ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪ ನಿಯಂತ್ರಿಸುವ ಬಗೆ

Last Updated 30 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಸುಮಾರು 16 ಕೋಟಿ ವರ್ಷಗಳ ಹಿಂದೆ ಭಾರತೀಯ ಭೂಫಲಕ ಅಂಟಾರ್ಟಿಕಾದಿಂದ ಒಡೆದು ವರ್ಷಕ್ಕೆ 13 ಸೆಂಟಿಮೀಟರ್ ವೇಗದಲ್ಲಿ ಉತ್ತರ ಈಶಾನ್ಯದತ್ತ ಸಂಚ ರಿಸಲು ಆರಂಭಿಸಿತು. ಐದು ಕೋಟಿ ವರ್ಷಗಳ ಹಿಂದೆ ಈ ಭೂಫಲಕ, ಯುರೇಷಿಯಾ ಭೂಫಲಕಕ್ಕೆ ಡಿಕ್ಕಿ ಹೊಡೆ ಯಿತು. ಭಾರತೀಯ ಭೂಫಲಕ ಈಗಲೂ ವರ್ಷಕ್ಕೆ ಐದು ಸೆಂ.ಮೀ. ವೇಗದಲ್ಲಿ ಉತ್ತರದತ್ತ ಸಂಚರಿಸುತ್ತಲೇ ಇದೆ.

ಎರಡೂ ಭೂಫಲಕಗಳು ಪ್ರತ್ಯೇಕ ಖಂಡಗಳಾಗಿದ್ದು, ಭೂಫಲಕಗಳ ನಿರಂತರ ಘರ್ಷಣೆಯಿಂದಾಗಿ ಹಿಮಾ ಲಯ ಪರ್ವತ ಶ್ರೇಣಿ ಸೃಷ್ಟಿಯಾಯಿತು. ಈ ಒತ್ತುವಿಕೆಯ ತೊಯ್ದಾಟ ಅತಿಯಾಗಿ ಬಂಡೆಕಲ್ಲುಗಳ ಶಕ್ತಿಯನ್ನೂ ಮೀರಿ ಮುನ್ನಡೆಯಿತು. ಹೀಗಾಗಿಯೇ ಹಿಮಾಲಯ ಪ್ರದೇಶ ‘ಸಕ್ರಿಯ ಭೂಕಂಪ ವಲಯ’ ಎಂಬುದಾಗಿ ಗುರುತಿಸಿಕೊಂಡಿತು.

ನಮಗೆ ತಿಳಿದಂತೆ, ಹಿಂದೆ ಈ ವಲಯದಲ್ಲಿ ರಿಕ್ಟರ್ ಮಾಪಕದಲ್ಲಿ ಎಂಟಕ್ಕಿಂತ ಅಧಿಕ ಪ್ರಮಾಣದಲ್ಲಿದ್ದ ಪ್ರಮುಖ ನಾಲ್ಕು ಭೂಕಂಪಗಳು ಸಂಭವಿಸಿವೆ. 1897ರ ಶಿಲ್ಲಾಂಗ್, 1905ರ ಕಾಂಗ್ರಾ, 1934ರ ಬಿಹಾರ-ನೇಪಾಳ ಮತ್ತು 1950ರ ಅಸ್ಸಾಂ-ಚೀನಾ ಗಡಿ ಭಾಗದ ಭೂಕಂಪಗಳು ಬಹಳ ವಿನಾಶ ಉಂಟುಮಾಡಿದ್ದವು.

ಭೂಕಂಪಗಳನ್ನು ಮೊದಲೇ ಅಂದಾಜಿಸಲಾಗದು. ಹೀಗಾಗಿ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸುವು ದೆಂದರೆ ಭೂಕಂಪ ಎದುರಿಸಲು ಸೂಕ್ತವಾಗಿ ಸಜ್ಜಾಗು ವುದು. ಇದಕ್ಕೊಂದು ನಿದರ್ಶನ ಎಂದರೆ 2011ರ ಮಾರ್ಚ್ 11ರಂದು ಸಂಭವಿಸಿದ ಜಪಾನ್ ಭೂಕಂಪ. ಅಂದು ರಿಕ್ಟರ್‌ ಮಾಪಕದಲ್ಲಿ ಒಂಬತ್ತರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದರೂ ಸತ್ತವರ ಸಂಖ್ಯೆ ಬರಿ 20 ಸಾವಿರ. ಉತ್ತಮ ತಯಾರಿಯೇ ಇಷ್ಟು ಕಡಿಮೆ ಜೀವಹಾನಿಗೆ ಕಾರಣವಾಯಿತು. ಆದರೆ 2010ರ ಜನವರಿ 12ರಂದು ಹೈಟಿಯಲ್ಲಿ ಸಂಭವಿಸಿದ್ದ, ರಿಕ್ಟರ್‌ ಮಾಪಕದಲ್ಲಿ ಕೇವಲ ಏಳರಷ್ಟಿದ್ದ ಭೂಕಂಪಕ್ಕೆ ಮೂರು ಲಕ್ಷ ಮಂದಿ ಸತ್ತಿದ್ದರು. ಭೂಕಂಪ ಎದುರಿಸಲು ಸೂಕ್ತ ತಯಾರಿ ನಡೆಸದೆ ಇದ್ದುದೇ ಇದಕ್ಕೆ ಕಾರಣವಾಗಿತ್ತು.

ರಿಕ್ಟರ್‌ ಮಾಪಕದಲ್ಲಿ ದಾಖಲಾಗುವ ಭೂಕಂಪದ ಪ್ರಮಾಣಕ್ಕೂ, ಭೂಕಂಪದಿಂದ ಹೊರಹೊಮ್ಮುವ ಶಕ್ತಿಗೂ ಇರುವ ಸಂಬಂಧವನ್ನು ತಿಳಿಯುವುದು ಅತಿ ಅಗತ್ಯ. ರಿಕ್ಟರ್ ಮಾಪಕದಲ್ಲಿ ಆರರಷ್ಟಿರುವ ಭೂಕಂಪ ಹಿರೋಶಿಮಾ ಅಣು ಬಾಂಬ್‌ಗೆ ಸಮನಾದ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ. ಒಂದೊಂದು ಯೂನಿಟ್ ಹೆಚ್ಚಾದಷ್ಟೂ ಶಕ್ತಿ ಹೊರಹೊಮ್ಮುವ ಪ್ರಮಾಣ 30 ಪಟ್ಟು ಅಧಿಕವಾಗುತ್ತದೆ. ಅಂದರೆ ರಿಕ್ಟರ್ ಮಾಪಕದಲ್ಲಿ ಏಳರಷ್ಟಿರುವ ಭೂಕಂಪ ಹಿರೋಶಿಮಾ ಅಣು ಬಾಂಬ್‌ನ 30 ಪಟ್ಟು ಅಧಿಕ ಶಕ್ತಿಯನ್ನು ಹೊರ ಹೊಮ್ಮಿಸಿದರೆ, ಎಂಟರಷ್ಟು ತೀವ್ರತೆಯ ಭೂಕಂಪ ಹಿರೋಶಿಮಾ ಅಣು ಬಾಂಬ್‌ನ 900 ಪಟ್ಟು ಅಧಿಕ ಶಕ್ತಿ ಹೊರ ಹೊಮ್ಮಿಸುತ್ತದೆ.

ಭೂಕಂಪದಿಂದ ರಕ್ಷಿಸಿಕೊಳ್ಳಲು ಮಾಡಬಹುದಾದ ಉತ್ತಮ ಕೆಲಸ ಎಂದರೆ ಸಾರ್ವಜನಿಕರು ಮತ್ತು ನಾಗರಿಕ ಆಡಳಿತವನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿರುವುದು. ಭಾರತವು 5, 6, 3 ಮತ್ತು 2ನೇ ಭೂಕಂಪ ವಲಯದಲ್ಲಿ ಬರುತ್ತದೆ. 5 ಮತ್ತು 6ನೇ ವಲಯಗಳಲ್ಲಿ ಭೂಕಂಪದ ತೀವ್ರತೆ ಅಧಿಕ. ಇಲ್ಲೆಲ್ಲ ಆಸ್ಪತ್ರೆಗಳು, ಅಗ್ನಿಶಾಮಕ, ಪೊಲೀಸ್, ಶಾಲೆಗಳಂತಹ ಪ್ರಮುಖ ಕಟ್ಟಡಗಳನ್ನು ಭೂಕಂಪ ಸಂಭವಿಸಿದರೂ ಕುಸಿಯದ ರೀತಿಯಲ್ಲಿ ನಿರ್ಮಿಸಬೇಕಾಗುತ್ತದೆ.

ರ್‍್ಯಾಪಿಡ್ ವಿಷುಯಲ್ ಇನ್‌ಸ್ಪೆಕ್ಷನ್‌ನಂತಹ ತಂತ್ರಗ ಳಿಂದ ಕಟ್ಟಡಗಳ ಸಾಮರ್ಥ್ಯವನ್ನು ಅಂದಾಜಿಸಬಹುದು. ರೆಟ್ರೊಫಿಟ್ಟಿಂಗ್ ಮೂಲಕ ಕಟ್ಟಡಗಳನ್ನು ಬಲಿಷ್ಠಗೊಳಿ ಸಬಹುದು. ಭೂಕಂಪಗಳ ಬಗ್ಗೆ ಶಾಲಾ ಮಕ್ಕಳಿಗೆ ಆಗಾಗ ಸೂಕ್ತ ಮಾಹಿತಿ, ಭೂಕಂಪದಿಂದ ಪಾರಾಗುವ ಬಗ್ಗೆ ತಿಳಿವಳಿಕೆ ನೀಡುತ್ತಿರಬೇಕು. ಈ ಹಿಂದೆ ಸಂಭವಿಸಿದ ಭೂಕಂಪ ಈಗ ಸಂಭವಿಸಿದರೆ ಏನಾಗಬಹುದು ಎಂಬುದನ್ನು ಮನವರಿಕೆ ಮಾಡುವ ಪ್ರಯತ್ನ ಆಗಾಗ ನಡೆಯುತ್ತಿರಬೇಕು.

ಕಾಂಗ್ರಾ ಭೂಕಂಪದ ಬಗ್ಗೆ 2013ರಲ್ಲಿ ಮತ್ತು ಶಿಲ್ಲಾಂಗ್ ಭೂಕಂಪಗಳ ಬಗ್ಗೆ 2014ರಲ್ಲಿ ಇಂದಿನ ಸಂಭಾವ್ಯ ಅನಾಹುತಗಳನ್ನು ಅಂದಾಜಿಸುವ ಪ್ರಯತ್ನ ನಡೆದಿತ್ತು. ಈಗಿನ ಜನಸಂಖ್ಯಾ ಸಾಂದ್ರತೆಯನ್ನು ಗಮನಿಸಿದರೆ, ಕಾಂಗ್ರಾದಲ್ಲಿ ಈಗ ಭೂಕಂಪ ಸಂಭವಿ ಸಿದರೆ ಅದು 10 ಲಕ್ಷ ಜನರನ್ನು ಬಲಿ ತೆಗೆದುಕೊಂಡೀತು ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು.

ಭೂಕಂಪ ಸಂಭವಿಸಿದಾಗ ಸುರಕ್ಷಿತ ಸ್ಥಳಗಳತ್ತ ಧಾವಿಸಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾವೆಲ್ಲ ನಮ್ಮ ಅರ್ಧ ಜೀವನವನ್ನು ಕಳೆಯುವುದು ನಮ್ಮ ಮನೆಗಳಲ್ಲಿ. ಉಳಿದ ಸಮಯ ಕಳೆಯುವುದು ನಮ್ಮ ಕೆಲಸದ ಸ್ಥಳಗಳಲ್ಲಿ ಅಥವಾ ಶಾಲೆಗಳಲ್ಲಿ. ಹೀಗಾಗಿ ಈ ಸ್ಥಳಗಳಿಗೆ ಸಮೀಪದಲ್ಲಿ ಇರುವ ಸುರಕ್ಷಿತ ಸ್ಥಳಗಳನ್ನು ಮೊದಲೇ ಗುರುತಿಸುವ ಕೆಲಸ ನಡೆಯಬೇಕು. ಭೂಕಂಪ ಸಂಭವಿಸಿದರೆ ಯಾವ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂಬುದನ್ನು ಮೊದಲೇ ಗಮನಿಸಿಕೊಂಡಿರಬೇಕು.

ಮನೆಯಿಂದ ಹೊರಬಂದು ಸುರಕ್ಷಿತ ಸ್ಥಳದಲ್ಲಿ ನೆಲೆಸದೆ ಇದ್ದರೆ ಎಂತಹ ದುರಂತ ಸಂಭವಿಸಬಹುದು ಎಂದು ಊಹಿಸುವುದೂ ಕಷ್ಟ. 2005ರ ಅಕ್ಟೋಬರ್‌ 8ರಂದು ಮುಜಾಫರಾಬಾದ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 75 ಸಾವಿರ ಮಂದಿ ಸತ್ತಿದ್ದರು. ಹೆಚ್ಚಿನ ವರ ಮೃತದೇಹಗಳು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಪತ್ತೆಯಾಗಿದ್ದವು.

ನೇಪಾಳದಲ್ಲಿ ಏಪ್ರಿಲ್‌ 25ರಂದು ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಕಡಿಮೆಯೇ ಎನ್ನಬೇಕು. ಏಕೆಂದರೆ ಭೂಕಂಪದ ಕೇಂದ್ರ ಬಿಂದು ಇದ್ದುದು  ಜನದಟ್ಟಣೆಯ ಕಠ್ಮಂಡುವಿನಿಂದ 80 ಕಿ.ಮೀ. ದೂರದಲ್ಲಿ. ಮೇಲಾಗಿ ಕೇಂದ್ರ ಬಿಂದುವಿನ ನಾಭಿ ಕೇಂದ್ರ (ಫೋಕಲ್‌ ಡೆಪ್ತ್‌) ಇದ್ದುದು ಕೇವಲ 15 ಕಿ.ಮೀ. ಆಳದಲ್ಲಿ. ಇಂತಹ ಸ್ಥಿತಿಯಲ್ಲಿ ಕೇಂದ್ರ ಬಿಂದುವಿನ ಸಮೀಪದಲ್ಲಿ ಅನಾಹುತ ಜಾಸ್ತಿ.

ಒಂದು ವೇಳೆ ನಾಭಿ ಕೇಂದ್ರ 40 ಕಿ.ಮೀ. ಆಳದಲ್ಲಿ ಇದ್ದಿದ್ದರೆ ದೂರದ ಕಠ್ಮಂಡುವಿನಂತಹ ಸ್ಥಳಗಳಲ್ಲಿ ಹಾನಿಯ ಪ್ರಮಾಣ ಇನ್ನಷ್ಟು ಹೆಚ್ಚುತ್ತಿತ್ತು. ಅಂದರೆ ನಾಭಿ ಕೇಂದ್ರದ ಆಳ ಹೆಚ್ಚಿದಷ್ಟೂ ಭೂಕಂಪ ವಿಸ್ತಾರವಾದ ಪ್ರದೇಶಗಳಿಗೆ ವ್ಯಾಪಿಸಿ ಹಾನಿ ಉಂಟುಮಾಡುತ್ತದೆ.
ಮುಂದಿನ ದಿನಗಳಲ್ಲಿ ರಿಕ್ಟರ್ ಮಾಪಕದಲ್ಲಿ ಎಂಟರ ಷ್ಟಿರುವ ಭೂಕಂಪ ಸಂಭವಿಸಲಿದೆ ಎಂಬ ವದಂತಿಯನ್ನು ಇದೀಗ ಹಬ್ಬಿಸಲಾಗುತ್ತಿದೆ.

ಇಂತಹ ಗಾಳಿ ಸುದ್ದಿಗಳಿಗೆ ತೆರೆ ಬೀಳಲೇಬೇಕು. ಒಂದು ಪ್ರಬಲ ಕಂಪನದ ಬಳಿಕ ಮರು ಕಂಪನ ಕೆಲವಾರು ಸಮಯ ಇರುತ್ತದೆ. 2008ರ ಮೇ 12ರಂದು ಚೀನಾದ ಸಿಚುವಾನ್‌ನಲ್ಲಿ ರಿಕ್ಟರ್‌ ಮಾಪಕ ದಲ್ಲಿ 7.9ರಷ್ಟಿದ್ದ ಭೂಕಂಪ ಸಂಭವಿಸಿತ್ತು. ಬಳಿಕ ರಿಕ್ಟರ್‌ ಮಾಪಕದಲ್ಲಿ ಐದರಷ್ಟಿದ್ದ ಮರುಕಂಪನಗಳು ಏಳು ತಿಂಗಳ ಕಾಲ ಮುಂದುವರಿದಿದ್ದವು.

(ಲೇಖಕ ರಾಷ್ಟ್ರೀಯ ಭೂಗರ್ಭ ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT