ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ತಾಯಿ ಹೊರೆ ಇಳಿಸುವ ಪರಿ

Last Updated 8 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ತ್ಯಾಜ್ಯ ಉತ್ಪತ್ತಿಯಾಗುವ ಬಗೆ, ಅದನ್ನು ಹೇಗೆಂದರಲ್ಲಿ ಎಸೆಯುವುದರಿಂದ ಉಂಟಾಗುವ ಗಂಭೀರತೆ, ಅದರಿಂದ ಗಾಳಿ, ನೀರು ಹಾಗೂ ಮಣ್ಣಿನ ಮೇಲಾಗುವ ಮಾರಕ ಪರಿಣಾಮಗಳ ಕುರಿತು ಕಳೆದ ವಾರದ ಲೇಖನದಲ್ಲಿ ತಿಳಿಸಿಕೊಡಲಾಗಿತ್ತು. ತಿಳಿವಳಿಕೆ ಇಲ್ಲದೆ ಕಸ ಎಸೆಯುವ ಪ್ರಕ್ರಿಯೆಗೆ ‘ಬೇಡ’ ಎನ್ನಲು, ಸಮರ್ಪಕ ವಿಲೇವಾರಿಗೆ ‘ಹೌದು’ ಎನ್ನಲು ಹಲವು ದಾರಿಗಳಿವೆ.

ಇದಕ್ಕೆ ಇಡಬೇಕಾದ ಮೊದಲ ಹೆಜ್ಜೆ ಎಂದರೆ, ನಾವು ಉತ್ಪತ್ತಿ ಮಾಡುವ ಕಸದ ಪ್ರಮಾಣವನ್ನು ಕಡಿಮೆ ಮಾಡುವುದು. ಅದು ಹೇಗೆ ಎಂಬುದರ ಕುರಿತು ಇಲ್ಲಿ ತಿಳಿದುಕೊಳ್ಳೋಣ. ನೀವು ಕಸವನ್ನು ಉತ್ಪತ್ತಿ ಮಾಡುತ್ತಿದ್ದೀರ ಎಂದಾದರೆ, ಅದರ ಜವಾಬ್ದಾರಿಯೂ ನಿಮ್ಮದೇ ಎಂಬುದನ್ನು ಮನವರಿಕೆ ಮಾಡಿಕೊಳ್ಳುವುದು ಅಷ್ಟೇ ಮುಖ್ಯ. ಒಬ್ಬ ಗ್ರಾಹಕರಾಗಿ, ನಿಮ್ಮ ಆಯ್ಕೆಯು ತ್ಯಾಜ್ಯ ಹಾಗೂ ಅದರ ಪ್ರಭಾವದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.

ಇಂದು ನಮ್ಮದು ಅತಿ ವೇಗದ ಜೀವನ. ನಮ್ಮ ಅನುಕೂಲಗಳು ಪರಿಸರ ಕಾಳಜಿಯನ್ನು ಹಿಮ್ಮೆಟ್ಟಿಕೊಂಡು ಓಡುತ್ತಿವೆ. ಆದರೂ ಇದರೆಡೆಗೆ ಲಕ್ಷ್ಯ ನೀಡಲೇಬೇಕು. ಕಸವನ್ನು ಮಿಶ್ರ ಮಾಡದೆ ಒಮ್ಮೆ ವಿಲೇವಾರಿ ಮಾಡುವಲ್ಲಿ ತೊಡಗಿಕೊಂಡಿರೆಂದರೆ ಕಸವನ್ನು ಮನೆಯಲ್ಲೇ ಕಡಿಮೆ ಮಾಡುವ ಒಂದು ಯೋಚನೆ ಸಹಜವಾಗೇ ಬರುತ್ತದೆ. ಇದು ಕಲಿಯುವ ಪ್ರಕ್ರಿಯೆಯೂ ಹೌದು. ಇದರ ಫಲಿತಾಂಶ ಮಾತ್ರ ಈಗಿನ ಕಸದ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ನಿವಾರಿಸಿದ ತೃಪ್ತಿಯನ್ನು ನೀಡುತ್ತದೆ.

ಕಡಿಮೆ ಕಸ ಉತ್ಪಾದಿಸಲು ಒಂದು ಸರಳ ಸೂತ್ರವಿದೆ. ಅದೆಂದರೆ  5 ‘ಆರ್‌’ಗಳು–ರೆಡ್ಯೂಸ್ (ಕಡಿಮೆ ಬಳಕೆ), ರೆಫ್ಯೂಸ್ (ತಿರಸ್ಕರಿಸುವುದು), ರಿಯೂಸ್ (ಮರುಬಳಕೆ), ರಿಸೈಕಲ್ (ಪುನರ್‌ಬಳಕೆ) ಮತ್ತು ರಿಪೇರ್ (ದುರಸ್ತಿ). ಇದರಲ್ಲಿ ಮೊದಲನೇ ಸ್ಥಾನ, ಪ್ಲಾಸ್ಟಿಕ್ ಕೈ ಚೀಲಗಳು. ಪ್ಲಾಸ್ಟಿಕ್‌ನ ಬದಲಿ ಎಂದು ಕರೆಸಿಕೊಳ್ಳುತ್ತಿರುವ ‘ಚೈನಾ ಜ್ಯೂಟ್ ಬ್ಯಾಗ್‌’ಗಳನ್ನು ಬಳಸುವುದು ಪ್ಲಾಸ್ಟಿಕ್‌ಗಿಂತ ಹೆಚ್ಚು ಅಪಾಯಕಾರಿ. ಇವನ್ನು ಮರುಬಳಕೆ ಮಾಡಲೂ ಸಾಧ್ಯವಿಲ್ಲ. ಆದ್ದರಿಂದ ಇದಕ್ಕೆ ಪರ್ಯಾಯವಾಗಿ ಬಟ್ಟೆ ಚೀಲ, ಸೆಣಬಿನ ಚೀಲ ಹಾಗೂ ಹೆಣೆದ ಬುಟ್ಟಿಗಳನ್ನು ಬಳಸಬಹುದು.

ಪ್ಲಾಸ್ಟಿಕ್ ಬಾಟಲಿಗಳು ಅಸುರಕ್ಷತೆ ಹಾಗೂ ಅವು ನಾವು ಅಂದುಕೊಂಡಷ್ಟು ಶುದ್ಧವಾಗಿಯೂ ಇರುವುದಿಲ್ಲ.  ಆದ್ದರಿಂದ ನಮ್ಮದೇ ಒಂದು ಬಾಟಲ್ ಅನ್ನು ಯಾವಾಗಲೂ ಜೊತೆಗೆ ಕೊಂಡೊಯ್ದರೆ ಚೆಂದ. ಸಮಾರಂಭಗಳಲ್ಲೂ ಸ್ಟೀಲ್ ಲೋಟಗಳನ್ನು, ಮತ್ತೆ ಬಳಸುವಂಥ ತಟ್ಟೆ, ಇನ್ನಿತರ ಅಡುಗೆ ಸಾಮಗ್ರಿಗಳನ್ನು ಬಳಸಿದರೆ ಉತ್ತಮ. ಒಂದು ಬಾರಿ ಬಳಸಿ ಎಸೆಯುವಂಥ ವಸ್ತುಗಳನ್ನು ಎಷ್ಟು ಕಡಿಮೆ ಮಾಡುತ್ತೇವೋ ಅಷ್ಟೂ ಒಳ್ಳೆಯದು.

ಕಿರಾಣಿ ಅಂಗಡಿಗೆ ಸಾಮಾನುಗಳನ್ನು ಖರೀದಿಸಲು ಹೋಗುವ ಮುನ್ನ ಒಂದಷ್ಟು ಯೋಚಿಸಿ. ಯಾವ ಸಾಮಾನನ್ನು ನಾವು ಪ್ಲಾಸ್ಟಿಕ್ ಹೊರತು ತರಬಹುದು ಎಂಬುದರ ಕುರಿತು ಯೋಚಿಸಿ. ನಿಮ್ಮದೇ ಕೈ ಚೀಲವನ್ನು ತೆಗೆದುಕೊಂಡು ಹೋದರೆ ಒಳ್ಳೆಯದು.  ಅಕ್ಕಿ, ಬೇಳೆ, ಬಾದಾಮಿ, ಸಕ್ಕರೆ ಇನ್ನಿತರ  ವಸ್ತುಗಳಿಗೆ ನೀವೇ ಮನೆಯಿಂದ ಕಂಟೇನರ್‌ಗಳನ್ನು ತೆಗೆದುಕೊಂಡು ಹೋಗಬಹುದು. ಅಂಗಡಿಗಳಲ್ಲಿ ಇವಕ್ಕೇ ಹೆಚ್ಚು ಪಾಲು ಪ್ಲಾಸ್ಟಿಕ್ ಬಳಕೆಯಾಗುತ್ತಿರುವುದು. ಕೆಲವರು ಹೀಗೆ ಮಾಡಲು ಮುಜುಗರ ಮಾಡಿಕೊಳ್ಳುತ್ತಾರೆ. ಆದರೆ ಬದಲಾವಣೆ ನಿಮ್ಮಿಂದಲೇ ಆರಂಭವಾಗಬಹುದಲ್ಲವೇ?

ಹೂವನ್ನು ಕೊಂಡುಕೊಳ್ಳುವಾಗ ಪ್ಲಾಸ್ಟಿಕ್ ಹಾಕುವ ಬದಲು ಅವರು ಸುತ್ತುವ ಎಲೆಯೇ ಸಾಕು. ಸಂಸ್ಕರಣಾ ಆಹಾರಗಳು ಹೆಚ್ಚಾಗಿ ಪ್ಯಾಕೇಜಿಂಗ್ ಆಗಿಯೇ ಬಂದಿರುತ್ತವೆ. ಆದ್ದರಿಂದ ಮನೆಯಲ್ಲೇ ಆಹಾರ ತಯಾರಿಸಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು. ಹೊರಗಿನ ತಿಂಡಿಯಿಂದ ಹೆಚ್ಚಿನ ಕಸ ಉಂಟಾಗುವುದೂ ತಪ್ಪುತ್ತದೆ. ಮೊದಲೇ ಪ್ಯಾಕ್ ಮಾಡಿದ ತರಕಾರಿಗಳ ಮೇಲೆ ದೂಳು ಇರುವುದಿಲ್ಲ, ಶುದ್ಧವಾಗಿರುತ್ತವೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ ಆದರೆ ಪ್ಯಾಕ್ ಮಾಡಿದ ಪ್ಲಾಸ್ಟಿಕ್ ಕೂಡ ತ್ಯಾಜ್ಯದ ರೂಪವೇ. ಶುದ್ಧತೆ ಹೆಸರಿನಲ್ಲಿ ತರಕಾರಿಗೆ ಪ್ಯಾಕ್ ಮಾಡಿದ ತೆಳ್ಳನೆ ಪ್ಲಾಸ್ಟಿಕ್‌ನಲ್ಲಿನ ಸ್ಟೈರೋಫೋಮ್ ಮರುಬಳಕೆ ಮಾಡಲು ಸಾಧ್ಯವೇ ಇಲ್ಲ.  ಜೊತೆಗೆ ಅವು ಭೂಮಿಯಲ್ಲಿ ಕರಗುವುದೂ ಇಲ್ಲ. ಅದು ಕಸವಾಗೇ ಉಳಿಯುತ್ತದೆ.

ಆನ್‌ಲೈನ್ ಶಾಪಿಂಗ್, ಹೋಮ್ ಡೆಲಿವರಿಗಳ ಮೂಲಕ ತರುವ ವಸ್ತುಗಳಲ್ಲಿ ಅಧಿಕ ಪ್ಯಾಕೇಜಿಂಗ್ ಇರುತ್ತದೆ. ಆದ್ದರಿಂದ ಆ ಕಸದ ಜವಾಬ್ದಾರಿಯನ್ನೂ ನೀವೇ ತೆಗೆದುಕೊಳ್ಳಬೇಕು. ಅಲ್ಯುಮಿನಿಯಂ ಹಾಳೆ, ತೆಳು ಪ್ಲಾಸ್ಟಿಕ್, ಟಿಷ್ಯೂ ಪೇಪರ್, ಕೆಲವೊಮ್ಮೆ ನ್ಯೂಸ್‌ ಪೇಪರ್‌ಗಳ ಬಳಕೆಯನ್ನೂ ಕಡಿಮೆ ಮಾಡಲು ಪ್ರಯತ್ನಿಸಿ. ಅದರ ಬದಲು ಬಾಳೆ ಎಲೆ ಅಥವಾ ಅಂಗಡಿಗಳಲ್ಲಿ ಲಭ್ಯವಿರುವ ದೊನ್ನೆ ಎಲೆಗಳಲ್ಲಿ ಸುತ್ತುವ ರೂಢಿ ಇಟ್ಟುಕೊಳ್ಳಿ.

ಆಹಾರ ರೈತರ ಶ್ರಮದ ಫಲ. ಆದ್ದರಿಂದ ಅದನ್ನು ಹೊರಗೆಸೆಯಬೇಡಿ. ಫ್ರಿಜ್ ಅನ್ನು ಆಗಾಗ ಪರಿಶೀಲಿಸುತ್ತಿರಿ. ಇದರಿಂದ ಆಹಾರವನ್ನು ಹೊರಗೆ ಎಸೆಯುವುದನ್ನು ತಪ್ಪಿಸಬಹುದು. ನಿಷೇಧಿತ ತ್ಯಾಜ್ಯ ಸಂಸ್ಕರಣೆ ಅತಿ ದೊಡ್ಡ ಸಮಸ್ಯೆ. ಆದ್ದರಿಂದ ಅದನ್ನು ಬಳಸುವುದನ್ನು ಕಡಿಮೆಗೊಳಿಸುವುದೇ ಏಕೈಕ ಪರಿಹಾರ. ಅದರಲ್ಲಿ ಅತಿ ಮುಖ್ಯವಾದದು ಸ್ಯಾನಿಟರಿ ಪ್ಯಾಡ್‌ಗಳು. ಪುನರ್ಬಳಕೆ ಮಾಡಬಹುದಾದಂಥ ಗ್ರೀನ್ ಮೆನ್‌ಸ್ಟ್ರುಯೇಷನ್ ಬಟ್ಟೆಗಳು ಹಾಗೂ ಮೆನ್‌ಸ್ಟ್ರುಯಲ್ ಕಪ್‌ಗಳೂ ಈಗ ಲಭ್ಯ. ಇದರಿಂದ ಅನಗತ್ಯ ಕಸ ಎಷ್ಟೋ ಕಡಿಮೆಯಾಗುತ್ತದೆ. ಮಕ್ಕಳಿಗೆಂದು, ತೊಳೆದು ಮತ್ತೆ ಬಳಸಬಹುದಾದ ನ್ಯಾಪೀಸ್‌ಗಳು ಒಳ್ಳೊಳ್ಳೆ ವಿನ್ಯಾಸದಲ್ಲಿ ಲಭ್ಯವಿವೆ.

ದೇವಸ್ಥಾನ ಇನ್ನಿತರ ಧಾರ್ಮಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಸುವ ಬದಲು ಆದಷ್ಟೂ ಬಾಳೆ ಎಲೆ ಅಥವಾ ದೊನ್ನೆ ಬಳಸಿದರೆ ಒಳ್ಳೆಯದು.
ಮದುವೆಗಳು ತ್ಯಾಜ್ಯವನ್ನು ಉತ್ಪತ್ತಿ ಮಾಡುವ ಕೇಂದ್ರಗಳು ಎಂದರೆ ತಪ್ಪಿಲ್ಲ. ಆದರೆ ಮದುವೆಯನ್ನು ಪರಿಸರಸ್ನೇಹಿಯಾಗಿ ಮಾಡಬಹುದು. ಸ್ಟೀಲ್ ಸಾಮಗ್ರಿಗಳಲ್ಲೇ ಅತಿಥಿಗಳಿಗೆ ಊಟವನ್ನು ನೀಡಿದರೆ ಅರ್ಧ ಸಮಸ್ಯೆಯನ್ನು ಅಲ್ಲೇ ನೀಗಿಸಿದಂತೆ. ಮದುವೆ ಮನೆ ಅಲಂಕಾರಕ್ಕೂ ಕೇವಲ ಜೈವಿಕ ವಸ್ತುಗಳನ್ನೇ ಬಳಸಬಹುದು. ಈ ಎಲ್ಲಾ ಅಭ್ಯಾಸಗಳು ಭೂಮಿ ತಾಯಿ ಮೇಲಿನ ಹೊರೆಯನ್ನು ಕಡಿಮೆಗೊಳಿಸಬಲ್ಲವು. ಒಂದು ಬಾರಿ ಬಳಸಿ ಬಿಸಾಡುವ ಪ್ಲಾಸ್ಟಿಕ್ ಉಪಯೋಗಿಸುವ ಸಂಸ್ಕೃತಿ ನಿಲ್ಲಿಸಿದರೆ, ನಗರದಲ್ಲಿನ ಕಸದ ಗುಡ್ಡೆಗಳು ಕ್ರಮೇಣ ಕಡಿಮೆಯಾಗುತ್ತವೆ.

ಇವೆಲ್ಲಾ ಕಷ್ಟ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ, ಒಮ್ಮೆ ಅಭ್ಯಾಸ ಮಾಡಿಕೊಂಡರೆ ಎಲ್ಲವೂ ಸುಲಭ. ಇಪ್ಪತ್ತು ವರ್ಷಗಳ ಹಿಂದೆ ನಾವು ಹೇಗೆ ವಸ್ತುಗಳನ್ನು ಬಳಸುತ್ತಿದ್ದೆವು ಎಂಬುದನ್ನು ನೆನಪು ಮಾಡಿಕೊಂಡರೆ ಸಾಕು.  ಆಗ ಮುಕ್ಕಾಲು ಪಾಲು ವಸ್ತುಗಳು ಪರಿಸರಸ್ನೇಹಿಯಾಗಿದ್ದು, ಅಷ್ಟೊಂದು ತ್ಯಾಜ್ಯ ಹೊರಗುಳಿಯುತ್ತಿರಲಿಲ್ಲ. ಇಂಥ ಸಮಸ್ಯೆಗಳೂ ಇರಲಿಲ್ಲ.
ಕಸದ ಪ್ರಮಾಣ ಕಡಿಮೆ ಮಾಡಿದ ನಂತರ ಅದರ ನಿರ್ವಹಣೆ ಕೆಲಸ. ಹೈಕೋರ್ಟ್‌ ಮೂರು ರೀತಿಯ ವಿಂಗಡಣೆಗೆ ಆದೇಶ ಹೊರಡಿಸಿದೆ.  ಇದನ್ನು ದಿನನಿತ್ಯ ಅಭ್ಯಾಸ ಮಾಡಿದರೆ ಸಾಕು. ಸಂಸ್ಕರಣಾ ಘಟಕಕ್ಕೆ ಕಡಿಮೆ ಕಸ ಕಳಿಸಿ, ಹೆಚ್ಚು ಮರುಬಳಕೆ ಮಾಡಿಕೊಳ್ಳಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT