ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಶೈಲಿ ಚಿಕನ್‌ ವೈವಿಧ್ಯ

ನಳಪಾಕ
Last Updated 6 ಮೇ 2016, 19:30 IST
ಅಕ್ಷರ ಗಾತ್ರ

ಪುತ್ತೂರು ಮೂಲದ ಉದಯ ಕುಮಾರ್‌ ಓದಿದ್ದು ಎಸ್ಸೆಸ್ಸೆಲ್ಸಿ, ಕೆಲಸಕ್ಕಾಗಿ ದೂರದ ಬೆಂಗಳೂರಿಗೆ ಬಂದರು. ಹೋಟೆಲ್‌ನಲ್ಲಿ ಸಿಕ್ಕ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಲೇ ಅಡುಗೆ ಮಾಡುವುದನ್ನು ಕಲಿತರು. 15 ವರ್ಷಗಳ ಹಿಂದೆ ಈಜೀಪುರದ ಬಾರ್‌ ಅಂಡ್‌ ರೆಸ್ಟೋರೆಂಟ್‌ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಚೈನೀಸ್‌ ಫುಡ್‌ ಮಾಡುವುದನ್ನು ಕಲಿತರು.

ನಂತರ ಕೋರಮಂಗಲದ ಕೊಂಕಣ್‌ ರೆಸ್ಟೋರೆಂಟ್‌ನಲ್ಲಿ ಬಾಣಸಿಗರಾಗಿ ಸೇರಿಕೊಂಡರು. ಅಲ್ಲಿ ಗೋವಾ ಹಾಗೂ ಮಂಗಳೂರು ಶೈಲಿ ಆಹಾರ ಸಿದ್ಧಪಡಿಸುವ ಕಲೆಯನ್ನು ತಮ್ಮದಾಗಿಸಿಕೊಂಡರು. ನಂತರ ಮಂಗಳೂರು ಪರ್ಲ್‌ ಹೋಟೆಲ್‌ಗೆ ಬಂದರು.  ಈ ಹೋಟೆಲ್‌ನಲ್ಲಿ ಇವರದು 11 ವರ್ಷಗಳ ಅನುಭವ. ಉದಯ್‌ ‘ಪ್ರಜಾವಾಣಿ’ ಓದುಗರಿಗಾಗಿ ಮಂಗಳೂರು ಶೈಲಿಯ ಚಿಕನ್‌ ರೆಸಿಪಿಗಳನ್ನು ವಿವರಿಸಿದ್ದಾರೆ.

** ** **
ಚಿಕನ್‌ ಪಾಲಕ್‌
ಸಾಮಗ್ರಿ:
ಚಿಕನ್‌ 1 ಕೆ.ಜಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ 100 ಗ್ರಾಂ, ಎರಡು ಈರುಳ್ಳಿ ಪೇಸ್ಟ್‌, (ಹಸಿಮೆಣಸು 50 ಗ್ರಾಂ, ಪಾಲಕ್‌ ಸೊಪ್ಪು ಎರಡು ಕಟ್ಟು (ಎರಡೂ ಬೇಯಿಸಿ ಪೇಸ್ಟ್‌ ಮಾಡಿಟ್ಟುಕೊಳ್ಳಬೇಕು), ಅರ್ಧ ಈರುಳ್ಳಿ, ಟೊಮೆಟೊ ಒಂದು.

ವಿಧಾನ: ಮೊದಲು ಈರುಳ್ಳಿ ಟೊಮೆಟೊ ಫ್ರೈ ಮಾಡಿಕೊಳ್ಳಬೇಕು. ಸ್ವಲ್ಪ ಕಂದು ಬಣ್ಣ ಬಂದ ಮೇಲೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ ಹಾಕಿ, ಆನಂತರ ಒಂದು ಟೀ ಚಮಚ ಗರಂ ಮಸಾಲ ಪುಡಿ ಹಾಕಿ, ಒಂದು ಟೀ ಚಮಚ ಅರಿಶಿಣಪುಡಿ, ಒಂದು ಟೀ ಚಮಚ ಖಾರದಪುಡಿ ಹಾಕಿ ಸ್ವಲ್ಪ ಸಮಯದ ನಂತರ ಚಿಕನ್‌ ಹಾಕಬೇಕು, ಅರ್ಧ ಬೆಂದ ನಂತರ ಈರುಳ್ಳಿ ಪೇಸ್ಟ್‌ ಹಾಕಬೇಕು.

ಒಂದು ಕುದಿ ಆದ ಮೇಲೆ ಹಸಿಮೆಣಸು ಮತ್ತು ಪಾಲಕ್‌ ಸೊಪ್ಪು  ಪೇಸ್ಟ್‌ ಹಾಕಬೇಕು. ಹೆಚ್ಚು ನೀರು ಹಾಕಬಾರದು. ರುಚಿಗೆ ತಕ್ಕಷ್ಟು ಉಪ್ಪು, 100 ಗ್ರಾಂ ಅಮೂಲ್‌ ಕ್ರೀಂ ಹಾಕಬೇಕು. ಒಂದು ಕುದಿ ಬೆಂದ ಮೇಲೆ ಕೆಳಗಿಳಿಸಬೇಕು. ಇದು ನೀರ್‌ ದೋಸೆ, ಇಡ್ಲಿ ಚಪಾತಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

** ** **
ಕೋರಿ ರೊಟ್ಟಿ ಕರ್ರಿ
ಸಾಮಗ್ರಿ:
ಚಿಕನ್‌ ಒಂದು ಕೆ.ಜಿ, ಬ್ಯಾಡಗಿ ಮೆಣಸಿನಕಾಯಿ 50 ಗ್ರಾಂ, ಗುಂಟೂರು ಮೆಣಸಿನಕಾಯಿ 50 ಗ್ರಾಂ, ಕೊತ್ತಂಬರಿ ನಾಲ್ಕು ಟೀ ಚಮಚ, ಜೀರಿಗೆ ಎರಡು ಟೀ ಚಮಚ, ಕಾಳುಮೆಣಸು ಒಂದು ಟೀ ಚಮಚ, ಮೆಂತ್ಯೆ ಸ್ವಲ್ಪ, ಹುಣಸೆ ಹುಳಿ ಒಂದು ಟೀಮಚದಷ್ಟು, ತೆಂಗಿನ ಕಾಯಿ ಒಂದು, ದೊಡ್ಡ ಈರುಳ್ಳಿ  ಒಂದು, ಒಂದು ಇಂಚಿನಷ್ಟು ಶುಂಠಿ, ಬೆಳ್ಳುಳ್ಳಿ ಒಂದು, ಕರಿಬೇವು, ಚಕ್ಕೆ, ಲವಂಗ, ಏಲಕ್ಕಿ ಸ್ವಲ್ಪ.

ವಿಧಾನ: ಬಾಣಲೆಗೆ ಎಣ್ಣೆ ಹಾಕಿ ಒಂದು ಟೀ ಚಮಚದಷ್ಟು ಎಣ್ಣೆ, ತುಪ್ಪು ಹಾಕಿ, ನಂತರ ಹೆಚ್ಚಿದ ಈರುಳ್ಳಿ , ಶುಂಠಿ, ಬೆಳ್ಳುಳ್ಳಿ ಫ್ರೈ ಮಾಡಿಕೊಳ್ಳಬೇಕು. ಅದು ಕಂದು ಬಣ್ಣಕ್ಕೆ ಬರಬೇಕು, ಕರಿಬೇವಿನ ಸೊಪ್ಪು ಹಾಕಿ, ನಂತರ ತೆಂಗಿನ ಕಾಯಿ ತುರಿ, ಚಕ್ಕೆ, ಲವಂಗ,ಏಲಕ್ಕಿ ಹಾಕಬೇಕು, ಏಳು ನಿಮಿಷ ಫ್ರೈ ಮಾಡಿಕೊಳ್ಳಿ, ನಂತರ ಅರಿಶಿಣ ಪುಡಿ ಹಾಕಿ ಎರಡು ನಿಮಿಷ ತಿರುಗಿಸಬೇಕು. ಇದನ್ನು ಪ್ರತ್ಯೇಕವಾಗಿ ತೆಗೆದಿಡಿ.

ಬೇರೊಂದು ಪಾತ್ರೆಯಲ್ಲಿ  ಸ್ವಲ್ಪ ಎಣ್ಣೆ ಹಾಕಿ ಧನಿಯಾ, ಜೀರಿಗೆ, ಕಾಳು ಮೆಣಸು, ಮೆಂತ್ಯೆ,  ಮೆಣಸಿನಕಾಯಿ ಸ್ವಲ್ಪ ಬಿಸಿ ಮಾಡಿ ಇಟ್ಟುಕೊಳ್ಳಬೇಕು. ನಂತರ ಫ್ರೈ ಮಾಡಿದ ಮಸಾಲೆಯನ್ನು ಒಂದರಲ್ಲಿ ಹಾಕಿ ರುಬ್ಬಿಕೊಳ್ಳಬೇಕು. ಆನಂತರ ಅರ್ಧ ಹೆಚ್ಚಿದ ಈರುಳ್ಳಿ,ಕರಿಬೇವು ಹಾಕಿ ಫ್ರೈ ಮಾಡಿ.   ನಂತರ ಚಿಕನ್‌ ಅನ್ನು ಅರ್ಧ ಬೇಯಿಸಬೇಕು, ನಂತರ ರುಬ್ಬಿದ ಮಸಾಲೆ ಹಾಕಿ, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಎರಡು ನಿಮಿಷ ಕುದಿಸಬೇಕು. ನಂತರ ಉಪ್ಪು ಹಾಕಿ ಕೆಳಗಿಳಿಸಿ. ರೊಟ್ಟಿ, ದೋಸೆ, ಅನ್ನದೊಂದಿಗೆ ತಿನ್ನಲು ಒಳ್ಳೆಯ ಕಾಂಬಿನೇಷನ್‌.

** ** **
ಚಿಕನ್‌ ಗ್ರೀನ್‌ ಮಸಾಲ
ಸಾಮಗ್ರಿ: ಚಿಕನ್‌ ಒಂದು ಕೆ.ಜಿ, ಕೊತ್ತಂಬರಿ ಸೊಪ್ಪು ಎರಡು ಕಟ್ಟು, ಪುದೀನಾ ಒಂದು ಕಟ್ಟು, ಶುಂಠಿ ಒಂದು ಇಂಚು, ಬೆಳ್ಳುಳ್ಳಿ ಒಂದು, ದೊಡ್ಡ ಈರುಳ್ಳಿ ಎರಡು, ತೆಂಗಿನ ಕಾಯಿ ಅರ್ಧ ಹೋಳು, ಜೀರಿಗೆ ಎರಡು ಟೀ ಚಮಚ, ಮೆಂತ್ಯೆ ಸ್ವಲ್ಪ, ಕಾಳುಮೆಣಸು ಸ್ವಲ್ಪ, ಸ್ವಲ್ಪ ಹುಣಸೆ ಹುಳಿ, ರುಚಿಗೆ ಉಪ್ಪು. ಚಕ್ಕೆ ಲವಂಗ, ಏಲಕ್ಕಿ, ಗಸಗಸೆ ಸ್ವಲ್ಪ, 100 ಗ್ರಾಂ ಹಸಿಮೆಣಸು.

ವಿಧಾನ: ಮೊದಲು ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸು ಉರಿದುಕೊಳ್ಳಬೇಕು, ಆನಂತರ ತುರಿದ ತೆಂಗಿನಕಾಯಿ ಹಾಕಿ ಫ್ರೈ ಮಾಡಿಕೊಳ್ಳಬೇಕು, ಜೀರಿಗೆ, ಮೆಂತ್ಯೆ, ಕಾಳು ಮೆಣಸು, ಹುಳಿ, ಚಕ್ಕೆ, ಲವಂಗ, ಏಲಕ್ಕಿ ಇದಿಷ್ಟನ್ನೂ ಹಾಕಿ ಉರಿದುಕೊಳ್ಳಬೇಕು. ಕೊನೆಗೆ ಕೊತ್ತಂಬರಿ, ಪುದೀನಾ ಹಾಕಬೇಕು. ನಂತರ ಇದಿಷ್ಟನ್ನೂ ಕೆಳಗಿಳಿಸಿ ತಣ್ಣಗಾದ ಮೇಲೆ ರುಬ್ಬಿಕೊಳ್ಳಬೇಕು.

ಬಾಣಲೆಗೆ ಒಂದು ಹೆಚ್ಚಿದ ಈರುಳ್ಳಿ, ಎರಡು ಚಮಚ ತುಪ್ಪ, ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೂ ಉರಿದುಕೊಳ್ಳಬೇಕು, ನಂತರ ರುಬ್ಬಿದ ಮಸಾಲೆ ಹಾಕಿ ಫ್ರೈ ಮಾಡಿಕೊಳ್ಳಬೇಕು. ನಂತರ ಚಿಕನ್‌ ಹಾಕಿ ಎಷ್ಟು ಬೇಕೊ ಅಷ್ಟು ನೀರು ಹಾಕಿ 15 ನಿಮಿಷ ಬೇಯಿಸಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೆಳಗಿಳಿಸಿ. ನೀರ್‌ ದೋಸೆ, ಅನ್ನ, ಚಪಾತಿಯೊಂದಿಗೆ ತಿನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT