ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನೌಕೆಗೆ ‘ಅತ್ಯುತ್ತಮ ಆವಿಷ್ಕಾರ’ ಪುರಸ್ಕಾರ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ಭಾರತದ ಮಂಗಳ­ಯಾನ ನೌಕೆಯು ಟೈಮ್‌ ನಿಯತಕಾಲಿಕದ ೨೦೧೪ನೇ ಸಾಲಿನ ಅತ್ಯುತ್ತಮ ಆವಿಷ್ಕಾರ ಪುರ­ಸ್ಕಾರಕ್ಕೆ ಪಾತ್ರವಾಗಿದೆ. ಈ ತಾಂತ್ರಿಕ ಸಿದ್ಧಿಯು ಭಾರತಕ್ಕೆ ಅನ್ಯಗ್ರಹ ಶೋಧನಾ ಕ್ಷೇತ್ರದಲ್ಲಿ ತೊಡಗಲು ಅಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ನಿಯತಕಾಲಿಕ ಅಭಿಪ್ರಾಯಪಟ್ಟಿದೆ.

‘ಮೊತ್ತಮೊದಲ ಯತ್ನದಲ್ಲೇ ಮಂಗಳ ಗ್ರಹ­ವನ್ನು ತಲುಪುವುದರಲ್ಲಿ ಬೇರ್‍್ಯಾವ ದೇಶವೂ ಯಶಸ್ಸು ಸಾಧಿಸಿರಲಿಲ್ಲ. ಅಮೆರಿಕ, ರಷ್ಯಾ, ಐರೋಪ್ಯ ರಾಷ್ಟ್ರಗಳೂ ಇದರಲ್ಲಿ ಯಶಸ್ವಿಯಾಗಿ­ರಲಿಲ್ಲ. ಆದರೆ ಸೆ.೨೪ರಂದು ಭಾರತವು ಈ ಚಾರಿತ್ರಿಕ ಸಾಧನೆಯನ್ನು ಮಾಡಿತು. ಏಷ್ಯಾದ ಬೇರ್‍್ಯಾವುದೇ ದೇಶ ಈವರೆಗೆ ಈ ಸಾಧನೆಯನ್ನು ಮಾಡಿಲ್ಲ. ಇದಕ್ಕೆ ಕಾರಣವಾದ ಮಂಗಳಯಾನ ನೌಕೆಯು ‘ಪರಮಚತುರ ಗಗನನೌಕೆ’ಯಾಗಿದೆ (ದಿ ಸೂಪರ್‌ಸ್ಮಾರ್ಟ್‌ ಸ್ಪೇಸ್‌ಕ್ರಾಫ್‌್ಟ) ಎಂದು ನಿಯತಕಾಲಿಕವು ಕೊಂಡಾಡಿದೆ.

ಮಂಗಳಯಾನ ನೌಕೆಯು ಪ್ರಸಕ್ತ ಸಾಲಿಗೆ ಆಯ್ಕೆ­ಯಾಗಿರುವ ೨೫ ಅತ್ಯುತ್ತಮ ಆವಿಷ್ಕಾರ­ಗಳಲ್ಲಿ ಒಂದಾಗಿದೆ. ನಿಯತಕಾಲಿಕ ಹೇಳುವ ಪ್ರಕಾರ, ಜೀವಜಗತ್ತಿನ ಸ್ಥಿತಿಯನ್ನು ಉತ್ತಮ­ಗೊಳಿಸಲು, ಜನಜೀವನಕ್ಕೆ ಒಂದಷ್ಟು ಮೋಜು ತುಂಬಲು ಹಾಗೂ ಬದುಕನ್ನು ಒಪ್ಪ ಓರಣ­ಗೊಳಿಸಲು ನೆರವಾಗುವ ಆವಿಷ್ಕಾರಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.

‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಈ ನೌಕೆಯನ್ನು ಕೇವಲ ₨ ೪೫೦ ಕೋಟಿ ವೆಚ್ಚದಲ್ಲಿ (೭.೪ ಕೋಟಿ ಡಾಲರ್‌) ಅಭಿವೃದ್ಧಿಪಡಿಸಿದೆ. ಇದು ‘ಗ್ರ್ಯಾವಿಟಿ’ ಎಂಬ ಸಿನಿಮಾ ನಿರ್ಮಿಸಲು ಆಗಿರುವ ವೆಚ್ಚಕ್ಕಿಂತ ಕಡಿಮೆ’ ಎಂಬ ಮೆಚ್ಚುಗೆಯ ಮಾತುಗಳನ್ನೂ ಆಡಲಾಗಿದೆ.

ಆದರೆ, ಭಾರತವು ಅನ್ಯಗ್ರಹ ಶೋಧನೆಯಲ್ಲಿ ಭಾಗಿಯಾಗಲು ಇದು ಅಪಾರ ಅವಕಾಶಗಳನ್ನು ಸೃಷ್ಟಿಸಲಿದೆ ಎಂಬುದು ಬೇರೆಲ್ಲವುಗಳಿಗಿಂತ ಮುಖ್ಯ­ವಾ­ದುದು. ಇದರಿಂದಾಗಿ ಭಾರತದ ಅಂತರಿಕ್ಷ ಯೋಜನೆಗಳಿಗೆ ಮಾತ್ರವಲ್ಲದೆ ಜಾಗತಿಕ ವಿಜ್ಞಾನ ಕ್ಷೇತ್ರಕ್ಕೆ ಕೂಡ ಭಾರಿ ಉಪಯೋಗವಾಗಲಿದೆ ಎಂದು ಟೈಮ್‌ ನಿಯತಕಾಲಿಕ ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಇನ್ನಿಬ್ಬರು ಭಾರತೀಯರಾದ ನಳಿನಿ ನಾಡಕರ್ಣಿ ಮತ್ತು ಪ್ರಮೋದ್‌ ಶರ್ಮ ಅವರ ಆವಿಷ್ಕಾರಗಳೂ ಈ ಪ್ರತಿಷ್ಠಿತ ಪುರಸ್ಕಾರಕ್ಕೆ ಪಾತ್ರವಾಗಿವೆ.

ಅರಣ್ಯ ಜೀವವೈವಿಧ್ಯ ತಜ್ಞೆ ಹಾಗೂ ಪ್ರೊಫೆಸರ್‌ ಆಗಿರುವ ನಳಿನಿ ಅವರು ಒಬ್ಬಂಟಿ ಕೈದಿಗಳ ಖಿನ್ನ ಮನಸ್ಥಿತಿಯನ್ನು ತಿಳಿಗೊಳಿಸಲು ನೆರವಾಗುವ ‘ಬ್ಲ್ಯೂ ರೂಮ್‌’ ಎಂಬ ಮಾರ್ಗೋಪಾಯವನ್ನು ಅಮೆರಿಕದ ಒರಿಗಾನ್‌ ಸಂಸ್ಥೆಯೊಂದರ ಜತೆ ಸೇರಿ ಕಂಡುಹಿಡಿದಿದ್ದಾರೆ. ಸಂಶೋಧನೆಗಳ ಪ್ರಕಾರ, ದಿನದ ೨೩ ಗಂಟೆಗಳನ್ನು ಅತ್ಯಂತ ಚಿಕ್ಕದಾದ ಕೋಣೆಯ ನಾಲ್ಕು ಬಿಳಿ ಗೋಡೆಗಳ ನಡುವೆ ಕಳೆಯುವ ‘ಒಬ್ಬಂಟಿ ಕೈದಿ’ಗಳು ಮಾನಸಿಕ ಅಸ್ವಸ್ಥತೆಗೆ ಒಳಗಾಗುವ, ಆತ್ಮಹತ್ಯೆಗೆ ಯತ್ನಿಸುವ ಹಾಗೂ ಹಿಂಸಾ ಪ್ರವೃತ್ತಿ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚು. 

ಇಂತಹ ಕೈದಿಗಳನ್ನು ಬಿಡುವಿನ ಅವಧಿಯಲ್ಲಿ ಜೈಲಿನಲ್ಲೇ ಪ್ರತ್ಯೇಕವಾಗಿ ಸ್ಥಾಪಿಸಲಾದ ‘ಬ್ಲ್ಯೂ ರೂಮ್‌’ಗೆ ಬಿಡಲಾಗುತ್ತದೆ. ಈ ‘ಬ್ಲ್ಯೂ ರೂಮ್‌’ ಒಳಾವರಣದಲ್ಲಿ ಪ್ರೊಜೆಕ್ಟರ್‌ ನೆರವಿನಿಂದ ಜಲಪಾತ, ಮರುಭೂಮಿಯಂತಹ ದೃಶ್ಯಗಳನ್ನು ತೋರಿಸಲಾಗುತ್ತದೆ.

ಒಟ್ಟಾರೆ, ಸಾಮಾನ್ಯ ಜನರು ಉದ್ಯಾನ­ವೊಂದರಲ್ಲಿ ನಡೆದಾಡಿದಾಗ ಹೇಗೆ ಮನಸ್ಸು ಶಾಂತ­ಗೊಳ್ಳುತ್ತದೋ ಅಂತಹುದೇ ಅನುಭ­ವ­­ವಾಗು­ವಂತೆ ಇದನ್ನು ರೂಪಿಸಲಾಗಿದೆ. ಇದರಿಂದ ಕೈದಿಗಳ ಮಾನಸಿಕ ಆರೋಗ್ಯ ಉತ್ತಮ­ಗೊಳ್ಳುವುದು ದೃಢಪಟ್ಟಿದೆ ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT