ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಸಾರ್ವಕಾಲಿಕ ಟೆಸ್ಟ್‌ ತಂಡಕ್ಕೆ ಗಂಗೂಲಿ ನಾಯಕ

ಶೇನ್ ವಾರ್ನ್ ಆಯ್ಕೆ ಮಾಡಿದ ತಂಡದಲ್ಲಿ ದೋನಿ
Last Updated 16 ಡಿಸೆಂಬರ್ 2015, 19:40 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಪಿಟಿಐ): ಆಸ್ಟ್ರೇಲಿಯಾದ ಸ್ಪಿನ್‌ ದಂತಕತೆ ಶೇನ್‌ ವಾರ್ನ್‌ ಅವರು ತಮ್ಮ ಆಯ್ಕೆಯ ಭಾರತದ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್‌ ತಂಡವನ್ನು ಬುಧವಾರ ಪ್ರಕಟಿಸಿದ್ದಾರೆ.

ಈ ತಂಡದ ನಾಯಕ ಸ್ಥಾನಕ್ಕೆ ಅವರು ಸೌರವ್‌ ಗಂಗೂಲಿ ಅವರನ್ನು ಆಯ್ಕೆ ಮಾಡಿದ್ದಾರೆ. ತಾವು ಕ್ರಿಕೆಟ್‌ ಆಡುವ ದಿನಗಳಲ್ಲಿ ಸಿಂಹಸ್ವಪ್ನವಾಗಿ ಕಾಡಿದ್ದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರನ್ನು ವಾರ್ನ್‌ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಆಯ್ಕೆ ಮಾಡಿದ್ದಾರೆ.

ವಾರ್ನ್‌ ಕೆಲದಿನಗಳಿಂದ ವಿವಿಧ ರಾಷ್ಟ್ರಗಳ ಶ್ರೇಷ್ಠ ಟೆಸ್ಟ್‌ ತಂಡಗಳನ್ನು ಆಯ್ಕೆ ಮಾಡಿ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಬುಧ ವಾರ ಅವರು ಭಾರತದ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಆಯ್ಕೆ ಮಾಡಿದ್ದಾರೆ.

ತಾವು ಆಡುವ ಕಾಲ ಘಟ್ಟದಲ್ಲಿ ಎದುರಾಳಿ ತಂಡದ ಆಟಗಾರರಲ್ಲಿ ಕಂಡ ಬದ್ಧತೆ, ತಾಳ್ಮೆ ಹಾಗೂ ಹೋರಾಟ ಮನೋಭಾವ ಹೀಗೆ ವಿವಿಧ ಅಂಶಗಳ ಆಧಾರದಲ್ಲಿ ಅವರು ಈ ತಂಡವನ್ನು ಆಯ್ಕೆ ಮಾಡಿದ್ದಾರೆ. ವೀರೆಂದ್ರ ಸೆಹ್ವಾಗ್‌ ಮತ್ತು ನವಜೋತ್‌ಸಿಂಗ್‌ ಸಿಧು ಅವರಿಗೆ ವಾರ್ನ್‌ ಆರಂಭಿಕರ ಜವಾಬ್ದಾರಿ ನೀಡಿ ದ್ದಾರೆ. ರಾಹುಲ್‌ ದ್ರಾವಿಡ್‌ಗೆ ತಂಡದಲ್ಲಿ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಸ್ಥಾನ ಕೊಟ್ಟಿದ್ದಾರೆ.

ಗಂಗೂಲಿಗೆ ಐದನೇ ಕ್ರಮಾಂಕಕ್ಕೆ ಆಯ್ಕೆ ಮಾಡಿರುವ ಅವರು ಮಹಮ್ಮದ್‌ ಅಜರುದ್ದೀನ್‌ ಅವರನ್ನು  ಆರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಜಾಗ ನೀಡಿದ್ದಾರೆ. ಕಪಿಲ್‌ ದೇವ್‌ ಆಲ್‌ರೌಂಡರ್‌ ರೂಪದಲ್ಲಿ ಹಾಗೂ ಮಹೇಂದ್ರಸಿಂಗ್‌ ದೋನಿ ವಿಕೆಟ್‌ ಕೀಪ ರ್‌ ಬ್ಯಾಟ್ಸ್‌ಮನ್‌ ಆಗಿ ಸ್ಥಾನ ಗಳಿಸಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಸ್ಪಿನ್ನರ್‌ ಗಳಾದ ಅನಿಲ್‌ ಕುಂಬ್ಳೆ, ಹರಭಜನ್‌ ಸಿಂಗ್‌್ ಮತ್ತು ವೇಗಿ ಜಾವಗಲ್‌ ಶ್ರೀನಾಥ್‌ ಅವರಿಗೆ ಈ ತಂಡದಲ್ಲಿ  ಸ್ಥಾನ ಕಲ್ಪಿಸಲಾಗಿದೆ. ವಿವಿಎಸ್‌ ಲಕ್ಷ್ಮಣ್‌ 12ನೇ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ‘ಈ ತಂಡವನ್ನು ಆಯ್ಕೆ ಮಾಡುವುದು  ಸುಲಭದ ಕೆಲಸವಾಗಿರಲಿಲ್ಲ. ನಾನು ದಿಲೀಪ್‌ ವೆಂಗ್‌ಸರ್ಕಾರ್‌, ಸಂಜಯ್‌ ಮಾಂಜ್ರೇಕರ್‌, ರವಿಶಾಸ್ತ್ರಿ ಮತ್ತು ಮನೋಜ್‌ ಪ್ರಭಾಕರ್‌ ಅವರ ಎದುರು  ಆಡಿದ್ದು ಕಡಿಮೆ. ನನ್ನ ವೃತ್ತಿ ಜೀವನ ಆರಂಭವಾದಾಗ ಇವರೆಲ್ಲಾ ನಿವೃತ್ತಿಯ ಅಂಚಿನಲ್ಲಿದ್ದರು.

ಜತೆಗೆ ಜಹೀರ್‌ ಖಾನ್‌ ಅವರ ಆಟವನ್ನು ನಾನು ಹೆಚ್ಚು ನೋಡಿಲ್ಲ. ಹೀಗಾಗಿ ಇವರನ್ನು ಆಯ್ಕೆಗೆ ಪರಿಗಣಿಸಿಲ್ಲ’ ಎಂದು ವಾರ್ನ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದು ಕೊಂಡಿದ್ದಾರೆ.

‘ನಾನು ಆಯ್ಕೆ ಮಾಡಿರುವ ಈ ತಂಡ ಸಮತೋಲನದಿಂದ ಕೂಡಿದೆ. ಈ ತಂಡದಲ್ಲಿ ಇರುವ ಆಟಗಾರರ ಎದುರು ಆಡುವುದು ಪ್ರತಿಯೊಬ್ಬರಿಗೂ ಸವಾಲೇ ಸರಿ. ಆರನೇ ಕ್ರಮಾಂಕದ ಆಟ ಗಾರನನ್ನು ಆಯ್ಕೆ ಮಾಡುವುದು  ಕಷ್ಟ ಎನಿಸಿತು. ಆತ್ಮೀಯ ಗೆಳೆಯ ಲಕ್ಷ್ಮಣ್‌ ಮತ್ತು ಅಜರುದ್ದೀನ್‌ ಅವರಲ್ಲಿ ಯಾರನ್ನು ಸೇರಿಸಿಕೊಳ್ಳ ಬೇಕೆಂಬ ಗೊಂದಲ ಕಾಡಿತ್ತು’ ಎಂದಿದ್ದಾರೆ.

ಟೆಸ್ಟ್‌ ತಂಡ:  ವೀರೇಂದ್ರ ಸೆಹ್ವಾಗ್‌, ನವ ಜೋತ್‌ ಸಿಂಗ್‌ ಸಿಧು, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ (ನಾಯಕ), ಮಹಮ್ಮದ್‌ ಅಜರುದ್ದೀನ್‌, ಕಪಿಲ್‌ ದೇವ್‌, ಮಹೇಂದ್ರ ಸಿಂಗ್‌ ದೋನಿ, ಅನಿಲ್‌ ಕುಂಬ್ಳೆ, ಹರಭಜನ್‌ ಸಿಂಗ್‌, ಜಾವಗಲ್‌ ಶ್ರೀನಾಥ್‌ ಹಾಗೂ ವಿವಿಎಸ್‌ ಲಕ್ಷ್ಮಣ್‌ (12ನೇ ಆಟಗಾರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT