ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಕಾಲಮಾನ ಬದಲಾವಣೆಗಿದು ಸಕಾಲ

Last Updated 21 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ಭಾರತ ಸಮಯ ವಲಯ’ವು, ಉತ್ತರಪ್ರದೇಶದ ಮಿರ್ಜಾಪುರದ ಮೂಲಕ ಹಾದುಹೋಗುವ 82.5 ಡಿಗ್ರಿ  ಪೂರ್ವ ರೇಖಾಂಶವನ್ನು ಆಧರಿಸಿದೆ.  ಭಾರತೀಯ ಕಾಲಮಾನವು, ಪ್ರಧಾನ ಮಧ್ಯಾಹ್ನ ರೇಖೆಯನ್ನು ಆಧರಿಸಿದ ‘ಪರಸ್ಪರ ಹೊಂದಾಣಿಕೆಯ ಸಾರ್ವತ್ರಿಕ ಕಾಲ’ಕ್ಕಿಂತ (ಯುಟಿಸಿ–ಕೊಆರ್ಡಿನೇಟೆಡ್ ಯುನಿವರ್ಸಲ್ ಟೈಮ್) 5 ಗಂಟೆ 30 ನಿಮಿಷಗಳಷ್ಟು ಮುಂದಿದೆ. ಇದನ್ನು ಭಾರತೀಯ ಕಾಲಮಾನ (ಐಎಸ್‌ಟಿ–ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್) ಎಂದು ವ್ಯಾಖ್ಯಾನಿಸಲಾಗಿದೆ. 1947ರಲ್ಲಿ ಸ್ವಾತಂತ್ರ್ಯ ದೊರೆತಾಗಿನಿಂದ  ದೇಶದ ಅಧಿಕೃತ ಸಮಯ ಇದೇ ಆಗಿದೆ.

ಭಾರತೀಯ ಕಾಲಮಾನವು ‘ಯುಟಿಸಿ’ಗಿಂತ  5 ಗಂಟೆ 30 ನಿಮಿಷಗಳು ಮುಂದಿರುವ ಬದಲು 6 ಗಂಟೆ ಮುಂದಿರುವ ಹಾಗೆ ಬದಲಾವಣೆ ಆಗಬೇಕು. ಆಗ ವಿದ್ಯುಚ್ಛಕ್ತಿ ಉಳಿತಾಯ ಮತ್ತು ಅಪರಾಧ ಪ್ರಮಾಣದಲ್ಲಿ ಇಳಿಕೆ ಸಹಿತ ಅನೇಕ ಪ್ರಯೋಜನ ಕಾಣಬಹುದು ಎಂದು ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್’ನ ವಿಜ್ಞಾನಿಗಳಾದ ಪ್ರೊಫೆಸರ್ ದಿಲೀಪ್ ಅಹುಜಾ ಮತ್ತು ಪ್ರೊಫೆಸರ್ ಡಿ.ಪಿ ಸೇನ್ ಗುಪ್ತಾ ಸಲಹೆ ನೀಡಿದ್ದಾರೆ.

ಇದರ ಪ್ರಕಾರ, 82.5 ಡಿಗ್ರಿ  ಪೂರ್ವ ರೇಖಾಂಶದ ಮೇಲೆ ಆಧಾರಿತ ಭಾರತೀಯ ಕಾಲಮಾನವು, ಬಂಗಾಳ - ಅಸ್ಸಾಂ ಗಡಿಯಲ್ಲಿನ 90 ಡಿಗ್ರಿ  ಪೂರ್ವ ರೇಖಾಂಶಕ್ಕೆ ವರ್ಗಾವಣೆಯಾಗುತ್ತದೆ.0 ಡಿಗ್ರಿ ರೇಖಾಂಶದ ಅಥವಾ ಪ್ರಧಾನ ಮಧ್ಯಾಹ್ನ ರೇಖೆಯ ಪೂರ್ವಕ್ಕೆ ಅಂದರೆ 68.7  ಡಿಗ್ರಿಯಿಂದ 97.25 ಡಿಗ್ರಿ  ಪೂರ್ವದವರೆಗೆ ಭಾರತವು ವ್ಯಾಪಿಸಿದೆ.

29 ಡಿಗ್ರಿಗಿಂತ ಹೆಚ್ಚು ವ್ಯಾಪ್ತಿ ಎಂದರೆ  ದೇಶದ ಪೂರ್ವ ಮತ್ತು ಪಶ್ಚಿಮ ಭಾಗದ ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಬಹುತೇಕ 2 ಗಂಟೆಗಳ ಸಮಯ ವ್ಯತ್ಯಾಸವಿದೆ ಎಂದರ್ಥ. ಆದರೂ, ಒಂದು ದೇಶವು ಒಂದೇ ಸಮಯ ಪರಿಪಾಲನೆಗೆ ಒಂದೇ ಮಾನದಂಡ ಅನುಸರಿಸುವುದು ಅಗತ್ಯ. ಇದರಿಂದ ಕಚೇರಿ, ಸಾರಿಗೆ ವ್ಯವಸ್ಥೆ ಮತ್ತು ಸಂವಹನ ವ್ಯವಸ್ಥೆ   ಕಾರ್ಯನಿರ್ವಹಿಸುವುದು ಸುಲಭವಾಗುತ್ತದೆ.

ಈಗಿನ ಭಾರತೀಯ ಕಾಲಮಾನ, ಅಂದರೆ, ‘ಯುಟಿಸಿಗಿಂತ  5 ಗಂಟೆ 30 ನಿಮಿಷಗಳು ಮುಂದಿರುವ ಕಾಲಮಾನದ ಪ್ರಕಾರ, ಭಾರತದ ಈಶಾನ್ಯ ರಾಜ್ಯಗಳಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವು ಬೇಗನೇ ಆಗುತ್ತದೆ. ಆದರೂ ಅಲ್ಲಿನ ಜನರು ಕತ್ತಲಾವರಿಸುವವರೆಗೂ ಕೆಲಸ ಮಾಡಬೇಕಾಗುತ್ತದೆ. ಪ್ರಸ್ತುತ ಭಾರತೀಯ ಕಾಲಮಾನವು ಹೆಚ್ಚು ವಿದ್ಯುತ್ ಬಳಕೆಗೆ ಎಡೆಮಾಡಿಕೊಡುತ್ತದೆ.

ವಿಶೇಷವಾಗಿ ಸಂಜೆ ವೇಳೆ ವಿದ್ಯುತ್ ಬೇಡಿಕೆಯನ್ನು ಹೆಚ್ಚಿಸುತ್ತದೆ. ಈ ಬೃಹತ್ ಪ್ರಮಾಣದ ವಿದ್ಯುತ್ ಬೇಡಿಕೆಯನ್ನು ಸಂಭಾಳಿಸಲಾಗದೆ  ಹೆಚ್ಚಿನ ಕಂಪನಿಗಳು ಪರದಾಡುತ್ತಿವೆ.  ಇದರಿಂದ ರಾಷ್ಟ್ರಕ್ಕೆ ಗಣನೀಯ ಪ್ರಮಾಣದ ಆರ್ಥಿಕ ನಷ್ಟವೂ ಉಂಟಾಗುತ್ತಿದೆ.

ಪೂರ್ವದಿಂದ ಪಶ್ಚಿಮಕ್ಕೆ 30 ಡಿಗ್ರಿ  ವ್ಯಾಪ್ತಿ ಹೊಂದಿರುವ ದೇಶಗಳಲ್ಲಿ ಎರಡು ಸಮಯ ವಲಯವನ್ನು ಅನುಸರಿಸಬಹುದು. ಎರಡು ಸಮಯ ವಲಯಗಳ ಅನುಸರಣೆಯಿಂದ  ಲಭಿಸುವ ಅನುಕೂಲತೆಗಳನ್ನೇ ನೀಡುವ ಮತ್ತೊಂದು ಆಯ್ಕೆಯೆಂದರೆ,  ದಿನದ ಬೆಳಕಿನ ಉಳಿತಾಯ ಸಮಯವನ್ನು ( ಡೇ ಲೈಟ್ ಸೇವಿಂಗ್ ಟೈಮ್ ಅಥವಾ
ಡಿ.ಎಸ್.ಟಿ) ಪರಿಚಯಿಸುವುದು.

ಭಾರತದಂತಹ ಒಂದು ಜನನಿಬಿಡ ದೇಶದಲ್ಲಿ, ಒಂದೇ ದೇಶದೊಳಗಿನ ವಿವಿಧ ಕಾಲಮಾನಗಳು ಗೊಂದಲವನ್ನು ಸೃಷ್ಟಿಸಬಹುದು. ಅದರಲ್ಲೂ ವಿಶೇಷವಾಗಿ ಗಡಿ ವಲಯಗಳಲ್ಲಿ ಹೆಚ್ಚಿನ ಗೊಂದಲ ಉಂಟಾಗಬಹುದು. ರೈಲು ಅಪಘಾತಗಳಂಥ ತೀವ್ರ ಪರಿಣಾಮಗಳೂ ಆಗಬಹುದು. ಡಿಎಸ್‌ಟಿ ಪ್ರಕಾರ ವರ್ಷಕ್ಕೆ ಎರಡು ಬಾರಿ ಸಮಯ ಬದಲಾವಣೆ ಮಾಡಬೇಕಾಗುತ್ತದೆ. ಇದು ಕೂಡಾ ಇಂತಹದ್ದೇ ಅಪಾಯಗಳನ್ನು ಉಂಟುಮಾಡಬಹುದು. ಆದ್ದರಿಂದ, ನಾವು ಈಗ ಹೊಂದಿರುವಂತೆ, ಭಾರತಕ್ಕೆ ಒಂದೇ ಸಮಯ ವಲಯದ ಅಗತ್ಯವಿದೆ. ಆದರೆ, ಅರ್ಧ ಗಂಟೆ ಬದಲಾವಣೆಯೊಂದಿಗೆ.

ಹೊಸ ಭಾರತೀಯ ಕಾಲಮಾನದ ಪ್ರಕಾರ, ಜನರಿಗೆ ಸಂಜೆಯಲ್ಲಿ ಅರ್ಧ ಗಂಟೆ ಹೆಚ್ಚಿನ ಹಗಲು ಬೆಳಕು ದೊರೆಯುತ್ತದೆ. ಆದರೆ, ಇದರಿಂದ ಕಚೇರಿಗಳ ಅಧಿಕೃತ ಸಮಯದಲ್ಲಿ ಹಾಗೂ ಮಾನವನ ಮೂಲ ಅಭ್ಯಾಸಗಳಲ್ಲಿ  ಯಾವುದೇ ಬದಲಾವಣೆ ಆಗುವುದಿಲ್ಲ.

ಪ್ರೊ. ಅಹುಜಾ ಮತ್ತು ಪ್ರೊ. ಸೇನ್ ಗುಪ್ತಾ ಅವರು ವಿವಿಧ ಋತುಗಳಲ್ಲಿ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ವೆಚ್ಚ ಎಷ್ಟಾಗುತ್ತಿದೆ ಎಂಬುದನ್ನು ಅಂದಾಜು ಮಾಡಲು ಬೇಡಿಕೆ ರೇಖೆಯನ್ನು (ಲೋಡೆಡ್‌ ಕರ್ವ್‌– ಹಗಲು  ಸಮಯದಲ್ಲಿ ವಿದ್ಯುತ್ ಬೇಡಿಕೆಯ ಬಿಂದುಗಳನ್ನು ಗುರುತಿಸಿ ಚಿತ್ರಿಸಿದ ವಕ್ರರೇಖೆ)  ಬಳಸಿದರು. ಇದರ ಪ್ರಕಾರ, ಭಾರತೀಯ ಕಾಲಮಾನದಲ್ಲಿ ಕೇವಲ ಅರ್ಧ ಗಂಟೆಯ ಹೆಚ್ಚಳವು, ವಾರ್ಷಿಕ 300 ಕೋಟಿ ಯುನಿಟ್‌ಗಳಷ್ಟು ವಿದ್ಯುತ್ ಉಳಿಸುತ್ತದೆ ಎಂದು ಕಂಡುಬಂದಿದೆ.

ದೇಶದ ಒಟ್ಟು ವಿದ್ಯುತ್ ಬಳಕೆಯ ಅಗಾಧತೆಯನ್ನು ಪರಿಗಣಿಸಿದಾಗ, ಈ ಉಳಿತಾಯ ಅತ್ಯಲ್ಪ ಎನಿಸಬಹುದು. ಆದರೂ, ಇದರಿಂದ ಸಂಜೆಯ ವೇಳೆ ಮನೆಗಳಲ್ಲಿ ಬಳಸುವ ವಿದ್ಯುತ್  ಬೇಡಿಕೆ  ಶೇಕಡಾ 16ರಷ್ಟು  ಕಡಿಮೆಯಾಗುತ್ತದೆ. ‘ಇದರಿಂದಾಗುವ ಆರ್ಥಿಕ  ಮತ್ತು ನಿರ್ವಹಣಾ ಪ್ರಯೋಜನಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ರಾಷ್ಟ್ರಕ್ಕೆ ವಾರ್ಷಿಕ  ₹1,500  ಕೋಟಿ  ಉಳಿತಾಯವಾಗುತ್ತದೆ ಎಂದಾದರೆ ಅದು ನಗಣ್ಯವಲ್ಲ’ ಎನ್ನುತ್ತಾರೆ ಪ್ರೊ. ಅಹುಜಾ.

ಅಪರಾಧ ಪ್ರಕರಣಗಳ ಇಳಿಕೆಯು ಇದರ ಪರೋಕ್ಷ ಪ್ರಯೋಜನಗಳಲ್ಲಿ ಒಂದು. ಅಪರಾಧ ಚಟುವಟಿಕೆ  ಸಾಮಾನ್ಯವಾಗಿ ಸೂರ್ಯಾಸ್ತದ ನಂತರವೇ ನಡೆಯುತ್ತವೆ.  ಹೊಸ ಕಾಲಮಾನದಲ್ಲಿ ಜನರು ಕತ್ತಲು ಆವರಿಸುವ ಮೊದಲೇ ಮನೆ ತಲುಪಬಹುದು. ಮಹಿಳೆಯರ ಮೇಲಿನ ದೌರ್ಜನ್ಯ ನಡೆಯುವ ಸಾಧ್ಯತೆಗಳೂ ಇದರಿಂದ ಕಡಿಮೆಯಾಗುತ್ತವೆ ಎಂದು ನಿರೀಕ್ಷಿಸಲಾಗಿದೆ. ದಾಖಲೆಗಳ ಪ್ರಕಾರ, ಡಿಎಸ್‌ಟಿ  ಪರಿಕಲ್ಪನೆಯನ್ನು ಬಳಸುವ ದೇಶಗಳಲ್ಲಿ, ಅಪರಾಧ ಪ್ರಮಾಣ ಕಡಿಮೆ ಇರುವುದು ಕಂಡುಬಂದಿದೆ. ಅಲ್ಲದೇ, ರಸ್ತೆ ಅಪಘಾತಗಳಲ್ಲಾಗುವ ಸಾವುನೋವುಗಳ ಸಂಖ್ಯೆಯೂ  ಇಳಿಮುಖವಾಗುವುದು. ಮಕ್ಕಳಿಗೆ ಆಡಲು ಹೆಚ್ಚು ಸಮಯ ಸಿಗಲಿದೆ. 

‘ಇಂತಹ ಅನೇಕ ಪ್ರಯೋಜನಗಳು ಈ ಪರಿಕಲ್ಪನೆಯ ಪರಿಣಾಮಗಳಾಗಿವೆ.  ಇದಲ್ಲದೆ, ಬೇಗ ಏಳುವ ಮತ್ತು ಅರ್ಧ ಗಂಟೆ ಬೇಗ ಮಲಗುವ ಅಭ್ಯಾಸ ಆರೋಗ್ಯಕರ. ಗಡಿಯಾರ ತೋರುವ ಸಮಯವು ಏನೇ ಇದ್ದರೂ, ನಿಮ್ಮ ಜೈವಿಕ ಗಡಿಯಾರ ಸರಿಯಾದ ಸಮಯದ ಪಾಲನೆಯನ್ನೇ ನಿಮ್ಮಿಂದ ಬಯಸುತ್ತದೆ’ ಎನ್ನುತ್ತಾರೆ ಪ್ರೊ. ಸೇನ್ ಗುಪ್ತಾ.

ಈಶಾನ್ಯ ಪ್ರದೇಶವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಉಂಟಾಗುವ ರಾಜಕೀಯ ಪರಿಣಾಮವನ್ನು ಪರಿಗಣಿಸಿದರೂ  ಭಾರತೀಯ ಕಾಲಮಾನದಲ್ಲಿ ಅರ್ಧ ಗಂಟೆಯ ಬದಲಾವಣೆ ಅನುಕೂಲಕರವೇ ಆಗಿದೆ. ಭಾರತೀಯ ಕಾಲಮಾನವನ್ನು ‘ಯುಟಿಸಿ’ಗಿಂತ 5 ಗಂಟೆ 30 ನಿಮಿಷಗಳು ಮುಂದಿರುವುದರ ಬದಲು 6 ಗಂಟೆ ಮುಂದಿರುವ ಹಾಗೆ ಬದಲಾಯಿಸಿದರೆ, ಶೇ 97 ದೇಶಗಳ ಹಾಗೆ ಭಾರತ  ಕೂಡ ಒಂದು ಪೂರ್ಣಾಂಕ ಸ್ಥಳಾಂತರಿತ ಸಮಯ ವಲಯ  ಹೊಂದಲಿದೆ.

ಈ ಹೊಸ ಯೋಜನೆಯಿಂದ ಕೆಲವು ಅನಾನುಕೂಲಗಳಾಗುವ ಬಗ್ಗೆಯೂ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ. ಉತ್ತರ ಹಾಗೂ ವಾಯವ್ಯ ಪ್ರದೇಶಗಳಲ್ಲಿ  ಚಳಿಗಾಲದಲ್ಲಿ ಬೆಳಗಿನ ಜಾವ ಹೆಚ್ಚು ಹೊತ್ತು ಕತ್ತಲು ಆವರಿಸಿರುವುದರಿಂದ, ಶಾಲೆಗೆ ಮಕ್ಕಳನ್ನು ಕತ್ತಲಲ್ಲೇ ಕಳುಹಿಸಬೇಕಾಗುತ್ತದೆ. ಶಾಲೆಗಳಿಗೆ, ಬೇಸಿಗೆಯ ಮತ್ತು ಚಳಿಗಾಲದ ಎರಡು ವಿಭಿನ್ನ ಕಾರ್ಯನಿರ್ವಹಣಾ ಸಮಯವನ್ನು ಪರಿಚಯಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಮೇರಿಕದ ಸಮಯ ಅನುಸರಿಸುವ ಕಂಪೆನಿಗಳು, ಸಮಯ ಬದಲಾವಣೆಗೆ ಹೊಂದಿಕೊಳ್ಳಬೇಕಾಗುತ್ತದೆ. ಮಂಜಿನ ಕಾರಣದಿಂದ ಬೆಳಗಿನ ವಿಮಾನಗಳ ಹಾರಾಟ ವಿಳಂಬವಾಗುವ ಸಮಸ್ಯೆ ಮತ್ತಷ್ಟು ಹೆಚ್ಚಬಹುದು. 

ಈ ಪ್ರಸ್ತಾವನೆಯನ್ನು ಅಂಗೀಕರಿಸಲು, ಇರುವ ಪ್ರಮುಖ ಅಡಚಣೆಯೆಂದರೆ ನಮ್ಮ ಆಡಳಿತಶಾಹಿ ವ್ಯವಸ್ಥೆಯ ಮನೋಧರ್ಮ.   ಆಡಳಿತಶಾಹಿ ವ್ಯವಸ್ಥೆಯು ಅಪಾಯ ಎದುರಿಸುವುದನ್ನು ತಪ್ಪಿಸಿಕೊಳ್ಳಲು ಬಯಸುತ್ತದೆ.  ಅನಾನುಕೂಲಕ್ಕಿಂತ ಹೆಚ್ಚು ಪ್ರಯೋಜನಗಳಾಗಲಿವೆ ಎಂಬ ಅರಿವಿದ್ದರೂ  ಹೊಸ ಪರಿಹಾರಗಳನ್ನು ಒಪ್ಪಿಕೊಳ್ಳಲು ಈ ವ್ಯವಸ್ಥೆ ಹಿಂಜರಿಯುತ್ತದೆ. 

‘ಈ ಬದಲಾವಣೆಯನ್ನು ಒಮ್ಮೆ ಮಾತ್ರ ಮಾಡಬೇಕು. ಇದಕ್ಕಾಗಿ ಜಾಹೀರಾತು ನೀಡಿ ಸಾಕಷ್ಟು ಪೂರ್ವತಯಾರಿ ಮಾಡಿಕೊಳ್ಳಬೇಕು.  ಬದಲಾವಣೆ ಸ್ಥಿರಗೊಳ್ಳಲು ಒಂದು ವರ್ಷ ಕಾಲಾವಕಾಶ ಸಾಕು’ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
‌ - ಗುಬ್ಬಿ ಲ್ಯಾಬ್ಸ್‌
(ಸಂಶೋಧನಾ ಚಟುವಟಿಕೆಗಳ ಬಗ್ಗೆ ವ್ಯವಹರಿಸುವ ಸಾಮಾಜಿಕ ಉ
ದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT