ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯ ರಕ್ಷಣೆಗೆ ಭಾರತದ ಬದ್ಧತೆ

ಅಕ್ಷರ ಗಾತ್ರ

‘ಭಾರತದ ಹವಾಮಾನ ಬದಲಾವಣೆ ಕ್ರಿಯಾ ಯೋಜನೆ’ ಬಿಡುಗಡೆಯಾಗಿದೆ. ಜಾಗತಿಕ ತಾಪಮಾನದ ಏರಿಕೆಯನ್ನು ತಡೆಯುವ ಪ್ರಯತ್ನಕ್ಕಾಗಿ ತಮ್ಮ ಕ್ರಿಯಾ ಯೋಜನೆಯನ್ನು ಡಿಸೆಂಬರ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಶೃಂಗಸಭೆಗೆ ಮುನ್ನ ರಾಷ್ಟ್ರಗಳು ಬಿಡುಗಡೆ ಮಾಡಬೇಕಿದೆ. ಕಳೆದ ವಾರ ಚೀನಾ ತನ್ನ ಯೋಜನೆಯನ್ನು ಪ್ರಕಟಿಸಿದೆ.

  ಸುಮಾರು 200 ರಾಷ್ಟ್ರಗಳು ಈ ನಿಟ್ಟಿನಲ್ಲಿ ತಮ್ಮ ಕ್ರಿಯಾ ಯೋಜನೆಯನ್ನು ಪ್ರಕಟಿಸಿದ್ದು, ಇಂಗಾಲದ ಡೈ ಆಕ್ಸೈಡಿನ ಹೊರಸೂಸುವಿಕೆಯ ದೇಶಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಭಾರತದ ಕ್ರಿಯಾ ಯೋಜನೆಯನ್ನು ಇಡೀ ಜಗತ್ತು ಎದುರು ನೋಡುತ್ತಿತ್ತು. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿರುವುದು ಇದಕ್ಕೆ ಪ್ರಮುಖ ಕಾರಣ. ಈ ಬಾರಿಯ ಪ್ಯಾರಿಸ್‌ನ ಹವಾಮಾನ ವೈಪರೀತ್ಯ ಶೃಂಗಸಭೆಯಲ್ಲಿ ಸಮಗ್ರ ಒಪ್ಪಂದವೊಂದಕ್ಕೆ ಬಾರದಿದ್ದರೆ ಈಗಾಗಲೇ ಕಂಡುಬರುತ್ತಿರುವ ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತೂ ವಿಪರೀತ ಪರಿಣಾಮಕ್ಕೆ ಕಾರಣವಾಗುತ್ತವೆ ಎನ್ನುವುದು ದೃಢಪಟ್ಟಿರುವ ವಿಷಯ. ಭಾರತ ಪ್ರಕಟಿಸಿರುವ 38 ಪುಟಗಳ ಈ ಕ್ರಿಯಾ ಯೋಜನೆ ಎಂಟು ಪ್ರಮುಖ ಅಂಶಗಳನ್ನು ಒಳಗೊಂಡಿದ್ದು, ಪರಿಸರ ಪ್ರಿಯರು ಮತ್ತು ಪರಿಣತರಿಂದ ಭೇಷ್‌ ಎನ್ನಿಸಿಕೊಂಡಿದೆ.

ಯಾವುದೇ ನೈಸರ್ಗಿಕ ವಿದ್ಯಮಾನದ ಪರಿಣಾಮಗಳು ಮೊದಲು ತಲುಪುವುದು ಜನಸಾಮಾನ್ಯನನ್ನು. ಹಾಗಾಗಿ ಅದನ್ನು ತಡೆಯುವ ಪ್ರಯತ್ನದಲ್ಲಿ ರಾಷ್ಟ್ರ ಕೈಗೊಂಡ ನಿಲುವುಗಳು ಜನಸಾಮಾನ್ಯನನ್ನು ತಲುಪಿದಲ್ಲಿ, ಅವನನ್ನೂ ಒಳಗೊಂಡಲ್ಲಿ ಅದರ ಬದ್ಧತೆ ಹೆಚ್ಚಾಗುತ್ತದೆ. ಸುಸ್ಥಿರ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು, ನೈಸರ್ಗಿಕ ಸಂಪನ್ಮೂಲವನ್ನು  ಮಿತಿಯಲ್ಲಿ ಬಳಸುತ್ತಾ, ಹೊರಸೂಸುವ ಇಂಗಾಲದ ಡೈ ಆಕ್ಸೈಡಿನ ಪ್ರಮಾಣವನ್ನು  ತಗ್ಗಿಸುವುದು ಒಂದು ಅಂಶವಾದರೆ, ವಾಯು ಮಂಡಲವನ್ನು ಸೇರಿದ ಇಂಗಾಲದ ಡೈ  ಆಕ್ಸೈಡನ್ನು ಸಸ್ಯ ಸಂಕುಲ ಹೀರಿಕೊಳ್ಳುವಂತೆ ಮಾಡಿ ಅದರ ಪ್ರಮಾಣವನ್ನು ತಗ್ಗಿಸುವುದು ಮತ್ತೊಂದು ಅಂಶ. ಈ ಎರಡು ಪ್ರಯತ್ನಗಳಿಗೂ ಕ್ರಿಯಾ ಯೋಜನೆ ರೂಪುಗೊಂಡಿದೆ.

2030ರ ಹೊತ್ತಿಗೆ ಭಾರತ ತಾನು ಹೊರಸೂಸುವ ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣವನ್ನೂ ಶೇಕಡ 33ರಿಂದ 35ರಷ್ಟು ಕಡಿಮೆ ಮಾಡುವುದಾಗಿ ಹೇಳಿದೆ. ಶಕ್ತಿ ಮೂಲಗಳಾದ ಇಂಧನಗಳು, ಪಳೆಯುಳಿಕೆ ಇಂಧನಗಳನ್ನು ಉರಿಸಿದಾಗ ಇಂಗಾಲ, ಇಂಗಾಲದ ಡೈ ಆಕ್ಸೈಡ್‌ ಆಗಿ ಪರಿವರ್ತನೆಯಾಗುತ್ತದೆ. ಉದಾ:  ಉರುವಲಿಗೆ ಬಳಸುವ ಕಟ್ಟಿಗೆಯಲ್ಲಿ ಮರ ಸಂಗ್ರಹಿಸಿದ ಇಂಗಾಲವಿರುತ್ತದೆ. ಅದನ್ನು ಉರಿಸಿದಾಗ ಇಂಗಾಲದ ಡೈ ಆಕ್ಸೈಡ್‌ ಬಿಡುಗಡೆಯಾಗುತ್ತದೆ. ಹಾಗೆಯೇ ಇದ್ದಿಲು, ಕಲ್ಲಿದ್ದಲು, ಪೆಟ್ರೋಲ್‌, ಡೀಸೆಲ್‌ಗಳನ್ನು ಉರಿಸಿದಾಗ ಇಂಗಾಲದ ಡೈ ಆಕ್ಸೈಡ್‌ ಬಿಡುಗಡೆಯಾಗುತ್ತದೆ.

ಎಲ್ಲಿಯವರೆಗೆ ಈ ಇಂಗಾಲ ಇಂಗಾಲವಾಗಿರುತ್ತದೆಯೋ ಅಲ್ಲಿಯವರೆಗೆ ಅಪಾಯವಿಲ್ಲ, ಆದರೆ ಅದು ಡೈ ಆಕ್ಸೈಡ್‌ ಆದಾಗ ‘ಹಸಿರು ಮನೆ’ ಅನಿಲದಂತೆ ಕಾರ್ಯ ನಿರ್ವಹಿಸಿ ಭೂಮಿಯ ತಾಪಮಾನದ ಏರಿಕೆಗೆ ಕಾರಣವಾಗುತ್ತದೆ. ಇದರೊಂದಿಗೆ ಇಂಗಾಲದ ಇತರ ಸಂಯುಕ್ತಗಳೂ ಇದಕ್ಕೆ ಕಾರಣವಾಗುತ್ತವೆ. ಹಾಗಾಗಿ ಇಂಗಾಲದ ಡೈ ಆಕ್ಸೈಡಿನ ಹೊರಸೂಸುವಿಕೆಯನ್ನು ಕಡಿಮೆ ಮಾಡಿದರೆ, ಭೂಮಿಯ ತಾಪಮಾನದ ಏರಿಕೆಯನ್ನು ನಿಯಂತ್ರಿಸಿ, ಅದರ ಪರಿಣಾಮವಾಗಿ ಕಂಡುಬರುತ್ತಿರುವ ಹವಾಮಾನ ವೈಪರೀತ್ಯಗಳನ್ನು ನಿಯಂತ್ರಿಸುವುದು ಇಂದಿನ ಗುರಿ.

ಇದನ್ನು ತಗ್ಗಿಸಲು ರಾಷ್ಟ್ರಗಳು ಮಾಡುವ ಪ್ರಯತ್ನಕ್ಕೆ ಯಾಕಷ್ಟು ಪ್ರಾಧಾನ್ಯ? ಇಂಗಾಲದ ಬಳಕೆಯನ್ನು ತಗ್ಗಿಸುವುದು ಎಂದರೆ ಔದ್ಯಮೀಕರಣವನ್ನು, ಅಭಿವೃದ್ಧಿಯ ವೇಗವನ್ನು  ಕಡಿಮೆ ಮಾಡುವುದು ಎಂದರ್ಥ. ಹಾಗಾಗಬಾರದು ಎನ್ನುವುದಾದರೆ ಪರ್ಯಾಯ ಮತ್ತು ಅಸಾಂಪ್ರದಾಯಕ ಶಕ್ತಿ ಮೂಲಗಳನ್ನು ಬಳಸಿಕೊಳ್ಳುವ ಪ್ರಮಾಣವನ್ನು ಹೆಚ್ಚಿಸಬೇಕು. ಅದಕ್ಕೆಂದೇ ಭಾರತದ ಕ್ರಿಯಾ ಯೋಜನೆಯಲ್ಲಿ ನವೀಕರಿಸಬಹುದಾದ ಇಂಧನಗಳ ಬಳಕೆಯನ್ನು ಶೇಕಡ 40ರಷ್ಟು ಹೆಚ್ಚಿಸುವುದಾಗಿ ತಿಳಿಸಲಾಗಿದೆ.  ಭಾರತ ಸಲ್ಲಿಸಿರುವ ಕ್ರಿಯಾ ಯೋಜನೆಯಲ್ಲಿರುವ ಸುಸ್ಥಿರ ಅಭಿವೃದ್ಧಿಯ ಕ್ರಮಗಳಿಗೆ ನೀತಿ ಆಯೋಗದ ಪ್ರಕಾರ ₹ 54.43 ಲಕ್ಷ ಕೋಟಿ ವೆಚ್ಚವಾಗಲಿದೆ. ಸದ್ಯಕ್ಕೆ ಭಾರತದ ಪ್ರಜೆಯೊಬ್ಬನ ವರ್ಷವೊಂದರ ಇಂಗಾಲದ ಬಳಕೆಯ ಪ್ರಮಾಣ 1.6 ಟನ್‌ಗಳಾದರೆ, ಅಭಿವೃದ್ಧಿ ಹೊಂದಿದ ಪಾಶ್ಚಾತ್ಯ ರಾಷ್ಟ್ರಗಳ ವ್ಯಕ್ತಿಯ ಬಳಕೆಯ ಪ್ರಯಾಣ 5 ಟನ್‌ಗಳು.

2030ರ ಹೊತ್ತಿಗೆ ಒಂದು ಕೋಟಿ ಹೆಕ್ಟೇರ್‌ನಷ್ಟು ಭೂಮಿಯಲ್ಲಿ ಅರಣ್ಯ ಬೆಳೆಸುವ  ಯೋಜನೆಯನ್ನು ಭಾರತ ಹಾಕಿಕೊಂಡಿದೆ. ಹೀಗೆ ಮಾಡುವುದರ ಮುಖಾಂತರ 250ರಿಂದ 300 ಟನ್‌ಗಳಷ್ಟು ಇಂಗಾಲದ ಡೈ ಆಕ್ಸೈಡ್‌ ಅನ್ನು ಅದು ಹೀರಿಕೊಳ್ಳುತ್ತದೆ. ಇದರಿಂದ ವಾಯುಮಂಡಲವನ್ನು ಸೇರುವ ಇಂಗಾಲದ ಡೈ ಆಕ್ಸೈಡಿನ ಪ್ರಮಾಣ ಮತ್ತಷ್ಟು ಕಡಿಮೆಯಾಗುತ್ತದೆ. ಹೇರಳವಾದ ಸೂರ್ಯನ ಬಿಸಿಲು ಲಭ್ಯವಿರುವ  ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವಿರುವ ರಾಷ್ಟ್ರಗಳೆಲ್ಲವೂ ಈ ಅಕ್ಷಯ ಇಂಧನವನ್ನು  ಶಕ್ತಿ ಮೂಲವಾಗಿ ಬಳಸಬಹುದು. ಇದರೊಂದಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿಯ ಕಡಿತವನ್ನೂ ಮತ್ತು ಪರೋಕ್ಷ ತೆರಿಗೆಯಿಂದ 11 ಕೋಟಿ ಟನ್‌ ಇಂಗಾಲದ ಡೈ ಆಕ್ಸೈಡ್‌ ಹೊರಸೂಸುವಿಕೆಯ ಪ್ರಮಾಣವನ್ನೂ ತಗ್ಗಿಸುವುದಾಗಿ ಕ್ರಿಯಾ ಯೋಜನೆಯಲ್ಲಿ ಹೇಳಲಾಗಿದೆ. ಇದಕ್ಕಾಗಿ ಪರ್ಯಾಯ ಇಂಧನವನ್ನು ಬಳಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು.

ಸೌರ ಶಕ್ತಿಯ ಉಪಕರಣಗಳು ಜನಸಾಮಾನ್ಯನ ಕೈಗೆಟುಕುವಂತೆ ಮಾಡುವುದು ಅನಿವಾರ್ಯವಾಗುತ್ತದೆ. ಸೌರಶಕ್ತಿಯ ಉತ್ಪಾದನೆ ಮಾಡಬಲ್ಲ ರಾಷ್ಟ್ರಗಳ ಮೈತ್ರಿಕೂಟವನ್ನು ಸ್ಥಾಪಿಸುವ ಯೋಜನೆಯನ್ನು ಕೂಡಾ ಭಾರತ ಹಾಕಿಕೊಂಡಿದೆ. ಇದುವರೆಗೆ ಅತಿ ಹೆಚ್ಚು ಇಂಗಾಲದ ಡೈ ಆಕ್ಸೈಡನ್ನು  ಹೊರಹಾಕಿರುವ ಅಮೆರಿಕದ ಕ್ರಿಯಾ ಯೋಜನೆಯಲ್ಲಿ ಅವರು ಶೇಕಡ 30ರಷ್ಟು ಶಕ್ತಿ ಮೂಲವನ್ನು  ನವೀಕರಿಸಬಹುದಾದ ಇಂಧನಗಳಿಂದ ಪಡೆಯುವುದಾಗಿ ಹೇಳಿದ್ದರೆ, ಚೀನಾ 2030ರ ನಂತರ ಇಂಗಾಲದ ಡೈ ಆಕ್ಸೈಡ್‌ನ ಹೊರಸೂಸುವಿಕೆಯ ಹೆಚ್ಚಳಕ್ಕೆ ಕಡಿವಾಣ ಹಾಕುವುದಾಗಿ ಹೇಳಿದೆ. ಇವೆರಡಕ್ಕೆ ಹೋಲಿಸಿದರೆ ಭಾರತದ ಕ್ರಿಯಾ ಯೋಜನೆ ಅತ್ಯಂತ ಮಹತ್ವಾಕಾಂಕ್ಷಿಯಾಗಿದೆ ಎನಿಸಿದರೂ ಅಸಾಧ್ಯವೇನಲ್ಲ ಎನ್ನುವುದು ಪರಿಣತರ ಅಭಿಪ್ರಾಯ.

ಡಿಸೆಂಬರ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಎಲ್ಲ ರಾಷ್ಟ್ರಗಳ ಕ್ರಿಯಾ ಯೋಜನೆಗಳನ್ನು ಚರ್ಚಿಸಿ ಒಂದು ಒಪ್ಪಂದಕ್ಕೆ ಬರಲಾಗುವುದು. ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಂತ್ರಜ್ಞಾನ ಮತ್ತು ಅದನ್ನು  ಅಳವಡಿಸಿಕೊಳ್ಳಲು ಧನಸಹಾಯ ಮಾಡಬೇಕು. ಇಂತಹುದೇ ಅಭಿಪ್ರಾಯ 2009ರ  ಶೃಂಗಸಭೆಗೂ ಮುನ್ನ ವ್ಯಕ್ತವಾಗಿತ್ತು. ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡುವ ಕಾನೂನನ್ನು ಅಪೇಕ್ಷಿಸಿದ್ದವರಿಗೆ ‘ರಾಜಕೀಯ ಒಮ್ಮತ’ ನಿರಾಶೆಯನ್ನುಂಟು ಮಾಡಿತ್ತು. ರಾಷ್ಟ್ರಗಳು ತಮ್ಮ ಇಚ್ಛೆಗೆ ಅನುಸಾರವಾಗಿ ಇಂಗಾಲದ ಡೈ ಆಕ್ಸೈಡನ್ನು  ಹೊರ ಹಾಕುವುದನ್ನು  ತಗ್ಗಿಸುವಂತೆ ಅವಕಾಶ ನೀಡಲಾಗಿತ್ತು. ಹಾಗೆ ಮಾಡದವರ ಮೇಲೆ ಯಾವುದೇ ಕ್ರಮವಿಲ್ಲ. ಇದೀಗ ಜಗತ್ತು ಮತ್ತೊಂದು ಶೃಂಗಸಭೆಯತ್ತ ಆಶಾದಾಯಕವಾಗಿ ನೋಡುತ್ತಿದೆ.

ಭೂಮಿಯ ಬಿಸಿ ತಗ್ಗಿಸಿ, ಮನುಕುಲದ ಭವಿಷ್ಯವನ್ನು  ಭದ್ರವಾಗಿಸುವ, ಆ ಮೂಲಕ ಇಡೀ ಜೀವಸಂಕುಲವನ್ನು ಸುರಕ್ಷಿತವಾಗಿಸುವ ಸಂಕಲ್ಪವನ್ನು ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳು ತೊಡಬೇಕಾದ ಸಮಯ ಇದಾಗಿದೆ. ಹಾಗಾಗದಿದ್ದರೆ ಇಂತಹ ಪ್ರಯತ್ನಗಳಲ್ಲಿ ಜನರ ವಿಶ್ವಾಸವೇ ಹೋಗುತ್ತದೆ. ಭಾರತವೇನೋ ಅತ್ಯುತ್ತಮವಾದ ಕ್ರಿಯಾ ಯೋಜನೆಯನ್ನು ಬಿಡುಗಡೆ ಮಾಡುವ ಮೂಲಕ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಆದರೆ ಉಳಿದ ರಾಷ್ಟ್ರಗಳು? ಶೃಂಗಸಭೆಯ ತೀರ್ಮಾನ? ಯೋಜನೆಗಳ ಕಾರ್ಯಗತಗೊಳಿಸುವಿಕೆ? ಎಲ್ಲವೂ ಪ್ರಮುಖವಾಗುತ್ತವೆ. ಹೆಚ್ಚು ಸಮಯ ಕಾಯಬೇಕಿಲ್ಲ. ಡಿಸೆಂಬರ್‌ ಹೊತ್ತಿಗೆ ಜಗತ್ತು ಈ ಜೀವಗೋಲದ ಬಗೆಗೆ ತೋರುವ ಕಳಕಳಿ ವ್ಯಕ್ತವಾಗುತ್ತದೆ. ಖಚಿತವಾದ ರೂಪುರೇಷೆಯೊಂದು ಮೈದಳೆಯುತ್ತದೆ. ಅದಕ್ಕಾಗಿ ಕಾಯ್ದು ನೋಡಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT