ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಿ ಉದ್ಯಮಶೀಲರಿಗೆ ಮಾರ್ಗದರ್ಶನ ಅಗತ್ಯ

ಅಕ್ಷರ ಗಾತ್ರ

‘ಜನರು ವಿಫಲಗೊಳ್ಳುವುದಕ್ಕೆ ಯೋಜನೆ ಮಾಡುವುದಿಲ್ಲ, ಯೋಜನೆ ಮಾಡುವುದರಲ್ಲೇ ವಿಫಲರಾಗುತ್ತಾರೆ’...  ಹೌದು, ಯಶಸ್ಸಿನ ಧ್ಯೇಯದೊಂದಿಗೇ ಸಂಸ್ಥೆಗಳು ಆರಂಭಗೊಂಡಿರುತ್ತವೆ. ಆದರೆ ಹಲವು ಸಂದರ್ಭಗಳಲ್ಲಿ ಅದು ನಿಜವಾಗುವುದಿಲ್ಲ.

ಇದಕ್ಕೆ ಕಾರಣ,
ಉದ್ಯಮ, ವಾಣಿಜ್ಯ ಮೊದಲಾದ ವ್ಯವಹಾರಗಳಲ್ಲಿ ಯಶಸ್ಸು ಮತ್ತು ಸೋಲು ಎರಡೂ ಸಹಜವೇ ಆಗಿರುತ್ತವೆ. ಅಂಕಿ ಅಂಶಗಳ ಪ್ರಕಾರ ಹೊಸದಾಗಿ ಸ್ಥಾಪಿಸಿದ ಸಂಸ್ಥೆಗಳಲ್ಲಿ ಶೇ 80ರಷ್ಟು ಸಂಸ್ಥೆಗಳು ಮೊದಲ ವರ್ಷವೇ ವಿಫಲವಾಗುತ್ತವೆ, ಉಳಿದವುಗಳಲ್ಲಿ, ಹತ್ತರಲ್ಲಿ ಎಂಟು ಸಂಸ್ಥೆಗಳು ಮೊದಲ ಮೂರು ವರ್ಷಗಳಲ್ಲಿ ವಿಫಲವಾಗುತ್ತವೆ.

ಇನ್ಕ್‌ ಮ್ಯಾಗಜಿನ್ ಮತ್ತು ನ್ಯಾಷನಲ್ ಬಿಜಿನೆಸ್ ಇನ್‌ಕ್ಯುಬೇಟರ್‌ ಅಸೋಸಿಯೇಷನ್ (NBIA) ನಡೆಸಿದ ಅಧ್ಯಯನದ ಪ್ರಕಾರ ಶೇ 80 ಸಂಸ್ಥೆಗಳು ಮೊದಲ  ಐದು  ವರ್ಷಗಳಲ್ಲಿ ವಿಫಲವಾಗುತ್ತವೆ.

ಇದರ ಪರಿಣಾಮ ಬಂಡವಾಳಶಾಹಿಗಳು ಆರ್ಥಿಕ ತೊಂದರೆ ಅನುಭವಿಸಬೇಕಾಗುತ್ತದೆ. ಅಲ್ಲದೇ ಒಂದು ದೇಶದ ಆರ್ಥಿಕ ಸ್ಥಿತಿಗೆ ಆಘಾತ ವಾಗುತ್ತದೆ. ಆದ್ದರಿಂದ ಸಂಸ್ಥೆಗಳು ತಮ್ಮ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಒಳಿತು.

ಸಂಸ್ಥೆಗಳ ವೈಫಲ್ಯದ ಕಾರಣಗಳನ್ನು ಹುಡುಕುವುದಕ್ಕೆ ಆರಂಭಿಸಿದಾಗ ಅಗಾಧ ಮಾಹಿತಿಗಳು ದೊರಕುತ್ತವೆ. ಹಲವು ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ಅವುಗಳಲ್ಲಿ ಬಾಹ್ಯ ಅಂಶಗಳಿಗಿಂತ ಅಂತರಿಕ ಅಂಶಗಳೇ ಹೆಚ್ಚು ಪ್ರಭಾವ ಬೀರಿವೆ ಎಂಬುದು ಖಚಿತವಾಗಿದೆ.

ಉದಾಹರಣೆಗೆ ಅಮೆರಿಕದ ಪ್ರತಿ ಐದು ಸಂಸ್ಥೆಗಳಲ್ಲಿ ನಾಲ್ಕು ಸಂಸ್ಥೆಗಳು ವಿಫಲವಾಗುವುದಕ್ಕೆ ಆಂತರಿಕ ಅಂಶಗಳೇ ಕಾರಣವಾಗಿದ್ದವು. ಅದೇ ರೀತಿ ಐದರಲ್ಲಿ ಒಂದು ಸಂಸ್ಥೆಯ ಸೋಲಿಗೆ ಬಾಹ್ಯ ಕಾರಣವಾಗಿತ್ತು.

ಸಂಸ್ಥೆಗಳ ವೈಫಲ್ಯಕ್ಕೆ ಕಾರಣವಾದ ಕೆಲವು ಆಂತರಿಕ ಅಂಶಗಳನ್ನು ಗಮನಿಸೋಣ.
1. ಸಂಸ್ಥೆಯ ನಿರ್ವಹಣೆಯಲ್ಲಿ  ಉನ್ನತ ಮಟ್ಟದ ಆಡಳಿತದ ಹೊಣೆ ಹೊತ್ತಿರುವ ತಂಡದಲ್ಲಿ ಅಸಾಮರ್ಥ್ಯ
2. ಬಹಳ ಕಳಪೆಯಾದ ಆರ್ಥಿಕ ನಿರ್ವಹಣೆ
3. ಕಾರ್ಯಕ್ರಮಗಳ ಜಾರಿಯಲ್ಲಿ ಅಧಕ್ಷತೆ
4. ಸಂಪನ್ಮೂಲಗಳನ್ನು ಸರಿಯಾಗಿ ಕ್ರೋಢೀಕರಿಸಿಕೊಳ್ಳದೇ ಇರುವುದು
5. ವೆಚ್ಚ ನಿರ್ವಹಣೆಯು ಪರಿಣಾಮಕಾರಿಯಾಗಿ ಇಲ್ಲದೇ ಇರುವುದು
6. ಅಸಹಜ ರೀತಿಯಲ್ಲಿ ವಿಲೀನ ಹಾಗೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವುದು
ಇದೆಲ್ಲದರ ಜತೆಗೇ, ಸಂಸ್ಥೆಯು ತನ್ನ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ದುರ್ಬಲವಾಗಿದ್ದರೆ, ಬಾಹ್ಯ ಅಂಶಗಳ ಹೊಡೆತಕ್ಕೆ ಅದು ಬಹು ಬೇಗ ಸಿಲುಕುತ್ತದೆ, ಅಷ್ಟೇ ವೇಗವಾಗಿ ಪತನದತ್ತ ಜಾರುತ್ತದೆ.

ಸಂಸ್ಥೆಗಳ ವಿಫಲಕ್ಕೆ ಕಾರಣವಾದ ಬಾಹ್ಯ ಅಂಶಗಳು ಯಾವುದಿರಬಹುದು ಎಂದು ಗಮನಿಸಿದರೆ ಮೊದಲಿಗೆ ಕಾಣಬರುವುದು...
1. ದೇಶೀಯ ಹಾಗೂ ವಿದೇಶಿ ಸಂಸ್ಥೆಗಳ ತುರುಸಿನ ಸ್ಪರ್ಧೆ
2. ಸ್ಪರ್ಧಿಗಳ ನಾವೀನ್ಯತೆ, ನವೀನ ರೀತಿಯ ಉತ್ಪನ್ನ/ಸೇವೆಗಳು
3. ಗ್ರಾಹಕರ ನಿರೀಕ್ಷೆಯಲ್ಲಿ ಆಗ್ಗಾಗ್ಗೆ ಆಗುವ ಬದಲಾವಣೆಗಳು
4. ಉದ್ಯಮ ಕ್ಷೇತ್ರದಲ್ಲಿನ ಆವಿಷ್ಕಾರಗಳು
5. ಆಧುನಿಕ ತಂತ್ರಜ್ಞಾನ, ಜಾಗತಿಕ ಆರ್ಥಿಕ ಕುಸಿತ, ಇತ್ಯಾದಿ

ವಾಣಿಜ್ಯ–ಉದ್ಯಮ ಸಂಸ್ಥೆಗಳ ವೈಫಲ್ಯಕ್ಕೆ ಇಲ್ಲಿ ಚರ್ಚಿಸಲಾದ ಅಂಶಗಳಷ್ಟೇ ಅಲ್ಲ. ಬೇರೆಯದೇ ಆದ ಕಾರಣಗಳೂ ಇರಬಹುದು. ಒಬ್ಬ ವಾಣಿಜ್ಯೋದ್ಯಮಿ ತಾನು ಆರಂಭಿಸಲಿರುವ ಸಂಸ್ಥೆಯು ವಿಫಲಗೊಳ್ಳದಂತೆ ಮುಂಚೆಯೇ ಸಮರ್ಪಕ ಯೋಜನೆ, ನೀಲನಕ್ಷೆ ಸಿದ್ಧಪಡಿಸಿಕೊಳ್ಳಬೇಕು.

ಒಂದೊಮ್ಮೆ ವೈಫಲ್ಯಕ್ಕೆ ಒಳಗಾಗುತ್ತದೆ ಎನ್ನುವ ಶಂಕೆಗಳಿದ್ದರೆ, ಅದಕ್ಕೆ ಕಾರಣವಾಗುವ ಅಂಶಗಳನ್ನು ಮುಂಚಿತವಾಗಿಯೇ ಗುರುತಿಸಿಟ್ಟುಕೊಳ್ಳಬೇಕು. ಆ ದೋಷಗಳನ್ನು ಸರಿಪಡಿಸಿಕೊಂಡು, ಯಶಸ್ಸಿಗೆ ಕಾರಣವಾಗುವ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಆರೋಗ್ಯ ಪೂರ್ಣವಾದ ಸಂಸ್ಥೆಯನ್ನು ಕಟ್ಟಬೇಕು. ವಿವಿಧ ಸಂಶೋಧಕರು ಸಾಂಸ್ಥಿಕ ಯಶಸ್ಸಿನ ಕಾರ್ಯತಂತ್ರಗಳನ್ನೂ ಪ್ರತಿಪಾದಿಸಿದ್ದಾರೆ.

ಅವುಗಳಲ್ಲಿ;
1. ನೌಕರರನ್ನು ಕಾರ್ಯಮಗ್ನಗೊಳಿಸುವ ತಂತ್ರಗಳು
2. ಸಂಸ್ಥೆಯ ಒಟ್ಟಾರೆ ವೆಚ್ಚ ನಿರ್ವಹಣಾ ತಂತ್ರ
3. ಕಾರ್ಯದಕ್ಷತೆ
4. ಗ್ರಾಹಕರತ್ತ ಹೊಸದಾಗಿ ಗಮನ ಕೇಂದ್ರಿಕರಿಸುವ ಕಾರ್ಯತಂತ್ರ
5. ಸಂಸ್ಥೆಯ ಕಾರ್ಯವೈಖರಿಯಲ್ಲಿ ಬದಲಾವಣೆ ತಂದು ಹೊಸಬಗೆಯ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವುದು...
ಉದ್ಯಮಿಗಳು ಈ ಸಂಗತಿಗಳಿಗೆ ಮಹತ್ವ ನೀಡಿ ತಮ್ಮ ವಾಣಿಜ್ಯ–ಉದ್ಯಮದ ವಿವಿಧ ವಿಭಾಗಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂಸ್ಥೆಯನ್ನು ಉನ್ನತಿಗೆ ಕೊಂಡೊಯ್ಯಬಹುದು.

ಈ ಕಾರ್ಯತಂತ್ರಗಳು ಒಂದು ಸಂಸ್ಥೆಯ ಉನ್ನತಿಗೆ ನೆರವಾಗುವುದಲ್ಲದೆ ದೀರ್ಘ ಅವಧಿಯವರೆಗೂ ಉಳಿದು ಬೆಳೆಯುವುದಕ್ಕೆ ಸಹಾಯವಾಗುತ್ತದೆ. ಇದು ಮನುಷ್ಯನ ಆರೋಗ್ಯದ ಸ್ಥಿತಿಗೂ ಹೋಲಿಕೆ ಆಗುತ್ತದೆ. ಅಂದರೆ ಒಬ್ಬ ರೋಗಿಯು ಸೂಕ್ತ ಚಿಕಿತ್ಸೆಯಿಂದ ಗುಣ ವಾಗುವಂತೆ, ಒಂದು ಸಂಸ್ಥೆಯು ಲೋಪಗಳನ್ನು ಸರಿಪಡಿಸಿಕೊಳ್ಳುವುದು, ಬದಲಾದ ತಂತ್ರ ಗಾರಿಕೆ, ಕಾರ್ಯಶೈಲಿಯಲ್ಲಿ ಸುಧಾರಣೆ ಮೊದ ಲಾದ ಅಂಶಗಳಿಂದ ಉನ್ನತಿಗೆ ಹೋಗಲು ಅವಕಾಶ ವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT