ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂದಾಹದ ತೀವ್ರತೆಗೆ ಕೆರೆಯೇ ಮಂಗಮಾಯ!

ಕೆರೆಯಂಗಳದಿಂದ... 18
Last Updated 22 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಏನಂದ್ರಿ, ಸಾಣೆಗುರುವನಹಳ್ಳಿ ಕೆರೆನಾ? ಇಲ್ಲಿ ಯಾವ್ದು ಅಂತಾ ಕೆರೆ ಇಲ್ವಲ್ಲಾ. ಇನ್ನೊಂದ್ ಸಾರಿ ಅಡ್ರೆಸ್‌ ಚೆಕ್‌ ಮಾಡಿ’ -ಬಸವೇಶ್ವರ ನಗರದಲ್ಲಿ ಸಾಣೆಗುರುವನಹಳ್ಳಿ ಕೆರೆಯನ್ನು ಹುಡುಕುತ್ತ ಹೊರಟಾಗ ಅನೇಕ ಜನರು ನೀಡಿದ ಉತ್ತರವಿದು.

ಅದರಲ್ಲಿಯೇ ಕೆಲ ಹಿರಿಯ ಜೀವಗಳು ನೀಡಿದ ಸುಳುವಿನ ಜಾಡು ಹಿಡಿದು ಮೈದಾನ ಒಂದರ ಮುಂದೆ ನಿಂತು ಇಲ್ಲಿ ಕೆರೆ ಎಲ್ಲಿದೆ ಎಂದರೆ ‘ಗೊತ್ತಿಲ್ಲ’ ಎನ್ನುವಂತೆ ತಲೆಯಾಡಿಸಿದವರೇ ಬಹಳ.

ಕೊನೆಗೊಬ್ಬ ಹಿರಿಯರು ಹೇಳಿದರು, ‘ನೀವು ನಿಂತದ್ದು ಕೆರೆ ಪ್ರದೇಶದ ಎದುರೇ. ಆದರೆ ಅದೀಗ ಮಾಯವಾಗಿ ಬೇರೆ ಬೇರೆ ರೂಪ ತಳೆದಿದೆಯಷ್ಟೇ’ ಎಂದು ಹೇಳಿದರು.

ಕೊನೆಗೆ ಆ ಕೆರೆಯ ಉಳಿವಿಗಾಗಿ ಹೋರಾಡುತ್ತಿರುವವರಲ್ಲಿ ಒಬ್ಬರಾದ ಬಸವೇಶ್ವರನಗರ 3ನೇ ಹಂತದ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಶಿವಪ್ಪ ಅವರು ಕೆರೆ ಕಳೆದುಹೋದ ಬಗೆಯನ್ನು ವಿವರಿಸಿದರು.

ಒಟ್ಟು 15 ಎಕರೆ 24 ಗುಂಟೆ ಪ್ರದೇಶದಲ್ಲಿದ್ದ ಸಾಣೆಗುರುವನಹಳ್ಳಿ ಕೆರೆ ಇವತ್ತು ಸಂಪೂರ್ಣವಾಗಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಆ ಜಾಗದಲ್ಲಿ 4 ಎಕರೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಟ್ಟಡ ನಿರ್ಮಿಸಲಾಗಿದೆ. 3 ಎಕರೆ 10 ಗುಂಟೆ ಪ್ರದೇಶದಲ್ಲಿ ಕಿರು ಅರಣ್ಯ ಬೆಳೆದಿದೆ. ಅದರ ಪಕ್ಕದಲ್ಲಿಯೇ ಕೆ.ಎಸ್‌.ಆರ್‌.ಟಿ.ಸಿ ಡಿಪೊಕ್ಕೆ ಮೀಸಲಿಟ್ಟ ನಾಲ್ಕು ಎಕರೆ ಪ್ರದೇಶ ಆಟದ ಮೈದಾನವಾಗಿ ಹೊಸರೂಪ ತಳೆದಿದೆ.

ತಮಿಳುನಾಡು ಮೂಲದ ಆರ್‌್ಮುಗಂ ಎಂಬುವರು ‘ಕಿರು ಅರಣ್ಯದಲ್ಲಿಯೇ 15 ಗುಂಟೆ ಜಾಗ ನನ್ನದು’ ಎಂದು ದಾವೆ ಹೂಡಿ, ಅಷ್ಟು ಪ್ರದೇಶದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿದ್ದಾರೆ. ಆ ಪ್ರಕರಣ 1984ರಿಂದಲೂ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈವರೆಗೆ ಅಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಿಲ್ಲ ಎಂದು ಸ್ಥಳೀಯರು ಹೇಳಿದರು.

ಇನ್ನುಳಿದ ‘3 ಎಕರೆ 39 ಗುಂಟೆ ಕೆರೆ ಜಾಗದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಕೆಲವು ಮನೆಗಳನ್ನು ಕೊಟ್ಟಿರುವುದಾಗಿ ಕಂಡುಬಂದಿದೆ’ ಎಂದು 1997ರಲ್ಲಿ ಸಾಣೆಗುರುವನಹಳ್ಳಿ  ಗ್ರಾಮಲೆಕ್ಕಾಧಿಕಾರಿ ಒದಗಿಸಿದ ದಾಖಲೆಯಲ್ಲಿ ಉಲ್ಲೇಖವಿದೆ.

ಆದರೆ ‘ಇಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಯಾರಿಗೂ ಜಾಗ ನೀಡಿಲ್ಲ. ಅದೆಲ್ಲವೂ ಕೆರೆಯ ಜಾಗವೇ. ಅದನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ’ ಎನ್ನುವುದು ಶಿವಪ್ಪ ಅವರ ಆರೋಪ.

‘ಪಕ್ಕದ ರಾಜಕಾಲುವೆಯನ್ನು ಸಹ ಕೆಲವರು ಒತ್ತುವರಿ ಮಾಡಿಕೊಂಡು ಕಿರಿದಾಗಿಸಿದ್ದಾರೆ. ಅದರಿಂದ ಮಳೆಗಾಲದಲ್ಲಿ ಸುತ್ತಲಿನ ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತದೆ’ ಎಂದು ಹೇಳಿದರು.

ಒಂದು ಕಾಲದಲ್ಲಿ ಈ ಜಲಮೂಲದಿಂದ ಸುತ್ತಲಿನ ಬಡಾವಣೆಗಳ ಕೊಳವೆ ಬಾವಿಗಳಲ್ಲಿ ಅಂರ್ತಜಲಮಟ್ಟ ತುಂಬಾ ಚೆನ್ನಾಗಿತ್ತು. ಇವತ್ತು ಆ ಜಾಗದಲ್ಲಿ ನೀರು ಇಂಗದ ಹಾಗೆ ಮಾಡಿಟ್ಟಿದ್ದಾರೆ. ಹೀಗಾಗಿ ಕೊಳವೆಬಾವಿಗಳು ಬತ್ತುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

1996–1997ರ ಸುಮಾರಿಗೆ ಕೆರೆಯ ಅವನತಿ ಆರಂಭವಾಯಿತು. ಆಗೆಲ್ಲ ಜನರು ಒಡೆದ ಕಟ್ಟಡಗಳ ಅವಶೇಷಗಳನ್ನು ಅದಕ್ಕೆ ತಂದು ಸುರಿಯಲು ಆರಂಭಿಸಿದರು. ಆ ಸಂದರ್ಭದಲ್ಲಿ ಸರ್ಕಾರದ ವಿವಿಧ ಪ್ರಾಧಿಕಾರಗಳೇ ಈ ಕೆರೆ ತಮಗೆ ಸಂಬಂಧಿಸಿದ್ದಲ್ಲ ಎಂದು ಸಾಧಿಸಿದವೇ ವಿನಾ ಅದನ್ನು ಉಳಿಸಲು ಪ್ರಯತ್ನಿಸಲಿಲ್ಲ ಎನ್ನುವ ಬೇಸರ ಈ ಭಾಗದ ಹಿರಿಯ ನಾಗರಿಕರದು.

‘ನಾವು ಚಿಕ್ಕವರಾಗಿದ್ದಾಗ ಈ ಕೆರೆಯಲ್ಲಿ ಈಜಾಡುತ್ತಿದ್ದೆವು. ಬಸವೇಶ್ವರ ನಗರದಲ್ಲಿ ಪ್ರತಿಷ್ಠಾಪಿಸುತ್ತಿದ್ದ ಗಣೇಶ ಮೂರ್ತಿಗಳನ್ನು ಇಲ್ಲಿಯೇ ವಿಸರ್ಜಿಸುತ್ತಿದ್ದರು. ಈಗ ನೋಡಿದರೆ ಸಾಣೆಗುರುವನಹಳ್ಳಿ, ಶಿವನಹಳ್ಳಿ, ಕುರುಬರಹಳ್ಳಿ ಹೀಗೆ ಸುತ್ತಮುತ್ತಲಿನ ಕೆರೆಗಳನ್ನು ಮಣ್ಣು ತುಂಬಿ ಮುಚ್ಚಿಹಾಕಲಾಗಿದೆ’ ಎಂದು ಸ್ಥಳೀಯ ನಿವಾಸಿ ಅಶೋಕ್‌ ಬೇಸರ ವ್ಯಕ್ತಪಡಿಸಿದರು.

‘1985ರಲ್ಲಿ ಕೋರ್ಟ್‌ ರಚಿಸಿದ್ದ ಲಕ್ಷ್ಮಣ್‌ ರಾವ್ ವರದಿಯಲ್ಲಿ 169 ಕೆರೆಯನ್ನು ಬಿಡಿಎ ನಿರ್ವಹಣೆ ಮಾಡಬೇಕು ಎಂದು ಹೇಳಲಾಗಿತ್ತು. ಅದರ ಅನುಷ್ಠಾನಕ್ಕೂ ನಾವು ಹೋರಾಟ ಮಾಡಿದೆವು. ಆದರೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಸ್ಪಂದಿಸಲಿಲ್ಲ. ಹೀಗಾಗಿ ನಮ್ಮ ಹೋರಾಟ ಭೋರ್ಗಲ್ಲ ಮೇಲೆ ಮಳೆ ಸುರಿದಂತೆ ಆಯಿತು’ ಎಂದು ಶಿವಪ್ಪ ಅವರು ನೊಂದು ನುಡಿದರು.

‘ಆಗಿದ್ದು ಆಯಿತು. ಸರ್ಕಾರ ಕೊನೆ ಪಕ್ಷ ಒತ್ತುವರಿಯಾಗಿರುವ ಜಾಗವನ್ನಾದರೂ ತೆರವು ಮಾಡಿ, ಅಲ್ಲಿ ಮಳೆ ನೀರು ಇಂಗಿಸುವ ಕೆಲಸವನ್ನಾದರೂ ಮಾಡಲಿ’ ಎಂದು ಒತ್ತಾಯಿಸಿದರು.

‘10 ವರ್ಷಗಳ ಹಿಂದೆ ಈ ಕೆರೆ ಉಳಿಸಿಕೊಳ್ಳಲು ಹೈಕೋರ್ಟ್‌ವರೆಗೆ ಹೋರಾಟ ನಡೆಸಿ, ಸುಪ್ರೀಂ ಕೋರ್ಟ್‌ವರೆಗೂ ದಾಖಲೆಗಳನ್ನು ಕಳುಹಿಸಿದ್ದೇವೆ. ಸತತ ಹೋರಾಟದಿಂದಾಗಿ ಅರಣ್ಯ, ಮೈದಾನ ಉಳಿದುಕೊಂಡಿದೆ. ಇಲ್ಲದಿದ್ದರೆ ಇಷ್ಟೊತ್ತಿಗೆ ಇಡೀ ಕೆರೆ ಪ್ರದೇಶವೇ ಒತ್ತುವರಿಯಾಗುತ್ತಿತ್ತು’ ಎಂದು ಬಸವೇಶ್ವರ ನಗರ 3ನೇ ಹಂತದ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ರಾಮಚಂದ್ರ ತಿಳಿಸಿದರು.

‘ನಮ್ಮ ಮುಂದಿನ ಪೀಳಿಗೆಗೆ ಪರಿಸರ ಉಳಿಯಬೇಕು ಎನ್ನುವುದು ನಮ್ಮ ಕಾಳಜಿ. ಅದಕ್ಕಾದರೂ ಸರ್ಕಾರ ಒತ್ತುವರಿ ತೆರವು ಮಾಡಿ ಎನ್ನುವುದು ನಮ್ಮ ಆಗ್ರಹ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಹೊಲ ಮೇಯ್ದ ಬೇಲಿ
‘ಮಾಲಿನ್ಯ ನಿಯಂತ್ರಣ ಮಾಡುವ ಜತೆಗೆ ಪರಿಸರ ಸಂರಕ್ಷಿಸಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿಯವರೇ  ಕೆರೆ ಪ್ರದೇಶದಲ್ಲಿ ಕಟ್ಟಡ ಕಟ್ಟಿರುವುದು ಬೇಲಿಯೇ ಎದ್ದು ಹೊಲ ಮೇಯ್ದದಂತಿದೆ. ಇದು ನಾಚಿಕೆಗೇಡಿನ ಸಂಗತಿ’ ಎಂದು ಸ್ಥಳೀಯ ನಿವಾಸಿ ವಿದ್ಯಾಧರ್‌ ಹೇಳಿದರು.

ಸುಮಾರು 25 ವರ್ಷದಿಂದ ಕೆರೆ ಉಳಿಸಿಕೊಳ್ಳಲು ಹೋರಾಡುತ್ತ ಬರುತ್ತಿದ್ದೇವೆ. ಏನು ಮಾಡಿದರೂ ಉಳಿಸಿಕೊಳ್ಳಲು ಆಗಲಿಲ್ಲ. ಆ ನೋವು ನಮ್ಮನ್ನು ಇಂದಿಗೂ ಕಾಡುತ್ತಿದೆ
-ಶಿವಪ್ಪ

ನೀವೂ ಮಾಹಿತಿ ನೀಡಿ
ನಗರದ ಕೆರೆಗಳ ಹಾಗೂ ರಾಜಕಾಲುವೆ ಸುತ್ತ ತಲೆ ಎತ್ತಿರುವ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ಕೆಡವಬೇಕು ಎಂದು ಹಸಿರು ನ್ಯಾಯಮಂಡಳಿ ಆದೇಶ ಹೊರಡಿಸಿದೆ. ನಗರದ ಹತ್ತಾರು ಕೆರೆಗಳ ಮೇಲೆ ಭೂಮಾಫಿಯಾಗಳು, ಬಿಲ್ಡರ್‌ಗಳ ಕಣ್ಣು ಬಿದ್ದು ಕೆರೆಗಳು ಮಾಯವಾಗಿವೆ. ಕೆರೆ, ರಾಜಕಾಲುವೆ  ಒತ್ತುವರಿ ಮಾಡಿರುವವರ ಬಗ್ಗೆ ಸಾರ್ವಜನಿಕರು ಪೂರಕ ದಾಖಲೆಗಳೊಂದಿಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಬಹುದು. ಅವುಗಳನ್ನು ಪ್ರಕಟಿಸುತ್ತೇವೆ. ಮಾಹಿತಿ ನೀಡಲು 080–25880607, 25880643, 9916240432, 9740231381 ಸಂಪರ್ಕಿಸಬಹುದು. ವಾಟ್ಸ್ ಆ್ಯಪ್‌ ಮೂಲಕವೂ ದಾಖಲೆ ಕಳಿಹಿಸಬಹುದು
ಇಮೇಲ್‌ ವಿಳಾಸ: bangalore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT