ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳಯಾನಕ್ಕೆ ಬೆಳಗಾವಿ ಉಪಕರಣ

‘ಸರ್ವೊಕಂಟ್ರೋಲ್ಸ್’ ನೌಕರರಿಂದ ಸಂಭ್ರಮಾಚರಣೆ
Last Updated 24 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಳಗಾವಿ: ದೇಶವು ಮೊದಲ ಯತ್ನದಲ್ಲೇ ಮಂಗಳನ ಕಕ್ಷೆಗೆ ನೌಕೆ ಸೇರಿಸುವಲ್ಲಿ ಬುಧವಾರ ಮುಂಜಾನೆ ಯಶಸ್ವಿ­ಯಾಗಿದ್ದು, ಭಾರತೀಯ ಬ್ಯಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿಗಳು ಸಂಭ್ರಮದ ಹೊಳೆಯಲ್ಲಿ ಅತ್ತ ಬೆಂಗಳೂರಿನಲ್ಲಿ ತೇಲಿದರೆ, ಇತ್ತ ಬೆಳಗಾವಿಯ ‘ಸರ್ವೊಕಂಟ್ರೋಲ್ಸ್‌ ಏರೋಸ್ಪೇಸ್‌ ಇಂಡಿಯಾ ಕಂಪೆನಿ ಎಂಜಿನಿಯರ್‌ಗಳು ಸಹ ರೋಮಾಂಚನ­ಗೊಂಡರು.

ಇಸ್ರೊ ಸಂಸ್ಥೆಯು ಮಂಗಳ ಗ್ರಹಕ್ಕೆ ಹಾರಿಸಿದ ಉಪಗ್ರಹಕ್ಕೆ ಅಗತ್ಯವಾಗಿದ್ದ ‘ಸ್ಥಾನ ಸಂಜ್ಞಾಪರಿವರ್ತಕ’ (ಪೊಜಿಷನ್‌ ಟ್ರಾನ್ಸ್‌ಡ್ಯೂಸರ್‌) ತಯಾರಿಸಿಕೊಟ್ಟ ‘ಸರ್ವೊಕಂಟ್ರೋಲ್ಸ್‌’ ಕಂಪೆನಿ ಎಂಜಿನಿಯರ್‌ಗಳಲ್ಲಿ  ಧನ್ಯತಾ ಭಾವ ಮೂಡಿದೆ. ನಗರದಲ್ಲಿರುವ ಈ ಕಂಪೆನಿಯ ಕಚೇರಿಯಲ್ಲಿ ಬುಧವಾರ ಹಬ್ಬದ ವಾತಾವರಣ ಉಂಟಾಗಿತ್ತು. ಮಂಗಳಯಾನ ಯಶಸ್ವಿಯಾಗಿ­ರುವುದ­ರಿಂದ ನೌಕರರೆಲ್ಲ ಸಿಹಿ ವಿತರಿಸುವ ಮೂಲಕ ಸಂತಸ ಹಂಚಿಕೊಂಡರು.

ಇವರು ತಯಾರಿಸಿರುವ ‘ಸ್ಥಾನ ಸಂಜ್ಞಾ ಪರಿವರ್ತಕ’ವು ಉಪಗ್ರಹವನ್ನು ಗ್ರಹದ ಕಕ್ಷೆಯ ನಿರ್ದಿಷ್ಟ ಸ್ಥಳದಲ್ಲಿ  ಇಳಿಯಬೇಕಾಗಿರುವ ಹಾಗೂ ಅದು ಬದಲಾಯಿಸಬೇಕಾದ ಪಥದ ಕುರಿತ ಮಾಹಿತಿಯನ್ನು ಮುಖ್ಯ ಕಂಟ್ರೋ­ಲರ್‌ಗೆ ರವಾನಿಸುತ್ತದೆ. ಉಪಗ್ರಹವು ಕಕ್ಷೆಯೊಳಗೆ ಸರಿಯಾಗಿ ಸೇರುವ ಪ್ರಕ್ರಿಯೆಯಲ್ಲಿ ಈ ಉಪಕರಣವು ಮಹತ್ವದ ಪಾತ್ರ ನಿರ್ವಹಿಸುತ್ತದೆ. ‘ಮಾರ್ಸ್‌ ಆರ್ಬಿಟರ್‌’ಗೆ ಬಳಸಿದ್ದ ‘ಸ್ಥಾನ ಸಂಜ್ಞಾಪರಿವರ್ತಕ’ವು ಯಶಸ್ವಿ­ಯಾಗಿ ಕಾರ್ಯನಿರ್ವ­ಹಿಸಿರು­ವುದು ‘ಸರ್ವೊಕಂಟ್ರೋಲ್ಸ್‌’ ಕಂಪೆನಿಯ ಕೀರ್ತಿಯನ್ನು ಇಮ್ಮಡಿಗೊಳಿಸಿದೆ.

ಈ ಐತಿಹಾಸಿಕ ಸಾಧನೆಯ ಸಂಭ್ರಮವನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ದೀಪಕ್‌ ಧಡೊತಿ, ‘ಎರಡು ವರ್ಷಗಳ ಹಿಂದೆ ಇಸ್ರೊ ನಡೆಸಿದ ಚಂದ್ರ­ಯಾನದಲ್ಲೂ ನಮ್ಮ ಉಪಕರಣ­ವನ್ನು ಬಳಸಿಕೊಳ್ಳಲಾಗಿತ್ತು. ಈ ಬಾರಿಯ ಮಂಗಳಯಾನಕ್ಕೂ ನಾವು ಸಿದ್ಧಪಡಿಸಿ­ಕೊಟ್ಟಿದ್ದೆವು. ಈ ಯಾನ ಯಶಸ್ವಿ­ಯಾ­ಗಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ’ ಎಂದು ಮಾತು ಆರಂಭಿ­ಸಿದರು.

‘ಏರೋಸ್ಪೇಸ್‌ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನಾವು ಕೆಲಸ ಮಾಡು­ತ್ತಿದ್ದೇವೆ. ನಾಲ್ಕು ವರ್ಷಗಳ ಹಿಂದೆ ಇಸ್ರೊ ಸಂಸ್ಥೆಯು ‘ಸ್ಥಾನ ಸಂಜ್ಞಾಪರಿ­ವರ್ತಕ’ವನ್ನು ಸಿದ್ಧಪಡಿಸಿ­ಕೊಡುವ ಜವಾ­ಬ್ದಾರಿಯನ್ನು ನಮಗೆ ನೀಡಿತು. ಅವರಿಗೆ ಬೇಕಾದ ವಿನ್ಯಾಸವನ್ನು ನೀಡಿ­ದ್ದರು. ಅಮೆರಿಕದ ‘ಫರ್ಸ್ಟ್‌ಮಾರ್ಕ್‌ ಏರೋಸ್ಪೇಸ್‌’ ಕಂಪೆನಿಯ ಸಹಭಾಗಿತ್ವ­ದಲ್ಲಿ ಆರು ತಿಂಗಳ ಅವಧಿಯಲ್ಲಿ ಈ ಉತ್ಪನ್ನವನ್ನು ಸಿದ್ಧಪಡಿಸಿಕೊಟ್ಟೆವು.

ನೌಕಾಯಾನಕ್ಕೆ 35 ‘ಸ್ಥಾನ ಸಂಜ್ಞಾಪರಿ­ವರ್ತಕ’ಗಳು ಅಗತ್ಯ ಇರುತ್ತವೆ. ಒಂದು ಸೆಟ್‌ ಉಪಕರಣ  ತಯಾರಿಸಲು ಸುಮಾರು ಮೂರರಿಂದ ನಾಲ್ಕು ತಿಂಗಳು ತಗಲುತ್ತವೆ.  ಮೈನಸ್‌ 200 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ತಾಪ­ಮಾನ­ದಲ್ಲೂ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿರುವುದು ಈ ಉಪ­ಕರಣದ ವಿಶೇಷವಾಗಿದೆ. ಒಂದು ‘ಸ್ಥಾನ ಸಂಜ್ಞಾಪರಿವರ್ತಕ’ ಸಿದ್ಧಪಡಿ­ಸಲು ಸುಮಾರು ₨ 5 ಲಕ್ಷ ವೆಚ್ಚವಾಗುತ್ತದೆ’ ಎಂದು ದೀಪಕ್‌ ಮಾಹಿತಿ ನೀಡಿದರು.

‘ನಾಸಾ, ‘ಯೂರೋಪಿಯನ್‌ ಸ್ಪೇಸ್‌ ಕಮಿಷನ್‌’, ‘ರಷ್ಯನ್‌ ಸ್ಪೇಸ್‌ ಅಥಾರಿಟಿ’ ಸಂಸ್ಥೆಗಳ ಬಳಿಕ ಇದೀಗ ಇಸ್ರೊ  ಮಂಗಳಯಾನವನ್ನು ಯಶಸ್ವಿ­ಯಾಗಿ ಪೂರೈಸಿದೆ. ಇದು ಭಾರತದಲ್ಲಿ ಉಪಗ್ರಹಗಳ ಉಡಾವಣೆಗೆ ಇನ್ನಷ್ಟು ಪ್ರೇರಣೆ ನೀಡಲಿದೆ. ಸದ್ಯ ನಾವು ಇಸ್ರೊಗೆ ಮಾತ್ರ ಈ ಉಪಕರಣವನ್ನು ನೀಡುತ್ತಿದ್ದೇವೆ. ಬೇರೆ ಬಾಹ್ಯಾಕಾಶ ಸಂಸ್ಥೆಗಳು ಮುಂದೆ ಬಂದರೆ, ಅವರ ಅಗತ್ಯಕ್ಕೆ ತಕ್ಕಂತೆ ಉಪಕರಣ ಸಿದ್ಧಪಡಿಸಿ­ಕೊಡಲು ನಾವು ಸಿದ್ಧರಿದ್ದೇವೆ’ ಎಂದು ಅವರು ತಿಳಿಸಿದರು.

ಹೈಡ್ರಾಲಿಕ್‌ ಆ್ಯಕ್ಚುವೇಟರ್‌: ‘ಗ್ರಹದ ಕಕ್ಷೆಗೆ ನೌಕೆಯನ್ನು ಸರಿಯಾಗಿ ನೂಕುವ ಕೆಲಸ ಮಾಡುವ ‘ಹೈಡ್ರಾಲಿಕ್‌ ಆ್ಯಕ್ಚುವೇಟರ್‌’ ಉಪಕರಣ ನಿರ್ಮಿಸಲು ಸಂಶೋಧನೆ ನಡೆದಿದೆ. ಜೊತೆಗೆ ನೌಕೆಯಲ್ಲಿ ಎಷ್ಟು ಪ್ರಮಾಣದ ಇಂಧನ ಬಾಕಿ ಉಳಿದಿದೆ, ಇನ್ನೂ ಎಷ್ಟು ದಿನಗಳ ಕಾಲ ಇಂಧನ ಸಾಕಾಗಬಹುದು ಎಂಬ ಬಗ್ಗೆ ಈ ಉಪಕರಣವು ನಿಖರವಾದ ಮಾಹಿತಿ ರವಾನಿಸಲಿದೆ. ನೌಕೆಯಲ್ಲಿನ ಇಂಧನ ಲಭ್ಯತೆ ಕುರಿತು ಸರಿಯಾದ ಮಾಹಿತಿ ಸಿಗದ ಕಾರಣ ಜಪಾನ್‌ ಕೈಗೊಂಡಿದ್ದ ಮಂಗಳಯಾನ ವಿಫಲ­ವಾ­ಗಿತ್ತು. ಹೀಗಾಗಿ ನೌಕಾಯಾನ ಯಶಸ್ವಿ­ಯಾ­ಗಲು ಈ ಉಪಕರಣವು ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ’ ಎಂದು ದೀಪಕ್‌ ಹೇಳಿದರು.

‘ಭವಿಷ್ಯದಲ್ಲಿ ಇಂಧನದ ಸಮಸ್ಯೆ ಎದುರಾಗಲಿದೆ. ಹೀಗಾಗಿ ಮಂಗಳ ಗ್ರಹದಲ್ಲಿ ಇಂಧನ ಲಭ್ಯತೆ ಇದೆಯೇ ಎಂಬ ಬಗ್ಗೆ ಸಂಶೋಧನೆ ನಡೆಸಲು ಹಲವು ದೇಶಗಳು ಉಪಗ್ರಹಗಳನ್ನು ಹಾರಿಸುತ್ತಿವೆ. ಮಂಗಳ ಗ್ರಹಕ್ಕೆ ಹೋಗಿ ಮನುಷ್ಯ ನೆಲೆಸುವುದಕ್ಕಿಂತ ಅಲ್ಲಿನ ಇಂಧನ ಸಂಪನ್ಮೂಲವನ್ನು ಭೂಮಿಗೆ ತರಲು ಸಾಧ್ಯವೇ ಎಂಬ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿ­ದ್ದಾರೆ. ಇದೀಗ ಭಾರತ ಹಾರಿಸಿದ ಉಪಗ್ರಹವು ಇಂಥ ಸಂಶೋಧನೆ ಕೈಗೊಳ್ಳಲು ಸಹಕಾರಿಯಾಗಲಿದೆ’ ಎನ್ನುತ್ತಾರೆ ದೀಪಕ್‌ ಧಡೊತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT