ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುರೆಲಾಲ್‌ ಸಮಿತಿ ಏನು ಹೇಳುತ್ತದೆ?

Last Updated 27 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಭುರೆಲಾಲ್‌ ಅವರು ‘ಕೇಂದ್ರ ಪರಿಸರ ಮಾಲಿನ್ಯ ತಡೆ ಮತ್ತು ನಿಯಂತ್ರಣ ಪ್ರಾಧಿ­ಕಾರ’ದ (ಇಪಿಸಿಎ) ಅಧ್ಯಕ್ಷರಾಗಿದ್ದವರು. ನವದೆಹಲಿಯಲ್ಲಿ ಮಿತಿ­ಮೀರುತ್ತಿದ್ದ ಮಾಲಿನ್ಯ ತಡೆಗೆ ಕೈಗೊಳ್ಳಬೇಕಾದ ಪರಿಣಾಮಕಾರಿ ಕ್ರಮಗಳ ಬಗ್ಗೆ 1999ರಲ್ಲಿ  ಸುಪ್ರೀಂಕೋರ್ಟ್‌ಗೆ ಅವರು ಸಲ್ಲಿಸಿದ್ದ ವರದಿ ಇಂದಿಗೂ ಪ್ರಸ್ತುತ.

ಈ ವರದಿಯಲ್ಲಿನ ಶಿಫಾರಸುಗಳನ್ನು ದೇಶದ ಇತರ ಪ್ರಮುಖ ನಗರಗಳಲ್ಲೂ ಜಾರಿಗೆ ತರುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿತ್ತು. ಆದರೆ ಮಾಲಿನ್ಯದ ಪ್ರಮಾಣ ಅಗಾಧವಾಗಿ ಏರಿಕೆಯಾಗು­ತ್ತಲೇ ಇದ್ದರೂ ಬೆಂಗ­ಳೂರು ಸೇರಿದಂತೆ ಹಲವು ನಗರಗಳಲ್ಲಿ ಈ ವರದಿ ಮಾತ್ರ ಇನ್ನೂ ಜಾರಿಗೆ ಬಂದೇ ಇಲ್ಲ. ಇದೀಗ ಈ ವರದಿಯ ಶಿಫಾರಸುಗಳ ಜಾರಿಗೆ ಚಿಂತನೆ ನಡೆಸಿರು­ವುದಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿಕೆ ನೀಡಿದೆ. ವರದಿಯ ಶಿಫಾರಸುಗಳು ಇಂತಿವೆ:
* ವಾತಾವರಣದಲ್ಲಿ ಸಲ್ಫರ್‌, ನೈಟ್ರಸ್‌ ಆಕ್ಸೈಡ್‌ ಪ್ರಮಾಣ ತಗ್ಗಿಸಬೇಕು.
* ಸಾರ್ವಜನಿಕ ಸಾರಿಗೆಗಳಲ್ಲಿ ಸಿಎನ್‌ಜಿ (ಸಂಕ್ಷೇಪ ನೈಸರ್ಗಿಕ ಅನಿಲ) ಇಂಧನವನ್ನು ಹೆಚ್ಚು ಬಳಸಬೇಕು. ಹಳೆ ವಾಹನ ಬಳಕೆ ನಿಷೇಧಿಸಬೇಕು.
* ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸುವಂತೆ ಪ್ರೇರೇಪಿಸಬೇಕು.
* ನಗರದ ಒಳಗೆ ಭಾರಿ ವಾಹನಗಳನ್ನು ನಿಷೇಧಿಸಬೇಕು.
* ರಸ್ತೆಗಳು ಸಿಗ್ನಲ್‌ ಮುಕ್ತ ಆಗಿರಬೇಕು.
* ಕಲ್ಲಿದ್ದಲ್ಲಿನ ಮೇಲಿನ ಅವಲಂಬನೆ ಕಡಿಮೆಯಾಗಬೇಕು.
* ಕಠಿಣ ಕೈಗಾರಿಕಾ ನೀತಿಗಳು ಜಾರಿಗೆ ಬರಬೇಕು.

* * * 

ಮೀರಿದೆ ಅಪಾಯದ ಮಟ್ಟ
ಹುಬ್ಬಳ್ಳಿ–ಧಾರವಾಡ: ಅವಳಿ ನಗರದ ವ್ಯಾಪ್ತಿಯಲ್ಲಿ  ವಾಯುಮಾಲಿನ್ಯದ ಪ್ರಮಾಣ ಅಪಾಯದ ಮಟ್ಟ ಮೀರಿದೆ. ರಸ್ತೆಗಳ ದುರವಸ್ಥೆ, ಕಸದ ಅವೈಜ್ಞಾನಿಕ ನಿರ್ವಹಣೆ, ವರ್ಷ ಕಳೆದರೂ ಮುಗಿಯದ ಒಳಚರಂಡಿ ಕಾಮಗಾರಿ, ಕೈಗಾರಿಕೆ­ಗಳ ತ್ಯಾಜ್ಯ ಇದಕ್ಕೆ ಪ್ರಮುಖ ಕಾರಣ.

ಉತ್ತರ ಕರ್ನಾಟಕವು ಒಣ ಹವೆ ಪ್ರದೇಶವಾದ್ದರಿಂದ ದೂಳಿನ ಪ್ರಮಾಣ­ಹೆಚ್ಚು. ಡಾಂಬರು ಕಾಣದ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾ­ರ­ದಿಂದ ಪಾದಚಾರಿಗಳ ಕಣ್ಣು, ಮೂಗಿಗೆ ದೂಳು ತುಂಬಿಕೊಳ್ಳುತ್ತದೆ. ಇನ್ನು ಹುಬ್ಬಳ್ಳಿ­ಯಲ್ಲಿ ಸಾರಿಗೆ ಸಂಸ್ಥೆಯ ಹಳೆಯ ಬಸ್‌ಗಳನ್ನು ಒಡೆಯುವ ಗುಜರಿ ಉದ್ಯಮ ದೊಡ್ಡ ಪ್ರಮಾಣದಲ್ಲಿ ನೆಲೆಗೊಂಡಿರುವುದರಿಂದ ಇದು ಮಾಲಿನ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಹುಬ್ಬಳ್ಳಿಯ ಪ್ರಮುಖ ಸ್ಥಳಗಳಲ್ಲಿ ವಾಯು­ಮಾಲಿನ್ಯದ ಪ್ರಮಾಣ 105 ಮೈಕ್ರೊ ಗ್ರಾಮ್‌ನಷ್ಟು ದಾಖಲಾಗಿದೆ. ಮಾಲಿನ್ಯದ ಕಾರಣಕ್ಕೆ ಉಸಿರಾಟದ ತೊಂದರೆ, ಶ್ವಾಸಕೋಶ, ಚರ್ಮ, ಕಣ್ಣಿನ ಸೋಂಕು, ಕೆಮ್ಮು, ಹೃದಯ ಸಂಬಂಧಿ ಕಾಯಿಲೆಗಳಿಗೆ ಜನ ತುತ್ತಾಗುತ್ತಿದ್ದಾರೆ.

‘ಅವಳಿ ನಗರದಲ್ಲಿ ಮಾಲಿನ್ಯ ತಡೆಗಟ್ಟಲು ಧಾರವಾಡ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕ್ರಿಯಾಪಡೆ ರಚಿಸಿದ್ದು, ಕ್ರಿಯಾ ಯೋಜನೆ ರೂಪಿಸಲಾಗಿದೆ. ಹಂತ­ಹಂತವಾಗಿ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ’ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಅಧಿಕಾರಿ ವಿಜಯಕುಮಾರ ಕಡಕಬಾವಿ.

ದತ್ತಾಂಶದ ಬಗ್ಗೆಯೇ ಅನುಮಾನ!
ಮೈಸೂರು: ಅತಿ ವೇಗ­ವಾಗಿ ಬೆಳೆ­­ಯು­ತ್ತಿರುವ ಮೈಸೂರು ಜಿಲ್ಲೆ­­ಯಲ್ಲಿ ಸುಮಾರು 26 ಸಾವಿರ ಕೈಗಾ­ರಿಕೆ­ಗಳಿವೆ. ವಿವಿಧ ಸೇವಾ ಉದ್ಯಮ­ಗಳೂ ನೆಲೆ ಕಂಡಿವೆ. ನಗರದ ಎಲ್ಲೆಡೆ ವಾಹನ ಮಾರಾಟ ಮಳಿಗೆಗಳು ತಲೆ ಎತ್ತಿವೆ. ಈವರೆಗೆ 6.5  ಲಕ್ಷ ವಾಹನ­ಗಳಿದ್ದು, ಇದರಲ್ಲಿ 4.5  ಲಕ್ಷ ದ್ವಿಚಕ್ರ ವಾಹನಗಳೇ ಇವೆ. ದಸರಾ­ದಂಥ ಬೃಹತ್ ಉತ್ಸವ ಹತ್ತಾರು ದಿನ ಜರು-­­ಗುತ್ತದೆ.

ಜಿಲ್ಲೆಯಲ್ಲಿ ಹಲವು ಪ್ರೇಕ್ಷ­ಣೀಯ ಸ್ಥಳಗಳು ಇರುವುದ­ರಿಂದ ಸಹಜವಾ­ಗಿಯೇ ಪ್ರವಾಸಿ­ಗರ ದಂಡು ವಿವಿಧ ವಾಹನ­­ಗಳಲ್ಲಿ ಲಗ್ಗೆ ಇಡುತ್ತದೆ. ಇಷ್ಟಾದರೂ ಇಡೀ ಜಿಲ್ಲೆಯ ವಾಯುಮಾಲಿನ್ಯ­ವನ್ನು ಅಳೆಯಲು ಇರುವುದು ಕೇವಲ ಎರಡು ಕೇಂದ್ರಗಳು! ಮೈಸೂರಿನ ಕೆ.ಆರ್. ವೃತ್ತ ಹಾಗೂ ಹೆಬ್ಬಾಳು ಕೈಗಾರಿಕಾ ಪ್ರದೇಶ­ದಲ್ಲಿ ಈ ಕೇಂದ್ರಗಳಿವೆ. ನಗರದಲ್ಲಿ ಕೈಗಾರಿಕಾ ಪ್ರದೇಶಕ್ಕಿಂತ ಹೃದಯಭಾಗದಲ್ಲೇ ಹೆಚ್ಚಿನ ವಾಯು­ಮಾಲಿನ್ಯ ಇರುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶಗಳು ತಿಳಿಸುತ್ತವೆ! ಹೀಗಾಗಿ ಈ ದತ್ತಾಂಶಗಳ ಬಗ್ಗೆಯೇ  ಹಲವು ಪರಿಸರವಾದಿಗಳು ಅನುಮಾನ ವ್ಯಕ್ತಪಡಿಸುತ್ತಾರೆ.

ಪ್ರಾಣ ಹಿಂಡುವ ದೂಳು
ಕಲಬುರ್ಗಿ:
ಮಹಾನಗರದಲ್ಲಿ ವಾಯುಮಾಲಿನ್ಯ ಅಪಾಯದ ಪ್ರಮಾಣವನ್ನು ಮೀರಿಲ್ಲ. ಆದರೆ, ಇಲ್ಲಿನ ರಸ್ತೆಗಳಲ್ಲಿ ಏಳುವ ಅತಿಯಾದ ದೂಳು ಮಾತ್ರ ನಾಗರಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಕೈಗಾರಿಕಾ ಪ್ರದೇಶ, ವಸತಿ ಪ್ರದೇಶ  ಹಾಗೂ ಸೂಕ್ಷ್ಮ ಪ್ರದೇಶ ಎಂದು ಮೂರು ವಲಯಗಳಲ್ಲಿ ಮಾಲಿನ್ಯದ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತದೆ. ಆಸ್ಪತ್ರೆ, ಶಾಲೆ, ಕಾಲೇಜುಗಳು ಸೂಕ್ಷ್ಮ ವಲಯದಲ್ಲಿವೆ.  ಒಣಭೂಮಿಯಾದ ಕಾರಣ ಇಲ್ಲಿ ದೂಳು ಸಹಜ. ಸಿಮೆಂಟ್ ಕಾರ್ಖಾನೆಗಳ ಹಾರುಬೂದಿ, ಕಲ್ಲು ಗಣಿಗಾರಿಕೆ, ಮರಗಳ ಹನನ, ನಡೆಯದ ಅರಣ್ಯೀಕರಣ ಇತ್ಯಾದಿಗಳಿಂದ ವಾಯುಮಾಲಿನ್ಯ ಉಂಟಾಗುತ್ತಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಮರಗಳ ಸಂಖ್ಯೆ ಕಡಿಮೆ ಇರುವುದು ದೂಳಿನ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣ.

‘ಜಿಲ್ಲಾ ಆಸ್ಪತ್ರೆಯಲ್ಲಿ ಆಸ್ತಮಾ, ಗಂಟಲ ಊತ, ಶ್ವಾಸಕೋಶ ಮತ್ತು ಅಲರ್ಜಿಗೆ  ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ’ ಎಂದು ವೈದ್ಯರು ಹೇಳುತ್ತಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಅಳವಡಿಸಿರುವ ದೂಳುಮಾಪನ ಯಂತ್ರ­ದಲ್ಲಿ 2014ರ ಡಿಸೆಂಬರ್‌ನಲ್ಲಿ 75 ಮೈಕ್ರೊ ಗ್ರಾಮ್‌ನಷ್ಟು ದೂಳಿನ ಪ್ರಮಾಣ ದಾಖಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಇದರ ಪ್ರಮಾಣ 100 ಮೈಕ್ರೊ ಗ್ರಾಮ್‌ ದಾಟಬಾರದು. ಮುಂದೆ ಈ ಪ್ರಮಾಣ ಹೆಚ್ಚುವ ಸಂಭವ ಇದೆ.

ದುಬಾರಿಯಾಗುತ್ತಿದೆ ಶುದ್ಧಗಾಳಿ
ಮಂಗಳೂರು:
ಹಡಗು, ರೈಲು, ವಿಮಾನ ನಿಲ್ದಾಣ ಸೌಕರ್ಯ, ಚುರುಕಾದ ಸಾರಿಗೆ ವ್ಯವಸ್ಥೆ ಕಾರಣಕ್ಕೆ ಸರ್ಕಾರ ದಕ್ಷಿಣ ಕನ್ನಡದ ಮಡಿಲಿಗೆ ಉದ್ಯಮಗಳನ್ನು ತಂದು ಹಾಕುತ್ತಲೇ ಇದೆ. ಈಗಾಗಲೇ ಎಂಆರ್‌ಪಿಎಲ್, ವಿಶೇಷ ವಿತ್ತ ವಲಯ, ಯುಪಿಸಿಎಲ್ ಕಾರ್ಖಾನೆಗಳು ಜಿಲ್ಲೆಯ ಹತ್ತಾರು ಗ್ರಾಮಗಳನ್ನೇ ಇಡಿಯಾಗಿ ನುಂಗಿಬಿಟ್ಟಿವೆ. ಪರಿಣಾಮವಾಗಿ ಮಾಲಿನ್ಯವೂ ಏರುಮುಖವಾಗಿಯೇ ಇದೆ.

೨೦೧೦ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಅಧ್ಯಯನದ ಪ್ರಕಾರ, ರಾಜ್ಯದಲ್ಲೇ ಅತಿ ಹೆಚ್ಚು ಮಾಲಿನ್ಯ ಹೊಂದಿದ ನಗರ ಮಂಗಳೂರು ಎಂಬ ಕುಖ್ಯಾತಿ ಇತ್ತು. ದೇಶದಲ್ಲಿ ಅತ್ಯಂತ ಹೆಚ್ಚು ಮಾಲಿನ್ಯ ಹೊಂದಿದ 43 ನಗರಗಳನ್ನು ಪಟ್ಟಿ ಮಾಡಿದ್ದ ಮಂಡಳಿ, ಕರ್ನಾಟಕದಲ್ಲಿ ಭದ್ರಾವತಿ ಮತ್ತು ಮಂಗಳೂರನ್ನು ಹೆಚ್ಚು ಮಲಿನಗೊಳ್ಳುತ್ತಿರುವ ನಗರಗಳು ಎಂದು ಗುರುತಿಸಿತ್ತು. ಅದಾದ ಮೇಲೆ ಜಿಲ್ಲೆಗೆ ಹೊಸ ಕೈಗಾರಿಕೆಗಳು ಬಂದಿವೆ. ನೀರು, ಮಣ್ಣು, ಗಾಳಿ ಮಲಿನಗೊಳ್ಳುತ್ತಲೇ ಇವೆ. ಜನಸಾಂದ್ರತೆ, ವಾಹನ ಖರೀದಿಯ ಸರಾಸರಿ ಅನು­ಪಾತ­ದಲ್ಲಿ ಬೆಂಗಳೂರಿಗಿಂತಲೂ ಮಂಗಳೂರೇ ಮುಂಚೂಣಿ­ಯಲ್ಲಿದೆ. ಅಂದ­ಮೇಲೆ ವಾಯುಮಾಲಿನ್ಯದ ಪ್ರಮಾಣವೂ ಅಷ್ಟೇ ತೀವ್ರವಾಗಿದೆ ಎಂದಾಯಿತು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೊರಗಿನ ಪರಿಸರದಲ್ಲಿ ಕೈಗಾರಿಕೆಗಳು ಹಳ್ಳಿಗಳನ್ನೆಲ್ಲ ತುಳಿದು ತಲೆಯೆತ್ತುತ್ತಿವೆ. ಎಂಆರ್‌ಪಿಎಲ್‌ನ ಕೋಕ್ ಹಾಗೂ ಗಂಧಕದ ಘಟಕದಿಂದ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯಗಳು ಮಿತಿಮೀರಿವೆ. ಘಟಕ ಹೊರಸೂಸುವ ರಾಸಾಯನಿಕ ಮಿಶ್ರಿತ ಗಾಳಿಯಿಂದ ಸುತ್ತಮುತ್ತಲಿನ ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ.
ಯುಪಿಸಿಎಲ್‌ನ ಹಾರುಬೂದಿ ಸಮಸ್ಯೆ ಉಡುಪಿ ಗಡಿಭಾಗದ ಊರುಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಆಸ್ತಮಾದಂತಹ ರೋಗಗಳು, ಗಾಳಿಯಲ್ಲಿ ಉಪ್ಪಿನಂಶ ಹೆಚ್ಚಾಗಿ ಉಂಟಾಗುವ ತೊಂದರೆಗಳು ಜನರನ್ನು ಕಾಡುತ್ತಿವೆ.

ಇಂತಹ ಪರಿಸ್ಥಿತಿ ನಡುವೆಯೇ ಜನಪ್ರತಿನಿಧಿಗಳು ಇನ್ನಷ್ಟು ಕೈಗಾರಿಕೆಗಳನ್ನು ಜಿಲ್ಲೆಗೆ ತರುವ ಹುಮ್ಮಸ್ಸಿನಲ್ಲಿದ್ದಾರೆ. ಕರಾವಳಿಯನ್ನು ಪೆಟ್ರೋಕೆಮಿಕಲ್ ಮತ್ತು ಪೆಟ್ರೋಲಿಯಂ ಹೂಡಿಕೆ ವಲಯವನ್ನಾಗಿ (ಪಿಸಿಪಿಐಆರ್) ಮಾಡಲು ಕೇಂದ್ರ ಚಿಂತಿಸುತ್ತಿರುವುದಾಗಿ ಕೇಂದ್ರ ಸಚಿವ ಅನಂತಕುಮಾರ್ ಪ್ರಕಟಿಸಿದ್ದಾರೆ. ಇಷ್ಟಾದರೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ  ರಾಜಶೇಖರ ಪುರಾಣಿಕ್ ಅವರ ಪ್ರಕಾರ, ಇಲ್ಲಿನ ಶೇ ೬೬ರಷ್ಟು ವಾಯುಮಾಲಿನ್ಯಕ್ಕೆ ವಾಹನಗಳ ಹೊಗೆಯೇ ಕಾರಣ!

(ಮಾಹಿತಿ: ‘ಪ್ರಜಾವಾಣಿ’ ಹುಬ್ಬಳ್ಳಿ, ಮೈಸೂರು, ಕಲಬುರ್ಗಿ ಮತ್ತು ಮಂಗಳೂರು ಬ್ಯೂರೊಗಳಿಂದ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT