ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪದ ಹಾನಿ ತಗ್ಗಿಸಲು ಸಮಗ್ರ ನೀತಿ ಅಗತ್ಯ

ವಾರದ ಸಂದರ್ಶನ
Last Updated 2 ಮೇ 2015, 19:30 IST
ಅಕ್ಷರ ಗಾತ್ರ

ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಿಂದಾಗಿ 10 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಸುಮಾರು  80 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. ಭೂಕಂಪದಿಂದ ಉಂಟಾಗಿರುವ ಹಾನಿಯ ಪ್ರಮಾಣ ಇನ್ನೂ ಲೆಕ್ಕಕ್ಕೆ ಸಿಕ್ಕಿಲ್ಲ್ಲ. ನೇಪಾಳದ ಕಠ್ಮಂಡು ಹಾಗೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಹೆಣಗಳು ಸಿಗುತ್ತಿವೆ. ಭಾರತದಲ್ಲೂ ನೇಪಾಳಕ್ಕೆ ಹೊಂದಿಕೊಂಡಿರುವ ಕೆಲವು ರಾಜ್ಯಗಳಲ್ಲಿ ಸಾವು-ನೋವು ಉಂಟಾಗಿದೆ.

ನೇಪಾಳದ  ಭೂಕಂಪ ಸೃಷ್ಟಿಸಿದ ನರಕ ಯಾತನೆಯ ನೆನಪು  ಮರೆಯುವ ಮುನ್ನವೇ ಪಪುವಾ ನ್ಯೂಗಿನಿಯಲ್ಲಿ (ರಿಕ್ಟರ್‌ ಮಾಪಕದಲ್ಲಿ 7.1)  ಹಾಗೂ ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪ ಸಮೂಹದಲ್ಲಿ ಶುಕ್ರವಾರ ಭೂಮಿ ಮತ್ತೆ ಕಂಪಿಸಿದೆ. ಪದೇ ಪದೇ ಸಂಭವಿಸುತ್ತಿರುವ ಭೂಕಂಪ,  ಸಂತ್ರಸ್ತರಲ್ಲಿ ಮಾತ್ರವಲ್ಲ ಇತರರಲ್ಲೂ  ನಡುಕ ಹುಟ್ಟಿಸಿದೆ. ಭೂಕಂಪ ಏಕೆ ಸಂಭವಿಸುತ್ತದೆ, ಇದರಿಂದ ಉಂಟಾಗುವ ಹಾನಿಯನ್ನು ತಡೆಯಲು ಮಾರ್ಗೋಪಾಯಗಳೇನು? ಕರ್ನಾಟಕದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಗಳು ಇವೆಯೇ ಎಂಬ ಬಗ್ಗೆ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಉಪ ಮಹಾನಿರ್ದೇಶಕರಾಗಿರುವ ಡಾ. ಎಂ.ವೆಂಕಟಸ್ವಾಮಿ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.

* ಹಿಮಾಲಯ ಪ್ರದೇಶದಲ್ಲಿ ಪದೇ ಪದೇ ಭೂಕಂಪ ಉಂಟಾಗಲು ಕಾರಣ ಏನು?
ಹಿಮಾಲಯ ಪರ್ವತ ಶ್ರೇಣಿ ಇರುವ ಪ್ರದೇಶದಲ್ಲಿ ಸುಮಾರು 7 ಕೋಟಿ ವರ್ಷಗಳಷ್ಟು ಹಿಂದೆ ಟೆಥಿಸ್‌ ಎಂಬ ಸಮುದ್ರ ಇತ್ತು. ಭೂಖಂಡಗಳ ಸ್ಥಾನಪಲ್ಲಟದ ಪರಿಣಾಮವಾಗಿ, ಯುರೇಷಿಯಾ ಭೂಶಿಲಾ ಫಲಕ  ಹಾಗೂ ಇಂಡಿಯಾ ಪೆನಿನ್ಸುಲಾರ್‌ ಭೂಶಿಲಾ ಫಲಕಗಳು ತೇಲಿಕೊಂಡು ಬಂದು ಈ ಪ್ರದೇಶದಲ್ಲಿ ಡಿಕ್ಕಿ ಹೊಡೆದವು. ಈ ಎರಡು ಶಿಲಾ ಫಲಕಗಳ ನಡುವೆ ಸಿಲುಕಿದ ಸಮುದ್ರವೇ  ಹಿಮಾಲಯ ಪರ್ವತಶ್ರೇಣಿಯಾಗಿ ರೂಪಾಂತರಗೊಂಡಿತು. ಹಿಮಾಲಯ ಪರ್ವತ ಪ್ರದೇಶವು ಜಲಜ ಶಿಲೆಗಳಿಂದ (ಸೆಡಿಮೆಂಟರಿ ರಾಕ್) ಉಂಟಾಗಿದೆ. ಯುರೇಷಿಯಾ ಹಾಗೂ ಇಂಡಿಯಾ ಪೆನಿನ್ಸುಲಾರ್ ಫಲಕಗಳು ಕಠಿಣ ಶಿಲೆಗಳಿಂದ ನಿರ್ಮಾಣವಾಗಿವೆ. ಈ ಎರಡು ಭೂಶಿಲಾ ಫಲಕಗಳ ನಡುವಿನ ತಿಕ್ಕಾಟ ಈಗಲೂ ಮುಂದುವರಿದಿದೆ. ಈ ಕಾರಣದಿಂದಾಗಿಯೇ  ಹಿಮಾಲಯದ ಪರ್ವತಗಳು ಈಗಲೂ ವರ್ಷಕ್ಕೆ ಸರಾಸರಿ 7 ಸೆಂಟಿ ಮೀಟರ್‌ನಷ್ಟು ಮೇಲಕ್ಕೇರುತ್ತಿವೆ. ಎರಡು ಶಿಲಾ ಫಲಕಗಳ ತಿಕ್ಕಾಟದಿಂದ ಹೆಚ್ಚು ಒತ್ತಡ ಸೃಷ್ಟಿಯಾದಾಗ ಕೆಲವು ಶಿಲಾ ಪದರಗಳು ಛಿದ್ರಗೊಳ್ಳುತ್ತವೆ. ಆಗ ಭೂಕಂಪ ಸಂಭವಿಸುತ್ತದೆ.  ಹಿಮಾಲಯ ಪ್ರದೇಶದಲ್ಲಿ ಪ್ರತಿ 100 ವರ್ಷಕ್ಕೆ ನಾಲ್ಕು ದೊಡ್ಡ ಪ್ರಮಾಣದ ಭೂಕಂಪಗಳು ಸಂಭವಿಸುತ್ತಿವೆ.

1954ರಲ್ಲಿ ಅಸ್ಸಾಂನಲ್ಲಿ ಸಂಭವಿಸಿದ ಭಾರಿ ಭೂಕಂಪದಿಂದಾಗಿ ಬ್ರಹ್ಮಪುತ್ರ ನದಿ ಹರಿಯುವ ದಿಕ್ಕೂ ಬದಲಾಗಿದೆ. 1225 ಹಾಗೂ 1934ರಲ್ಲಿ ಕಠ್ಮಂಡುವಿನಲ್ಲಿ ಈ ಬಾರಿಯಷ್ಟೇ  ತೀವ್ರತರವಾದ ಭೂಕಂಪ ಸಂಭವಿಸಿತ್ತು. ಆಗ ಜನಸಂಖ್ಯೆ ಈಗಿನಷ್ಟು
ಇರಲಿಲ್ಲ. ಹಾಗಾಗಿ ಹಾನಿಯ ಪ್ರಮಾಣ ಇಷ್ಟೊಂದು ಇದ್ದಿರಲಿಕ್ಕಿಲ್ಲ.

* ನೇಪಾಳದಲ್ಲಿ ಭೂಕಂಪ ಸಂಭವಿಸುವ ಮುನ್ಸೂಚನೆ ಇತ್ತೇ?
ಭೂಗರ್ಭದಲ್ಲಿ  ಖಚಿತವಾಗಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ವಿಜ್ಞಾನಿಗಳಿಗೂ ಸಾಧ್ಯವಾಗಿಲ್ಲ. ಆದರೆ, ಭೂಕಂಪ ಸಂಭವಿಸುವ ಮುನ್ಸೂಚನೆಯನ್ನು  ಭೂವಿಜ್ಞಾನಿಗಳು ಗ್ರಹಿಸಬಲ್ಲರು. ನೇಪಾಳದಲ್ಲಿ ಭೂಕಂಪ ಸಂಭವಿಸಲಿದೆ ಎಂದು ಕೇಂಬ್ರಿಡ್‌್ಜ ವಿಶ್ವವಿದ್ಯಾಲಯದ ಭೂವಿಜ್ಞಾನಿ ಜಾಕ್ಸನ್ ಎಂಬುವವರು ಆರು ತಿಂಗಳ ಮೊದಲೇ ಮುನ್ಸೂಚನೆ ನೀಡಿದ್ದರು. ಡೆಹ್ರಾಡೂನ್‌ನ ‘ವಾಡಿಯ ಇನ್‌ಸ್ಟಿಟ್ಯೂಟ್‌ ಆಫ್‌ ಹಿಮಾಲಯನ್‌ ಜಿಯಾಲಜಿ’ ಈ ಭೂಕಂಪದ ಬಗ್ಗೆ ಮುನ್ಸೂಚನೆ ನೀಡಿತ್ತು.

* ಮುನ್ಸೂಚನೆ ಇದ್ದರೂ ಭಾರಿ ಪ್ರಮಾಣದ ಸಾವು-ನೋವು ತಪ್ಪಿಸಲು ಸಾಧ್ಯವಾಗಲಿಲ್ಲ ಏಕೆ?
ಈ ಮುನ್ಸೂಚನೆಗಳು ಒಂದು ರೀತಿ ಹೃದ್ರೋಗಿಗಳಿಗೆ ನೀಡುವ ಸಲಹೆ, ಸೂಚನೆಯಂತೆ. ಹೃದ್ರೋಗ ಇರುವ ವ್ಯಕ್ತಿಗೆ ಹೃದಯಾಘಾತ ಆಗುತ್ತದೆ ಎಂಬುದು ಖಚಿತ. ಆದರೂ ಅದನ್ನು ತಪ್ಪಿಸಲು ಆಗುವುದಿಲ್ಲ. ನಿರ್ದಿಷ್ಟವಾಗಿ ಇದೇ ದಿನದಲ್ಲಿ ಅಪಾಯ ಸಂಭವಿಸುತ್ತದೆ ಎಂಬುದನ್ನು ಭೂಕಂಪದ ವಿಷಯದಲ್ಲೂ ನಿಖರವಾಗಿ ಹೇಳಲಾಗುವುದಿಲ್ಲ. ಆದರೆ, ಭೂಕಂಪದ ಮುನ್ಸೂಚನೆ ಸಿಕ್ಕ ಬಳಿಕ ಎಚ್ಚರ ವಹಿಸಿದ್ದರೆ ಸಾವು ನೋವಿನ ಪ್ರಮಾಣವನ್ನು ಖಂಡಿತವಾಗಿಯೂ ಕಡಿಮೆಗೊಳಿಸುವುದಕ್ಕೆ ಅವಕಾಶ ಇತ್ತು.

* ಭೂಕಂಪದ ಹಾನಿ ಕಡಿಮೆ ಮಾಡಲು ತಂತ್ರಜ್ಞಾನಗಳಿವೆಯೇ?
ನೇಪಾಳದ ಭೂಕಂಪ ರಿಕ್ಟರ್‌ ಮಾಪಕದಲ್ಲಿ 7.9ರಷ್ಟು ತೀವ್ರತೆ ಹೊಂದಿತ್ತು. ಜಪಾನ್‌ನಲ್ಲಿ ಇಷ್ಟು ಪ್ರಮಾಣದ ಭೂಕಂಪ ಸಂಭವಿಸಿದರೆ ಖಂಡಿತಾ ಇಷ್ಟೊಂದು ಪ್ರಮಾಣದಲ್ಲಿ ಸಾವು ನೋವು ಸಂಭವಿಸುತ್ತಿರಲಿಲ್ಲ. ಭೂಕಂಪದಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಜಪಾನ್‌ ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತದೆ. ಅಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸುವಾಗ ಅಡಿಪಾಯದಲ್ಲಿ ಸ್ಪ್ರಿಂಗ್‌ಗಳನ್ನು ಅಳವಡಿಸುತ್ತಾರೆ. ಅಲ್ಲಿ ನಿರ್ಮಾಣಗೊಳ್ಳುವ ಕಟ್ಟಡಗಳು ಸಾಧಾರಣ ಭೂಕಂಪಗಳನ್ನು ತಾಳಿಕೊಳ್ಳುವ ಶಕ್ತಿ ಹೊಂದಿವೆ.

* ಭಾರತದ ಯಾವ ಪ್ರದೇಶಗಳು ಭೂಕಂಪದ ಅಪಾಯ ಎದುರಿಸುತ್ತಿವೆ?
ನಮ್ಮ ದೇಶದ ಹಿಮಾಲಯದ ತಪ್ಪಲಿನ ಭೂಪ್ರದೇಶಗಳು, ಪಂಜಾಬ್‌, ಹಿಮಾಚಲ ಪ್ರದೇಶ, ಉತ್ತರಾಖಂಡ ರಾಜ್ಯಗಳು ಸಂಭವನೀಯ ಭೂಕಂಪದ ಅಪಾಯ ಎದುರಿಸುತ್ತಿರುವ  ಒಂದನೇ ವಲಯದಲ್ಲಿ ಬರುತ್ತವೆ. ದೆಹಲಿ, ಲಖನೌದಂತಹ ಪ್ರಮುಖ ನಗರಗಳು ಎರಡನೇ ವಲಯದಲ್ಲಿವೆ. ಹಾಗಾಗಿ ಈ ಪಟ್ಟಣಗಳಲ್ಲಿ  ಭೂಕಂಪ ಎದುರಿಸಲು ಸೂಕ್ತವಾದ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು.

* ಕರ್ನಾಟಕದಲ್ಲಿ ಭೂಕಂಪ ಉಂಟಾಗುವ ಸಂಭವ ಇದೆಯೇ?
ದಕ್ಷಿಣ ಭಾರತದ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದ ಭೂಕಂಪ ಸಂಭವಿಸುವ ಸಾಧ್ಯತೆ ಕಡಿಮೆ. ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಸಂಭವನೀಯ ಭೂಕಂಪ ಎದುರಿಸುವ ನಾಲ್ಕನೇ ವಲಯದಲ್ಲಿವೆ. ಆದರೂ, ಸಣ್ಣ ಪ್ರಮಾಣದ ಭೂಕಂಪ ಇಲ್ಲೂ ಸಂಭವಿಸುವ ಸಾಧ್ಯತೆ ಇದೆ. ಭೂಶಿಲಾ ಫಲಕಗಳಲ್ಲಿ ಅನೇಕ ಬಿರುಕುಗಳಿವೆ. ನದಿಗಳು ಹರಿಯುವ ಕಡೆಗಳಲ್ಲಿ ಸಾಮಾನ್ಯವಾಗಿ ಇಂತಹ ಬಿರುಕುಗಳಿರುವುದು ಹೆಚ್ಚು. ಎಲ್ಲೋ ಭೂಕಂಪ ಸಂಭವಿಸಿದರೂ ಅಲ್ಲಿ ಒತ್ತಡದಿಂದ ಉಂಟಾಗುವ ಶಕ್ತಿ ಇಂತಹ ಬಿರುಕುಗಳ ಉದ್ದಕ್ಕೂ ಪಸರಿಸುತ್ತದೆ. ಕಾವೇರಿ, ನರ್ಮದಾ, ಗೋದಾವರಿ ನದಿಗಳು ಹರಿಯುವ ಕಡೆಗಳಲ್ಲಿ ಭೂಶಿಲಾ ಫಲಕಗಳಲ್ಲಿ ಬಿರುಕು ಇದೆ.

ಕರಾವಳಿ ತೀರದುದ್ದಕ್ಕೂ ಭೂಶಿಲಾ ಫಲಕದಲ್ಲಿ ಬಿರುಕು ಇದೆ. ಹಾಗಾಗಿಯೇ ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗ ಮಂಗಳೂರಿನಲ್ಲೂ ಕೆಲವರಿಗೆ ಭೂಮಿ ನಡುಗಿದ ಅನುಭವ ಆಗಿದೆ. ಕರಾವಳಿ ತೀರದಲ್ಲಿರುವ ಬಿರುಕು ಮಂಗಳೂರು ನಗರದ ಮೂಲಕ ಹಾದು ಹೋಗುತ್ತದೆ. ಮಂಗಳೂರು ಸಹಿತ ಕರಾವಳಿ ತೀರದ ಪಟ್ಟಣಗಳಲ್ಲಿ ಭೂಕಂಪದ  ಆತಂಕ ಖಂಡಿತವಾಗಿಯೂ ಇದೆ.
ಬೆಂಗಳೂರಿನ ತಳದಲ್ಲಿ ಕಠಿಣವಾದ ಗ್ರಾನೈಟ್‌ ಶಿಲೆಯ ಪದರ ಇರುವುದರಿಂದ ಇಲ್ಲಿ ದೊಡ್ಡ ಪ್ರಮಾಣದ ಭೂಕಂಪ ಸಂಭವಿಸುವ ಸಾಧ್ಯತೆ ತೀರಾ ಕಡಿಮೆ. ಆದರೆ, ಇಲ್ಲೂ ಆಗಾಗ್ಗೆ ಸಣ್ಣ ಪ್ರಮಾಣದ ಭೂಕಂಪನಗಳು ಸಂಭವಿಸಿವೆ. 2001ರಲ್ಲಿ (ರಿಕ್ಟರ್‌ ಮಾಪಕದಲ್ಲಿ 5.2ರಷ್ಟು), 1916ರಲ್ಲಿ (5.1) ಹಾಗೂ 1824ರಲ್ಲಿ  (4.9) ಬೆಂಗಳೂರಿನಲ್ಲಿ ಭೂಮಿ ಕಂಪಿಸಿದೆ.

* ಭೂಕಂಪವನ್ನು ತಾಳಿಕೊಳ್ಳುವ ತಂತ್ರಜ್ಞಾನ ಬಳಸಿ ಕಟ್ಟಡ ನಿರ್ಮಿಸಬೇಕಾದ ಅಗತ್ಯ ನಮ್ಮ ರಾಜ್ಯದಲ್ಲೂ ಇದೆಯೇ?
ಖಂಡಿತವಾಗಿಯೂ ಇದೆ. ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಗಗನಚುಂಬಿ ಕಟ್ಟಡಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಭೂಕಂಪದಿಂದ ರಕ್ಷಿಸಿಕೊಳ್ಳಬೇಕಾದರೆ  ಭೂಮಿಯ ಮೇಲ್ಗಡೆ ಕಟ್ಟಡದ ಎತ್ತರ ಎಷ್ಟಿದೆಯೋ  ಅದರ ಶೇ 30 ಭಾಗದಷ್ಟು ತಳಪಾಯ ಭೂಮಿಯ ಒಳಗೂ ಇರಬೇಕು. ಆದರೆ, ನಮ್ಮಲ್ಲಿ ಭೂಕಂಪ ಎದುರಿಸುವುದಕ್ಕೆ ಸೂಕ್ತ ನೀತಿಯೇ ಇಲ್ಲ. ಕಟ್ಟಡ ನಿರ್ಮಿಸುವಾಗ ವಾಸ್ತುಶಾಸ್ತ್ರಜ್ಞರೂ  ಈ ಬಗ್ಗೆ ಗಮನ ವಹಿಸುವುದಿಲ್ಲ. ನಗರ ಪಾಲಿಕೆಗಳ ಅಧಿಕಾರಿಗಳು ಕಟ್ಟಡ ಕಟ್ಟುವಾಗ ಸೆಟ್‌ಬ್ಯಾಕ್‌ ಎಷ್ಟು ಬಿಡಲಾಗಿದೆ ಎಂದು ನೋಡುತ್ತಾರೆಯೇ ವಿನಾ ತಳಪಾಯ ಎಷ್ಟು ಗಟ್ಟಿಯಾಗಿದೆ ಎಂದು ಪರಿಶೀಲಿಸುವುದೇ ಇಲ್ಲ. ಕಟ್ಟಡಕ್ಕೆ ಪರವಾನಗಿ ನೀಡುವಾಗ ಕಟ್ಟಡದ ಮಾಲೀಕರು ಸುರಕ್ಷತಾ ಕ್ರಮಗಳನ್ನು ಪಾಲಿಸಿದ್ದಾರೆಯೇ ಎಂದು ಆಗಾಗ್ಗೆ ತಪಾಸಣೆ ನಡೆಸಬೇಕು. ಈ ತಪಾಸಣಾ ತಂಡದಲ್ಲಿ ಸಿವಿಲ್‌ ಎಂಜಿನಿಯರ್‌ ಹಾಗೂ ಯೋಜನಾಧಿಕಾರಿಯ ಜತೆಗೆ ಭೂವಿಜ್ಞಾನಿಯೂ ಇರಬೇಕು.

ಮುಖ್ಯವಾಗಿ ಜನರಲ್ಲೂ ಅರಿವು ಹೆಚ್ಚಬೇಕು. ನಮ್ಮಲ್ಲಿ ನಿಯಮ ರೂಪಿಸಿದರೆ ಅದನ್ನು ಉಲ್ಲಂಘಿಸುವವರೇ ಜಾಸ್ತಿ. ಜಪಾನಿನಲ್ಲಿ ಭೂಕಂಪದ ಹಾನಿ ಕಡಿಮೆಗೊಳಿಸುವ ಸಲುವಾಗಿ ರೂಪಿಸಿರುವ ನೀತಿಯನ್ನು ಎಲ್ಲ ನಾಗರಿಕರೂ ಚಾಚೂ ತಪ್ಪದೆ ಪಾಲಿಸುತ್ತಾರೆ. ಹಾಗಾಗಿ ಅಲ್ಲಿ ಪದೇ ಪದೇ  ಭೂಕಂಪ ಸಂಭವಿಸಿದರೂ ಹಾನಿಯ ಪ್ರಮಾಣ ತೀರಾ ಕಡಿಮೆ ಇರುತ್ತದೆ.

* ಜಲಾಶಯಗಳೂ ಭೂಕಂಪಕ್ಕೆ ಕಾರಣವಾಗುತ್ತವೆ ಎನ್ನುತ್ತಾರೆ, ನಿಜವೇ?
ಭಾರಿ ಪ್ರಮಾಣದ ಜಲರಾಶಿಯನ್ನು ಒಂದೇ ಕಡೆ ಸಂಗ್ರಹಿಸಿದಾಗ ಅಲ್ಲಿ ಸೃಷ್ಟಿಯಾಗುವ ಶಕ್ತಿಯ ಒತ್ತಡವು ಭೂಶಿಲಾ ಫಲಕಗಳ ಬಿರುಕುಗಳ ಮೂಲಕ ಹಾದುಹೋಗುತ್ತದೆ. ಇದೂ ಸಣ್ಣ ಪ್ರಮಾಣದ ಭೂಕಂಪನಕ್ಕೆ ಕಾರಣ ಆಗಬಲ್ಲದು. 1967ರಲ್ಲಿ ಸಂಭವಿಸಿದ ಭೂಕಂಪದಿಂದ ಕೊಯ್ನಾ ಅಣೆಕಟ್ಟೆಗೆ ಹಾನಿ ಉಂಟಾಗಿತ್ತು.  ನಮ್ಮ ರಾಜ್ಯದಲ್ಲಿ 11 ದೊಡ್ಡ ಪ್ರಮಾಣದ ಅಣೆಕಟ್ಟೆಗಳಿವೆ.  ಇವುಗಳ ಸುರಕ್ಷತೆ ಬಗ್ಗೆಯೂ ಕಾಳಜಿ ವಹಿಸಬೇಕು.

ಪಶ್ಚಿಮಘಟ್ಟದಲ್ಲಿರುವ ಜಲಾಶಯಗಳು ಭೂಕಂಪದಿಂದ ಹೆಚ್ಚು ಆತಂಕ ಎದುರಿಸುತ್ತಿವೆ. ಭೂಕಂಪ ಉಂಟಾದಾಗ ಬೆಟ್ಟಗಳಲ್ಲಿ ಭೂಕುಸಿತ ಉಂಟಾಗುವ  ಸಾಧ್ಯತೆ ಹೆಚ್ಚು. ಈ ಕಾರಣಕ್ಕಾಗಿಯೇ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಅಣೆಕಟ್ಟು ನಿರ್ಮಿಸುವಾಗ ಆ ನದಿಯ ಕೆಳಗಿನ ಗ್ರಾಮಗಳನ್ನು ಸ್ಥಳಾಂತರಿಸುತ್ತಾರೆ.

ಚಿತ್ರಗಳು: ಸವಿತಾ ಬಿ.ಆರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT