ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿತಂಡದ ಹೆಜ್ಜೆ ಗುರುತು

ಅಂಕದ ಪರದೆ
Last Updated 29 ಜುಲೈ 2015, 19:30 IST
ಅಕ್ಷರ ಗಾತ್ರ

ಭೂಮಿ ಎಂಬ ನಾಟಕ ತಂಡವನ್ನು 2004ರಲ್ಲಿ ಚಲನಚಿತ್ರ ನಿರ್ದೇಶಕ ಪಿ.ಎಂ. ಗಿರಿರಾಜ್‌ ಆರಂಭಿಸಿದರು. ಬಾಲ್ಯದಿಂದಲೇ ಕಲೆ, ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ಇವರು, ನಾಟಕದ ಗೀಳನ್ನೂ ಹತ್ತಿಸಿಕೊಂಡವರು. ಕಾಲೇಜಿನ ಓದು ಮುಗಿಯುವ ಹಂತದಲ್ಲಿದ್ದಾಗ ತಮ್ಮದೇ ಒಂದು ನಾಟಕ ಕಂಪೆನಿ ಪ್ರಾರಂಭಿಸುವ ಹಂಬಲದಿಂದ  ಸ್ವಂತ ಬಂಡವಾಳದಲ್ಲಿ ಈ ತಂಡ ಕಟ್ಟಿದರು.

ಅಪ್ಪನ ನೌಕರಿಯ ಕಾರಣಕ್ಕೆ ತಿರುಗಾಟಕ್ಕೆ ಒಗ್ಗಿಕೊಂಡವನಿಗೆ ನಾಟಕಗಳಿಗಾಗಿ ಹಳ್ಳಿ ಸುತ್ತುವುದು ಹೊಸ ರೀತಿಯ ಅನುಭವ ನೀಡಿತು  ಎನ್ನುವ ಗಿರಿರಾಜ್‌,  ಮಹಿಳಾ ಕೇಂದ್ರಿತವಾಗಿರುವ ನಾಟಕಗಳನ್ನೇ ಹೆಚ್ಚು  ನಿರ್ದೇಶಿಸಿದ್ದಾರೆ. ಇಲ್ಲಿಯವರೆಗೆ 13 ನಾಟಕ ಮತ್ತು ಎರಡು ಸಾವಿರಕ್ಕೂ ಹೆಚ್ಚು ಬೀದಿ ನಾಟಕಗಳನ್ನು ತಂಡ ಪ್ರದರ್ಶಿಸಿದೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ತಂಡದ ನಾಟಕ  ಪ್ರದರ್ಶಿತವಾಗುತ್ತದೆ. ‘ಭೂಮಿ’ ರೂಪು ತಳೆದ ಬಗೆ ಗಿರಿರಾಜ್‌ ನಗರದ ಸೇಂಟ್‌ ಜಾನ್ಸ್ ಕಾಲೇಜಿನಲ್ಲಿ ಬಿ.ಕಾಂ. ಅಂತಿಮ ವರ್ಷದಲ್ಲಿ ಓದುತ್ತಿದ್ದಾಗ ಇವರ ಕಲಾಸಕ್ತಿಗೆ ಮೂರ್ತ ರೂಪ ದೊರಕಿತು.

ಬಾಲ್ಯದಿಂದಲೇ ಕಲೆಯ ಆರಾಧಕರಾಗಿದ್ದ ಗಿರಿರಾಜ್‌, ಯಕ್ಷಗಾನ ಮತ್ತು ನಾಟಕಗಳನ್ನು ನೋಡುತ್ತಲೇ ಬೆಳೆದವರು.  ತರಗತಿಗೆ ಹಾಜರಾಗಿದ್ದಕ್ಕಿಂತ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿಯೇ ಇವರು ಅಧಿಕ ಸಮಯ ವ್ಯಯಿಸುತ್ತಿದ್ದರಂತೆ. ಈ ಸಂದರ್ಭದಲ್ಲಿಯೇ ನಾಟಕದ ಗೀಳನ್ನು ಇವರು ಹತ್ತಿಸಿಕೊಂಡಿದ್ದರು.

ಪದವಿ ಮುಗಿದ ನಂತರವೂ ನಾಟಕ ಮುಂದುವರೆಯಬೇಕು ಎಂಬ ಉದ್ದೇಶದಿಂದ ಸ್ನೇಹಿತರೆಲ್ಲ ಸೇರಿ ‘ಭೂಮಿ’ ಎಂಬ ನಾಟಕ ತಂಡವನ್ನು ಪ್ರಾರಂಭಿಸಿದರು. ಪ್ರಾರಂಭದಲ್ಲಿ ಕೇವಲ ಇಬ್ಬರಷ್ಟೇ ಈ ತಂಡದ ಸದಸ್ಯರಾಗಿದ್ದರು. ಕೆಲವು ಸ್ನೇಹಿತರು ನಾಟಕದಲ್ಲಿ ಅಭಿನಯಿಸುತ್ತಿದ್ದರಾದರೂ ಅವರ್‍ಯಾರೂ ತಂಡದ ಖಾಯಂ ಸದಸ್ಯರಾಗಿರಲಿಲ್ಲ. ನಿಧಾನವಾಗಿ ತಂಡ ಬೆಳೆಯುತ್ತ ಸಾಗಿತ್ತು. ಇಬ್ಬರಿಂದ ಪ್ರಾರಂಭವಾದ ಈ ತಂಡದಲ್ಲಿ ಸದ್ಯ 35 ಸದಸ್ಯರಿದ್ದಾರೆ. ಸಮಾನ ಮನಸ್ಕರೆಲ್ಲ ಕೂಡಿ ಕಟ್ಟಿದ ತಂಡವಿದು. ಮಹಿಳಾ ಪರ ದನಿ ಮತ್ತು ಮಕ್ಕಳ ಹಕ್ಕು ಸೇರಿದಂತೆ ಸಾಮಾಜಿಕ ವಸ್ತು ವಿಷಯಗಳನ್ನು ತಲುಪಿಸುವ ಜವಾಬ್ದಾರಿಯನ್ನು ‘ಭೂಮಿ’ ವಹಿಸಿಕೊಂಡಿದೆ.

ತಂಡದ ಪ್ರಮುಖ ನಾಟಕಗಳು
ಸಿಪಾಯಿಗಳ ಕಥೆಯನ್ನು ಹೇಳುವ ‘ಜನಾಗ್ರ’ ತಂಡದ ಮೊದಲ ನಾಟಕ. ಈ ನಾಟಕದ ಕಥೆಯನ್ನು ಗಿರಿರಾಜ್‌ ಅವರೇ ಬರೆದು ನಿರ್ದೇಶಿಸಿದ್ದಾರೆ.  ಸತಿ ಪದ್ಧತಿಯ ಶೋಷಣೆಯ  ಹಲವು ಮಗ್ಗಲುಗಳನ್ನು ವಿವರಿಸುವ  ‘ಮಾಸ್ತಿಕಲ್ಲು’ ತಂಡದ ಪ್ರಮುಖ ನಾಟಕಗಳಲ್ಲೊಂದು.  ಡಾ.ಶಿವರಾಮ ಕಾರಂತರ ‘ಸರಸಮ್ಮನ ಸಮಾಧಿ’ ಕಾದಂಬರಿಯಿಂದ ಈ ನಾಟಕದ ಕಥೆ ಪ್ರೇರಣೆ ಪಡೆದಿದೆ. ಇದರ ಜೊತೆಗೆ ‘ಏನೋ ಮಾಡಲು ಹೋಗಿ’ ಮತ್ತು ಸಾಮಾಜಿಕ ಜಾಗೃತಿಗೆ ಸಂಬಂಧಿಸಿದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬೀದಿ ನಾಟಕಗಳನ್ನು ತಂಡ ರಾಜ್ಯದ ಹಲವು ಹಳ್ಳಿಗಳಲ್ಲಿ ಪ್ರದರ್ಶಿಸಿದೆ. ಕಾಲೇಜು ಹಂತದಲ್ಲಿ  ಇವರ ತಂಡ ಪ್ರದರ್ಶಿಸಿದ ನಾಟಕಕ್ಕೆ 21 ಪ್ರಶಸ್ತಿಗಳು ಲಭಿಸಿವೆ.

ಭೂಮಿ ಹೆಸರಿನ ಹಿನ್ನೆಲೆ
ಭಾಷೆ, ಸಂಸ್ಕೃತಿ ಎಲ್ಲಾ ನೆಲದಿಂದಲೇ ಹುಟ್ಟುವುದು. ಭೂಮಿ ಎಂಬ ಪದಕ್ಕೆ ಅರ್ಪಣಾ ಭಾವ ಮತ್ತು ಮಾತೃ ಸ್ವರೂಪವಿದೆ. ಮಾನಸಿಕ ಮತ್ತು ಸಾಂಸ್ಕೃತಿಕವಾಗಿ ಭೂಮಿ ಹತ್ತಿರವಾಗಿರುವುದರಿಂದ ಈ ಹೆಸರನ್ನು ತಂಡಕ್ಕೆ ಇಡಲಾಗಿದೆ.
***
ಎಲ್ಲೆಲ್ಲಿ ಪ್ರದರ್ಶನ?
ನಗರದ ಬಾಲಭವನ, ರವೀಂದ್ರ ಕಲಾಕ್ಷೇತ್ರ, ಎಡಿಎ ರಂಗಮಂದಿರದಲ್ಲಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಇದರ ಜೊತೆಗೆ ರಾಜ್ಯದ ಹಲವೆಡೆ ಬೀದಿ ನಾಟಕಗಳ ಮೂಲಕ ಜನರಿಗೆ ತಂಡ ಜಾಗೃತಿ ಮೂಡಿಸಿದೆ.  ತಂಡದ ‘ಅಹಂ ಬ್ರಹ್ಮಾಸ್ಮಿ’ ನಾಟಕ ಕೋಲ್ಕತ್ತಾದಲ್ಲಿ ಪ್ರದರ್ಶನಗೊಂಡಿದೆ.

ತಾಲೀಮು: ಹನುಮಂತನಗರದ  ಕೆ.ಎಚ್‌ ಕಲಾಸೌಧದಲ್ಲಿ ತಂಡ ಸೋಮವಾರದಿಂದ ಶುಕ್ರವಾರ ಸಂಜೆ ಏಳರಿಂದ ಒಂಬತ್ತರವರೆಗೆ, ಶನಿವಾರ ಆರರಿಂದ ಒಂಬತ್ತು, ಭಾನುವಾರ ಬೆಳಿಗ್ಗೆ 12ರಿಂದ ಮಧ್ಯಾಹ್ನ 9ರವರೆಗೆ ನಾಟಕಾಭ್ಯಾಸ ನಡೆಸುತ್ತದೆ. 

ತಂಡದ ಸದಸ್ಯರು: ಸತೀಶ್ಚಂದ್ರ, ಚಂದನ್‌ ಶರ್ಮಾ, ಪ್ರಸಾದ್‌, ಪರಮೇಶ್‌, ನಾಗೇಶ್‌ ಕಾರ್ತಿಕ್‌ ಅಭಯ್‌ ಸೂರ್ಯ, ಜಗದೀಶ್‌, ಶ್ಯಾಂ ದಾವಣಗೆರೆ, ಪ್ರಸಾದ್, ಅಭಿಲೇಶ್‌ ಲಕ್ರಾ, ಸ್ವರೂಪ್‌ ಶ್ರೀಕಾಂತಯ್ಯ, ಬಾಲೂ ಲೂಸಿಯಾ.

***
*ಇಲ್ಲಿಯವರೆಗೆ ತಂಡ ಎದುರಿಸಿದ ಸವಾಲುಗಳೇನು?
ಬಂಡವಾಳದ ಕೊರತೆ ಇದ್ದದ್ದೇ. ನಾವು ಪ್ರಾಯೋಜಕರನ್ನು ನೆಚ್ಚಿಕೊಂಡಿಲ್ಲ. ಹಾಗಾಗಿ ತಂಡದ ಸದಸ್ಯರೆಲ್ಲ ಸೇರಿ ನಾಟಕ ಪ್ರದರ್ಶನಕ್ಕೆ ಬೇಕಾಗುವ ಹಣವನ್ನು ಹೊಂದಿಸಿಕೊಳ್ಳುತ್ತೇವೆ. ತಂಡ ಖಾಯಂ ಸದಸ್ಯರ ಕೊರತೆಯನ್ನು ಎದುರಿಸುತ್ತದೆ. ಕಲೆಗೆ ಆರ್ಥಿಕ ಸಬಲತೆ ಇಲ್ಲದಿರುವ ಕಾರಣ ಸಿನಿಮಾ, ನಾಟಕಗಳಲ್ಲಿ ಆಸಕ್ತಿ ಇದ್ದರೂ, ಕೆಲವರು ತಂಡವನ್ನು ತೊರೆದು ಬೇರೆ ಉದ್ಯೋಗ ಅರಸುತ್ತಾರೆ. ಕೆಲವರಿಗೆ ಒಳ್ಳೆಯ ಕೆಲಸ ಸಿಕ್ಕಾಗ ನಾವೇ ಹೋಗುವಂತೆ ಬುದ್ಧಿವಾದ ಹೇಳುತ್ತೇವೆ. ಹೀಗೆ ತಂಡ ತೊರೆದಾಗ ಅವರು ಅಲ್ಲಿಯವರೆಗೆ ಕಲಿತ ಕಲೆ ವ್ಯರ್ಥವಾಗುತ್ತದೆ. ಅಲ್ಲದೆ ಇದು ತಂಡದ ಮೇಲೆಯೂ ಪರಿಣಾಮ ಬೀರುತ್ತದೆ. ಆದರೆ ಅದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ. ಇಂದಿನ ಪರಿಸ್ಥಿತಿಗೆ ಇದು ಅನಿವಾರ್ಯ.

*ಇಂದು ನಾಟಕದಲ್ಲಿ ಆಗಿರುವ ಬದಲಾವಣೆಗಳೇನು? ಈ ಬದಲಾವಣೆ ಅನಿವಾರ್ಯವೇ?
ಕೆಲವೊಮ್ಮೆ ಪ್ರೇಕ್ಷಕರ ದೃಷ್ಟಿಯಿಂದ ಈ ಬದಲಾವಣೆ ಅನಿವಾರ್ಯವಾಗುತ್ತದೆ.  ಗಂಭೀರ ವಿಷಯವನ್ನು ವಿಡಂಭನಾತ್ಮಕವಾಗಿ ತಿಳಿಸುವುದರಿಂದ ಅದು ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಮಾಸ್ತಿಕಲ್ಲು ನಾಟಕದಲ್ಲಿ ನಾವು ಇದೇ ಪ್ರಯೋಗವನ್ನು ಮಾಡಿದ್ದೇವೆ. ಇದೇ ನಾಟಕವನ್ನು ಏಳು ವರ್ಷದ ಹಿಂದೆ ಮಾಡಿದ್ದರೆ ಬಹುಶಃ ಹೆಚ್ಚು ಭಾವುಕವಾಗಿರುವ ನಾಟಕವಾಗುತ್ತಿತ್ತು ಅನಿಸುತ್ತದೆ. ಹೆಚ್ಚಿನ ಪ್ರೇಕ್ಷಕರನ್ನು ತಲುಪಬೇಕಾದರೆ ಕೆಲವು ಮಾರ್ಪಾಡು ಅವಶ್ಯಕವಾಗಿದೆ. ರಂಗಭೂಮಿ ಎನ್ನುವುದು ಎಂದಿನ ಸಾಮಾಜದ ಸಾಕ್ಷಿಕೃತಿ. ಅದನ್ನು ಮರೆತುನಾಟಕ ಮಾಡಿದರೆ ಅಸಾಮಾಜಿಕವಾಗುತ್ತದೆ.

*ಕಥೆಯ ಆಯ್ಕೆ ಹೇಗೆ?
ಕೃತಿ ಇಷ್ಟವಾಗಬೇಕು. ವಿಷಯ ಮನಸ್ಸಿಗೆ ಹತ್ತಿರವಾಗಿರಬೇಕು. ನಮ್ಮ ತಂಡ ಮಾಡಿದ ಪ್ರತಿ ನಾಟಕಕ್ಕೂ ಸಾಮಾಜಿಕ ಬದ್ಧತೆ ಇದೆ.  ವಿಷಯ ವಸ್ತುವಿಗೆ ನಿಷ್ಠರಾಗಿ ನಾಟಕವನ್ನು ಮಾಡುತ್ತೇವೆ.

*ಬೀದಿ ನಾಟಕ ಮೊದಲಿನ ಜನಪ್ರಿಯತೆಯನ್ನು ಇಂದಿಗೂ ಉಳಿಸಿಕೊಂಡಿದೆಯಾ?
ಮೊದಲು ಬಸ್‌ ನಿಲ್ದಾಣ, ದೇವಸ್ಥಾನದ ಹೊರಗಡೆ ಮಾಡುವಾಗ ಜನ ಬೀದಿಯಲ್ಲಿ ನಿಂತುಕೊಳ್ಳುತ್ತಿದ್ದರು. ಆದರೆ ಇಂದಿನ ಧಾವಂತದ ಬದುಕಿನಲ್ಲಿ ಜನರಿಗೆ ಅದಕ್ಕೆ ಸಮಯವಿಲ್ಲ. ಕೆಲವೊಬ್ಬರು ತುಂಬಾ ಬಿಡುವಾಗಿರುತ್ತಾರೆ. ಆದರೆ ಇನ್ನೊಬ್ಬರ ನೋವು, ಭಾವನೆಗಳಿಗೆ ಸ್ಪಂದಿಸುವ ಮನಸ್ಸಿರುವುದಿಲ್ಲ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಬೀದಿನಾಟಕ ಜನಮನ್ನಣೆ ಕಳೆದುಕೊಳ್ಳುತ್ತಿದೆ. ಆದರೆ ನಗರಗಳಿಗೆ ಹೋಲಿಸಿದರೆ ಹಳ್ಳಿಗಳಲ್ಲಿ ಆರ್ಥಿಕ ಸಹಾಯ ಸಿಗದಿದ್ದರೂ ಸ್ಪಂದನೆ ಸಿಗುತ್ತದೆ.

*ಮುಂದಿನ ಯೋಜನೆಗಳೇನು?
ತಂಡದಲ್ಲಿ  ಭಿನ್ನ ವೃತ್ತಿಯಲ್ಲಿರುವವರು ಇದ್ದಾರೆ.  ಸಮಯದ ಕೊರತೆಯಿಂದ ಹೆಚ್ಚೆಚ್ಚು ನಾಟಕಗಳನ್ನು ಪ್ರದರ್ಶಿಸುವುದು ಸಾಧ್ಯವಾಗುತ್ತಿಲ್ಲ. ಆದರೆ ಮುಂದೆ ವರ್ಷದ ಪೂರ್ತಿ ಕ್ರೀಯಾಶೀಲವಾಗಿರಬೇಕೆಂಬುದು ತಂಡದ ಉದ್ದೇಶ. ಜೊತೆಗೆ ಮಾಸ್ತಿಕಲ್ಲು ನಾಟಕವನ್ನು ರಾಜ್ಯದ ಬೇರೆ, ಬೇರೆ ಸ್ಥಳಗಳಲ್ಲಿ ಪ್ರದರ್ಶಿಸುವ ಯೋಜನೆಯಿದೆ.

***
"ಹವ್ಯಾಸಿ ತಂಡ ಭೂಮಿ ವೃತ್ತಿಪರ ತಂಡ ಅಲ್ಲ. ಎಲ್ಲರೂ ಹವ್ಯಾಸಿ ಕಲಾವಿದರು. ‘ನಮ್ಮ  ತಂಡದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌, ವಿದ್ಯಾರ್ಥಿಗಳು, ಅಡುಗೆ ಕೆಲಸ ಮಾಡುವವರು, ಬ್ಯಾಂಕ್‌ ಉದ್ಯೋಗಿಗಳು, ಶಿಕ್ಷಕರು ಹೀಗೆ ಭಿನ್ನ ವೃತ್ತಿಯಲ್ಲಿರುವವರು ಇದ್ದಾರೆ. ಇವರೆಲ್ಲರಿಗೂ ರಂಗಭೂಮಿಯ ಮೇಲೆ ಆಸಕ್ತಿಯಿದೆ. ಅವರ ನಾಟಕ ಪ್ರೀತಿಗೆ ಭೂಮಿ ವೇದಿಕೆ ಕಲ್ಪಿಸಿದೆ "
- ಪಿ.ಎಂ. ಗಿರಿರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT