ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನೆಗಳೇ ಸ್ಫೂರ್ತಿ...

Last Updated 31 ಜುಲೈ 2014, 6:09 IST
ಅಕ್ಷರ ಗಾತ್ರ

ನಮ್ಮ ಯಶಸ್ಸು ಅಥವಾ ಏಳಿಗೆ ಕಂಡು ಇತರರು ಹೊಟ್ಟೆ ಕಿಚ್ಚು ಪಡಬೇಕು ಎಂದು ಭಾವಿಸುವವರು ನಿಜವಾದ ಸಾಧಕರಲ್ಲ, ನಮ್ಮ ಸಾಧನೆಯಿಂದ ಇತರರು ಬದಲಾಗಬೇಕು ಎಂದು ಭಾವಿಸುವವರೇ ನಿಜವಾದ ಸಾಧಕರು...

ಸ್ಮೃತಿ ನಾಗಪಾಲ್‌
ಒಡಹುಟ್ಟಿದವರು ಇದ್ದರೂ ಅವರೊಂದಿಗೆ ಮಾತನಾಡಲಾಗದ ಅಸಹಾಯಕತೆ, ಎಲ್ಲಾ ಮಕ್ಕಳಂತೆ ಅವರೊಂದಿಗೆ ಮಾತನಾಡುವ, ಚೇಷ್ಟೆ ಮಾಡುವ ತವಕವಿದ್ದರೂ ಅಸಾಧ್ಯವಾಗಿತ್ತು. ಇದರಿಂದ ಸ್ಮೃತಿ ಬೇಸರಗೊಂಡಿದ್ದರು. ಈ ಬೇಸರ ಬಹಳ ದಿನ ಉಳಿಯಲಿಲ್ಲ. ಸ್ವತಃ ಸಂಕೇತ ಭಾಷೆ ಕಲಿತು ಸಹೋದರರ ಜೊತೆ ಮಾತನಾಡತೊಡಗಿದರು. ನಂತರ  ಎಲ್ಲಾ ಮಕ್ಕಳಂತೆ ಒಡಹುಟ್ಟಿದವರೊಂದಿಗೆ ಬಾಲ್ಯ ಕಳೆದರು. ಸಹೋದರರಿಗೆ ಮಾತು ಕಲಿಸಬೇಕು ಎಂಬ ಹಂಬಲ ಸ್ಮೃತಿಯನ್ನು ಬದಲಾಯಿಸಿತು. ಇದು ದೆಹಲಿಯ 23ರ ಹರೆಯದ ಸ್ಮೃತಿ ನಾಗಪಾಲ್‌ ಅವರ ಯಶಸ್ಸಿನ ಕಥೆ.

ಸ್ಮೃತಿಗೆ ಇಬ್ಬರು ಸಹೋದರರು. ಅವರು ಕಿವುಡು ಮತ್ತು ಮೂಕರಾಗಿದ್ದರು. ಒಬ್ಬ ಸಹೋದರ ಚಿತ್ರ ಕಲಾವಿದನಾಗಿದ್ದ. ಆತನ ವರ್ಣಚಿತ್ರ ಮತ್ತು ಕಲಾಕೃತಿಗಳು ವಿದೇಶಕ್ಕೆ ಮಾರಾಟವಾಗುತ್ತಿದ್ದವು. ಮಧ್ಯವರ್ತಿಗಳ ಹಾವಳಿಯಿಂದ ಪೇಂಟಿಂಗ್‌ಗಳಿಗೆ ಹೆಚ್ಚಿನ ಬೆಲೆ ಸಿಗುತ್ತಿರಲಿಲ್ಲ. ಇದನ್ನು ಅರಿತ ಸ್ಮೃತಿ ದುರ್ಬಲ ವ್ಯಕ್ತಿಗಳ ಕಲಾಕೃತಿಗಳಿಗೆ ನೈಜ ಬೆಲೆ ಸಿಗಬೇಕು ಎನ್ನುವ ಕಾಳಜಿಯಿಂದ ‘ಅತುಲ್ಯಾಕಲಾ’(atulyakala) ಎಂಬ  ಸರ್ಕಾರೇತರ ಸಂಸ್ಥೆ ಸ್ಥಾಪಿಸಿದರು.

ಈ ಸಂಸ್ಥೆಯಲ್ಲಿ ಅಂಗವಿಕಲರು ರಚಿಸುವ ಪೇಂಟಿಂಗ್‌ಗಳಿಗೆ ಮಾತ್ರ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಅವರ ಕಲಾಕೃತಿಗಳಿಗೆ ಉತ್ತಮ ಬೆಲೆ ಸಿಗುತ್ತಿದೆ ಎನ್ನುತ್ತಾರೆ ಸ್ಮೃತಿ. ಸಂಕೇತ ಭಾಷೆಯ ಕೈಪಿಡಿಯನ್ನು ಪ್ರಕಟಿಸಿರುವ ಸ್ಮೃತಿ, ಇವರಿಗಾಗಿಯೇ ಒಂದು ಸುದ್ದಿವಾಹಿನಿ ಆರಂಭಿಸುವ ಗುರಿ ಹೊಂದಿದ್ದಾರೆ. ಮೊದಲು ಕನಸು ಕಾಣಬೇಕು, ನಂತರ ಕಂಡ ಕನಸನ್ನು ನನಸಾಗಿಸಲು ಯತ್ನಿಸಬೇಕು. ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಯಶಸ್ಸು ಶತಸಿದ್ಧ ಎಂದು ಯುವಕರಿಗೆ ಸ್ಮೃತಿ ಕಿವಿ ಮಾತು ಹೇಳುತ್ತಾರೆ.
http://www.atulyakalaindia.com/

ರಿಚಾ ಖರ್‌
ಇಲ್ಲ, ನಾನು ಇದೇ ವ್ಯಾಪಾರ ಮಾಡುತ್ತೇನೆ ಎಂದು ಹಟಕ್ಕೆ ಬಿದ್ದಿದ್ದೆ. ಬೇಡ ಮಗಳೇ ನಿನ್ನ ಕೈಯಲ್ಲಿ ಸಾಧ್ಯವಿಲ್ಲ ಎಂದು ಅಪ್ಪ ಪರಿಪರಿಯಾಗಿ ಬೇಡಿಕೊಂಡಿದ್ದರು. ನಾನು ಹಟ ಹಿಡಿದಾಗ ‘ನಾವು ನಿನ್ನ  ಎಂಜಿನಿಯರಿಂಗ್‌ ಮತ್ತು ಎಂಬಿಎ ಓದಿಸಿದ್ದು ಒಳ ಉಡುಪುಗಳನ್ನು ಮಾರಾಟ ಮಾಡು ಅಂತಲ್ಲ ಎಂದು ಕಟುವಾಗಿಯೇ ಹೇಳಿದ್ದರು.

ಅಪ್ಪನ ಮಾತನ್ನು ಮನಸ್ಸಿಗೆ ಹಾಕಿಕೊಳ್ಳದೆ ಗೆಳೆಯರ ಸಹಕಾರದೊಂದಿಗೆ ಆನ್‌ಲೈನ್‌ನಲ್ಲಿ ಮಹಿಳೆಯರ ಒಳ ಉಡುಪುಗಳನ್ನು ಮಾರಾಟ ಮಾಡುವ ಜಿವಾಮಿ (Zivame) ಕಂಪೆನಿ ಆರಂಭಿಸಿದೆ. ಮೂರು ವರ್ಷಗಳ ಹಿಂದೆ ಆರಂಭವಾದ ನಮ್ಮ ಕಂಪೆನಿ ಮಾಸಿಕ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ. ಅಂದು ಅಡ್ಡಿಪಡಿಸಿದ್ದ ಅಪ್ಪ ಇಂದು ಬೆನ್ನುತಟ್ಟುತ್ತಿದ್ದಾರೆ. ಇದು ಪಶ್ಚಿಮ ಬಂಗಾಳದ ರಿಚಾ ಖರ್‌ ಅವರ ಕಥೆ. ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಜಿವಾಮಿ ಆನ್‌ಲೈನ್‌ ಶಾಪ್‌ಗಳು ಇವೆ. ದಿನದ 24 ಗಂಟೆಯೂ ಒಳ ಉಡುಪುಗಳನ್ನು ಗ್ರಾಹಕರಿಗೆ ಪೂರೈಸಲಾಗುವುದು ಎನ್ನುತ್ತಾರೆ ರಿಚಾ.

ಒಳಉಡುಪುಗಳ ವ್ಯಾಪಾರದ ಬಗ್ಗೆ ರಿಚಾಗೆ ಆಸಕ್ತಿ ಮೂಡಿದ್ದರ ಹಿಂದೆ ಒಂದು ಸಣ್ಣ ಕಥೆ ಇದೆ. ಒಮ್ಮೆ ಕೋಲ್ಕತ್ತಾದಲ್ಲಿ ಹತ್ತಾರು ಅಂಗಡಿಗಳನ್ನು ಸುತ್ತಿದರೂ ತಮಗೆ ಬೇಕಿರುವ ಒಳ ಉಡುಪು ಸಿಗಲಿಲ್ಲ. ಆಗ ಎಲ್ಲಾ ಬ್ರಾಂಡ್‌ ಮತ್ತು ಸೈಜ್‌ಗಳಲ್ಲಿ ಲಭ್ಯವಾಗುವ ಒಳ ಉಡುಪಿನ ಆನ್‌ಲೈನ್‌ ಶಾಪಿಂಗ್‌ ತೆರೆಯುವ ಬಗ್ಗೆ ಆಲೋಚನೆ ಮೂಡಿತಂತೆ. ಈಗಲೂ ಕೆಲ ಮಹಿಳೆಯರು ಅಂಗಡಿಗಳಲ್ಲಿ ಒಳ ಉಡುಪುಗಳನ್ನು ಖರೀದಿಸಲು ಮುಜುಗರ ಪಡುತ್ತಾರೆ.  ತಮಗೆ ಒಪ್ಪುವ ಗಾತ್ರದ ಒಳ ಉಡುಪು ಸಿಗದಿದ್ದಾಗ ಅನಿವಾರ್ಯವಾಗಿ ಬೇರಾವುದನ್ನೋ ಖರೀದಿ ಮಾಡುತ್ತಾರೆ. ಮಹಿಳೆಯರ ಕಷ್ಟಗಳನ್ನು ತಿಳಿದು ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಿವಾಮಿ ರೂಪ ತಾಳಿದೆ ಎನ್ನುತ್ತಾರೆ ರಿಚಾ. ನಮ್ಮ ವೆಬ್‌ನಲ್ಲಿ ಬ್ರಾಂಡ್‌ ಮತ್ತು ಸೈಜ್‌ ಅನ್ನು ಬುಕ್‌ ಮಾಡಿದರೆ ಎರಡೇ ಗಂಟೆಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎನ್ನುತ್ತಾರೆ ರಿಚಾ. 
http://www.zivame.com

ನಿಸರ್ಗ ಪಟೇಲ್‌
ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳಲ್ಲಿ ವರ್ಷಕ್ಕೆ 15 ಲಕ್ಷ ಮಕ್ಕಳು ಕಲುಷಿತ ನೀರು ಕುಡಿಯುವುದರಿಂದ ಅಸುನೀಗುತ್ತಿದ್ದಾರೆ. ಇವರೆಲ್ಲಾ 5 ವರ್ಷದ ಕೆಳಗಿನವರು. 2012ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಾಧ್ಯಮಗಳಿಗೆ  ಬಿಡುಗಡೆ ಮಾಡಿದ ವರದಿ ಇದು.

ಈ ಸುದ್ದಿಯಿಂದ ವಿಶ್ವದ ಯಾವ ಸರ್ಕಾರಗಳೂ ಎಚ್ಚೆತ್ತುಕೊಳ್ಳಲಿಲ್ಲ ಎಂಬುದು ವಿಷಾದನೀಯ. ಆದರೆ ಭಾರತೀಯ ಮೂಲದ ನಿಸರ್ಗ ಪಟೇಲ್‌ ಜಾಗೃತನಾಗಿ ಕಲುಷಿತ ನೀರನ್ನು ಶುಚಿಗೊಳಿಸುವ ‘ಬಯೋಕಾನ್‌’ ಫಾರ್ಮುಲಾ ಅಭಿವೃದ್ಧಿಪಡಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.
ಅಮೆರಿಕದ ಅರಿಜೋನಾ ರಾಜ್ಯದಲ್ಲಿ ನೆಲೆಸಿರುವ ಪಟೇಲ್‌ ಇಲ್ಲಿನ ಗ್ವಾಟೆಮಾಲಾ ವಿಶ್ವವಿದ್ಯಾಲಯದಲ್ಲಿ ಬಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನೀರಿನಲ್ಲಿ ಕರಗುವಂತಹ ‘ಬಯೋ ಪ್ರೋಟಿನ್‌’ ತಯಾರಿಸಿ ಕಲುಷಿತ ನೀರನ್ನು ಶುದ್ಧಗೊಳಿಸಬಹುದು ಎಂಬ  ಫಾರ್ಮುಲಾ ಕಂಡುಹಿಡಿದಿದ್ದಾರೆ. ಈ ಸಂಶೋಧನೆ ಬಗ್ಗೆ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರನ್ನು ಸಂಪರ್ಕಿಸಿದಾಗ ‘ಇದಕ್ಕೆ ಅಧಿಕ ವೆಚ್ಚವಾಗುತ್ತದೆ, ಹಿಂದುಳಿದ ದೇಶಗಳಿಂದ ಇದನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ’ ಎಂಬ ಸಬೂಬು ಹೇಳಿ ಆ ಸಂಶೋಧನೆಯನ್ನು ತಿರಸ್ಕರಿಸಿದ್ದರು.

ಧೃತಿಗೆಡದ ಪಟೇಲ್‌ ಸಂಶೋಧನಾ ಫಾರ್ಮುಲಾವನ್ನು ಇಲ್ಲಿನ ‘ವಾಟರ್‌ ಆರ್ಗ್‌’ ಎಂಬ ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥ ಗ್ಯಾರಿ ವೈಟ್‌ ಎದುರು ಮಂಡಿಸಿದರು. ಈ ಫಾರ್ಮುಲಾ ಗ್ಯಾರಿ ವೈಟ್‌ಗೆ ಇಷ್ಟವಾಯಿತು. ಇದರ ಪೇಟೆಂಟ್‌ ಪಡೆದು ಆಫ್ರಿಕಾದ ಕೆಲವು ದೇಶಗಳಲ್ಲಿ ಪ್ರಯೋಗಕ್ಕೆ ಮುಂದಾದರು. ಬ್ಯಾಕ್ಟೀರಿಯಾ ಮುಕ್ತ ಶುದ್ಧ ನೀರು ಪಡೆಯುವ ಪ್ರಯೋಗ ಯಶಸ್ವಿಯಾಯಿತು. ಇದನ್ನು ಹಿಂದುಳಿದ ದೇಶಗಳಲ್ಲಿ ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ವಿಶ್ವಸಂಸ್ಥೆ ಪ್ರಕಟಿಸಿದೆ. ಪಟೇಲ್‌ ಅವರ ಶುದ್ಧ ಕುಡಿಯುವ ನೀರಿನ ಸಂಶೋಧನಾ ಪ್ರಬಂಧ ಗ್ವಾಟೆಮಾಲಾ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿದೆ. ಆ ಪ್ರಬಂಧವನ್ನು ತಿರಸ್ಕರಿಸಿದ್ದ ಪ್ರಾಧ್ಯಾಪಕರೇ ಇಂದು ವಿದ್ಯಾರ್ಥಿಗಳಿಗೆ ಅದೇ ಪಾಠವನ್ನು ಬೋಧಿಸುತ್ತಿದ್ದಾರೆ. ಸಾಧನೆ ಅಂದರೆ ಇದಲ್ಲವೆ.
http://www.water.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT