ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಆಸ್ಟ್ರೇಲಿಯಾ ಅಣು ಒಪ್ಪಂದ

Last Updated 5 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಮತ್ತು ಆಸ್ಟ್ರೇಲಿಯಾ ಶುಕ್ರ­ವಾರ ಇಲ್ಲಿ ಮಹ­ತ್ವದ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದವು. ಈ ಮೂಲಕ ಇಂಧನ ಅವಶ್ಯಕತೆಯ ಭಾರತಕ್ಕೆ ಕ್ಯಾನ್‌ಬೆರ್ರಾ ಇನ್ನು ಯುರೇನಿಯಂ ಪೂರೈಸಲಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇ­ಲಿಯಾ ಪ್ರಧಾನಿ ಟೋನಿ ಅಬಾಟ್‌ ಅವರ ನಡುವೆ ನಡೆದ ಸಭೆ ಬಳಿಕ ಈ ಪರಮಾಣು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 2012ರಲ್ಲಿ ಭಾರತಕ್ಕೆ ಯುರೇ­ನಿಯಂ ರಫ್ತಿನ ಮೇಲಿದ್ದ ನಿಷೇಧ­ವನ್ನು ಆಸ್ಟ್ರೇ­ಲಿಯಾ ರದ್ದುಗೊಳಿಸಿದ ನಂತರ ಎರಡೂ ದೇಶ­ಗಳು, ಒಪ್ಪಂದದ ಮಾತುಕತೆ ಆರಂಭಿಸಿದ್ದವು.

ಭಾರತದ ಪರಮಾಣು ಸ್ಥಾವರಗಳು ಉತ್ಪಾದಿ­ಸುತ್ತಿ­ರುವ ಸುಮಾರು 4680 ಮೆ.ವಾ ವಿದ್ಯುತ್‌­ನಲ್ಲಿ 2840 ಮೆ.ವಾ ದೇಶೀಯ ಯುರೇನಿಯಂ­ನಿಂದ ಮತ್ತು 1840 ಮೆ.ವಾ ಆಮದು ಇಂಧನ­ದ ನೆರವಿನಿಂದ ಉತ್ಪಾದಿಸುತ್ತಿರುವುದರಿಂದ ಈ ಒಪ್ಪಂದ ಬಹಳ ಮಹತ್ವಪೂರ್ಣ.

ಎರಡೂ ದೇಶಗಳು ಪರಮಾಣು ಒಪ್ಪಂದವ­ಲ್ಲದೆ, ತಾಂತ್ರಿಕ  ಔದ್ಯೋಗಿಕ ಶಿಕ್ಷಣ, ಜಲ ಸಂಪ­ನ್ಮೂಲ ನಿರ್ವಹಣೆ ಹಾಗೂ ಕ್ರೀಡೆ ಸೇರಿದಂತೆ ಒಟ್ಟು ನಾಲ್ಕು ಒಪ್ಪಂದ­ಗಳಿಗೆ ಸಹಿ ಹಾಕಿದವು.

ಇಬ್ಬರೂ ನಾಯಕರು ಸಮರ ತಂತ್ರ­ಗಾರಿಕೆ ಮತ್ತು ಆರ್ಥಿಕ ಪಾಲುದಾರಿಕೆ ಬಲಗೊಳಿಸುವ ಕುರಿತು ಚರ್ಚಿಸಿದರು.   ಅಕ್ರಮ ವಲಸೆ ತಡೆಯು­ವಲ್ಲಿ ಸಹಕರಿ­ಸುವ ಬಗ್ಗೆಯೂ ಉಭಯತ್ರರು ಸಮಾ­ಲೋಚಿಸಿದರು. ಇರಾಕ್‌ ಮತ್ತು ಉಕ್ರೇನ್‌ ಪರಿಸ್ಥಿತಿ ಸೇರಿ­ದಂತೆ ಮಹತ್ವ­ಪೂರ್ಣವಾದ ದ್ವಿಪ­ಕ್ಷೀಯ, ಪ್ರಾದೇಶಿಕ ಹಾಗೂ ಅಂತರ­ರಾಷ್ಟ್ರೀಯ ವಿಷಯಗಳ ಬಗ್ಗೆ ಮಾತನಾಡಿದರು.

ಉಭಯ ಪ್ರಧಾನಿಗಳ ಸಭೆಯ ಬಳಿಕ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆ­ಯಲ್ಲಿ ಭಯೋತ್ಪಾ­ದ­ನೆಯ ಬಲಿಪಶು­ಗಳಾ­ದ ಭಾರತ ಮತ್ತು ಆಸ್ಟ್ರೇ­ಲಿಯಾ, ಸೈಬರ್‌ ಭದ್ರತೆ ಮತ್ತು ಭಯೋತ್ಪಾದಕ ಸಂಘಟನೆಗಳು ಒಡ್ಡಿ­ರುವ ಬೆದರಿಕೆಗಳ ವಿರುದ್ಧ ಸಹಭಾಗಿತ್ವದ ಬಗ್ಗೆ ಮಾತುಕತೆ ಸೇರಿದಂತೆ ಭಯೋತ್ಪಾದನೆಯ ನಿಗ್ರಹ­ಕ್ಕಾಗಿ ಜಂಟಿ ಕಾರ್ಯ­ತಂಡ ರಚಿ­ಸು­ವ ಕುರಿತು ಚರ್ಚಿಸಿದವು.

ಇದಲ್ಲದೆ, ಪ್ರಮುಖವಾದ ಭದ್ರತೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಪರಸ್ಪರ ಸಹ­ಕಾರಕ್ಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಬಗ್ಗೆ ಎರಡೂ ದೇಶ­­ಗಳು ಮಾತುಕತೆ ನಡೆಸಿದವು.

ರಾಷ್ಟ್ರಪತಿ ಪ್ರಶಂಸೆ: ಅಬಾಟ್‌ ಅವರು ರಾಷ್ಟ್ರಪತಿ ಭವನ­ದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನೂ ಭೇಟಿಯಾದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪರ­ಮಾಣು ಒಪ್ಪಂದ­ವನ್ನು ಶ್ಲಾಘಿಸಿದ ರಾಷ್ಟ್ರಪತಿ, ಭಾರತದ ಇಂಧನ ಭದ್ರತೆಗೆ ಈ ಒಪ್ಪಂದ ಮೈಲಿಗಲ್ಲು ಎಂದರು.

ಪುರಾತನ ವಿಗ್ರಹಗಳು ಮರಳಿ ಭಾರತಕ್ಕೆ
ನವದೆಹಲಿ (ಪಿಟಿಐ): ತಮಿಳುನಾಡು ದೇವಸ್ಥಾನದಿಂದ ಕದ್ದೊಯ್ಯಲಾಗಿದ್ದು ಎನ್ನಲಾದ ಎರಡು ಪುರಾತನ ದೇವರ ವಿಗ್ರಹಗಳನ್ನು ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬಾಟ್‌ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು.

11 ಅಥವಾ 12ನೇ ಶತಮಾನದ ಚೋಳರ ಆಡಳಿತಕ್ಕೆ ಸೇರಿದ ನಟರಾಜನ ಕಂಚಿನ ವಿಗ್ರಹ ಹಾಗೂ 10ನೇ ಶತ­ಮಾನಕ್ಕೆ ಸೇರಿದ ಅರ್ಧನಾರೀಶ್ವನ ವಿಗ್ರ­ಹ­ಗಳನ್ನು  ಅಬಾಟ್‌ ಅವರು ಮೋದಿ ಅವರಿಗೆ ನೀಡಿದರು.

ಎರಡೂ ವಿಗ್ರಹಗಳನ್ನು ತಮಿಳು­ನಾಡು ದೇವಾಲ­ಯದಿಂದ ಕದಿಯ­ಲಾಗಿತ್ತು ಎನ್ನಲಾಗಿದೆ. ಅವುಗಳನ್ನು ಮರಳಿಸುವಂತೆ ಕಳೆದ ಮಾರ್ಚ್‌ನಲ್ಲಿ ಭಾರತ ಒತ್ತಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT