ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವತೀವ್ರತೆಯೂ ಧ್ವನಿಯ ಏರಿಳಿತವೂ

ನುಡಿ ವಿಧಾನ, ಸರಣಿ– 16
Last Updated 20 ಜುಲೈ 2014, 19:30 IST
ಅಕ್ಷರ ಗಾತ್ರ

ನಿತ್ಯದ ಸಂದರ್ಭದಲ್ಲಿ ನಾವು ಮಾತನಾಡುವುದು ಸಂವಹನದ ಅನಿವಾರ್ಯತೆಗಾಗಿ. ನಮ್ಮ ಕ್ರಿಯೆ-ಪ್ರತಿಕ್ರಿಯೆಗಳನ್ನು ಶಾಬ್ದಿಕವಾಗಿ ವಿವರಿಸಬೇಕಾದಾಗ ಇಲ್ಲವೇ ಇತರರು ನಮ್ಮ ಕ್ರಿಯೆ-ಪ್ರತಿಕ್ರಿಯೆಗಳನ್ನು ವಿಮರ್ಶಿಸಬೇಕಾದಾಗ, ನಾವು ಯಾರನ್ನಾದರೂ ಅಥವಾ ಯಾರಾದರೂ ನಮ್ಮನ್ನು ನಿರ್ದೇಶಿಸಬೇಕಾದಾಗ ಮಾತೇ ಅಗತ್ಯವಾದ ಸಾಧನ.

‘ಮುಖ ಮನಸ್ಸಿನ ಕನ್ನಡಿ’ ಎನ್ನುವ ಮಾತು ನಿಜವೇ. ಆದರೆ, ಮನದೊಳಗಿನ ಭಾವನೆಗಳೆಲ್ಲವೂ ಹರಳುಗಟ್ಟಿ ಸ್ಫುಟವಾಗುವುದು ಅವು ಮಾತಾಗಿ ಪರಿವರ್ತಿತವಾದಾಗಲೇ. ಸನ್ನೆ ಮಾಡುವುದರಿಂದ ಕೆಲವೊಂದು ಮೂಲಭೂತ ಸಂವಹನಗಳನ್ನು ಸಾಧಿಸಬಹುದಾದರೂ, ಸಂಕೀರ್ಣ ರೂಪದ ಭಾವನೆಗಳನ್ನು ವಿವರಿಸಲು ಮಾತು ಅಗತ್ಯ. ಮಾನವ ಸಂಬಂಧಗಳನ್ನು ಬೆಸೆಯಲು ಮಾತು ಬಹು ಮುಖ್ಯ ಕೊಂಡಿ. ಪದಗಳನ್ನು ವಾಕ್ಯದ ರೂಪದಲ್ಲಿ ಜೋಡಿಸಿ ಉಚ್ಚರಿಸಿದರಷ್ಟೇ ಮಾತು ತನ್ನ ಉದ್ದೇಶಿತ ಸಂವಹನವನ್ನು ಸಾಧಿಸುತ್ತದೆ ಎಂದು ಹೇಳಲಾಗುವುದಿಲ್ಲ.

ಉಚ್ಚರಿಸುವ ವ್ಯಕ್ತಿಯ ಮನಸ್ಸಿನಲ್ಲಿ ಮೂಡುವ ಭಾವ ಅವನ ಮಾತಿನ ಧ್ವನಿಯ ಏರಿಳಿತಗಳಲ್ಲಿ ಅಭಿವ್ಯಕ್ತಗೊಂಡು ಆಡಿದ ಮಾತಿಗೆ ಒಂದು ಸ್ಪಷ್ಟ ವಾಚ್ಯಾರ್ಥವನ್ನೂ ಮತ್ತು ಧ್ವನ್ಯಾರ್ಥವನ್ನೂ ಒದಗಿಸಿಕೊಡುತ್ತದೆ. ನಿತ್ಯದ ಸಾಮಾನ್ಯ ಸಂದರ್ಭಗಳಲ್ಲಿ ನಾವಾಡುವ ಮಾತಿನ ವಾಚ್ಯಾರ್ಥವಷ್ಟೇ ಮುಖ್ಯವಾಗಿದ್ದರೂ, ಅಲ್ಲಲ್ಲಿ ಧ್ವನ್ಯಾರ್ಥಗಳೂ ಮುಖ್ಯವಾಗುವ ಸಂದರ್ಭಗಳೂ ಉಂಟು.

ಉದಾಹರಣೆಗೆ, ‘ಲೇಯ್’ ಎನ್ನುವ ಸಂಬೋಧನೆಯನ್ನು ಸಮಸ್ಥಿತಿಯಿಂದ ಏರುಧ್ವನಿಗೆ ಹೋಗಿ ನಿಲ್ಲುವಂತೆ ಹೇಳಿದರೆ, ದೂರದಲ್ಲಿರುವವರನ್ನು ಉದ್ದೇಶಿಸಿ ಹೇಳುತ್ತಿರುವಂತೆ ಭಾಸವಾಗುತ್ತದೆ. ಇದನ್ನೇ ಏರುಧ್ವನಿಯಿಂದ ಇಳಿಯುವಂತೆ ಹೇಳಿದರೆ, ಎಚ್ಚರಿಕೆಯ ಮಾತುಗಳನ್ನು ಹೇಳಲು ಉದ್ದೇಶಿಸಿರುವಂತೆ ಭಾಸವಾಗುತ್ತದೆ. ಸಮಸ್ಥಿತಿಯಿಂದ ಪ್ರಾರಂಭಿಸಿ ಸ್ವಲ್ಪವೇ ಏರಿಸಿ ಹೇಳಿದಾಗ, ಪಕ್ಕದಲ್ಲೇ ಇರುವ ವ್ಯಕ್ತಿಯೊಂದಿಗಿನ ಆಪ್ತಸಂವಾದದ ಸಂದರ್ಭ ಮೂಡುತ್ತದೆ. ಈ ಎಲ್ಲವನ್ನು ‘ಲೇಯ್’ ಎನ್ನುವ ವಾಕ್ಯಾಂಶದ ಉಚ್ಚಾರಣೆಯ ಕಾಕುವನ್ನು ಗ್ರಹಿಸಿಯೇ ಅರ್ಥಮಾಡಿಕೊಳ್ಳಬಲ್ಲೆವಾದರೆ, ಇನ್ನು ಪೂರ್ಣ ವಾಕ್ಯದಿಂದ ಅದರ ಸಂದರ್ಭ ಮತ್ತು ಉದ್ದೇಶಗಳು ಸಂಪೂರ್ಣ ಸ್ಫುಟವಾಗುತ್ತವೆ.

ಸಾಮಾನ್ಯವಾಗಿ ನಾವಾಡುವ ಮಾತುಗಳ ಏರಿಳಿತಗಳನ್ನು ನಾವೇ ಗಮನಿಸಿರುವುದಿಲ್ಲ. ಮನಸ್ಸಿನ ಭಾವ ಮಾತಿನ ಏರಿಳಿತಗಳಲ್ಲಿ ಮೂಡಿ ಬಿಡುವುದು ಸಹಜ. ಕೆಲವೊಮ್ಮೆ ಅದು ಹೊರತೋರದಂತೆ ತಡೆ ಹಿಡಿಯುವುದೂ ಇಲ್ಲವೇ ಹೆಚ್ಚು ಸ್ಪಷ್ಟವಾಗುವಂತೆ ಉತ್ಪ್ರೇಕ್ಷಿಸುವುದೂ ಸಾಧ್ಯವಿದೆ. ಇಂಥ ಪ್ರಯತ್ನಗಳಿಂದ ಸಂದರ್ಭದ ಭಾವ, ಸಾಂದ್ರಗೊಳ್ಳುತ್ತದೆ. ಹಾಸ್ಯಮಯ ಸಂದರ್ಭದಲ್ಲಿ ಉಕ್ಕಿ ಹರಿಯುವ ನಗುವಿನ ಅಲೆ ಆ ಸಾಂದರ್ಭಿಕ ಹಾಸ್ಯದ ಅನುಭವವನ್ನು ಹೆಚ್ಚಿಸುತ್ತದೆ. ಆದರೆ, ಯಾರಾದರೂ ಹಾಸ್ಯಮಯ ಪ್ರಸಂಗವೊಂದನ್ನು ವಿವರಿಸಿದಾಗ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸದೆ, ಕೇವಲ ಮುಗುಳ್ನಕ್ಕು ಸುಮ್ಮನಾದರೆ, ಆ ಹಾಸ್ಯ ಪ್ರಸಂಗವನ್ನೂ, ಅದನ್ನು ವಿವರಿಸಿದವರನ್ನೂ ಒಮ್ಮೆಗೇ ನಿರಾಕರಿಸಿದ ಭಾವ ಸ್ಫುಟವಾಗುತ್ತದೆ. ಹಾಸ್ಯವೇ ಇಲ್ಲದ ಮಾತುಗಳಿಗೂ ಧಾರಾಳವಾಗಿ ನಕ್ಕು ಪ್ರತಿಕ್ರಿಯಿಸುವುದು, ಪ್ರತಿಕ್ರಿಯೆ ನೀಡುತ್ತಿರುವವರ ಅಪ್ರಬುದ್ಧತೆಯನ್ನು ಅಥವಾ ತುಷ್ಟೀಕರಣದ ಪ್ರವೃತ್ತಿಯನ್ನು ಸೂಚಿಸಬಹುದು. ಆದುದರಿಂದ ನಾವಾಡುವ ಮಾತಿನ ಏರಿಳಿತಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಾದದ್ದು ಅತ್ಯಗತ್ಯ.

ಸಂದರ್ಭವೊಂದರ ಭಾವ ಸಾಂದ್ರಗೊಳ್ಳುವಂತೆ ಮಾತನಾಡುವುದನ್ನು ಅಥವಾ ಪ್ರತಿಕ್ರಿಯಿಸುವುದನ್ನೇ ಸ್ಥೂಲವಾಗಿ ನಾಟಕೀಯತೆ ಎನ್ನಬಹುದು. ನಾವಾಡುವ ಮಾತಿನ ವೇಗವೂ ಒಂದು ಮುಖ್ಯವಾದ ವಿಚಾರ. ‘ದುಃಖ, ಗಂಭೀರ, ಸಂದಿಗ್ಧ, ತಾಂತ್ರಿಕ ಮತ್ತು ಕ್ಲಿಷ್ಟಕರ ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವಾಗ ನಿಮಿಷವೊಂದಕ್ಕೆ ಸರಾಸರಿ 145 ಪದಗಳು, ನಿರ್ಭಾವುಕ, ವಿವರಣೆಯ ಸಂದರ್ಭಗಳಲ್ಲಿ ನಿಮಿಷಕ್ಕೆ 160 ಪದಗಳು, ಸಂತೋಷದ, ಹಾಸ್ಯಮಯ ಮತ್ತು ತಿಳಿಯಾದ ಸಂದರ್ಭಗಳಲ್ಲಿ ನಿಮಿಷಕ್ಕೆ 180 ಪದಗಳನ್ನು ನಾವು ಮಾತನಾಡುತ್ತೇವೆ’ ಎನ್ನುತ್ತಾರೆ ತಜ್ಞರು (Ann S.Utterback, “Broadcast Voice Handbook, Bonus Books, Inc., Chicago, 2000, p.no.142).

ನವರಸಗಳಿಗೆ ಸಂಬಂಧಿಸಿದ ಭಾವಸ್ಥಿತಿಗಳು ಮಾತಿನಲ್ಲಿ ವ್ಯಕ್ತವಾಗುತ್ತಿರುವಾಗ ನಾವು ನಿರ್ಭಾವುಕ ಮತ್ತು ಅತಿಭಾವುಕ ಮನಃಸ್ಥಿತಿಯ ಎರಡು ತುದಿಬಿಂದುಗಳ ನಡುವೆ ವ್ಯವಹರಿಸುತ್ತಿರುತ್ತೇವೆ. ನಮ್ಮೊಳಗಿನ ಭಾವತೀವ್ರತೆಗೆ ಅನುಗುಣವಾಗಿಯೇ ನಮ್ಮ ಧ್ವನಿಯ ಏರಿಳಿತಗಳೂ ಉಂಟಾಗುತ್ತವೆ. ಈ ಏರಿಳಿತಗಳನ್ನು ರೇಖಾತ್ಮಕವಾಗಿ ಚಿತ್ರಿಸುವ ಪ್ರಯತ್ನ ಮಾಡಿದರೆ, ಅರ್ಥಮಾಡಿಕೊಳ್ಳುವುದು ಇನ್ನಷ್ಟು ಸುಲಭವಾದೀತು. ಈ ಕೆಳಗಿನ ರೇಖಾತ್ಮಕ ನಿರೂಪಣೆಗಳನ್ನು ಗಮನಿಸಿ:


‘ಅಯ್ಯೋ , ಪಾಪ’ ಎನ್ನುವಲ್ಲಿ ‘ಅ’ ದಿಂದ ‘ಯ್ಯೋ’ ವರೆಗೆ ಧ್ವನಿ ಸಮಸ್ಥಿತಿಯಿಂದ ಕೆಳಗಿಳಿದು ಮೇಲೇರಿ ಮತ್ತೆ ಸಮಸ್ಥಿತಿಗೆ ಮರಳುತ್ತದೆ. ಹಾಗೆಯೇ ‘ಪಾ...ಪ’ ಎನ್ನುವಲ್ಲಿ ಸರಿಸುಮಾರು ಸಮಸ್ಥಿತಿಯಿಂದಲೇ ಪ್ರಾರಂಭವಾಗಿ ಮೇಲೇರಿ ಮತ್ತೆ ಸಮಸ್ಥಿತಿಗೆ ಮರಳುತ್ತದೆ. ‘ಇವರಿಗೇ’ ಎನ್ನುವಾಗ ಸ್ವಲ್ಪ ಇಳಿಧ್ವನಿಯಿಂದ ಸಮಸ್ಥಿತಿಯನ್ನು ದಾಟಿ ಏರುಧ್ವನಿಗೆ ಏರಿ ‘ಹೀಗಾಗಬೇಕಿತ್ತೇ?’ ಎನ್ನುವಾಗ ಏರಿದ ಹಂತದಿಂದ ಸಮಸ್ಥಿತಿಯವರೆಗೂ ಕೆಳಗಿಳಿಯುತ್ತ ‘ಬೇಕಿತ್ತೇ?’ ಎನ್ನುವಾಗ ಮತ್ತೆ ಏರುಧ್ವನಿಗೆ ಏರುವಾಗ ಪ್ರಶ್ನಾರ್ಥಕ ಭಾವವನ್ನು ಒದಗಿಸಿಕೊಡುತ್ತದೆ. ‘ಇವರಿಗೇ’ ಎನ್ನುವಾಗಿನ ಧ್ವನಿಯ ಏರುಗತಿಯನ್ನು ಗಮನಿಸಿ. ಇಲ್ಲಿ ಸ್ಪಷ್ಟವಾಗಿ ವ್ಯಕ್ತಿಯೊಬ್ಬರನ್ನು ಉದ್ದೇಶಿಸಲಾಗಿದೆ ಎನ್ನುವುದು ತಿಳಿಯುತ್ತದೆ. ‘ಬೇಕಿತ್ತೇ?’ ಎನ್ನುವಾಗ ವಾಕ್ಯ ಏರುಧ್ವನಿಯಲ್ಲಿಯೇ ಕೊನೆಗೊಳ್ಳುವುದರಿಂದ ಉದ್ದೇಶಿತ ಪ್ರಶ್ನಾರ್ಥಕತೆ ಸ್ಪಷ್ಟವಾಗುತ್ತದೆ.

‘ಹೂಂ.........’ ಎನ್ನುವ ದೀರ್ಘ ಉದ್ಗಾರ ಏರುಧ್ವನಿಯಿಂದ ಸಮಸ್ಥಿತಿಯನ್ನು ದಾಟಿ ಕೆಳಗಿಳಿಯುವುದರಿಂದ ಉದ್ದೇಶಿತ ಅನುಕಂಪ, ಕರುಣೆ, ಅಸಹಾಯಕತೆಗಳ ಸಂಕೀರ್ಣ ಭಾವ ಸ್ಫುಟಗೊಳ್ಳುತ್ತದೆ. ‘ಎಲ್ಲಾ’ ಎನ್ನುವಲ್ಲಿನ ಏರಿಇಳಿವ ಧ್ವನಿ, ‘ನಮಗೆ ಸಂಬಂಧಿಸಿದ ಎಲ್ಲವೂ’ ಎನ್ನುವ ಸಮಷ್ಟಿಯ ಭಾವನೆಯನ್ನೂ, ‘ದೇವರಿಚ್ಛೆ’ ಎನ್ನುವಲ್ಲಿ ಏರಿ ಇಳಿವ ಧ್ವನಿ ‘ದೇವ’ ನ ಪಾರಮ್ಯವನ್ನೂ ಸ್ಪಷ್ಟಗೊಳಿಸುತ್ತದೆ. ಇದೇ ಮಾತುಗಳನ್ನಾಡುವಾಗ ಈಗ ಉದಾಹರಿಸಿದ ಧ್ವನಿಯ ಏರಿಳಿತಗಳನ್ನು ಉಪಯೋಗಿಸದೆಯೇ ಹೇಳಿದಲ್ಲಿ ಮಾತಿನಲ್ಲಿನ ಆಪ್ತತೆ, ಕಾಳಜಿ ಮತ್ತು ಅನುಕಂಪಗಳು ಅನುಭವಕ್ಕೆ ಬಾರದೆ, ಮಾತನಾಡುತ್ತಿರುವ ವ್ಯಕ್ತಿ ಮತ್ತು ಉದ್ದೇಶಿತ ಸಂದರ್ಭದಲ್ಲಿನ ವ್ಯಕ್ತಿಗಳ ನಡುವಿನ ಮಾನವ ಸಂಬಂಧದ ಶೈಥಿಲ್ಯ ಎದ್ದು ತೋರುತ್ತದೆ.

ಇದೇ ರೀತಿ ಕೆಳಗಿನ ವಾಕ್ಯಗಳ ಧ್ವನಿಯ ರೇಖಾತ್ಮಕ ನಿರೂಪಣೆಗಳನ್ನೂ ಗಮನಿಸಿ, ನೀವೇ ಅದರಂತೆ ಅಭ್ಯಾಸಮಾಡಿ ನೋಡಿ. ನಂತರ, ಬೇರೆ ರೀತಿಯ ಏರಿಳಿತಗಳನ್ನೂ ಪ್ರಯತ್ನಿಸಿ. ಮಾತಿನ ಉದ್ದೇಶಿತ ಭಾವ ಸ್ಪಷ್ಟವಾಗುವುದು ಯಾವಾಗ ಎನ್ನುವುದು ನಿಮ್ಮ ಅನುಭವಕ್ಕೇ ಬಂದೀತು. ಇಲ್ಲಿನ ವಾಕ್ಯಗಳ ಕೆಳಗಿನ ರೇಖಾತ್ಮಕ ನಿರೂಪಣೆಯಲ್ಲಿ ದಪ್ಪನಾದ ಅಡ್ಡಗೆರೆ ಧ್ವನಿಯ ಸಮಸ್ಥಿತಿಯನ್ನೂ ಮೇಲಿನ ಎರಡು ಸಮಾನಾಂತರ ಗೆರೆಗಳು ಏರು ಸ್ಥಾಯಿಗಳನ್ನೂ ಹಾಗೂ ಕೆಳಗಿನ ಎರಡು ಸಮಾನಾಂತರ ಗೆರೆಗಳು ಕೆಳಗಿನ (ಇಳಿ) ಸ್ಥಾಯಿಗಳನ್ನೂ ಸೂಚಿಸುತ್ತವೆ.


ಮಾತು ಸಂವಹನದ ಸಾಧನ. ಸಂವಹನ, ಮಾನವ ಸಂಬಂಧ ವರ್ಧನೆಯ ಸಾಧನ. ವ್ಯಕ್ತಿಗಳೊಂದಿಗಿನ ಸಂಬಂಧ ನಮ್ಮ ಭಾವತೀವ್ರತೆಯನ್ನು ನಿರ್ಧರಿಸುತ್ತದೆ. ನಮ್ಮ ಮಾತಿನಿಂದಾಗಿ ಸಂಬಂಧಗಳು ಬೆಸೆದುಕೊಳ್ಳಲೂಬಹುದು, ಶಿಥಿಲಗೊಳ್ಳಲೂಬಹುದು. ‘ಮಾತು ಆಡಿದರೆ ಹೋಯ್ತು; ಮುತ್ತು ಒಡೆದರೆ ಹೋಯ್ತು’ ಎನ್ನುವುದು ಈ ಕಾರಣಕ್ಕಾಗಿಯೇ. ಸಮಾಜ ಜೀವನದಲ್ಲಿ ಸಂಬಂಧಗಳು ಅತಿ ಮುಖ್ಯ. ಅವುಗಳನ್ನು ಜತನದಿಂದ ಕಾಪಾಡಿಕೊಳ್ಳುವಲ್ಲಿ ಮಾತು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ನಾವು ಕೇವಲ ವಾಕ್ಯಗಳನ್ನು ಉಚ್ಚರಿಸಿದರೆ ಮಾತ್ರ ಸಾಲದು. ಅವುಗಳಿಗೆ ನಮ್ಮ ಮನದ ಭಾವಲೇಪನವನ್ನು ಮಾಡಿ ರಸಾರ್ದ್ರವನ್ನಾಗಿಸಬೇಕು.

ಮಾತು, ನಮ್ಮ ಮನಸ್ಥಿತಿಯನ್ನೂ, ವ್ಯಕ್ತಿತ್ವವನ್ನೂ ಮತ್ತು ಧೋರಣೆಗಳನ್ನೂ ಸ್ಪಷ್ಟವಾಗಿ ಸೂಚಿಸುವುದರಿಂದ ನಾವೇನಾಗಬೇಕೆಂದಿದ್ದೇವೆಯೋ ಅದಕ್ಕೆ ತಕ್ಕಂತೆ ನಮ್ಮ ಮಾತನ್ನೂ ರೂಪಿಸಿಕೊಳ್ಳಬೇಕಾದದ್ದು ಅಗತ್ಯ. ಸಂದರ್ಭವೊಂದಕ್ಕೆ ಅತಿಯಾಗಿ ಪ್ರತಿಕ್ರಿಯಿಸಿದಾಗ ‘ನೋಡು, ಹೇಗೆ ನಾಟಕ ಮಾಡ್ತಿದ್ದಾನೆ’ ಎಂದೋ, ಇಲ್ಲವೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದುಬಿಟ್ಟಾಗ ‘ದುರಹಂಕಾರಿ’ ಎಂದೋ ಟೀಕಿಸುವುದು ಜನರ ಸ್ವಭಾವ. ನಾವೆಲ್ಲರೂ ಮಾತು ಬಳಸಿಯೋ ಅಥವಾ ಬಳಸದೆಯೋ ಬದುಕಿನ ‘ನಾಟಕ’ವನ್ನೇ ಅಭಿನಯಿಸುತ್ತಿದ್ದೇವೆ. ಹೀಗಾಗಿ, ‘ಮಾತು-ಮೌನ’ಗಳು ಒಂದೇ ನಾಣ್ಯದ ಎರಡು ಮುಖಗಳು.

99860 01369
ಮುಂದಿನವಾರ: ಮಾಧ್ಯಮಗಳಲ್ಲಿ ಮಾತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT