ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಣಕ್ಕೆ ನೆರವಾಗುವ ಆ್ಯಪ್‌ಗಳು

Last Updated 21 ಜೂನ್ 2016, 19:30 IST
ಅಕ್ಷರ ಗಾತ್ರ

ಭಾಷಣ ಮಾಡುವುದೂ ಒಂದು ಕಲೆ. ಎಲ್ಲರಿಗೂ ಅದು ಸಿದ್ಧಿಸುವುದಿಲ್ಲ. ಕೆಲವರಲ್ಲಿ ಇದು ಸಹಜವಾಗಿ ಬೆಳೆದುಬಂದಿರುತ್ತದೆ. ಇನ್ನೂ ಕೆಲವರು ಕಷ್ಟಪಟ್ಟು ಈ ಕಲೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ನಮ್ಮ ನಡುವೆ ಇನ್ನೂ ಹಲವರು ಇದ್ದಾರೆ. ಭಾಷಣ ಮಾಡುವ ಧೈರ್ಯ ಅವರಿಗೆ ಇರುತ್ತದೆ. ಆದರೆ, ಮಾತಿಗೆ ನಿಂತ ಕೂಡಲೇ ವಿಷಯಗಳೆಲ್ಲ ಮರೆತು ಹೋಗುತ್ತವೆ! ಸಭಾ ಕಂಪನದ (ಸ್ಟೇಜ್‌ ಫಿಯರ್‌) ಕಾರಣಕ್ಕೆ ಭಾಷಣ ಮಾಡುವುದರಿಂದ ವಿಮುಖರಾಗುವವರೂ ಇದ್ದಾರೆ.

ಭಾಷಣಕಾರರ ಇನ್ನೊಂದು ಪ್ರಮುಖ ವರ್ಗ ಇದೆ. ಇವರು ಭಾಷಣ ಮಾಡುವುದರಲ್ಲಿ ಎತ್ತಿದ ಕೈ. ಆದರೆ, ಸಭಿಕರ ಮುಂದೆ ಮಾತನಾಡಲು ನಿಂತಾಗ ಅವರಿಗೆ ಸಮಯ ಮರೆತು ಹೋಗುತ್ತದೆ! ಭಾಷಣದ ಮಧ್ಯದಲ್ಲಿ ಕಾರ್ಯಕ್ರಮದ ಆಯೋಜಕರೇ ಅವರಿಗೆ ಅದನ್ನು ನೆನಪಿಸಬೇಕಾಗುತ್ತದೆ. ಪೂರ್ವ ಸಿದ್ಧತೆ ಮಾಡಿಕೊಂಡರೆ ಪರಿಣಾ ಮಕಾರಿಯಾಗಿ ಭಾಷಣ ಮಾಡುವುದು ಕಷ್ಟವಲ್ಲ. ಪರಿಣತ ಭಾಷಣಕಾರರು ಕೂಡ ಸ್ವಲ್ಪವಾದರೂ ಪೂರ್ವ ಸಿದ್ಧತೆ ಇಲ್ಲದೇ ಮಾತನಾಡಲು ನಿಲ್ಲುವುದಿಲ್ಲ. ಅವರ ಪೂರ್ವ ಸಿದ್ಧತೆ ವಿಧಾನ ಇತರರಿಗಿಂತ ಭಿನ್ನವಾಗಿರಬಹುದು ಅಷ್ಟೇ.

ತಂತ್ರಜ್ಞಾನದ ಈ ಯುಗದಲ್ಲಿ ಭಾಷಣದ ತಾಲೀಮಿಗೆ ಹಲವಾರು ವಿಧಾನಗಳಿವೆ. ಅದಕ್ಕೆ ಬೇಕಾದ ಸಲಕರಣೆಗಳೂ ಇವೆ.  ಅವುಗಳಲ್ಲಿ ಒಂದು ಮೊಬೈಲ್ ಆ್ಯಪ್‌ಗಳು. ಹತ್ತು ಜನರ ಮುಂದೆ ನಿಂತು, ಯಾವುದೇ ಅಡೆತಡೆ ಇಲ್ಲದೆ ನಿರರ್ಗಳವಾಗಿ ಮಾತನಾಡಲು ನೆರವಾಗುವ ಹಲವು ಆ್ಯಪ್‌ಗಳು ಸ್ಮಾರ್ಟ್‌ಫೋನ್‌ ಲೋಕದಲ್ಲಿವೆ. ಇವುಗಳಲ್ಲಿ ಕೆಲವು ಉಚಿತವಾಗಿ ಬಳಕೆದಾರರಿಗೆ ಲಭ್ಯವಿದೆ. ಇನ್ನು ಕೆಲವು ಆ್ಯಪ್‌ ಬೇಕೆಂದರೆ ಹಣ ಪಾವತಿಸಬೇಕು. ಅಂತಹ ಕೆಲವು ಆ್ಯಪ್‌ಗಳ ಪರಿಚಯ ಇಲ್ಲಿದೆ.

ಉಮ್ಮೊ ಆ್ಯಪ್‌: ಇಂಗ್ಲಿಷ್‌ ಭಾಷಣಕಾರರಿಗೆ ಇದು ಹೆಚ್ಚು ಸಹಕಾರಿಯಾಗಬಲ್ಲುದು. ಮೊದಲೇ ಸಿದ್ಧಪಡಿಸಿದ ಭಾಷಣವನ್ನು ಈ ಆ್ಯಪ್‌ ಮುಂದೆ ಹೇಳಿದರೆ, ಅದು ಮಾತುಗಳನ್ನು ಆಲಿಸುತ್ತಾ, ಪದಗಳನ್ನು ತನ್ನಲ್ಲಿ ದಾಖಲಿಸಿಕೊಳ್ಳುತ್ತದೆ. ಭಾಷಣ ಮಾಡುವಾಗ ಎಷ್ಟು ಬಾರಿ ವಿರಾಮ ನೀಡಲಾಗಿದೆ? ‘ಲೈಕ್‌’, ‘ಯೂ ನೋ’ ‘ರೈಟ್‌’ನಂತಹ ಪದಗಳನ್ನು (ಫಿಲ್ಲರ್‌ಗಳು) ಎಷ್ಟು ಸಲ ಬಳಸಲಾಗಿದೆ ಎಂಬುದನ್ನೆಲ್ಲ ದಾಖಲಿಸುತ್ತದೆ. ಅಂತಿಮವಾಗಿ, ಬಳಕೆದಾರ ಮಾಡಿರುವ  ಭಾಷಣದ ನಕಲು ಪ್ರತಿಯನ್ನು ಈ ಆ್ಯಪ್‌ ಮೊಬೈಲ್‌ ಪರದೆಯಲ್ಲಿ  ತೋರಿಸುತ್ತದೆ.

ಭಾಷಣದಲ್ಲಿ ಇನ್ನೂ ಸುಧಾರಣೆಯಾಗಬೇಕು ಎಂದಿದ್ದರೆ, ಫಿಲ್ಲರ್‌ ಪದಗಳನ್ನು ಬಳಸಿದಾಗಲೆಲ್ಲ ಶಬ್ದ ಹೊರಡಿಸುವಂತೆ ಆ್ಯಪ್‌ಗೆ ಬಳಕೆದಾರ ನಿರ್ದೇಶಿಸಬಹುದು. ಫಿಲ್ಲರ್‌ ಪದಗಳನ್ನು ಅತಿಯಾಗಿ ಬಳಸಿದ ಸಂದರ್ಭದಲ್ಲಿ ಅದನ್ನು ಪರಿಷ್ಕರಿಸಲೂ ಸೂಚಿಸಬಹುದು. ಭಾಷಣದಲ್ಲಿ ಬಳಸಿರುವ ಪದಗಳ ಸಂಖ್ಯೆ, ಒಂದು ಪದವನ್ನು ಎಲ್ಲೆಲ್ಲಿ ಮರು ಬಳಕೆ ಮಾಡಲಾಗಿದೆ, ಪ್ರತಿ ನಿಮಿಷಕ್ಕೆ ಉಚ್ಚರಿಸಿರುವ ಪದಗಳ ಸಂಖ್ಯೆ, ಎಷ್ಟು ಜೋರಾಗಿ ಮಾತನಾಡಲಾಗಿದೆ. ಭಾಷಣದ ಸಂದರ್ಭದಲ್ಲಿ ಸ್ವರ ಒಂದೇ ತೆರನಾಗಿತ್ತೇ?

ಎಂಬೆಲ್ಲ ಮಾಹಿತಿಗಳನ್ನು ಗ್ರಾಫ್‌ ಸಹಿತ ತೋರಿಸುವ ಸಾಮರ್ಥ್ಯ ಉಮ್ಮೊ ಆ್ಯಪ್‌ಗೆ ಇದೆ. ಆ್ಯಪ್‌ ನೀಡುವ ಮಾಹಿತಿಗಳ  ಆಧಾರದಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಗುರುತಿಸಿಕೊಂಡು ಅವುಗಳನ್ನು ತಿದ್ದಿಕೊಳ್ಳುವ ಅವಕಾಶ ಭಾಷಣಕಾರನಿಗೆ  ಇದೆ. ಕೆಲವು ಬಾರಿ, ಪದಗಳ ಉಚ್ಚಾರಣೆಯನ್ನು (ಅಮೆರಿಕ ಇಂಗ್ಲಿಷ್‌, ಬ್ರಿಟನ್‌ ಇಂಗ್ಲಿಷ್‌) ತಪ್ಪಾಗಿ ಅರ್ಥೈಸಿಕೊಳ್ಳುವುದು ಈ ಆ್ಯಪ್‌ನ ಬಹು ದೊಡ್ಡ ಮಿತಿ. ಸದ್ಯ ಐಒಎಸ್‌ ಕಾರ್ಯನಿರ್ವಹಣಾ ವ್ಯವಸ್ಥೆಯ ಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ. ಅಂದ ಹಾಗೆ, ಈ ಆ್ಯಪ್‌ಗೆ 2 ಡಾಲರ್‌ (ಅಂದಾಜು ₹136) ಹಣ ತೆರಬೇಕು.

ಪಬ್ಲಿಕ್‌ ಸ್ಪೀಕಿಂಗ್ ಆ್ಯಪ್‌: ಸಭಾ ಕಂಪನ ಹೊಂದಿರುವ ಭಾಷಣಕಾರರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿರುವ ಆ್ಯಪ್‌ ಇದು. ಇದೊಂದು ಮಿಥ್ಯಾ ವಾಸ್ತವ  (ವರ್ಚ್ಯೂವಲ್‌ ರಿಯಾಲಿಟಿ) ಅಪ್ಲಿಕೇಷನ್‌. ಬಳಕೆದಾರನ ಮುಂದೆ ಸಭಿಕರು ಕುಳಿತಿರುವ ವಾತಾವರಣವನ್ನು ಈ ಆ್ಯಪ್‌ ಸೃಷ್ಟಿಸುತ್ತದೆ. ಮೊಬೈಲ್‌ ಪರದೆಯಲ್ಲಿ ಬರುವ 3 ಡಿ ವಿಡಿಯೊ, ಬಳಕೆದಾರ ನೋಡಿದ ಕಡೆಗೆ ತಿರುಗುತ್ತದೆ. ತಾನು ಜನರ ಮುಂದೆ ನಿಂತು ಭಾಷಣ ಮಾಡುತ್ತಿದ್ದೇನೆಯೋ ಎಂಬ ಭಾವನೆಯನ್ನು ಇದು ಮೊಬೈಲ್‌ ಬಳಕೆದಾರನಲ್ಲಿ ಮೂಡಿಸುತ್ತದೆ.

ಇದು ಮಿಥ್ಯಾವಾಸ್ತವ ಆ್ಯಪ್‌ ಆಗಿರುವುದರಿಂದ 3 ಡಿ ವಿಡಿಯೊಗಳನ್ನು ನೋಡಲು ಪ್ರತ್ಯೇಕ ಹಾರ್ಡ್‌ವೇರ್‌ನ ಅಗತ್ಯವಿದೆ. ಅದರಲ್ಲೂ ಗೂಗಲ್‌ ಕಾರ್ಡ್‌ಬೋರ್ಡ್‌ ಇದ್ದರೆ ಇದು ಹೆಚ್ಚು  ಪರಿಣಾಮಕಾರಿ. ಈ ಆ್ಯಪ್‌ ಉಚಿತವಾಗಿ ಐಒಎಸ್‌, ಆಂಡ್ರಾಯ್ಡ್‌ ಮೊಬೈಲ್‌ಗಳಲ್ಲಿ ಲಭ್ಯವಿದೆ. ಆದರೆ. ಗೂಗಲ್‌ ಕಾರ್ಡ್‌ಬೋರ್ಡ್‌ ಸ್ವಲ್ಪ ದುಬಾರಿ. 15 ಡಾಲರ್‌ಗಿಂತಲೂ (ಅಂದಾಜು ₹1020) ಹೆಚ್ಚಿನ ಬೆಲೆ ಇದಕ್ಕಿದೆ.

ಅಂಬರ್‌ ಲೈಟ್‌ ಸ್ಪೀಚ್‌ ಟೈಮರ್‌ ಆ್ಯಪ್‌: ಐಒಎಸ್‌ ಫೋನ್‌ಗಳಿಗೆ ಮಾತ್ರ ಇವು ಲಭ್ಯ. ಅದಕ್ಕೂ ₹ 2 ಡಾಲರ್‌ (ಸುಮಾರು ₹136) ತೆರಬೇಕು. ಭಾಷಣದ ಸಂದರ್ಭದಲ್ಲಿ ಸಮಯ ಪರಿಪಾಲನೆ ಮಾಡಲು ಈ ಆ್ಯಪ್ ನೆರವಾಗುತ್ತದೆ. ಇದು ಒಂದು ರೀತಿಯ ಟೈಮರ್‌ ಆ್ಯಪ್‌. ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಟೋಸ್ಟ್‌ಮಾಸ್ಟರ್‌ ಟೈಮರ್‌ ಎಂಬ ಆ್ಯಪ್‌ ಇದೇ ರೀತಿ ಕಾರ್ಯನಿರ್ವಹಿಸುತ್ತದೆ. ಅಲ್ಲಿ ಈ ಆ್ಯಪ್‌ ಅನ್ನು ಉಚಿತವಾಗಿ  ಡೌನ್‌ಲೋಡ್ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT