ಸೋಲ್ (ಎಎಫ್‌ಪಿ): ರಜಾದಿನದ ಪ್ರವಾಸಕ್ಕಾಗಿ ಪ್ರೌಢಶಾಲಾ ಮಕ್ಕಳನ್ನು ದ್ವೀಪಕ್ಕೆ ಕರೆದೊಯ್ಯುತ್ತಿದ್ದ ಬಹುಮಹಡಿ ದೋಣಿಯೊಂದು ದಕ್ಷಿಣ ಕೊರಿಯಾ ಸಮುದ್ರದಲ್ಲಿ ಮಗುಚಿಬಿದ್ದು 300 ಜನರು ನಾಪತ್ತೆಯಾಗಿರುವ ಘಟನೆ ಬುಧವಾರ ಸಂಭವಿಸಿದೆ.
ಬಿಯಾಂಗ್‌ಪಂಗ್ ದ್ವೀಪದಿಂದ ದಕ್ಷಿಣಕ್ಕೆ 20 ಕಿ.ಮೀ. ದೂರದ ಸಮುದ್ರದಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಒಬ್ಬ ವಿದ್ಯಾರ್ಥಿ ಮತ್ತು ದೋಣಿಯ ಮಹಿಳಾ ಸಿಬ್ಬಂದಿ ಸೇರಿದಂತೆ ಕನಿಷ್ಠ ನಾಲ್ಕು ಜನ ಮೃತಪಟ್ಟು 55 ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
87 ಹಡಗುಗಳು ಮತ್ತು 18 ವಿಮಾನಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಇದುವರೆಗೆ 164 ಜನರನ್ನು ರಕ್ಷಿಸಲಾಗಿದೆ. 160 ಕರಾವಳಿ ರಕ್ಷಣಾ ಸಿಬ್ಬಂದಿ ಮತ್ತು ಈಜುಗಾರರು ದೋಣಿಯ ಭಗ್ನಾವಶೇಷದ ಅಡಿಯಲ್ಲಿ ಬದುಕಿರುವವರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
‘ದೋಣಿಯಲ್ಲಿ 30 ಸಿಬ್ಬಂದಿ, 325 ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು 15 ಶಿಕ್ಷಕರು ಮತ್ತು 89 ಸಾಮಾನ್ಯ ಪ್ರಯಾಣಿಕರು ಇದ್ದರು. ಇವರಲ್ಲಿ 300 ಜನರು ಇನ್ನೂ ಪತ್ತೆಯಾಗಿಲ್ಲ’ ಎಂದು ಭದ್ರತೆ, ಸಾರ್ವಜನಿಕ ಆಡಳಿತ ಇಲಾಖೆಯ ಉಪಮಂತ್ರಿ ಲೀ ಗ್ಯೋಂಗೊಗ್ ತಿಳಿಸಿದ್ದಾರೆ.
ಮೃತರ ಸಂಖ್ಯೆ ಗಣನೀಯವಾಗಿ ಹೆಚ್ಚುವ ಆತಂಕ ಎದುರಾಗಿದ್ದು, ಕಾಣೆಯಾದವರಲ್ಲಿ ಬಹುಪಾಲು ಜನರು ದೋಣಿಯಲ್ಲಿ ಸಿಲುಕಿಕೊಂಡಿರಬಹುದು ಅಥವಾ ಸಮುದ್ರದಲ್ಲಿ ತೇಲುತ್ತಿರುಬಹುದು ಎಂದು ಹೇಳಲಾಗಿದೆ.
‘ದೋಣಿ ಜೋರಾಗಿ ಓಲಾಡತೊಡಗಿದಾಗ ನಾವು ಒಬ್ಬರ ಮೇಲೊಬ್ಬರು ಮುಗ್ಗರಿಸಿ ಬಿದ್ದೆವು. ಕೆಲವು ಜನರಿಗೆ ಗಾಯವಾಗಿ ರಕ್ತ ಸೋರುತ್ತಿತ್ತು. ನಾನು ಮತ್ತು ಉಳಿದ ಕೆಲವು ವಿದ್ಯಾರ್ಥಿಗಳು ರಕ್ಷಣಾ ಕವಚ ತೊಟ್ಟು ಸಮುದ್ರಕ್ಕೆ ಜಿಗಿದೆವು. ಸಮುದ್ರ ನೀರು ತುಂಬ ತಣ್ಣಗಿತ್ತು. ಆಗ ನಾನು ಹೇಗಾದರೂ ಬದುಕಲೇಬೇಕು ಎಂದು ಯೋಚಿಸುತ್ತಿದ್ದೆ’ ಎಂದು ನತದೃಷ್ಟ ದೋಣಿಯಲ್ಲಿದ್ದ ವಿದ್ಯಾರ್ಥಿ ಲಿಮ್ ಹ್ಯುಂಗ್‌ಮಿನ್ ಅಪಘಾತದ ಭೀಕರತೆಯನ್ನು ನೆನಪಿಸಿಕೊಂಡಿದ್ದಾನೆ.1993ರಲ್ಲಿ 292 ಜನರನ್ನು ಬಲಿ ತೆಗೆದುಕೊಂಡ ದೋಣಿ ಅವಘಡದ ನಂತರ ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ಅತಿದೊಡ್ಡ ದೋಣಿ ಅಪಘಾತ ಇದಾಗಿದೆ.
ದೋಣಿ ಮುಳುಗಿದ್ದು ಹೇಗೆ?
ಸಮುದ್ರದಲ್ಲಿ ಮೂರು ಗಂಟೆ ಪ್ರಯಾಣಿಸಿದ ನಂತರ ಬೆಳಿಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ದೋಣಿಯಿಂದ ಅಪಾಯದ ಸಂದೇಶ ಬಂತು. ಆ ಹೊತ್ತಿಗಾಗಲೇ ಬೃಹತ್ ದೋಣಿ ಒಂದು ಕಡೆಗೆ ವಾಲತೊಡಗಿತ್ತು. ರಕ್ಷಣಾ ಸಿಬ್ಬಂದಿ ದೋಣಿಯನ್ನು ಸುತ್ತುವರಿದು ಪ್ರಯಾಣಿಕರನ್ನು ರಕ್ಷಿಸುತ್ತಿದ್ದಾಗಲೇ ಅದು ನಿಧಾನಕ್ಕೆ ತಲೆಕೆಳಗಾಯಿತು. ಈ ದುರಂತಕ್ಕೆ ಖಚಿತ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯಕ್ಕೆ ನಾವು ಪರಿಹಾರ ಕಾರ್ಯಾಚರಣೆಯತ್ತ ಗಮನ ನೀಡಿದ್ದೇವೆ ಎಂದು ದಕ್ಷಿಣ ಕೊರಿಯಾ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ನೀರಿನ ಉಷ್ಣಾಂಶ ಕೇವಲ 12 ಡಿಗ್ರಿ ಸೆಲ್ಸಿಯಸ್ಗಳಷ್ಟಿದೆ. ಸಮುದ್ರ ಮೂವತ್ತೇಳು ಮೀಟರ್ಗಳಷ್ಟು ಆಳವಿದೆ. ಸಮುದ್ರ ತಳದಲ್ಲಿನ ಮಣ್ಣು ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಶೋಧಕಾರ್ಯಕ್ಕೆ ಅಡಚಣೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.