ನದಲ್ಲಿಯೇ ವಿಫಲಗೊಳ್ಳುತ್ತಿದ್ದುದು ಎದ್ದು ಕಾಣುತಿತ್ತು.

ಲಾಲ್‌ರಿಂಡಿಕಾ ರಾಲ್ಟೆ ಎಸಗಿದ ಫೌಲ್‌ನಿಂದ ಸಿಕ್ಕಿದ ‘ಫ್ರೀಕಿಕ್‌’ ಅವಕಾಶವನ್ನು ಕಲಿಮುಲ್ಲಾ ಸದುಪಯೋಗ ಪಡಿಸಿಕೊಂಡ ಮೇಲೆ ಭಾರತದ ಆಟಗಾರರು ಕೆಲವು ನಿಮಿಷ ತತ್ತರಿಸಿದಂತೆ ಕಂಡು ಬಂದರಾದರೂ, ಅಷ್ಟೇ ಬೇಗ ಚೇತರಿಸಿಕೊಂಡು ನಿರಂತರ ದಾಳಿಗೆ ಇಳಿದರು. ಆದರೆ ಬಹುತೇಕ ದಾಳಿಗಳು ಕರಾರುವಾಕ್ಕಾಗಿರಲಿಲ್ಲ. ಹಾಕಿಪ್‌ ಥೊಂಕ್ಸಿಯಾಮ್‌  ಒಮ್ಮೆ ಗುರಿ ಇಟ್ಟು ಒದ್ದ ಚೆಂಡನ್ನು ಸದ್ದಾಮ್‌ ಅಡ್ಡಗಟ್ಟಿದರಾದರೂ, ಆಗ ಪುಟಿದ ಚೆಂಡನ್ನು ಮತ್ತೆ ಫ್ರಾನ್ಸಿಸ್‌ ಫರ್ನಾಂಡಿಸ್‌ ಒದ್ದು  ‘ನೆಟ್‌’ನತ್ತ ಕಳಿಸಿದರು. ಆದರೆ ಅದು ಗುರಿ ತಲುಪಲಿಲ್ಲ.

ಭಾರತದ ರಕ್ಷಣಾ ಆಟಗಾರರು ಎದುರಾಳಿಯ ಪರಿಣಾಮಕಾರಿ ಆಟಗಾರರನ್ನು ಗುರುತಿಸಿ ಅವರ ಮೇಲೆ ಹೆಚ್ಚಿನ ಗಮನ ಹರಿಸಿ ಕಾಯುವಲ್ಲಿ ವಿಫಲರಾಗಿದ್ದು ಕಂಡು ಬರುತಿತ್ತು. ಜತೆಗೆ ಭಾರತಕ್ಕೆ ಸಿಕ್ಕಿದ ಕೆಲವು ಅತ್ಯುತ್ತಮ ಅವಕಾಶಗಳೂ ವಿಫಲಗೊಂಡವು.

ಮುಂಚೂಣಿಯಲ್ಲಿ ಸುನಿಲ್‌ ಚೆಟ್ರಿ ಮೇಲೆಯೇ ಹೆಚ್ಚಿನ ಒತ್ತಡವಿತ್ತು. ಹಿಂದಿನ ಪಂದ್ಯದಲ್ಲಿ ಕೆಂಪು ಕಾರ್ಡ್‌ ಪಡೆದು ಹೊರಗುಳಿದ ರಾಬಿನ್‌ ಸಿಂಗ್‌ ಅನುಪಸ್ಥಿತಿ ಎದ್ದು ಕಾಣುತಿತ್ತು. ಪಾಕ್‌ ಆಟಗಾರರು ಒಂದು ಗೋಲಿನ ಮುನ್ನಡೆಯ ಆತ್ಮವಿಶ್ವಾಸದಿಂದಾಗಿ ಉತ್ತರಾರ್ಧದಲ್ಲಿ ರಕ್ಷಣೆಗೂ ಹೆಚ್ಚಿನ ಒತ್ತು ನೀಡಿದ್ದರು.

ಭಾರತದ ಪರ ಸೀಮಿನ್ಲೆನ್‌  ದೌಂಗ್ನೆಲ್‌,  ಸಿಯಾಮ್‌ ಹಂಘಲ್‌, ಜಾಯ್ನರ್‌ ಲಾರೆಂಕೊ, ಚೆಟ್ರಿ ಗಮನಾರ್ಹ ಸಾಮರ್ಥ್ಯ ತೋರಿದರು. ‘ಮೊದಲ ಪಂದ್ಯದಲ್ಲಿ ನಮ್ಮದೇ ಕೆಲವು ತಪ್ಪುಗಳಿಂದ ಸೋತೆವು. ಆದರೆ ಎರಡನೇ ಪಂದ್ಯದಲ್ಲಿ ಅಂತಹ ತಪ್ಪುಗಳನ್ನು ತಿದ್ದಿಕೊಳ್ಳು ತ್ತೇವೆ. ಭಾರತ ನಾವು ಸೋಲಿಸಬಹುದಾದ ತಂಡ’ ಎಂದು ಪಂದ್ಯಕ್ಕೆ ಮೊದಲು ಪಾಕ್‌
ತಂಡದ ಕೋಚ್‌ ಮಹಮ್ಮದ್ ಶಾಮ್ಲಾನ್‌ ಹೇಳಿದ್ದರು. 

ಪಾಕ್‌ ತಂಡಕ್ಕೆ 50ಲಕ್ಷ ಬಹುಮಾನ
ಕರಾಚಿ (ಪಿಟಿಐ): ಪಾಕಿಸ್ತಾನ ತಂಡದ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿರುವ ಪಾಕಿಸ್ತಾನ ಫುಟ್‌ಬಾಲ್‌ ಫೆಡರೇಷನ್‌ನ ಅಧ್ಯಕ್ಷ ಸಲೇಹ್‌ ಫೈಸಲ್‌ ಹಯಾತ್‌ ಅವರು ತಂಡಕ್ಕೆ 50 ಲಕ್ಷ ರೂಪಾಯಿಗಳ ಬಹುಮಾನ ಪ್ರಕಟಿಸಿದ್ದಾರೆ.

‘ಈ ಗೆಲುವು ಪಾಕ್‌ನಲ್ಲಿ ಫುಟ್‌ಬಾಲ್‌ ಬೆಳವಣಿಗೆಯ ದೃಷ್ಟಿಯಲ್ಲಿ ಉತ್ತೇಜನಕಾರಿಯಾಗಿದೆ’ ಎಂದೂ ಅವರು ಹೇಳಿದ್ದಾರೆ.
‘ಹಣಕಾಸಿಗೆ ಸಂಬಂಧಿಸಿದಂತೆ, ಮೂಲಸೌಲಭ್ಯಗಳಿಗೆ ಸಂಬಂಧಿಸಿದಂತೆ ನಮಗಿಂತ ಭಾರತದ ಆಟಗಾರರು ಬಹಳ ಮೇಲ್ಮಟ್ಟದಲ್ಲಿದ್ದಾರೆ. ಅಲ್ಲಿ ಒಂದಿಲ್ಲಾ ಒಂದು ಆಂತರಿಕ ಲೀಗ್‌ ಮತ್ತು ಟೂರ್ನಿ ಪಂದ್ಯಗಳು ಸಾಮಾನ್ಯ. ನಮ್ಮಲ್ಲಿ ಅಷ್ಟೊಂದು ಟೂರ್ನಿಗಳೂ ನಡೆಯುವುದಿಲ್ಲ’ ಎಂದೂ ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT