ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡದ ಫೈನಲ್‌ ಆಸೆ ಜೀವಂತ

ಕ್ರಿಕೆಟ್‌: ಮಳೆ ಅಡ್ಡಿಯಿಂದ ಪಂದ್ಯ ರದ್ದು, ದೋನಿ ಪಡೆಗೆ ಎರಡು ಅಂಕ
Last Updated 26 ಜನವರಿ 2015, 19:30 IST
ಅಕ್ಷರ ಗಾತ್ರ

ಸಿಡ್ನಿ: ಮಳೆ ಅಡ್ಡಿಪಡಿಸಿದ ಕಾರಣ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ರದ್ದಾಯಿತು. ಆದರೂ, ಫೈನಲ್ ಪ್ರವೇಶಿಸುವ ದೋನಿ ಪಡೆಯ ಆಸೆ ಜೀವಂತವಾಗಿದೆ.

ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆಯಿಂದಲೇ ಮಳೆ ಸುರಿಯಿತು. ಆದ್ದರಿಂದ 40 ನಿಮಿಷ  ತಡವಾಗಿ ಪಂದ್ಯ ಆರಂಭವಾಯಿತು. ಓವರ್‌ಗಳ ಸಂಖ್ಯೆಯನ್ನು 44ಕ್ಕೆ ಇಳಿಸಲಾಗಿತ್ತು. ಕೆಲ ಹೊತ್ತು ಪಂದ್ಯ ನಡೆಯಿತು. ಆದರೆ, ಮತ್ತೆ ಮಳೆ ಸುರಿದದ್ದರಿಂದ ಅಂತಿಮವಾಗಿ ಪಂದ್ಯವನ್ನು ರದ್ದು ಮಾಡಲಾಯಿತು.

ಸಿಡ್ನಿ ಕ್ರಿಕೆಟ್‌ ಅಂಗಳದಲ್ಲಿ ಸೋಮವಾರ ಟಾಸ್‌ ಸೋತ ಭಾರತ ಮೊದಲು ಬ್ಯಾಟ್‌ ಮಾಡಿತು. ಆರಂಭದಲ್ಲಿಯೇ ಪರದಾಡಿದ ತಂಡ 16 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 69 ರನ್‌ ಗಳಿಸಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ (ಔಟಾಗದೆ 28) ಮತ್ತು ಅಂಬಟಿ ರಾಯುಡು (23) ರನ್‌ ಗಳಿಸಿದ್ದರು. ಈ ವೇಳೆ ಮತ್ತೆ ಮಳೆ ಸುರಿಯಿತು. ಆದ್ದರಿಂದ ಉಭಯ ತಂಡಗಳು ತಲಾ ಎರಡು ಪಾಯಿಂಟ್ಸ್‌ ಹಂಚಿಕೊಂಡವು.

ಆಸೆ ಜೀವಂತ: ಮೊದಲ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿರುವ ಭಾರತ ತಂಡ ಫೈನಲ್‌ ಪ್ರವೇಶಿಸುವ ಕನಸು ಜೀವಂತವಾಗಿದೆ. ಈ ಆಸೆ ಈಡೇರಬೇಕಾದರೆ ಪರ್ತ್‌ನಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಗೆಲ್ಲಬೇಕು.

ಒಟ್ಟು 15 ಪಾಯಿಂಟ್ಸ್‌ ಹೊಂದಿರುವ ಆಸ್ಟ್ರೇಲಿಯಾ ಈಗಾಗಲೇ ಫೈನಲ್‌ ಪ್ರವೇಶಿಸಿದೆ. ಆದರೆ,  ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ಭಾರತ ಮತ್ತು ಇಂಗ್ಲೆಂಡ್‌ ನಡುವೆ ಪೈಪೋಟಿ ಏರ್ಪಟ್ಟಿದೆ. ಆದ್ದರಿಂದ ಶುಕ್ರವಾರದ ಪಂದ್ಯ ಉಭಯ ತಂಡಗಳಿಗೂ ‘ಫೈನಲ್‌’ ಎನಿಸಿದೆ.

ಹಿಂದಿನ ಪಂದ್ಯದಲ್ಲಿ ದೋನಿ ಪಡೆ  ಎದುರು ಗೆಲುವು ಪಡೆದಿರುವ ಇಂಗ್ಲೆಂಡ್‌ ಬಳಿ ಐದು ಪಾಯಿಂಟ್ಸ್‌ ಇವೆ. ಒಂದು ವೇಳೆ ಮುಂದಿನ ಪಂದ್ಯಕ್ಕೂ ಮಳೆ ಅಡ್ಡಿಯಾದರೆ ಭಾರತದ ಫೈನಲ್‌ ಪ್ರವೇಶದ ಕನಸು ಭಗ್ನವಾಗಲಿದೆ.

ಅಭಿಮಾನಿಗಳ ಆಕ್ರೋಶ:  ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ಸಿಡ್ನಿಯಲ್ಲಿ ಆಯೋಜಿಸಿದ್ದಕ್ಕೆ ದಕ್ಷಿಣ ಆಸ್ಟ್ರೇಲಿಯಾದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನವರಿ 26ರಂದು ಇಲ್ಲಿ ‘ಆಸ್ಟ್ರೇಲಿಯಾ ದಿನ’ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಇಂತಹ  ಪಂದ್ಯಗಳನ್ನು ಅಡಿಲೇಡ್‌ನಲ್ಲಿ ನಡೆಸುವುದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಆದರೆ, ಈ ಬಾರಿ ಪಂದ್ಯವನ್ನು ಸಿಡ್ನಿಯಲ್ಲಿ ಆಯೋಜಿಸಿದ್ದು ಕ್ರಿಕೆಟ್‌ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.

‘ಆಸ್ಟ್ರೇಲಿಯಾ ದಿನದಂದು ಅಡಿಲೇಡ್‌ನಲ್ಲಿ ಪಂದ್ಯ ನಡೆಯುವುದು ವಾಡಿಕೆ. ಆದರೆ, ಈ ಬಾರಿ ಸಿಡ್ನಿಯಲ್ಲಿ ಪಂದ್ಯ ಆಯೋಜಿಸಿದ್ದರಿಂದ ಬೇಸರವಾಗಿದೆ. ಅಡಿಲೇಡ್‌ನಲ್ಲಿ ಮಳೆ ಇಲ್ಲ’ ಎಂದು ಬ್ರಿಯಾನ್‌ ಫಿನ್ನಿಗನ್‌ ಎಂಬ ಅಭಿಮಾನಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT