ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಸುಗ್ರೀವಾಜ್ಞೆ ವಿರೋಧಿಸಿ ರೈತ ರಥಯಾತ್ರೆ

Last Updated 4 ಮಾರ್ಚ್ 2015, 11:37 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರ ಸರ್ಕಾರವು ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ವಿರೋಧಿಸಿ ರೈತ ಸಂಘಟನೆಗಳ ನೇತೃತ್ವದ ವಿವಿಧ ಸಂಘಟನೆಗಳು ಹುಣಸೂರು ತಾಲ್ಲೂಕಿನ ಕಲ್ಲಳ್ಳಿಯಿಂದ ಬೆಂಗಳೂರಿನವರೆಗೆ ರೈತ ರಥಯಾತ್ರೆಯನ್ನು ಹಮ್ಮಿಕೊಳ್ಳಲಿವೆ.

ಮಂಗಳವಾರ ನಗರದ ಎಂಜಿನಿಯರ್ಸ್‌ ಸಂಸ್ಥೆಯಲ್ಲಿ ರೈತ ಮುಖಂಡರು, ಪ್ರಗತಿಪರ ಸಂಘಟನೆಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡ ಅಡಗೂರು ಎಚ್‌. ವಿಶ್ವನಾಥ್ ಈ ವಿಷಯ ತಿಳಿಸಿದರು.

‘ರೈತವಿರೋಧಿ ಸುಗ್ರೀವಾಜ್ಞೆಗೆ ಅಣ್ಣಾ ಹಜಾರೆಯವರು ಪ್ರತಿಭಟನೆ ನಡೆಸಿದರೂ, ತಮ್ಮ ಪಕ್ಷದ ಮುಖಂಡರೇ ಅಪಸ್ವರ ಎತ್ತಿದರೂ ಪ್ರಧಾನಿ ನರೇಂದ್ರ ಮೋದಿ ಅವರು ಹಿಂಪಡೆಯುವ ಕುರಿತು ಹೇಳುತ್ತಿಲ್ಲ. ಆದರೆ, ಅಪಾರ ವಿರೋಧದ ಬಿಸಿಗೆ ಮಣಿದು ತಿದ್ದುಪಡಿಗೆ ಒಪ್ಪಿದ್ದಾರೆ. ಇದು ಅವರ ಸರ್ವಾಧಿಕಾರ ಧೋರಣೆಯನ್ನು ತೋರಿಸುತ್ತದೆ’ ಎಂದು ಟೀಕಿಸಿದರು.

‘ಭೂಸ್ವಾಧೀನ ಮಸೂದೆಯು ಕೇವಲ ರೈತರಿಗೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಅನ್ನ ತಿನ್ನುವ ಎಲ್ಲರೂ ಇದನ್ನು ವಿರೋಧಿಸಬೇಕು. ಹೋರಾಟದಲ್ಲಿ ಕೈಜೋಡಿಸಬೇಕು. ಕಾರ್ಪೋರೆಟ್ ಉದ್ಯಮಿಗಳಿಂದ ಚುನಾವಣೆ ದೇಣಿಗೆ ಪಡೆದಿದ್ದ ಮೋದಿ, ಈಗ ಋಣ ತೀರಿಸುತ್ತಿದ್ದಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ದಿವಂಗತ ಡಿ. ದೇವರಾಜ ಅರಸು ಅವರು ಜನಿಸಿದ ಕಲ್ಲಳ್ಳಿಯಿಂದ ರಥಯಾತ್ರೆ ಆರಂಭಿಸುತ್ತೇವೆ. ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳ ಮೂಲಕ ಬೆಂಗಳೂರಿನವರೆಗೆ ನಡೆಸುತ್ತೇವೆ. ಇದರಲ್ಲಿ ಎಲ್ಲ ಪಕ್ಷದವರೂ ಭಾಗವಹಿಸಬಹುದು. ದಲಿತಪರ, ಕನ್ನಡಪರ, ಜನಪರ, ಪ್ರಗತಿಪರ ಸಂಘಟನೆಗಳು ಭಾಗವಹಿಸಬಹುದು.

ರಥಯಾತ್ರೆಯ ಮಾರ್ಗದಲ್ಲಿರುವ ಊರುಗಳ ಎಲ್ಲ ಸಂಘಟನೆಗಳ ಮುಖಂಡರೊಂದಿಗೆ ಸದ್ಯದಲ್ಲಿಯೇ ಸಭೆ ನಡೆಸಿ ದಿನಾಂಕ ನಿರ್ಧರಿಸುತ್ತೇವೆ. ಸದ್ಯ ನಡೆಯುತ್ತಿರುವ ಸಂಸತ್ ಅಧಿವೇಶನವು ಮುಕ್ತಾಯವಾಗುವುದರ ಒಳಗೆ ಈ ಪ್ರತಿಭಟನೆಯ ಸಂದೇಶವನ್ನು ಮುಟ್ಟಿಸುತ್ತೇವೆ. ಈ ಸಮಸ್ಯೆಗೆ ಒಂದು ತಾರ್ಕಿಕ ಅಂತ್ಯ ಕಾಣಿಸುವವರೆಗೆ ವಿಶ್ರಮಿಸುವುದಿಲ್ಲ’ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ಹೋರಾಟ ಸಮಿತಿ ಸಂಚಾಲಕ ಎಂ.ಲಕ್ಷ್ಮಣ್, ‘ಈ ಹೋರಾಟವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಸಂಘಟಿಸಲಾಗುವುದು. ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಸ್ವಾಮಿ ಅಗ್ನಿವೇಶ್ ಅವರನ್ನು ಮೈಸೂರಿಗೆ ಕರೆಸಿ ಬಹಿರಂಗ ಸಭೆ ನಡೆಸುವ ಯೋಜನೆಯಿದೆ. ಸ್ವಾಮಿ ಅಗ್ನಿವೇಶ್ ಅವರನ್ನು ಈಗಾಗಲೇ ಸಂಪರ್ಕಿಸಿದ್ದು, ಇಲ್ಲಿಗೆ ಬರುವ ಬಗ್ಗೆ ಸ್ಪಂದಿಸಿದ್ದಾರೆ. ಸಾಹಿತಿ ದೇವನೂರ ಮಹಾದೇವ ಅವರ ಮೂಲಕ ಮೇಧಾ ಪಾಟ್ಕರ್ ಅವರೊಂದಿಗೂ ಮಾತನಾಡಲಾಗಿದೆ’ ಎಂದರು.

‘ಹೋರಾಟ, ಮೆರವಣಿಗೆಯನ್ನು ಹೊರತುಪಡಿಸಿ ಸ್ಥಳೀಯ ಸಂಸದ ಪ್ರತಾಪಸಿಂಹ ಅವರ ಮೈಸೂರು ಮತ್ತು ಕೊಡಗು ಕಚೇರಿಗಳ ಮುಂದೆ ಧರಣಿ ನಡೆಸುತ್ತೇವೆ. ಅವರು ರೈತರಿಗೆ ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಚಾಮರಾಜನಗರ ಸಂಸದ ಧ್ರುವನಾರಾಯಣ ಮತ್ತು ಮಂಡ್ಯ ಸಂಸದ ಪುಟ್ಟರಾಜು ಅವರು ರೈತಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಪ್ರತಾಪಸಿಂಹ ಇದುವರೆಗೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ’ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಹಿಂದುಳಿದ ಸಂಘಟನೆಯ ಕೆ.ಎಸ್. ಶಿವರಾಮು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT