ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂದಿನ ಮತ್ತು ಮೇ ದಿನ

ನಿಸರ್ಗದ ಸಂಪನ್ಮೂಲ ಎಲ್ಲರಿಗೂ ಲಭ್ಯವಾಗಬೇಕು. ದುಡಿಮೆಯ ಸಂಬಂಧಗಳು ಬದಲಾಗಬೇಕು
Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ವಿಶ್ವ ಭೂ ದಿನ ಕಳೆದು, ಮೇ ದಿನಾಚರಣೆ ಹತ್ತಿರ ಬರುತ್ತಿದೆ. ಮೊದಲನೆಯದ್ದು ಕೈಗಾರಿಕೀಕರಣದ ನಂತರದ ಉಪಭೋಗ ಸಂಸ್ಕೃತಿಗೆ ಮತ್ತು ಅಭಿವೃದ್ಧಿಗೆ ಬಲಿಯಾಗುತ್ತಿರುವ ಭೂಮಿಯ ಪರಿಸರವನ್ನು ಉಳಿಸುವ ವಿಚಾರದ್ದು. ಎರಡನೆಯದ್ದು ದುಡಿಮೆಗೆ ತಕ್ಕ ಪ್ರತಿಫಲಕ್ಕಾಗಿ ಶ್ರಮಿಕರ ಏಕತೆ ಮತ್ತು ಹೋರಾಟಕ್ಕೆ ಸಂಬಂಧಪಟ್ಟಿದ್ದು. ಮೇ ದಿನ ಕೂಡ ಕೈಗಾರಿಕೀಕರಣ ಮತ್ತು ನಂತರ ಮೂಡಿದ ವರ್ಗ ಪ್ರಜ್ಞೆಯ ಫಲಿತಾಂಶವಾಗಿದೆ. ಭೂಮಿಯ ನೈಸರ್ಗಿಕ ಸಂಪನ್ಮೂಲ- ಪರಿಸರವನ್ನು ಬಳಸುವ ಮತ್ತು ಉಳಿಸುವ ವಿಚಾರವೂ ವರ್ಗ ಸಂಘರ್ಷದ ವಿಚಾರವೇ ಆಗಿದೆ.

ವಿಶ್ವ ಭೂದಿನದ ಕಾರ್ಯಕ್ರಮಗಳಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಜನ ಭಾಗವಹಿಸಿದ್ದಾರೆ. ಹತ್ತಾರು ಕೋಟಿ ಜನ ಭಾಗವಹಿಸುವಂತಾಗಲು ಇನ್ನಷ್ಟು ವರ್ಷಗಳು ಬೇಕಾಗಬಹುದು. ಈ ಭೂಮಿಯನ್ನು ರಕ್ಷಿಸುವ ವಿಷಯವು ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೆ ತಲುಪಿಲ್ಲವಲ್ಲ ಎಂದು ನಾವು ಚಿಂತಿತರಾಗಬೇಕಿಲ್ಲ.  ಏಕೆಂದರೆ ಭೂಮಿಯ ನಾಶಕ್ಕೆ ಆ ಕಟ್ಟ ಕಡೆಯ ವ್ಯಕ್ತಿಗಳ ಕೊಡುಗೆ ನಗಣ್ಯ. ಇಲ್ಲಿನ ನೆಲ, ಜಲದ ಮೇಲೆ ಒಂದಿಷ್ಟೂ ಹಕ್ಕಿಲ್ಲದ ಕಟ್ಟ ಕಡೆಯ ಜನರು ಅದರ ರಕ್ಷಣೆಗೆ ಮುಂದಾಗುವ ಪ್ರಶ್ನೆ ಎಲ್ಲಿದೆ?

ಮೊನ್ನೆ ವಿಶ್ವ ಭೂ ದಿನಾಚರಣೆ ವೇಳೆ ಎಂದಿನಂತೆ, ಭೂಮಿಯ ಮೇಲೆ ಒಂದಿಂಚೂ ಹಕ್ಕಿಲ್ಲದಂತೆ ಹಲವು ಮಕ್ಕಳು ಹುಟ್ಟಿದ್ದಾರೆ. ಮುಂದೆ ಈ ಭೂಮಿಯ ಪರಿಸರದಲ್ಲಾಗುವ ಅವಾಂತರಗಳಿಗೆ ಬಲಿಯಾಗುವುದರಲ್ಲಿ ಅವರಿಗೆ ಪಾಲು ಇದ್ದೇ ಇರುತ್ತದೆ. ಸ್ವಂತ ಮನೆ–ಭೂಮಿ ಇಲ್ಲದ, ಜೀವಮಾನವಿಡೀ ದುಡಿದರೂ ಒಂದು ಸೈಟು ಕೊಂಡುಕೊಳ್ಳಲು ಸಾಧ್ಯವಾಗದ ಕೂಲಿ ಮಾಡುವ ಕುಟುಂಬದಲ್ಲಿ ಹುಟ್ಟಿದ ಮಗುವೊಂದು ಹುಟ್ಟುವಾಗಲೇ ನಿರ್ಗತಿಕವಲ್ಲದೆ ಇನ್ನೇನಾಗಲು ಸಾಧ್ಯ? ನಿರ್ಗತಿಕವಾಗಿ ಹುಟ್ಟುವ ಮಕ್ಕಳು ಎಷ್ಟು ನಿರ್ಗತಿಕವೆಂದರೆ ಅವು ಮುಂದೆ ಬೀದಿಯಲ್ಲಾಗಲಿ ಕಾಡಲ್ಲಾಗಲಿ ಬದುಕುವಂತಿಲ್ಲ. ಏಕೆಂದರೆ ಮುಂದೆ ನಮ್ಮದು ಅನ್ನುವ ಸಾರ್ವಜನಿಕ ಜಾಗಗಳಿರುವುದಿಲ್ಲ.

ಭೂಮಿಯ ಮಾತಿರಲಿ, ಕುಡಿಯೋಣವೆಂದರೆ ನೀರು ಕೂಡ ಎಲ್ಲೂ ಸಿಗದು. ‘ಯಾರು ನೀರನ್ನು ಕೊಂಡುಕೊಳ್ಳಲು ಯೋಗ್ಯರೋ ಅವರಿಗೆ ಮಾತ್ರ ಕುಡಿಯುವ ನೀರು’ ಎಂಬಂತಿದೆ ನಮ್ಮ ಜಲ ನೀತಿ. ನೀರು ಕುಡಿಯಬೇಕು ಎಂದಾದರೆ ಅದನ್ನು ಕೊಳ್ಳುವ ತಾಕತ್ತಿರಬೇಕು. ಕೆರೆ ನದಿಗಳು ಕಲುಷಿತಗೊಂಡಿರುತ್ತವೆ. ಒಂದು ವೇಳೆ ಅವು ಚೆನ್ನಾಗಿದ್ದರೆ ಅಲ್ಲಿ ಎಲ್ಲರಿಗೂ ಪ್ರವೇಶ ಇರುವುದಿಲ್ಲ. ಹೊಸ ಪೀಳಿಗೆಯವರು ವಿಷಯುಕ್ತ ಗಾಳಿಯನ್ನು ಉಚಿತವಾಗಿ ಉಸಿರಾಡಬಹುದು. ಅದಕ್ಕೆ ಬೇಲಿ ಹಾಕಲಾಗಿಲ್ಲ. ಆದರೆ ಈ ಮೊದಲಿನ ತಲೆಮಾರಿನವರು ಅವರವರ ವರ್ಗ, ಸ್ಥಾನಮಾನಕ್ಕೆ ತಕ್ಕಂತಹ ಅವರ ಜೀವನಶೈಲಿಯಿಂದ ಗಾಳಿಗೆ ಹೊಗೆ-ವಿಷ ಸೇರಿಸಿ ಇಟ್ಟಿದ್ದಾರೆ.

ನಿರ್ಗತಿಕ ಮನುಷ್ಯರಾಗಿ ಭೂಮಿಯ ಮೇಲೆ ಹುಟ್ಟುವ ಬದಲು ಒಂದು ಪಾಚಿಯಾಗಿ, ಮೀನಾಗಿ, ಹಕ್ಕಿಯಾಗಿ ಹುಟ್ಟಿದ್ದರೆ... ಈ ನದಿ ಸಾಗರಗಳು, ಗಿರಿ ಪರ್ವತಗಳು ನಮ್ಮವೇ ಎಂದು ಖುಷಿಯಿಂದ ಬದುಕಿಕೊಳ್ಳಬಹುದಿತ್ತು. ಆದರೆ ಅದೂ ಕಷ್ಟ. ಏಕೆಂದರೆ ಸರ್ವೆ ನಂಬರ್‌ಗಳು, ಗಡಿ ಕಲ್ಲುಗಳು, ಭೂಪಟಗಳು ನಿಸರ್ಗದ ಯಾವ ಭಾಗ ಯಾರದ್ದು ಎಂಬುದನ್ನು ನಿರ್ಧರಿಸಿಬಿಟ್ಟಿವೆ. ಅವು ಯಾರಿಗೆ ಸೇರಿವೆಯೋ ಅವರ ನೀತಿಗಳ ಅನುಸಾರ ಆ ಜೀವಿಗಳನ್ನು ಬದುಕುವಂತೆ ಮಾಡಬಹುದು ಅಥವಾ ಸಾಯಿಸಲೂಬಹುದು.

ಇಂದು ವಿಶ್ವದೆಲ್ಲೆಡೆ ತಾಪಮಾನ ಹೆಚ್ಚಳ, ಪ್ರಾಕೃತಿಕ ವಿಕೋಪಗಳದ್ದೇ ಸುದ್ದಿ. ಭೂಮಿಯ ಸರಾಸರಿ ತಾಪ ಮಾನದಲ್ಲಿ ಒಂದು ಡಿಗ್ರಿ ಸೆಲ್ಷಿಯಸ್‌ನ ನೂರರಲ್ಲಿ ಒಂದು ಭಾಗ ಹೆಚ್ಚಾದರೂ ಕೆಲವು ಸಸ್ಯ, ಪ್ರಾಣಿ ಪ್ರಭೇದಗಳು ನಾಶವಾಗುವವು. ಅಷ್ಟು ಬಿಸಿ ಹೆಚ್ಚಿಸಲು ಅಟ್ಲಾಂಟಿಕ್ ಸಾಗರದ ಮೇಲೆ ಒಂದು ದಿನದಲ್ಲಿ ನಡೆಯುವ ವಿಮಾನಗಳ ಹಾರಾಟವೇ ಸಾಕು. ಪ್ರತಿ ಜೀವಿಗೂ ಈ ಭೂಮಿಯ ಮೇಲೆ ಹಕ್ಕಿದೆ. ಕಣ್ಮರೆಯಾಗುತ್ತಿರುವ ಒಂದೊಂದು ಸಸ್ಯ, ಪ್ರಾಣಿ ಪ್ರಭೇದವೂ ಮನುಷ್ಯನ ಅಸ್ತಿತ್ವದ ನಾಶವನ್ನೇ ಸೂಚಿಸುತ್ತದೆ.

ಅಸ್ತಿತ್ವಕ್ಕಾಗಿ ಮನುಷ್ಯರೊಳಗೆ ನಡೆಯುವ ಪೈಪೋಟಿಯಲ್ಲೂ ಪೌಷ್ಟಿಕ ಆಹಾರ, ಆರೋಗ್ಯ, ಶಿಕ್ಷಣ ಖರೀದಿಸಲಾಗದ ಜನರು ಕಷ್ಟಕ್ಕೀಡಾಗುತ್ತಾರೆ. ಪರಿಸರ ಉಳಿಸುವುದಕ್ಕೆ ಯಾರು ಎಷ್ಟು ಜವಾಬ್ದಾರರು ಎಂಬುದರ ಬಗ್ಗೆ ಇತ್ತೀಚೆಗೆ ಪ್ಯಾರಿಸ್‌ನಲ್ಲಿ ದೊಡ್ಡ ಮಟ್ಟದ ಚೌಕಾಸಿ ಸಭೆ ನಡೆದು ಜಗತ್ತಿನ ಹೆಚ್ಚಿನ ದೇಶಗಳು ಒಡಂಬಡಿಕೆಗೆ ಸಹಿ ಹಾಕಿದವು. ಎಷ್ಟು ಸಮಾವೇಶಗಳನ್ನು ನಡೆಸಿ ಒಡಂಬಡಿಕೆಗಳನ್ನು ಮಾಡಿಕೊಂಡರೂ ಹೆಚ್ಚಿನ ದೇಶಗಳು, ಅವುಗಳ ನಾಯಕರು ಮತ್ತು ಅವರ ಹಿಂದಿರುವ ಆರ್ಥಿಕ ಹಿತಾಸಕ್ತಿಗಳು ಭೂಮಿಯ ಪರಿಸರ ರಕ್ಷಿಸಲು ಬೇಕಾದ ನೀತಿಗಳನ್ನು ರೂಪಿಸಲು, ಅವನ್ನು ಜಾರಿಗೆ ತರಲು ತಯಾರಿಲ್ಲ.

ವಿಜ್ಞಾನಿಗಳಲ್ಲೂ ಕೆಲವು ಬಣಗಳು. ಕೆಲವರು ಪರಿಸರದ ಜೊತೆಗೆ ಹೊಂದಾಣಿಕೆಯ ಸುಸ್ಥಿರ ಬಾಳುವೆ ನಡೆಸಬೇಕೆನ್ನುವವರಾದರೆ ಇನ್ನು ಕೆಲವರು ಎಲ್ಲದಕ್ಕೂ ತಂತ್ರಜ್ಞಾನದ ಮೂಲಕ ಪರಿಹಾರ ಹುಡುಕುವೆವು ಎಂಬ ಅಹಂಕಾರ ಉಳ್ಳವರು. ಇನ್ನು ಕೆಲವರು ಭೂಮಿ ತನ್ನ ವಾತಾವರಣದಲ್ಲಾಗುವ ಏರು ಪೇರುಗಳನ್ನು ತನ್ನಿಂದ ತಾನೆ ಸರಿಪಡಿಸಿಕೊಳ್ಳುತ್ತದೆ ಬಿಡಿ ಎನ್ನುವ ಗೇಯಾ ಸಿದ್ಧಾಂತಿಗಳು. ಈ ಭೂಮಿಯು ತನ್ನನ್ನು ತಾನೆ ಸರಿಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಯಾರನ್ನೂ ಬಲಿ ಪಡೆಯದಿರುವುದೇ?  ಅದಕ್ಕೆ ಬಲಿಗಳು ಯಾರು?

ಈ ಗ್ಲೋಬಲೀಕರಣೋತ್ತರ ಕಾಲದಲ್ಲಿ ಹುಟ್ಟಿಸಿದ ದೇವರು ಹುಲ್ಲನ್ನೂ ಮೇಯಿಸಲಾರ. ಯಾಕೆಂದರೆ ಇನ್ನು ಮುಂದೆ ಹುಲ್ಲುಗಾವಲೂ ಇರಲ್ಲ! ನದಿಗಳನ್ನು, ರಸ್ತೆಗಳನ್ನು, ಕಾಡು ಕಣಿವೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಹೆಸರಲ್ಲಿ ಅಭಿವೃದ್ಧಿಯಲ್ಲಿ ಪಾಲುದಾರ ಆಗಲು ಹೊರಟ ಖಾಸಗಿ ಕಂಪೆನಿಗಳಿಗೆ ಪರಭಾರೆ ಮಾಡಲು ಅಭಿವೃದ್ಧಿಶೀಲ ದೇಶಗಳ ಸರ್ಕಾರಗಳು ತುದಿಗಾಲಲ್ಲಿ ನಿಂತಿವೆ. ಸಂಪನ್ಮೂಲದ ಮೇಲೆ ಒಡೆತನ ಹೊಂದಿರುವವರೇ ದುಡಿಯುವವರ ಶ್ರಮದ ಬೆಲೆ ನಿಗದಿ ಮಾಡುವುದರಿಂದ ದುಡಿಮೆಗೆ ತಕ್ಕ ಪ್ರತಿಫಲ ಬೇಕೆಂದು ಚರಿತ್ರೆಯುದ್ದಕ್ಕೂ ಹೋರಾಟಗಳು ನಡೆದಿವೆ.

ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಕೊಡಿ ಎಂದು ಕೇಳುವುದರ ಮೂಲಕ ಪರೋಕ್ಷವಾಗಿ ತಮ್ಮ ಶ್ರಮಕ್ಕೆ ಬೆಲೆ ಕೊಡಿ ಎಂದು ಕೇಳುತ್ತಿದ್ದಾರೆ. ಕೈಗಾರಿಕಾ ಕ್ರಾಂತಿಯ ಬಳಿಕ ಸಂಘಟಿತವಾದ ಕಾರ್ಮಿಕರ ದೊಡ್ಡ ಸಮೂಹ ಹುಟ್ಟಿಕೊಂಡಿದ್ದರಿಂದ ದುಡಿಯುವವರ ಹೋರಾಟಕ್ಕೆ ಹೊಸ ಆಯಾಮ ಬಂತು. 1886ರಲ್ಲಿ ಷಿಕಾಗೊ ನಗರದಲ್ಲಿ ಕೆಲಸದ ಅವಧಿಯನ್ನು ಎಂಟು ಗಂಟೆಗೆ ಇಳಿಸಬೇಕೆಂದು ಹೋರಾಟ ನಡೆಸುತ್ತಿದ್ದ ಕಾರ್ಮಿಕರ ಮೇಲೆ ಪೋಲಿಸರು ಗುಂಡಿನ ಮಳೆಗರೆದು ಹಲವರನ್ನು ಸಾಯಿಸಿದ ಘಟನೆಯ ಕಾರಣಕ್ಕೆ ಮೇ ಒಂದನೇ ತಾರೀಕನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಭಾರತದಲ್ಲಿನ ಕಾರ್ಮಿಕ ಸಂಘಟನೆಗಳೂ ಕಾರ್ಮಿಕ ದಿನಾಚರಣೆ ಆಚರಿಸುತ್ತಿವೆ. ಕೆಲವು ಸಂಘಟಿತ ಕ್ಷೇತ್ರಗಳ ಕಾರ್ಮಿಕರು ಮೇಲ್ವರ್ಗಕ್ಕೆ ಸಾಗಿ ಮಧ್ಯಮವರ್ಗದ ಉಪಭೋಗಿಗಳಾಗಿದ್ದಾರೆ. ಇಂದಿನ ಭಾರತದಲ್ಲಿ ಗುತ್ತಿಗೆ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿದ್ದರೂ ಅವರು ಸಂಘಟನೆಗಳನ್ನು ಕಟ್ಟಿ ಹೋರಾಡುವ ಶಕ್ತಿ ಕುಂಠಿತವಾಗುತ್ತಿದೆ. ನಮ್ಮ ಸರ್ಕಾರಗಳು ಪರಿಸರಪರ ಕಾಯ್ದೆಗಳನ್ನು ದುರ್ಬಲಗೊಳಿಸಿದಂತೆ ಕಾರ್ಮಿಕರು ಸಂಘಟಿತರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಕಾರ್ಮಿಕ ಕಾಯ್ದೆಗಳಿಗೂ ತಿದ್ದುಪಡಿ ಮಾಡುತ್ತಲೇ ಇವೆ.

ಭೂಮಿಯ ಮೇಲೆ ಹುಟ್ಟುವ ಯಾವ ಜೀವಿಯೂ ನಿರ್ಗತಿಕವಾಗಿ ಹುಟ್ಟಬಾರದು. ಹುಟ್ಟಿದ ಎಲ್ಲರಿಗೂ ಗೌರವಯುತವಾಗಿ ಬದುಕುವ ಅವಕಾಶ ಇರಬೇಕು. ನಿಸರ್ಗದ ಸಂಪನ್ಮೂಲ ಎಲ್ಲರಿಗೂ ಲಭ್ಯವಾಗಬೇಕು. ದುಡಿಮೆಯ ಸಂಬಂಧಗಳು ಬದಲಾಗಬೇಕು. ಯಾರೂ ಯಾರನ್ನೂ ಶೋಷಿಸಬಾರದು. ಎಲ್ಲರೂ ಸಂತಸದಿಂದ ಇರುವುದಕ್ಕೆ ಪೂರಕವಾಗುವ ಪರಿಸರಸ್ನೇಹಿ ಜೀವನ ಶೈಲಿ ಮತ್ತು ಹೊಸ ದುಡಿಮೆಯ ಸಂಬಂಧಗಳನ್ನು ಹುಡುಕಿಕೊಳ್ಳುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT