ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪ ನೀಡಿದ ಪಾಠ!

ಅಕ್ಷರ ಗಾತ್ರ

ತಂತ್ರಜ್ಞಾನದ ಅದ್ಭುತಗಳನ್ನು ದುಡಿಸಿಕೊಳ್ಳುವ ಟಿ.ವಿ. ವಾಹಿನಿಗಳಿಗೆ  ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತುವಲ್ಲಿ ಏಕಿಷ್ಟು ಉತ್ಸಾಹ?
ಸುನಾಮಿ, ಭೂಕಂಪ, ಚಂಡಮಾರುತ ಇತ್ಯಾದಿ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಸುದ್ದಿ ಮಾಧ್ಯಮಗಳು, ಅದರಲ್ಲೂ ರೇಡಿಯೊ ಮತ್ತು ಟಿ.ವಿ. ಮಾಧ್ಯಮಗಳು ವಹಿಸುವ ಪಾತ್ರ ಬಹಳ ಮಹತ್ವದ್ದು.  ಸಾಧಾರಣ ಮೊಬೈಲ್‌ನಲ್ಲಿಯೂ ವಿಡಿಯೊ ಚಿತ್ರೀಕರಣ ಮಾಡಲು ಸಾಧ್ಯವಾಗಿರುವ ಇಂದಿನ ದಿನಗಳಲ್ಲಿ ಸಾರ್ವಜನಿಕರೂ ತತ್-ಕಾಲದಲ್ಲಿಯೇ ವಿದ್ಯಮಾನಗಳನ್ನು ಜನರವರೆಗೆ ತಲುಪಿಸಲು ಸಾಧ್ಯವಾಗಿದೆ. ಆದರೆ, ತಂತ್ರ ಮತ್ತು ತಂತ್ರಜ್ಞಾನದ ಅದ್ಭುತಗಳನ್ನು ದುಡಿಸಿಕೊಳ್ಳುವ ಟಿ.ವಿ. ವಾಹಿನಿಗಳು, ಜನರಲ್ಲಿ ಮೂಢನಂಬಿಕೆಯನ್ನು ಬಿತ್ತುವ ಕುರಿತು ಏಕೆ ಅಷ್ಟೊಂದು ಉತ್ಸಾಹ ತೋರುತ್ತವೆ ಎನ್ನುವುದೇ ವಿಪರ್ಯಾಸದ ಸಂಗತಿ.

ಮೂಢನಂಬಿಕೆಗಳ ಬೇರೇ ಭಯ, ಅನಿಶ್ಚಿತತೆ. ನೈಜ ಸುದ್ದಿಗಳನ್ನು, ವೈಜ್ಞಾನಿಕ ವಿಶ್ಲೇಷಣೆಗಳನ್ನು ನೀಡುವ ಮೂಲಕ ಜನರ ಭಯವನ್ನು ನಿವಾರಿಸಿ, ಅರಿವನ್ನು ಮೂಡಿಸುವ ಬದಲು ವಾಹಿನಿಗಳು ಅವರಲ್ಲಿ ಇನ್ನಷ್ಟು ಗೊಂದಲವನ್ನು ಸೃಷ್ಟಿ ಮಾಡುವ ಭಯೋತ್ಪಾದಕರ ತರಹ ವರ್ತಿಸುತ್ತಿವೆ. ಹೇಗಾದರೂ ಮಾಡಿ ತಮ್ಮ ಚಾನಲನ್ನು ನೋಡುವಂತೆ ಮಾಡುವ ಉದ್ದೇಶ ಸರಿಯೇ; ಆದರೆ ಅದಕ್ಕಾಗಿ, ಹೋದ ವಾರ ನೇಪಾಳದಲ್ಲಿ ನಡೆದ ಶತಮಾನದ ಭೀಕರ ದುರಂತದ ಸನ್ನಿವೇಶವನ್ನು ಅಪಬಳಕೆ ಮಾಡಿಕೊಳ್ಳುವುದು ಮಾತ್ರ ಸಮೂಹ ಮಾಧ್ಯಮದವರಿಗೆ ಗೌರವ ತರುವ ಕೆಲಸವಲ್ಲ.

ವಾಹಿನಿಯೊಂದರಲ್ಲಿ ಹಿಂದಿನ ವಾರ ಪ್ರಸಾರವಾದ ಒಂದು ವಿಶೇಷ ಕಾರ್ಯಕ್ರಮದಲ್ಲಿ, ನೇಪಾಳದಲ್ಲಿ ಇದೀಗ ಆದ ಭೂಕಂಪ ಏನೂ ಅಲ್ಲ, ಇದಕ್ಕೂ ಘೋರ ಪ್ರಳಯ ಬರಲಿದೆ; ಹಿಮಾಲಯವೇ ಕಂಪಿಸಿ ಕುಸಿಯಲಿದೆ ಎಂದು ಬಣ್ಣಿಸುವ ಒಂದು ಕಾರ್ಯಕ್ರಮವಿತ್ತು. ಎಷ್ಟರಮಟ್ಟಿಗೆ ಎಂದರೆ, ಅವರ ಶೈಲಿಯಲ್ಲಿ ಕೆಟ್ಟ ಹಿನ್ನೆಲೆ ಸಂಗೀತ, ಸದ್ದುಗಳನ್ನು ಹಾಕಿ, ಇನ್ನೇನು ಅದು ಮುಂದಿನ ವಾರವೇ ಘಟಿಸಲಿದೆ ಎನ್ನುವ ರೀತಿಯಲ್ಲಿ ಬಿಂಬಿಸಿದರು.  ಎರಡು ನಿಮಿಷದಲ್ಲಿ ಹೇಳಬಹುದಾದ ಮಾಹಿತಿಯನ್ನು ಮತ್ತೆ ಮತ್ತೆ ಹೇಳುತ್ತಾ, ಹಾಕಿದ್ದೇ ದೃಶ್ಯಗಳನ್ನು ಹಾಕುತ್ತಾ, ನೋಡುವವರ ಎದೆ ನಡುಗುವಂತೆ ಮಾಡಿದರು. ಅದಕ್ಕೆ ವೈಜ್ಞಾನಿಕ ಕಾರಣ ಕೊಡುವ ಸೋಗಿನಲ್ಲಿ ಹೇಳಿದ್ದು ಯಾವುದೂ ಅರ್ಥವಾಗಲಿಲ್ಲ; ಬಳಸಿದ ಉಜ್ಜೀವಿತ ಚಿತ್ರಗಳೂ ಎಲ್ಲಿಂದಲೋ ತೆಗೆದು, ಹೇಗೆ ಹೇಗೋ ಬಳಸಿದ್ದು. 

ಇನ್ನೂ ದೊಡ್ಡ ವಿಪರ್ಯಾಸವೆಂದರೆ, ಅದೇ ಕಾರ್ಯಕ್ರಮದಲ್ಲಿ ಟಿ.ಆರ್.ಅನಂತರಾಮು ಅವರಂಥ ಮೂವರು ವಿಜ್ಞಾನಿಗಳು ಇದ್ದರು ಎನ್ನುವುದು. ಆದರೆ, ಮೂವತ್ತು ನಿಮಿಷದ ಕಾರ್ಯಕ್ರಮದಲ್ಲಿ 20 ನಿಮಿಷ ವಾಹಿನಿಯವರು ಸ್ವಂತ ವಿದ್ವತ್ತನ್ನು ಮೆರೆದ ನಂತರ ವಿಜ್ಞಾನಿಗಳಿಗೆ ಅವಕಾಶ ಕೊಟ್ಟರು.  ವಿಜ್ಞಾನಿಗಳ ಒಟ್ಟಾರೆ ಮತ ಇದ್ದದ್ದು, ‘ಇದೊಂದು ನೈಸರ್ಗಿಕ ಘಟನೆ, ಇದರ ಕುರಿತು ಭಯಪಟ್ಟರೆ ಪ್ರಯೋಜನವಿಲ್ಲ; ಬದಲಿಗೆ ಇದನ್ನು ಎದುರಿಸುವುದನ್ನು ಕಲಿಯಬೇಕು’ ಎಂಬುದು.

ಇನ್ನೊಂದು ವಾಹಿನಿಯಲ್ಲಿ ಇಂಥದೇ ಭೂಕಂಪ ವೊಂದರಲ್ಲಿ, ನಾಲ್ಕು ತಿಂಗಳ ಕೂಸು, 22 ಗಂಟೆಗಳ ಕಾಲ ಅವಶೇಷಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ಬದುಕುಳಿದಿದ್ದನ್ನು ದೇವರ ಪವಾಡ ಎಂಬಂತೆ ಬಣ್ಣಿಸುತ್ತಾ ಹೋದರು. ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಬ್ಬರು ಮೂಳೆ ಮತ್ತು ಮಕ್ಕಳ ತಜ್ಞರು ಅದು ಸಾಧ್ಯವಾದುದರ ಹಿಂದಿನ ವಿಜ್ಞಾನವನ್ನು ವಿವರಿಸುತ್ತಾ ಹೋದರೂ, ನಿರೂಪಕಿ ಮಾತ್ರ, ಅದೊಂದುಪವಾಡ ಎಂಬ ನಿಲುವನ್ನು ಕಡೆಗೂ ಬಿಟ್ಟುಕೊಡಲೇ ಇಲ್ಲ;
ಟಿ.ವಿ. ವಾಹಿನಿಗೆ ಫೋನ್ ಮಾಡಿದ ಮಹಾ ಪಂಡಿತರೂದೇವರಿದ್ದಾನೆ ಎನ್ನುವುದಕ್ಕೆ ಇದೊಂದು ಸಾಕ್ಷಿಯೆಂದು ಭಕ್ತಿ ಮೆರೆದರು.

ಕಠ್ಮಂಡುವಿನಲ್ಲಿ ಘೋರ ಭೂಕಂಪವಾಗಿ ಲಕ್ಷಾಂತರ ಮನೆಗಳು, ಅರಮನೆಗಳು ನೆಲಸಮವಾದವು; ಆದರೆ, ಅಲ್ಲಿದ್ದ ಪಶುಪತಿನಾಥ ದೇವಾಲಯಕ್ಕೆ ಧಕ್ಕೆ ಆಗಲಿಲ್ಲ. ಇದೊಂದು ವಿಸ್ಮಯವಲ್ಲ, ವಾಸ್ತವ. ಇದನ್ನು ವರದಿ ಮಾಡುವುದರಲ್ಲಿ ತಪ್ಪಿಲ್ಲ.  ಆದರೆ, ಅದನ್ನೇ ವಸ್ತುವನ್ನಾಗಿ ಇಟ್ಟುಕೊಂಡು ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದು ಸರಿಯಲ್ಲ. ಅದರಲ್ಲೂ, ಪಶುಪತಿನಾಥನ ದೇವಸ್ಥಾನಕ್ಕೆ ಹಾನಿಯೇ ಆಗದಿರುವುದು ‘ದೇವರ ಮಹಿಮೆ’ ಎಂದು  ಬಣ್ಣಿಸುವುದು ಕೆಟ್ಟ ವಾರ್ತೋದ್ಯಮ.

ಒಂದು ವಾಹಿನಿಯ ಇನ್ನೊಂದು ವಿಶೇಷ ಕಾರ್ಯ ಕ್ರಮದಲ್ಲಿ, ಅಲ್ಲಿನ ಪ್ರಧಾನ ಅರ್ಚಕ ಗಣೇಶ್ ಭಟ್‌ರ ಸಂದರ್ಶನವಿತ್ತು. ‘ಪಶುಪತಿನಾಥನ ದೇವಸ್ಥಾನಕ್ಕೆ ಹಾನಿಯಾಗದೇ ಇದ್ದುದು ದೇವರ ಮಹಿಮೆಯಿಂದಲೇ ಎಂದು ಗೊತ್ತಾಗುತ್ತದೆ’ ಎಂದು ಅವರೂ  ನುಡಿದರು. ಸಂದರ್ಶಕ, ‘ಈ ದೇವಸ್ಥಾನಕ್ಕೆ ಹಾನಿಯಾ ಗದೇ ಇದ್ದುದ್ದಕ್ಕೆ ಇದರ ನಿರ್ಮಾಣದಲ್ಲಿನ ತಂತ್ರಜ್ಞಾನ ಏನಾದರೂ ಕಾರಣವಿರಬಹುದೇ’ ಎಂಬ ಅರ್ಥಪೂರ್ಣ ವಾದ ಪ್ರಶ್ನೆ ಕೇಳಿದರು. ಆದರೆ, ಅರ್ಚಕರು, ‘ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಅಂತೂ ದೇವಸ್ಥಾನಕ್ಕೆ ಹಾನಿ ಆಗದೇ ಇದ್ದುದ್ದಕ್ಕೆ ದೇವರ ಮಹಿಮೆಯೇ ಕಾರಣ ಎಂದು ತಿಳಿದು ಬರುತ್ತದೆ’ ಎಂದು ಏಳೆಂಟು ಬಾರಿ ಹೇಳಿದರು.  ಇಂಥ ಮಾತುಗಳನ್ನು ಸಮೂಹ ಮಾಧ್ಯಮದಲ್ಲಿ ಪ್ರಸಾರ ಮಾಡಬೇಕಾಗಿತ್ತೇ?

ದೇವರ ಪರಿಕಲ್ಪನೆಯನ್ನು ಈ ರೀತಿ ಮನಬಂದಂತೆ ಕನಿಷ್ಠಮಟ್ಟಕ್ಕೆ ತರುವುದು ದೈವಭಕ್ತಿಯಲ್ಲ. ಇಂಥವರ ಬಾಲಿಶ ಮಾತುಗಳಿಂದ ದೇವರ ಕುರಿತು ಇನ್ನೂ ಸರಳವಾದ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಲಕ್ಷಾಂತರ ಮನೆ
ಗಳು ನಾಶವಾದುವು, ಹಸುಗೂಸುಗಳೂ ಸೇರಿದಂತೆ ಸಾವಿರಾರು ಜನ ಸಜೀವ ಸಮಾಧಿಯಾದರು; ನೂರಾರು ಗರ್ಭಿಣಿಯರು ರಸ್ತೆಗೆ ಬಿದ್ದರು; ಬೇರೆ ಕೆಲವು ದೇವಸ್ಥಾನ ಗಳೂ ಕುಸಿದು ಬಿದ್ದವು. ಸತ್ತವರಲ್ಲಿ ಎಲ್ಲ ಜಾತಿ–ಧರ್ಮದವರಿದ್ದರು, ಎಲ್ಲರಿಗೂ ದೇವರಿದ್ದ, ಎಲ್ಲರೂ ಪಾಪಿಗಳಂತೂ ಅಲ್ಲ, ಆದರೂ ಅಷ್ಟೊಂದು ಜನರ ಮಾರಣಹೋಮಕ್ಕೆ ಏನು ಉತ್ತರ ಕೊಡುತ್ತೀರಿ.

ಕೊನೆಗೂ ಸಂತ್ರಸ್ತರಿಗೆ ನೆರವಿಗೆ ಬಂದದ್ದು ಜಗತ್ತಿನಾದ್ಯಂತದ ಜನ. ಸಹಜೀವಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜನ, ಸಂಸ್ಥೆ ಮತ್ತು ಸರ್ಕಾರಗಳು. ದೇವರ ಮಹಿಮೆಯನ್ನು ಕೊಂಡಾಡುವ ಭರದಲ್ಲಿ ಜನಶಕ್ತಿಯ ಮಹತ್ವವನ್ನು ಅಲ್ಲಗಳೆಯುವುದು ಬೇಡ. ಪಶುಪತಿನಾಥನ ದೇವಸ್ಥಾನ ನಿಶ್ಚಲವಾಗಿ ನಿಂತಿದ್ದರೆ ಅದಕ್ಕೆ ಅದರ ನಿರ್ಮಾಣದ ವಿಧಾನ ಕಾರಣವಾಗಿರುತ್ತದೆ. ಒಂದು ಬದಿಯಲ್ಲಿ ಬುನಾದಿಯನ್ನು ಅನಾವರಣಗೊಳಿಸಿ ನೋಡಿದರೆ ಅದರ ರಹಸ್ಯ ತಿಳಿಯುತ್ತದೆ.

ಭೂಕಂಪಗಳ ಹೊರತಾಗಿಯೂ ಇಮಾರತುಗಳಿಗೆ ಹಾನಿಯಾಗಬಾರದು; ಜೀವ, ಆಸ್ತಿ ಹಾನಿ ಆಗಬಾರದು ಎಂದರೆ ಏನು ಮಾಡಬೇಕು ಎಂಬುದನ್ನು ಅಧ್ಯಯನ ಮಾಡಲು; ಅರಿವನ್ನು ಯೋಜನೆಗಳಲ್ಲಿ ಪರಿವರ್ತಿಸಿ ಅನುಷ್ಠಾನಕ್ಕೆ ತರುವುದಕ್ಕೆ ನೇಪಾಳದ ದುರಂತ ನಮಗೊಂದು  ತಾಜಾ ಪಾಠವಾಗಲಿ. ಮೂಢನಂಬಿಕೆ ಅದರ ಮೂಲಕ ಅಜ್ಞಾನವನ್ನು ಬಿತ್ತುವವರು ದಯವಿಟ್ಟು ಸುಮ್ಮನಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT