ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ: ರಾಜ್ಯದಲ್ಲಿ 2013ರ ಕಾಯ್ದೆ ಅಳವಡಿಕೆ

Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ಬೆಂಗಳೂರು: 2013ರಲ್ಲಿ ಯುಪಿಎ ಸರ್ಕಾರ ತಂದಿದ್ದ ಭೂಸ್ವಾಧೀನ ಕಾಯ್ದೆಯನ್ನೇ ರಾಜ್ಯದಲ್ಲಿ ಜಾರಿ ಮಾಡಲು ಬುಧವಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಎನ್‌ಡಿಎ ಸರ್ಕಾರ ಜಾರಿ ಮಾಡಿದ್ದ ಸುಗ್ರೀವಾಜ್ಞೆಯ ಅವಧಿ ಮುಗಿದಿರುವ ಕಾರಣ 2013ರ ಕಾಯ್ದೆ ಮುಂದುವರಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಿದ್ದು ಸಂಪುಟ ಸಭೆ ಒಪ್ಪಿಗೆ ನೀಡಿತು ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸುದ್ದಿಗಾರರಿಗೆ ವಿವರಿಸಿದರು.

ಭೂಸ್ವಾಧೀನಕ್ಕೆ ಶೇ 70ರಷ್ಟು ಭೂ ಮಾಲೀಕರ ಒಪ್ಪಿಗೆ ಬೇಕು ಇತ್ಯಾದಿ ಅಂಶಗಳು ಈ ಕಾಯ್ದೆಯಲ್ಲಿ ಇವೆ. ಬೃಹತ್ ಯೋಜನೆಗಳ ಸಲುವಾಗಿ ಭೂಸ್ವಾಧೀನಪಡಿಸಿ­ಕೊಳ್ಳು­ವಾಗ ಭೂ ಮಾಲೀಕರಿಗೆ ಹಾಗೂ ಅವರ ಅವಲಂಬಿತರಿಗೆ ಆಗುವ ತೊಂದರೆಗಳ ಬಗ್ಗೆ ಸಾಮಾಜಿಕ ಅಧ್ಯಯನ ಮಾಡುವುದನ್ನು ಈ ಕಾಯ್ದೆಯಲ್ಲಿ ಕಡ್ಡಾಯಗೊಳಿಸಲಾಗಿದೆ.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸ್ಥಳಾಂತರವಾಗುವ ಜನರ ಹಕ್ಕುಗಳ ರಕ್ಷಣೆ, ಭೂಸ್ವಾಧೀನ ಪರಿಹಾರವನ್ನು ದ್ವಿಗುಣಗೊಳಿಸುವುದು, ಭೂಮಿ ಕಳೆದುಕೊಂಡವರು ಹಾಗೂ ಅವರ ಅವಲಂಬಿತರನ್ನು ಪುನರ್‌ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯದಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವುದು ಹೀಗೆ ಹಲವು ಅಂಶಗಳು ಕಾಯ್ದೆಯಲ್ಲಿವೆ.

ನಂಜನಗೂಡಿಗೆ ಫಿಲ್ಮ್‌ ಸಿಟಿ: ಹೆಸರುಘಟ್ಟದ ಪಶುಸಂಗೋಪನಾ ಇಲಾಖೆಗೆ ಸೇರಿದ ಜಾಗದಲ್ಲಿ ‘ಅಂತರರಾಷ್ಟ್ರೀಯ ಚಲನಚಿತ್ರ ನಗರ’ ಸ್ಥಾಪನೆ ಪ್ರಸ್ತಾಪವನ್ನು ಕೈಬಿಟ್ಟಿರುವ ಸಚಿವ ಸಂಪುಟ ಸಭೆ ಅದನ್ನು ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ ನಿರ್ಮಾಣ ಮಾಡಲು ಸಂಪುಟ ತೀರ್ಮಾನಿಸಿದೆ.

ಇಮ್ಮಾವು ಗ್ರಾಮದಲ್ಲಿ 110 ಎಕರೆ 8 ಗುಂಟೆ ಜಾಗ ಇದ್ದು, ಅದನ್ನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗುತ್ತದೆ.
ಹೆಸರಘಟ್ಟದಲ್ಲಿ ಜಾಗ ನೀಡಲು ಪಶುಸಂಗೋಪನಾ ಇಲಾಖೆ ನಿರಾಕರಿಸಿದ ಕಾರಣ ಅದನ್ನು ನಂಜನಗೂಡಿಗೆ ಸ್ಥಳಾಂತರಿಸಲಾಗುವುದು. ವಾರ್ತಾ ಇಲಾಖೆ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ನಗರ ನಿರ್ಮಾಣವಾಗಲಿದೆ.

ತಿಂಗಳಾಂತ್ಯದಲ್ಲಿ: ವಿಧಾನಮಂಡಲದ ವಿಶೇಷ ಅಧಿವೇಶನವನ್ನು ಇದೇ ತಿಂಗಳ ಕೊನೆ ಅಥವಾ ನವೆಂಬರ್‌ ಮೊದಲು ವಾರದಲ್ಲಿ ನಡೆಸಲು ಸಂಪುಟ ಸಭೆ ತೀರ್ಮಾನಿಸಿದೆ. ಇದೇ 28 ರಿಂದ 10 ದಿನ ಅಧಿವೇಶನ ನಡೆಯುವ ಸಾಧ್ಯತೆ ಇದೆ. ಆದರೆ ದಿನಾಂಕ ನಿಗದಿ ಅಧಿಕಾರವನ್ನು ಸಂಪುಟ ಸಭೆ ಮುಖ್ಯಮಂತ್ರಿಯವರಿಗೆ ನೀಡಿದೆ. ಲೋಕಾಯುಕ್ತ ಕಾಯ್ದೆಗೆ ಸಮಗ್ರ ತಿದ್ದಪಡಿ ತರಲು ತೀರ್ಮಾನಿಸಿದ್ದು, ಆ ಕುರಿತು ಚರ್ಚೆ ಆಗುವ ಸಾಧ್ಯತೆ ಇದೆ. ಬರ, ನೆರೆ ವಿಚಾರವೂ ಚರ್ಚೆಗೆ ಬರಲಿದೆ ಎಂದು ಸಚಿವ ಜಯಚಂದ್ರ ತಿಳಿಸಿದರು.

₹100 ಲಂಚ:  ಕಡ್ಡಾಯ ನಿವೃತ್ತಿ ಶಿಕ್ಷೆ
ಬೆಂಗಳೂರು:
ಲಂಚ ಪಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ಶಿಫಾರಸಿನ ಪ್ರಕಾರ ಒಬ್ಬರನ್ನು  ಸೇವೆಯಿಂದ ವಜಾ ಮಾಡಲು ಮತ್ತು ಇಬ್ಬರನ್ನು ಕಡ್ಡಾಯ ನಿವೃತ್ತಿಗೊಳಿಸಲು ಸಂಪುಟ ಸಭೆ ತೀರ್ಮಾನಿಸಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಾಂಶುಪಾಲ ಸಿ.ದೇವರಾಜಪ್ಪ ಅವರು ಕಡೂರು ತಾಪಂ  ಕಾರ್ಯ ನಿರ್ವಹಣಾಧಿಕಾರಿಯಾಗಿದ್ದಾಗ ₹ 4 ಸಾವಿರ ಲಂಚ ಪಡೆದು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈ ಆರೋಪ ಸಾಬೀತಾಗಿರುವ ಕಾರಣ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು.

₹ 100 ಲಂಚ ಪಡೆಯುವಾಗ ಅರಣ್ಯ ರಕ್ಷಕ ಎಚ್‌.ಭವಾನಿಶಂಕರ್‌ ಪುತ್ರನ್‌ ಸಿಕ್ಕಿಬಿದ್ದಿದ್ದರು. ಇವರ ವಿರುದ್ಧದ ಆರೋಪ ಸಾಬೀತಾದ ಕಾರಣಕ್ಕೆ ಅವರನ್ನು ಸೇವೆಯಿಂದ ವಜಾ ಮಾಡಲು ಲೋಕಾಯುಕ್ತ ಪೊಲೀಸರು ಶಿಫಾರಸು ಮಾಡಿದ್ದರು. ಕೆಳಹಂತದ ಸಿಬ್ಬಂದಿಯಾದ ಕಾರಣ  ಅವರನ್ನು ವಜಾ ಮಾಡುವುದರ ಬದಲು ಕಡ್ಡಾಯ ನಿವೃತ್ತಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.

ಲೋಕಾಯುಕ್ತ ಬಲೆ ಸಿಕ್ಕಿಬಿದ್ದಿದ್ದ ಔರಾದ್‌ನ ಹಿರಿಯ ಉಪ ನೋಂದಣಾಧಿಕಾರಿ ಬಸವರಾಜ ಪಾಟ್ನೆ ಅವರನ್ನೂ ಕಡ್ಡಾಯ ನಿವೃತ್ತಿಗೊಳಿಸಲು ತೀರ್ಮಾನಿಸಲಾಯಿತು ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT