ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನಾ ಮಾತಿನ ಲಹರಿ

Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ನಟಿ, ಬಾಲಭವನದ ಅಧ್ಯಕ್ಷೆಯೂ ಆಗಿರುವ ಭಾವನಾ, ಸದ್ಯ ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಚಿಕ್ಕವಯಸ್ಸಿನಲ್ಲಿ ನೋಡಿದ ಸಿನಿಮಾಗಳು, ತಮ್ಮಿಷ್ಟದ ಪ್ರವಾಸಿ ತಾಣಗಳು, ಫಿಟ್‌ನೆಸ್‌ ಮಂತ್ರ... ಹೀಗೆ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

* ನೀವು ಚಿಕ್ಕ ವಯಸ್ಸಿನಲ್ಲಿ ನೋಡಿದ ಸಿನಿಮಾಗಳು ನೆನಪಿದೆಯಾ?
ನನಗೆ ನೆನಪಿರುವಂತೆ ಏಳನೇ ವರ್ಷದಲ್ಲಿದ್ದಾಗ ವೈಜಯಂತಿಮಾಲಾ ಅವರ ‘ಕಟ್‌ಪುತಲಿ’, ‘ಬೂಟ್‌ಪಾಲೀಶ್‌’ ಸೇರಿದಂತೆ ರಾಜ್‌ಕುಮಾರ್‌ ಅವರ ಬಹಳಷ್ಟು ಸಿನಿಮಾಗಳನ್ನು ನೋಡಿದ್ದೇನೆ. ಅದರಲ್ಲೂ ‘ದೇವತಾ ಮನುಷ್ಯ’ ಮಾತ್ರ ನನ್ನ ತಂದೆಯನ್ನು ನೆನಪಿಸುವಂತೆ ಮಾಡುತ್ತದೆ.

* ಪುಸ್ತಕಗಳನ್ನು ಓದುವ ಹವ್ಯಾಸವಿದೆಯಾ? ಇದ್ದರೆ ಇತ್ತೀಚೆಗೆ ಯಾವ ಪುಸ್ತಕಗಳನ್ನು ಓದಿದ್ದೀರಿ?
ಓದುವ ಹವ್ಯಾಸವಂತೂ ಇದೆ. ಹೆಚ್ಚಾಗಿ ಕನ್ನಡ ಸಾಹಿತಿಗಳ ಪುಸ್ತಕಗಳನ್ನು ಓದುತ್ತೇನೆ. ಅದರಲ್ಲಿ ತ.ರಾ.ಸು, ಕುವೆಂಪು, ಎಸ್.ಎಲ್‌.ಭೈರಪ್ಪ ಅವರ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತೇನೆ. ಇತ್ತೀಚೆಗೆ ‘ವಂಶವೃಕ್ಷ’ ಕಾದಂಬರಿಯನ್ನು ಓದಿದೆ.

* ನೃತ್ಯ, ಸಿನಿಮಾ, ರಾಜಕೀಯ ಕ್ಷೇತ್ರಗಳೆಲ್ಲದರಲ್ಲೂ ತೊಡಗಿಸಿಕೊಂಡಿರುವ  ನೀವು ಬಿಡುವು ಸಿಕ್ಕಾಗ ಏನು ಮಾಡುತ್ತೀರಿ?
ಪ್ರತಿಕ್ಷಣವನ್ನು ಎಂಜಾಯ್‌ ಮಾಡುತ್ತೇನೆ. ಜೀವನವನ್ನು ನನ್ನದೇ ರೀತಿಯಲ್ಲಿ ನೋಡಲು ಇಷ್ಟಪಡುತ್ತೇನೆ. ಸಣ್ಣಸಣ್ಣ ವಿಷಯಗಳು ಖುಷಿ ಕೊಡುತ್ತವೆ. ಸರಳ ಜೀವನದಲ್ಲಿಯೂ ಹೇಗೆ ಸಾಧನೆ ಮಾಡಬೇಕೆಂಬುದರ ಬಗ್ಗೆ ಯೋಚಿಸುತ್ತೇನೆ. ಖುಷಿ ಪಡಲು ಒಂದೇ ಕಾರಣ ಬೇಕಿಲ್ಲ.

* ದೇಹ ಸೌಂದರ್ಯ ಕಾಪಾಡಲು ಏನು ಮಾಡುತ್ತೀರಿ?
ಈಗ ಫಿಟ್‌ನೆಸ್ ಎಂಬುದು ಒಂದು ಸೀಕ್ರೆಟ್‌ಅನ್ನು ಡಿಕೋಡ್‌ ಮಾಡೋಥರ ಆಗಿದೆ. ನನ್ನ ಪ್ರಕಾರ ದೈಹಿಕವಾಗಿ ಫಿಟ್‌ ಆಗಿರುವುದೆಂದರೆ ಮೊದಲು ಮಾನಸಿಕವಾಗಿ ಫಿಟ್‌ ಆಗಿರುವುದು. ಸಮಯ ಸಿಕ್ಕಾಗಲೆಲ್ಲ ಯೋಗ ಮಾಡುತ್ತೇನೆ. ಇನ್ನು ಊಟದ ವಿಷಯದಲ್ಲಿ ಬಹಳ ಕಟ್ಟುನಿಟ್ಟಾಗಿರುತ್ತೇನೆ. ಹೊರಗಿನ ತಿಂಡಿ, ಊಟ ಮಾಡುವುದಿಲ್ಲ, ಬೆಳಿಗ್ಗೆ 9ರಿಂದ 9.30ರ ಒಳಗಾಗಿ ತಿಂಡಿ, ಮಧ್ಯಾಹ್ನ 1.30ರಿಂದ 2.30ರೊಳಗೆ ಊಟ, ಸಂಜೆ ಡ್ರೈ ಫ್ರೂಟ್ಸ್‌, ರಾತ್ರಿ ಕಡಿಮೆ ಊಟ ಮಾಡುತ್ತೇನೆ. ಊಟದಲ್ಲಿ ತರಕಾರಿಯೂ ಹೆಚ್ಚಾಗಿರುತ್ತದೆ. ವಾರಕ್ಕೆರಡು ಬಾರಿ ಮೀನು, ಅಪರೂಪಕ್ಕೊಮ್ಮೆ ಮಟನ್‌ ಊಟ ಮಾಡುತ್ತೇನೆ. ನಮ್ಮ ಮನೆಯಲ್ಲಿ ಅಡುಗೆಗೆ ಆರ್ಗ್ಯಾನಿಕ್‌ ಎಣ್ಣೆಯನ್ನು ಬಳಸುತ್ತೇವೆ.

* ನಿಮ್ಮ ಇಷ್ಟದ ಪ್ರವಾಸಿ ತಾಣಗಳು?
ನನಗೆ ಭಾರತದ ಪ್ರವಾಸಿ ಸ್ಥಳಗಳೇ ಹೆಚ್ಚು ಇಷ್ಟ. ಜೊತೆಗೆ ಜರ್ಮನಿ, ಫ್ರಾನ್ಸ್‌, ಆಸ್ಟ್ರೀಯಾ ಇಷ್ಟವಾಗುತ್ತವೆ. ಜಪಾನ್‌, ಚೀನಾವನ್ನು ನೋಡಿಲ್ಲ, ಅಲ್ಲಿಗೂ ಹೋಗಬೇಕು ಎಂದುಕೊಂಡಿದ್ದೇನೆ.

* ಇಂದಿನ ಮಕ್ಕಳು ನೋಡಬಹುದಾದ ಸಿನಿಮಾಗಳು?
ಇತ್ತೀಚೆಗೆ ಬಾಲಭವನದಲ್ಲಿ ‘ಗಾಂಧಿ’ ಸಿನಿಮಾ ಪ್ರದರ್ಶನ ಮಾಡಿದೆವು. ಮಕ್ಕಳ ಪ್ರತಿಕ್ರಿಯೆ ನೋಡಿದರೆ ಅವರಲ್ಲಿ ಆಸಕ್ತಿ ಕಡಿಮೆ ಆಗಿದೆ ಅನ್ನಿಸುತ್ತಿದೆ. ಅವರೆಲ್ಲ ಪ್ರೌಢಶಾಲೆ ಮಕ್ಕಳು. ಈಗಿನ ಮಕ್ಕಳಿಗೆ ಅವಕಾಶ ಜಾಸ್ತಿ ಇದೆ. ನಮ್ಮ ಕಾಲದಲ್ಲಿ ‘ದೂರದರ್ಶನ’ ಚಾನಲ್‌ ಮಾತ್ರ ಇತ್ತು. ಅದರಲ್ಲಿ ಬರುತ್ತಿದ್ದ ಸಿನಿಮಾಕ್ಕಾಗಿ ಕಾಯುತ್ತಿದ್ದೆವು. ಮಕ್ಕಳಿಗೆ ಐತಿಹಾಸಿಕ ಸಿನಿಮಾಗಳನ್ನು ತೋರಿಸಬೇಕಿದೆ. ಅದರಲ್ಲೂ ರಾಜ್‌ಕುಮಾರ್‌ ಅಭಿನಯದ ಐತಿಹಾಸಿಕ, ಭಕ್ತಿ ಪ್ರದಾನ ಸಿನಿಮಾಗಳನ್ನು ನೋಡಬೇಕು. ಅಲ್ಲದೇ ‘ಕೂರ್ಮಾವತಾರಂ’, ‘ಶ್ವಾಸ್‌’ ಮರಾಠಿ ಸಿನಿಮಾ, ‘ಮಕ್ಕಳ ರಾಜ್ಯ’, ‘ಬೆಟ್ಟದ ಹೂ’ನಂಥ ಸಿನಿಮಾಗಳನ್ನು ನೋಡಲೇಬೇಕು.

* ನಿಮ್ಮ ಮೆಚ್ಚಿನ ಶಾಪಿಂಗ್ ಸ್ಥಳ?
ನಾನು ಶಾಪಿಂಗ್‌ ಪರ್ಸನ್‌ ಅಲ್ಲ, ಶಾಪಿಂಗ್‌ ಮಾಡಬೇಕು ಅಂದ್ರೆ,  ಬೆಂಗಳೂರಿನಲ್ಲೇ ಮಲ್ಲೇಶ್ವರದ 8ನೇ ಕ್ರಾಸ್‌ಗೆ ಹೋಗಿ ಹಣ್ಣು, ಸಂಪಿಗೆ, ಮಲ್ಲಿಗೆ ಹೂ ಖರೀದಿಸುತ್ತೇನೆ.

* ಸಿನಿಮಾ, ನೃತ್ಯ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ನಿಮಗೆ ತೃಪ್ತಿ ನೀಡಿದ ಕ್ಷೇತ್ರ?
ನಾನು ಎಲ್ಲಾ ಕ್ಷೇತ್ರಗಳನ್ನು ಇಷ್ಟಪಡುತ್ತೇನೆ. ಯಾರಿಗೂ ಮೆಚ್ಚಿಸಲು ಮಾಡುತ್ತಿಲ್ಲ. ರಾಜಕೀಯದಿಂದ ನಾನೇನು ಎಂಬುದು ಅರ್ಥವಾಯಿತು. ಅಲ್ಲಿ ಎಲ್ಲಾ ವರ್ಗದವರನ್ನು ನೋಡುತ್ತೇನೆ. ನನ್ನ ಎಲ್ಲಾ ಕೆಲಸಗಳಿಗೆ ಮನೆಯವರ ಪ್ರೋತ್ಸಾಹವಿದೆ. ಸದ್ಯ ನಾವೇ ‘ನಿರುತ್ತರ’ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. ಅಪೂರ್ವ ಕಾಸರವಳ್ಳಿ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT