ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಜೀವಿ ಕುಮಾರಪ್ಪ

Last Updated 16 ಜೂನ್ 2012, 19:30 IST
ಅಕ್ಷರ ಗಾತ್ರ

ಕಲ್ಕತ್ತೆಯ ನ್ಯಾಶನಲ್ ಲೈಬ್ರರಿಯಲ್ಲಿ ಕನ್ನಡ ವಿಭಾಗದ ಗ್ರಂಥಪಾಲಕರಾಗಿದ್ದ ಜಿ. ಕುಮಾರಪ್ಪ, ಜೂನ್ 6ರಂದು ತೀರಿಕೊಂಡರು. ಕನ್ನಡಕ್ಕಾಗಿ ಅವರು ಹಿನ್ನೆಲೆಯಲ್ಲಿದ್ದು ಮಾಡಿದ ಕೆಲಸಗಳು, `ಅರಸರಿಯದ ಬಿಟ್ಟಿ~ಯಂತೆ ಇದ್ದುದರಿಂದಲೋ ಏನೋ ಹೆಚ್ಚಿನವರಿಗೆ ತಿಳಿಯಲಿಲ್ಲ. ಅವರು ಮಾಡಿದ ಎರಡು ಕೆಲಸಗಳಿಗಾಗಿ ಅವರನ್ನು ನೆನೆಯಬೇಕಿದೆ.

ಮೊದಲನೆಯದಾಗಿ- ಕರ್ನಾಟಕದಿಂದ ಯಾರೇ ಲೇಖಕರು ಬಂಗಾಳಕ್ಕೆ ಹೋದರೂ, ಅವರು ಮರಳಿ ಹೋಗುವ ತನಕ, ಸ್ವಯಂಘೋಷಿತ ಮಾರ್ಗದರ್ಶಿಯಾಗಿ ಕುಮಾರಪ್ಪ ನೆರವು ನೀಡುತ್ತಿದ್ದರು. ಅವರ ನೆರವನ್ನು ಪಡೆದವರ ಪಟ್ಟಿ ನಿಡಿದಾಗಿದೆ.

ಅವರು ಪ್ರವಾಸಿಗರಿಗೆ ಪ್ರಿಯವಾದ ವಿಕ್ಟೋರಿಯಾ ಮೆಮೋರಿಯಲ್ ಮುಂತಾದ ಜಾಗಗಳಿಗೆ ಕರೆದೊಯ್ಯುತ್ತಿರಲಿಲ್ಲ. ಬದಲಾಗಿ, ಕರ್ನಾಟಕದ ಇತಿಹಾಸ ಸಂಸ್ಕೃತಿಗೆ ಸಂಬಂಧಪಟ್ಟ ಜಾಗಗಳಿಗೆ ಕರೆದುಕೊಂಡು ಹೋಗುತ್ತಿದ್ದರು.
 
ನಾನು ಬಂಗಾಳಕ್ಕೆ ಹೋದಾಗ, ಟಿಪ್ಪು ಮಕ್ಕಳ ಸಮಾಧಿ, ಕುವೆಂಪು ದೀಕ್ಷೆ ತೆಗೆದುಕೊಂಡ ಬೇಲೂರಮಠ ಇತ್ಯಾದಿ ತೋರಿಸಿದರು. ನ್ಯಾಶನಲ್ ಲೈಬ್ರರಿಯ ಯಾವ್ಯಾವ ರ‌್ಯಾಕಿನಲ್ಲಿ ಯಾವ್ಯಾವ ಪುಸ್ತಕದಲ್ಲಿ ಕರ್ನಾಟಕದ ಮಾಹಿತಿಯಿದೆ ಎಂದು ಎಳೆದುಕೊಂಡು ಹೋಗಿ ತೋರಿಸಿದರು. `ನಿಮಗೆ ಸಾಕಾಗಿಲ್ಲವಾ ಕುಮಾರಪ್ಪ~ ಅಂದರೆ, `ಇಷ್ಟು ದೂರದಲ್ಲಿ ಕನ್ನಡ ಮಾತನ್ನು ಕೇಳೋಕ್ಕೋಸ್ಕರಾನೇ ನಾನು ಈ ಸೇವೆ ಮಾಡ್ತಿದೀನಿ~ ಎಂದು ಹೇಳುತ್ತಿದ್ದರು.

ಎರಡನೆಯದಾಗಿ- ಬಂಗಾಳಿಯಿಂದ ಕನ್ನಡಕ್ಕೆ ಅನುವಾದ ಮಾಡುತ್ತಿದ್ದವರಲ್ಲಿ ಕುಮಾರಪ್ಪ ಒಬ್ಬರಾಗಿದ್ದರು. ಕನ್ನಡಕ್ಕೆ ಬಂಗಾಳಿಯಿಂದ ಇಂಗ್ಲಿಷ್, ಹಿಂದಿಗಳ ಮೂಲಕ ಬೇಕಾದಷ್ಟು ಬಂದಿದೆ. ಆದರೆ ನೇರವಾಗಿ ಬಂಗಾಳಿಯಿಂದಲೇ ಕನ್ನಡಕ್ಕೆ ಅನುವಾದಿಸಿದವರು ಎ.ಆರ್.ಕೃಷ್ಣಶಾಸ್ತ್ರಿ, ಕೂಡಲಿ ಚಿದಂಬರಂ, ಅಹೋಬಲ ಶಂಕರ ಮುಂತಾದವರು.
 
ಆ ತಲೆಮಾರು ಮುಗಿದ ಬಳಿಕ ಈ ಕೆಲಸ ಮಾಡುತ್ತಿದ್ದವರು, ಬಹುಶಃ ಕುಮಾರಪ್ಪನವರೊಬ್ಬರೇ. ಅವರು ಬಂಗಾಳದಲ್ಲಿ ವಾಸವಾಗಿದ್ದುಕೊಂಡೇ ಈ ಕೆಲಸ ಮಾಡುತ್ತಿದ್ದುದು ಇನ್ನೂ ವಿಶೇಷವಾಗಿತ್ತು. ಅವರಿಂದ ದೇವಿಪ್ರಸಾದ್ ಚಟ್ಟೋಪಾಧ್ಯಾಯ, ಮಹಾಶ್ವೇತಾದೇವಿ ಮುಂತಾದವರ ಅನೇಕ ಕೃತಿಗಳು ಕನ್ನಡಕ್ಕೆ ಬಂದವು. ಆದರೆ ಈ ಕೆಲಸ ಇನ್ನೂ ಬಾಕಿಯಿತ್ತು.

ನನಗೆ ನೆನಪಾಗುತ್ತಿದೆ- ನಾನೂ ಅವರೂ ಕಲ್ಕತ್ತೆಯ ಬುಕ್‌ಫೇರಿನಲ್ಲಿ ತಿರುಗುವಾಗ, ಅವರು ಬರೀ ಬಂಗಾಳಿ ಪುಸ್ತಕಗಳನ್ನು ಕೊಂಡುಕೊಂಡರು. ಅವರ ಮನೆಯ ಕಪಾಟಿನಲ್ಲೂ ಬಂಗಾಳಿ ಪುಸ್ತಕಗಳ ರಾಶಿ. ದೇಶದ ಅತಿದೊಡ್ಡ ಗ್ರಂಥಾಲಯದಲ್ಲಿರುವ ಅವರಿಗೆ ಈ ಎಲ್ಲ ಪುಸ್ತಕಗಳೂ ಬೆರಳತುದಿಗೇ ಎಟುಕುವಂತಿದ್ದರೂ ಇದೇಕೆ ಎಂದು ಕುತೂಹಲದಿಂದ ವಿಚಾರಿಸಿದೆ.

`ಇನ್ನೊಂದೆರಡು ವರ್ಷದಲ್ಲಿ ರಿಟೈರ್ ಆಗಿ ಊರಿಗೆ ಬರ್ತೀನಲ್ಲ, ಆಗ ಇವನ್ನೆಲ್ಲ ಅನುವಾದ ಮಾಡ್ತೀನಿ. ಬಂಗಾಳಿಯ ಈ ಅತ್ಯುತ್ತಮ ಪುಸ್ತಕಗಳು ಕನ್ನಡಕ್ಕೆ ಬರಬೇಕು~ ಎಂದರು. ಕನ್ನಡದ ಎಷ್ಟೋ ಪುಸ್ತಕಗಳನ್ನು ಬಂಗಾಳಿಗೆ ತರ್ಜುಮೆ ಮಾಡುವ ಯೋಜನೆಯೂ ಅವರಲ್ಲಿತ್ತು.

ಕುಮಾರಪ್ಪ, ಅವರಿಂದ ಆಗಬೇಕಾಗಿದ್ದ ಮೂರನೇ ಕೆಲಸಕ್ಕಾಗಿಯೂ ಈಗ ನೆನಪಾಗುತ್ತಿದ್ದಾರೆ. ಅದೆಂದರೆ, ಬಂಗಾಳದ ಅವರ ಅನುಭವವನ್ನು ಬರೆಯುವುದು. ಹತ್ತಿರ ಹತ್ತಿರ ಮೂರು ದಶಕಗಳ ಕಾಲ ಕಲ್ಕತ್ತೆಯಲ್ಲಿದ್ದ ಕುಮಾರಪ್ಪ ಬಂಗಾಳಿಗಳ ತಿಂಡಿಪ್ರಿಯತೆ, ಸೋಮಾರಿತನ, ಸೃಜನಶೀಲತೆ, ಆಚಾರ ವಿಚಾರಗಳ ಕುರಿತು ಸ್ವಾರಸ್ಯಕರವಾಗಿ ಮಾತಾಡುತ್ತಿದ್ದರು.
 
ಬಂಗಾಳಿಗಳನ್ನು ಸೋಮಾರಿಗಳು ಎಂದು ಅವರು ಮಾಡುತ್ತಿದ್ದ ಟೀಕೆ, ನನಗೆ ಪೂರ್ವಗ್ರಹದ್ದು ಅನಿಸಿ, `ನಿಮಗೆ ಗ್ರಾಮೀಣ ಬಂಗಾಳ ಗೊತ್ತಿಲ್ಲ. ಅದಕ್ಕೇ ಹೀಗಂತಿದೀರಿ~ ಎಂದು ಅಸಮ್ಮತಿ ತೋರುತ್ತಿದ್ದೆ. (ಕೃಷ್ಣಾನಂದ ಕಾಮತರೂ ಕೂಡ ಬಂಗಾಳದ ಬಗ್ಗೆ ತುಸು ಪೂರ್ವಗ್ರಹದಿಂದಲೇ ಬರೆದವರು). ಆದರೆ ಕುಮಾರಪ್ಪನವರಿಗೆ ಕಲ್ಕತ್ತೆಯ ಪ್ರಸಿದ್ಧ ಲೇಖಕರಿಂದ ಹಿಡಿದು ಸೈಕಲ್ ರಿಕ್ಷಾ ಎಳೆಯುವವರ ತನಕ ಸಾವಿರಾರು ಜನರ ಜತೆ ಗಾಢ ಸಂಪರ್ಕವಿತ್ತು.
 
ಅವರು ಹೋದ ಹೊಸತರಲ್ಲಿ ಬಹಳ ಕಷ್ಟಪಟ್ಟು ಬದುಕಿದವರಾಗಿ, ತಳಸ್ತರದ ಬಾಳಿನ ಹೋರಾಟದ ಅನುಭವ ಕೂಡ ಅವರಲ್ಲಿತ್ತು. ಕಲ್ಕತ್ತೆಯಲ್ಲಿ ಮನೆ ಕಟ್ಟಿಸಿದ್ದರೂ ಅವರು ಬಂಗಾಳದ ತಮ್ಮ ಅನುಭವವನ್ನಿಟ್ಟುಕೊಂಡು `ಬೇರುಬಿಡದೇ ಚಿಗುರುವ ಆಸೆ~ ಎಂಬ ಪುಟ್ಟ ಲೇಖನ ಬರೆದಿದ್ದರು.
 
ಆ ಬರಹದ ತಾಜಾತನ ಕಂಡು ನಾನು `ನಿಮ್ಮ ಅನುಭವಗಳನ್ನ ಬರೀಬೇಕು~ ಎಂದು ಕಾಡುತ್ತಿದ್ದೆ. `ಊರಿಗೆ ಬಂದಮೇಲೆ ಮತ್ತೇನು ಕೆಲಸ? ಬರೀತೀನಿ, ಬರೀತೀನಿ~ ಎಂದು ಭರವಸೆ ಕೊಡುತ್ತಿದ್ದರು. ಅವರು ಅದನ್ನು ಬರೆದಿದ್ದರೆ ಅದೊಂದು ಅಪೂರ್ವ ಬಂಗಾಳ ಕಥನವಾಗಿರುತ್ತಿತ್ತು.

ನಾನು ಬಾವುಲರ ಮೇಲೆ ಅವರು ಬರೆದಿದ್ದ ಲೇಖನ ಓದಿ, ಬಾವುಲರ ಭೇಟಿಗೆಂದು ಬಂಗಾಳಕ್ಕೆ ಹೋಗಿದ್ದೆ. ಬಂಗಾಳದಲ್ಲಿ ಎರಡು ವಾರಕಾಲ ನಾನು ಹಾಗೂ ಕುಮಾರಪ್ಪ ಚೆನ್ನಾಗಿ ತಿರುಗಿದೆವು. ಮುಂದೆ ನಾನು ಅಸ್ಸಾಮಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳುವಾಗ, `ನಾನೂ ಬರುತ್ತೇನೆ, ಇಂದಿರಾ ಗೋಸ್ವಾಮಿ ಅವರನ್ನು ಸಂದರ್ಶನ ಮಾಡಬೇಕು~ ಎಂದಿದ್ದರು. ಬಳಿಕ ಇದ್ದಕ್ಕಿದ್ದಂತೆ ಅವರ ಸಂಪರ್ಕ ಕಡಿದುಹೋಯಿತು. ಅವರ ಮೊಬೈಲು ಬಂದಾಗಿತ್ತು.
 
ಅವರ ಬಗ್ಗೆ ಲೇಖನವಿರುವ ನನ್ನ ಹೊಸ ಪುಸ್ತಕ ಕಳಿಸಿದೆ. ಅದಕ್ಕೂ ಪಾವತಿ ಜವಾಬು ಇಲ್ಲ. ಗ್ರಂಥಾಲಯದವರನ್ನು ವಿಚಾರಿಸಿದಾಗ `ದೀರ್ಘ ರಜೆಯಲ್ಲಿದ್ದಾರೆ~ ಎಂದು ತಿಳಿದುಬಂತು. ಎಲ್ಲಿ ನಾಪತ್ತೆಯಾಗಿರಬಹುದು ಎಂದು ಗೊಂದಲಗೊಂಡೆ. ಬಳಿಕ ನಾನು ನನ್ನ ದಂದುಗಗಳಲ್ಲಿ ಮುಳುಗಿಹೋದೆ.

ಹೀಗಿರುತ್ತ ಒಂದು ದಿನ ಇದ್ದಕ್ಕಿದ್ದಂತೆ ಕುಮಾರಪ್ಪ ಕರೆ ಮಾಡಿದರು. `ನಾನು ಬೆಂಗಳೂರಿನಲ್ಲೇ ಇದೀನಿ. ಟ್ರೀಟ್‌ಮೆಂಟ್ ತಗೋಂತಿದೀನಿ. ಯಾರಿಗೂ ಹೇಳಿಲ್ಲ. ನೀವೂ ಬರಬೇಡಿ. ನನಗೆ ಜನ ಸಹಾನುಭೂತಿ ತೋರಿಸುವುದು ಇಷ್ಟವಿಲ್ಲ. ಮಾತಾಡಬೇಕು ಅಂತಾದರೆ ಈ ನಂಬರಿಗೆ ಮಾಡಿ~ ಎಂದು ತಮ್ಮ ಹೆಂಡತಿ ಶ್ರೀಮತಿ ಕೋಮಲಾ ಅವರ ನಂಬರ್ ಕೊಟ್ಟರು.

ಏನು ಕಾಯಿಲೆ ಎಂದು ಕೂಡ ಸರಿಯಾಗಿ ಹೇಳಲಿಲ್ಲ. ಕೆಲವು ದಿನಗಳ ಬಳಿಕ ಅವರು ಗುಣಮುಖರಾಗಿ ಕಲ್ಕತ್ತೆಗೆ ಹೋದರು ಎಂದು ವರ್ತಮಾನ ಸಿಕ್ಕಿತು. ಈಗ ನೋಡಿದರೆ, ಅದೇ ನಂಬರಿನಿಂದ ಅವರ ಸಾವಿನ ಸುದ್ದಿ ಬಂದಿತು. ಬ್ಲಡ್ ಕ್ಯಾನ್ಸರ್ ಅವರನ್ನು ಬಲಿ ತೆಗೆದುಕೊಂಡಿತ್ತು.

ಸರಳ ವ್ಯಕ್ತಿಯೂ ಸ್ನೇಹಜೀವಿಯೂ ಆಗಿದ್ದ ಕುಮಾರಪ್ಪ ವಿನೋದಪ್ರಜ್ಞೆಯ ವ್ಯಕ್ತಿ. ಬಂಗಾಳದ ಬದುಕಿನ ನೂರಾರು ಘಟನೆಗಳನ್ನು ಹೇಳಿ ನಗಿಸುತ್ತಿದ್ದರು.

ದೇವೀಪ್ರಸಾದರಂತಹ ಧೀಮಂತ ಚಿಂತಕರನ್ನು ಅನುವಾದಿಸಿದರೂ, ವೈಚಾರಿಕ ಖಚಿತತೆ ಮತ್ತು ಚಿಂತನಶೀಲತೆ ಅವರಲ್ಲಿ ಇರಲಿಲ್ಲ. ಒಂದು ಬಗೆಯಲ್ಲಿ ಸದಾ ಸಂತೋಷ ಮತ್ತು ಲಹರಿಯಲ್ಲಿರುವ ಲಘುತ್ವ ಅವರ ವ್ಯಕ್ತಿತ್ವದಲ್ಲಿತ್ತು. ರಿಸ್ಕ್ ತೆಗೆದುಕೊಂಡು ಕಂಡವರಿಗೆ ಸಹಾಯ ಮಾಡುವುದರಲ್ಲೇ ಅವರ ಆಯುಷ್ಯವೆಲ್ಲ ಸವೆದುಹೋಗಿದೆ ಎಂದು ಭಾಸವಾಗುತ್ತಿತ್ತು.

ಮಹಾ ಭಾವಜೀವಿಯಾಗಿದ್ದ ಅವರಿಗೆ ತಮ್ಮ ತಾಯಿಯ ಬಗ್ಗೆ, ಊರಿನ ಬಗ್ಗೆ ಭಾವನಾತ್ಮಕ ಸೆಳೆತವಿತ್ತು. ಊರನ್ನು ಬಿಟ್ಟು ಕಲ್ಕತ್ತೆಗೆ ಹೋಗುವಾಗಿನ ತಮ್ಮ ತಲ್ಲಣವನ್ನು ಅವರೊಂದು ಕಡೆ ಹೀಗೆ ದಾಖಲಿಸಿದ್ದಾರೆ:

“ಹೊರಡುವ ದಿನ ಹತ್ತಿರವಾದಂತೆ, ಕೆರೆಯ ಏರಿಯ ಮೇಲೆ ನಿಂತು ಊರನ್ನು ಕಣ್ತುಂಬ ತುಂಬಿಕೊಳ್ಳುತ್ತೇನೆ. ತುಂಬಿದ ಕೆರೆಯ ಮೇಲಿಂದ ಹಾದು ಬರುವ ತಂಗಾಳಿಯನ್ನು ಎದೆ ತುಂಬ ಹೀರಿಕೊಳ್ಳುತ್ತೇನೆ.
 
ಮನೆಯ ಅಂಗಳದಲ್ಲಿ ಅಂಗಾತ ಮಲಗಿ ರಾತ್ರಿ ಆಕಾಶದಲ್ಲಿ ಮಿಣಮಿಣನೆ ಮಿರುಗುವ ನಕ್ಷತ್ರಗಳನ್ನು ಮನಸಲ್ಲಿ ಹಿಡಿದಿಟ್ಟುಕೊಳ್ಳುತ್ತೇನೆ. ಹಸಿರು ತುಂಬಿದ ಹೊಲದಲ್ಲಿ ಈ ಗಾಳಿ, ಈ ನೋಟ, ಈ ಹಸಿರು ಹುಲ್ಲಿನ ನವಿರು ಸ್ಪರ್ಶದ ನೆನಪು ಮತ್ತೆ ನಾನು ವಾಪಾಸು ಬರುವವರೆಗೆ ನನ್ನಲ್ಲಿ ಇರಲಿ ಎಂದು ಬಯಸುತ್ತೇನೆ. ಇದೋ ಹೊರಡುವ ದಿನ ಬಂದೇ ಬಿಟ್ಟಿತು. ಕಳಿಸ ಬಂದ ಎಲ್ಲರಿಗೂ ಕೈಬೀಸಿ ಬಸ್ಸಿನಲ್ಲಿ ಕುಳಿತರೆ, ಸೆರಗಿನಿಂದ ಕಣ್ಣು ಒರೆಸಿಕೊಳ್ಳುತ್ತಿರುವ ಅವ್ವನದೇ ಚಿತ್ರ”.

ನಾನು ಮಣ್ಣಿಗೆಂದು ಬಸಾಪುರಕ್ಕೆ (ಹೊಳಲ್ಕೆರೆ ತಾ.) ಹೋದಾಗ, ಅವರ ಬರಹದಲ್ಲಿ ಪ್ರಸ್ತಾಪವಾಗಿದ್ದ ಕೆರೆ, ತೋಟ, ಹೊಲಗಳನ್ನು ನಿರುಕಿಸಿದೆ. ಕೆರೆ ಬತ್ತಿ ಹೋಗಿತ್ತು. ಹೊಲಗಳು ಬೀಳು ಬಿದ್ದಿದ್ದವು. ತೋಟ ಮಾತ್ರ ನಳನಳಿಸುತ್ತಿತ್ತು. ಮನೆಗೆ ಹೋದೆ. ಅವರ ಅವ್ವ ನನ್ನ ಕೈಹಿಡಿದುಕೊಂಡು `ಎಲ್ಲದಾನಪ್ಪ ನಿನ್ನ ಸ್ನೇಹಿತಾ? ನಡುವಂತ್ರ ಹೋಗಿಬಿಟ್ಟ. ಮಗನೇ, ಕುಮಾರಾ~ ಎಂದು ಏರಿಯೊಡೆದ ಕೆರೆಯಂತೆ ಕುಸಿದು ಅಳತೊಡಗಿದರು.
 
ಅವರ ರೋದನದ ಸೆಳವಿನಲ್ಲಿ ಕುಮಾರಪ್ಪನವರ ಅನುವಾದ ಮಾಡುವ, ಆತ್ಮಕತೆ ಬರೆಯುವ ಯೋಜನೆಗಳೆಲ್ಲ ಕೊಚ್ಚಿಹೋಗುತ್ತಿರುವಂತೆ ಭಾಸವಾಯಿತು.
ಈಗಲೂ `ಸೆರಗಿನಿಂದ ಕಣ್ಣು ಒರೆಸಿಕೊಳ್ಳುತ್ತಿರುವ ಅವ್ವನದೇ ಚಿತ್ರ~; ಆದರೆ ಅದನ್ನು ನೋಡಲು ಇಷ್ಟವಿಲ್ಲದವರಂತೆ ಕುಮಾರಪ್ಪ ಗಾಜಿನ ಪೆಟ್ಟಿಗೆಯಲ್ಲಿ ನಿರಾಳ ಮಲಗಿದ್ದರು.
 
ತಮ್ಮೂರಿನ ಅರ್ಧದಷ್ಟು ಜನರಿಗೆ ಕಲ್ಕತ್ತೆ ತೋರಿಸಿದ್ದ ಕುಮಾರಪ್ಪ ಬಸಾಪುರಕ್ಕೂ ಬಂಗಾಳಕ್ಕೂ ಹಾದಿ ಹಾಸಿದ್ದರು. ತಮ್ಮ ಹಳ್ಳಿಯಲ್ಲಿದ್ದೇ ಬಂಗಾಳಿ ಪುಸ್ತಕಗಳನ್ನು ಅಧ್ಯಯನ ಮಾಡುತ್ತಿದ್ದ ಸೂಡಿಯ ಅಬ್ಬಿಗೇರಿ ವಿರೂಪಾಕ್ಷಪ್ಪನವರನ್ನು ಕಂಡಿದ್ದೆ; ಬಸಾಪುರದಲ್ಲಿದ್ದುಕೊಂಡೇ ಬಂಗಾಳದ ಅತ್ಯುತ್ತಮವಾದುದನ್ನು ಕನ್ನಡಕ್ಕೆ ತರಬಲ್ಲ ದುಡಿಮೆಗಾರನೊಬ್ಬನನ್ನು ಕಾಣುವುದು ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT