ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜಿನ ಮೋಡಿಯಲ್ಲಿ...

Last Updated 26 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಚಾಮರಾಜನಗರ ಜಿಲ್ಲೆ ಎಂದಾಕ್ಷಣ ವಿವಿಧ ಬೆಟ್ಟಗುಡ್ಡಗಳು ಕಣ್ಮುಂದೆ ನಿಲ್ಲುತ್ತವೆ. ಜಲಪಾತಗಳು ಧುಮ್ಮಿಕ್ಕುವ ಸದ್ದು ಕಿವಿಯಲ್ಲಿ ಗುಂಯ್‌ಗುಟ್ಟುತ್ತದೆ. ರಕ್ಷಿತಾರಣ್ಯಗಳಲ್ಲಿ ಕಾಡುಪ್ರಾಣಿಗಳ ಚಿನ್ನಾಟ ಮನದಲ್ಲಿ ಸುಳಿಯುತ್ತದೆ. ಇಂಥದ್ದೇ ಅವಿಸ್ಮರಣೀಯ ಸ್ಥಳಗಳಲ್ಲಿ ಒಂದು ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಸ್ವಚ್ಛ ಪರಿಸರದ ನಡುವೆ ಕಂಗೊಳಿಸುತ್ತಿರುವ ಕೃಷ್ಣನ ಅಪೂರ್ವ ದರ್ಶನ, ನಾಳೆ ಕೃಷ್ಣಾಷ್ಟಮಿ ವಿಶೇಷ...

ಸದಾ ಮಂಜಿನಲ್ಲಿ ಮಿಂದೇಳುವ ಹಸಿರ ರಾಶಿ, ಕಮಲದ ದಳದಂತಿರುವ ಶೃಂಗ ಶಿಖರ, ಸುತ್ತುವರಿದ ಎಂಟು ಪರ್ವತ, ಕಣ್ಣು ಹಾಯಿಸಿದಷ್ಟೂ ವನಶ್ರೇಣಿಗಳ ಸಮಾಗಮ... ನಡುವೆ ಚಿನ್ನದ ರಂಗಿನಿಂದ ಕಂಗೊಳಿಸುವ ಕೃಷ್ಣ ದೇಗುಲ...

ಇದುವೇ ಚಾಮರಾಜನಗರದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ- ಶ್ರೀಕೃಷ್ಣ ದೇವಾಲಯ. ಬೆಟ್ಟ-ಗುಡ್ಡಗಳ ನಗರಿ ಚಾಮರಾಜನಗರದ ಶಿಖರದಲ್ಲಿದೆ ಈ ಹಿಮವದ್. ಚಾಮರಾಜನಗರ ಜಿಲ್ಲೆ ಎಂದಾಕ್ಷಣ ಬಿಳಿಗಿರಿರಂಗನಬೆಟ್ಟ, ಮಲೆಮಹದೇಶ್ವರ ಬೆಟ್ಟ ಸೇರಿದಂತೆ ವಿವಿಧ ಬೆಟ್ಟಗುಡ್ಡಗಳು ಕಣ್ಮುಂದೆ ನಿಲ್ಲುತ್ತವೆ. ಭರಚುಕ್ಕಿ, ಹೊಗೇನಕಲ್ ಜಲಪಾತದಲ್ಲಿ ನೀರು ಧುಮ್ಮಿಕ್ಕುವ ಸದ್ದು ಕಿವಿಯಲ್ಲಿ ಗುಂಯ್‌ಗುಟ್ಟುತ್ತದೆ. ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯ, ಬಂಡೀಪುರ ರಾಷ್ಟ್ರೀಯ ಉದ್ಯಾನ, ಕಾವೇರಿ ವನ್ಯಜೀವಿಧಾಮ, ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿನ ಕಾಡುಪ್ರಾಣಿಗಳ ಚಿನ್ನಾಟ ಮನದಲ್ಲಿ ಸುಳಿಯುತ್ತದೆ. ಇಂತಹ ಹಲವು ತಾಣಗಳಲ್ಲಿ ಸದಾ ಹಿಮಹೊದ್ದು ಮಲಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವೂ ಒಂದು. ಪಶ್ಚಿಮ ಘಟ್ಟದಲ್ಲಿ ಅತ್ಯಂತ ಶ್ರೀಮಂತವಾಗಿರುವ ಬೆಟ್ಟ ಕೂಡ ಇದು. ವರ್ಷದ ಬಹುಕಾಲ ಈ ಬೆಟ್ಟ ಹಿಮಹೊದ್ದು ಮಲಗಿರುವ ಕಾರಣ `ಹಿಮವದ್' ಆಗಿಯೂ, ಕಮಲದ ಆಕೃತಿಯಲ್ಲಿರುವುದಕ್ಕೆ `ಕಮಲಾಚಲ' ಎಂದೂ ಪ್ರಸಿದ್ಧಿ ಹೊಂದಿದೆ.

ಇಲ್ಲಿಯ ಹುಲ್ಲುಗಾವಲು ಪ್ರಮುಖ ಆಕರ್ಷಣೆ. ಪರ್ವತ ಶ್ರೇಣಿಗಳ ನಡುವೆ ಅಕ್ಷಾಂಶ- ರೇಖಾಂಶ ಬರೆದಂತೆ ಹರಿಯುವ ಹಳ್ಳ- ಕೊಳ್ಳಗಳು ಮೋಡಿ ಮಾಡುತ್ತವೆ. ಈ ಬೆಟ್ಟ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸಂರಕ್ಷಿಸಲ್ಪಟ್ಟ ತಿರುಳು ವಲಯಕ್ಕೆ (ಕೋರ್ ಜೋನ್) ಸೇರಿದೆ. ಇದು ಅಳಿವಿನ ಅಂಚಿನಲ್ಲಿರುವ ವನ್ಯಜೀವಿಗಳ ಸಂತಾನಾಭಿವೃದ್ಧಿಗೆ ಯೋಗ್ಯ ಪ್ರದೇಶ.

ಗೋಪಾಲಸ್ವಾಮಿ ಬೆಟ್ಟ ಸಮುದ್ರಮಟ್ಟದಿಂದ 5,770 ಅಡಿ ಎತ್ತರದಲ್ಲಿದೆ. ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಹೋಗಲು ಎರಡು ಮಾರ್ಗಗಳಿವೆ. ಗೋಪಾಲಪುರ- ಕುಣಗಹಳ್ಳಿ ಮಾರ್ಗದ ಮೂಲಕ ಬೆಟ್ಟ ತಲುಪಬಹುದು. ಗುಂಡ್ಲುವಿಜಯಾಪುರ- ಹಂಗಳ ಮಾರ್ಗವಾಗಿಯೂ ಬೆಟ್ಟ ಏರಬಹುದು. ಈ ಬೆಟ್ಟ ಅಪೂರ್ವ ಗಿಡಮೂಲಿಕೆಗಳ ಆಗರವೂ ಹೌದು. ಕೋಲ್ಕತ್ತದ ಸಸ್ಯ ವಿಜ್ಞಾನಿ ಆರ್.ಎಲ್. ಬದ್ವಾರ್ ಎಂಬಾತ ಏಳು ದಶಕದ ಹಿಂದೆ ಬೆಟ್ಟಕ್ಕೆ ಬಂದು 120 ಬಗೆಯ ಗಿಡಮೂಲಿಕೆಗಳನ್ನು ಸಂಗ್ರಹಿಸಿದ್ದ ಎಂದು ದಾಖಲೆ ಹೇಳುತ್ತವೆ. ಇಲ್ಲಿರುವ ಹಲವು ಗಿರಿಕಂದರಗಳ ನಡುವೆ ವೇಣುಗೋಪಾಲ ಸ್ವಾಮಿ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಆರಂಭದಲ್ಲಿ ಈ ದೇಗುಲ ಹೊಯ್ಸಳ ವಾಸ್ತುಶಿಲ್ಪ ಮೈಗೂಡಿಸಿಕೊಂಡಿರುವಂತೆ ತೋರುತ್ತದೆ. ನಂತರ, ವಿಜಯನಗರದ ವಾಸ್ತುಶಿಲ್ಪದ ಪ್ರಭಾವಕ್ಕೆ ಒಳಪಟ್ಟಿರುವಂತೆ ಕಂಡುಬರುತ್ತದೆ. ಈ ಎರಡು ಮಾದರಿಯಲ್ಲಿ ದೇಗುಲವಿದೆ ಎನ್ನುತ್ತಾರೆ ಇತಿಹಾಸ ತಜ್ಞರು.


ದೇವಾಲಯದ ಒಳಗಡೆ ಶಕುನಾಸಿ, ನವರಂಗಗಳಿವೆ. ನವರಂಗದ ಬಲಗಡೆಗೆ ಇರುವ ಆನೆ ಆಕಾರದ ಗೂಡಿನಲ್ಲಿ ಸುಗ್ರೀವನ ಮೂರ್ತಿಯಿದೆ. ಶುಕನಾಸಿ ಪ್ರವೇಶಿಸುವ ದ್ವಾರದಲ್ಲಿ ಜಯ- ವಿಜಯರ ವಿಗ್ರಹಗಳಿವೆ. ಗರ್ಭಗುಡಿಯಲ್ಲಿ ಅಷ್ಟದಳ ಪೀಠದ ಮೇಲೆ ವೇಣುಗೋಪಾಲ ಸ್ವಾಮಿಯ ವಿಗ್ರಹವಿದೆ. ಕೊಳಲು ಹಿಡಿದು ನಿಂತಿರುವ ಗೋಪಾಲಸ್ವಾಮಿ ಭಕ್ತರ ಆಕರ್ಷಣೆಯ ಕೇಂದ್ರಬಿಂದು.
ವೇಣುಗೋಪಾಲ ಮೂರ್ತಿಯ ಎಡಭಾಗದಲ್ಲಿ ರುಕ್ಮಿಣಿ, ಸತ್ಯಭಾಮೆ ಹಾಗೂ ಗೋವುಗಳ ವಿಗ್ರಹಗಳಿವೆ. ದೇಗುಲದ ಮುಂಭಾಗ ಕಲ್ಲಿನಿಂದ ರಚಿಸಿರುವ ಬೃಂದಾವನ ಇದೆ. ಧ್ವಜ ಸ್ತಂಭ, ಬಲಿಪೀಠಗಳಿವೆ. ಧ್ವಜ ಸ್ತಂಭದಲ್ಲಿ ಶಂಖ, ಚಕ್ರ, ಗರುಡ, ಆಂಜನೇಯನ ಚಿತ್ರ ಕೆತ್ತಲಾಗಿದೆ. ದೇಗುಲದ ಸುತ್ತಲೂ ಹಸಿರು ಕಂಗೊಳಿಸುತ್ತದೆ. ದೇಗುಲದ ಬಳಿ ನಿಂತು ವನಶ್ರೇಣಿಯ ಸೊಬಗು ನೋಡುವುದೇ ಅಂದ.

ಪ್ಲಾಸ್ಟಿಕ್ ನಿಷೇಧ
ಗೋಪಾಲಸ್ವಾಮಿ ಬೆಟ್ಟ ವನ್ಯಜೀವಿ ವಲಯ ಹುಲಿ, ಆನೆ, ಚಿರತೆ, ಕಾಡೆಮ್ಮೆಯಂತಹ ವನ್ಯಜೀವಿಗಳ ಆವಾಸ ತಾಣ. ಈ ಬೆಟ್ಟಕ್ಕೆ ನಿತ್ಯ ಬರುವ ಪ್ರವಾಸಿಗರ ಸಂಖ್ಯೆಯೂ ಈಗ ಹೆಚ್ಚಿದೆ. ಮೋಜಿಗಾಗಿ ಬರುವ ಯುವಜನರ ಸಂಖ್ಯೆ ಲೆಕ್ಕವಿಲ್ಲ. ಬೆಟ್ಟಕ್ಕೆ ಬರುತ್ತಿದ್ದ ಪ್ರವಾಸಿಗರು ತಿಂಡಿ- ತಿನಿಸಿನ ಜತೆಗೆ ಪ್ಲಾಸ್ಟಿಕ್ ಬಾಟಲ್ ಕೊಂಡೊಯ್ಯುತ್ತಿದ್ದರು. ಹುಲ್ಲುಗಾವಲಿನಲ್ಲಿ ಕುಳಿತು ತಾವು ತಂದಿದ್ದ ತಿಂಡಿ-ತಿನಿಸು ಮೆಲ್ಲುವಾಗ ಪ್ಲಾಸ್ಟಿಕ್ ಚೀಲ, ಬಾಟಲ್ ಹುಲ್ಲಿನಲ್ಲಿಯೇ ಮರೆಯಾಗುತ್ತಿತ್ತು. ಇದು ವನ್ಯಜೀವಿಗಳ ಜೀವಕ್ಕೆ ಕುತ್ತು ತರುತ್ತಿತ್ತು.

ಈಗ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಬೆಟ್ಟ ಪ್ರದೇಶದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಪ್ರವೇಶ ದ್ವಾರದಲ್ಲಿಯೇ ಪ್ರವಾಸಿಗರ ವಾಹನ, ಬ್ಯಾಗ್ ತಪಾಸಣೆ ನಡೆಯುತ್ತದೆ. ಈ ಮೊದಲಿನಂತೆ ಬೆಳಿಗ್ಗೆ ಬೆಟ್ಟಕ್ಕೆ ಹೋಗಿ ನಿಸರ್ಗ ಸೌಂದರ್ಯ ಸವಿದು ಸಂಜೆ ಊರಿನತ್ತ ದೌಡಾಯಿಸುತ್ತಿದ್ದ ಅವಕಾಶಕ್ಕೆ ಕಡಿವಾಣ ಬಿದ್ದಿದೆ. ಬೆಟ್ಟ ಪ್ರವೇಶಿಸಿದ ಒಂದೂವರೆ ಗಂಟೆಯೊಳಗೆ ವಾಪಸ್ ಮರಳಬೇಕಿದೆ. ಅವಧಿ ಮೀರಿ ಉಳಿಯಲು ಯತ್ನಿಸಿದರೆ ಬೆಟ್ಟದಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿ ವಾಪಸ್ ಕಳುಹಿಸುತ್ತಾರೆ.

ಪ್ರವೇಶ ದ್ವಾರದ ಬಳಿ ಪ್ಲಾಸ್ಟಿಕ್ ತಪಾಸಣೆಗೆ ಒಬ್ಬ ಅರಣ್ಯ ರಕ್ಷಕ ಹಾಗೂ ಮೂವರು ವೀಕ್ಷಕರನ್ನು ಅರಣ್ಯ ಇಲಾಖೆ ನಿಯೋಜಿಸಿದೆ. ಶನಿವಾರ ಮತ್ತು ಭಾನುವಾರ ಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಈ ವೇಳೆ ವನ್ಯ ಸಂಸ್ಥೆಯ ಪ್ರತಿನಿಧಿಗಳು ಕೂಡ ಪ್ಲಾಸ್ಟಿಕ್ ತಪಾಸಣೆಗೆ ಅರಣ್ಯ ಸಿಬ್ಬಂದಿಯೊಂದಿಗೆ ಕೈಜೋಡಿಸುತ್ತಾರೆ. ಅಂದಹಾಗೆ ಈ ಬೆಟ್ಟ ಇರುವುದು ಗುಂಡ್ಲುಪೇಟೆ ಪಟ್ಟಣದ ನೈರುತ್ಯ ದಿಕ್ಕಿನಲ್ಲಿ, 15 ಕಿ.ಮೀ. ದೂರದಲ್ಲಿ.

ಗಿರಿಕಂದರಗಳ ರಾಶಿ

ಈ ಬೆಟ್ಟದ ಸುತ್ತಲೂ ಗಿರಿಕಂದರಗಳಿವೆ. ಪೂರ್ವಕ್ಕೆ ತ್ರಿಯಂಬಕಾದ್ರಿ, ಪಶ್ಚಿಮಕ್ಕೆ ನೀಲಾದ್ರಿ, ಉತ್ತರಕ್ಕೆ ಮಂಗಳಾದ್ರಿ, ದಕ್ಷಿಣಕ್ಕೆ ಶಂಬರಾಗಿರಿ ಬೆಟ್ಟವಿದೆ. ಆಗ್ನೇಯಕ್ಕೆ ಹಂಸಾದ್ರಿ, ನೈರುತ್ಯಕ್ಕೆ ಗರುಡಾದ್ರಿ, ವಾಯವ್ಯಕ್ಕೆ ಪಲ್ಲವ ಹಾಗೂ ಈಶಾನ್ಯ ಭಾಗದಲ್ಲಿ ಮಲ್ಲಿಕಾರ್ಜುನ ಗಿರಿಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT