ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡೂರು ರಸ್ತೆಯಲ್ಲಿ ಕಸದ ರಾಶಿ

Last Updated 24 ನವೆಂಬರ್ 2014, 20:00 IST
ಅಕ್ಷರ ಗಾತ್ರ

ಮಹದೇವಪುರ: ಕೃಷ್ಣರಾಜಪುರ ಹಾಗೂ ಮಹದೇವ­ಪುರ ಪ್ರದೇಶಗಳ ವ್ಯಾಪ್ತಿಯಲ್ಲಿ ಸಂಗ್ರಹಗೊಳ್ಳುವ ಕಸವನ್ನು ಸದ್ದಿಲ್ಲದೆ ಮಂಡೂರು ಗ್ರಾಮದ ತ್ಯಾಜ್ಯ ಘಟಕದ ಸುತ್ತಲಿನ ಪ್ರದೇಶದಲ್ಲಿ ತಂದು ಸುರಿಯ­ಲಾಗುತ್ತಿದೆ. ಹೆಚ್ಚು ಜನಸಂಚಾರವಿಲ್ಲದ ರಸ್ತೆಗಳಲ್ಲಿ ಸಹ ಕಸದ ರಾಶಿ ಬಿದ್ದಿದೆ. ಈ ಬೆಳವಣಿಗೆಯಿಂದ ಮಂಡೂರಿನ ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

ಮಂಡೂರಿನ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಸ ಸಾಗಿಸು­ವುದನ್ನು ಬಿಬಿಎಂಪಿ ಶುಕ್ರವಾರದಿಂದ ಸ್ಥಗಿತ­ಗೊಳಿಸಿತ್ತು. ಆದರೆ, ಈಗ ಮತ್ತೆ ಕಸದ ಸಮಸ್ಯೆ ಶುರುವಾಗಿದೆ.

ಅವಲಹಳ್ಳಿ, ಬೂದಿಗೆರೆ ಕ್ರಾಸ್‌, ಕೊನಸದಾಸಪುರ, ಮೇಡಹಳ್ಳಿ, ಬೈಯಪ್ಪನಹಳ್ಳಿ, ರಾಂಪುರ, ಭೈರತಿ ಗ್ರಾಮದ ರಸ್ತೆಗಳ ಅಕ್ಕಪಕ್ಕದಲ್ಲಿ ಲಾರಿಗಳು ಕತ್ತಲಾಗು­ತ್ತಿದ್ದಂತೆ ಕಸವನ್ನು ಸುರಿದು ಹೋಗಿವೆ. ಆದೂರು ಮತ್ತು ರಾಂಪುರ ಗ್ರಾಮಗಳ ಮಧ್ಯದಲ್ಲಿನ ರಸ್ತೆಯ ಬದಿಯಲ್ಲಿ ಹೇರಳವಾಗಿ ಕಸ ಬಿದ್ದಿದೆ.

ಹೀಗಾಗಿ ಕಸ ಮತ್ತೆ ಸ್ಥಳೀಯರನ್ನು ಕೆರಳಿಸಿದೆ. ಘಟಕ-­ದೊಳಗೆ ಸಂಗ್ರಹಣೆಗೊಂಡಿರುವ ಕಸವನ್ನು ಸಂಸ್ಕರಣೆ ಮಾಡುವ ಮೊದಲು ಘಟಕದ ಹೊರವಲಯದಲ್ಲಿ ಬಿದ್ದಿರುವ ಕಸವನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಘಟಕದೊಳಗೆ ಕಸವನ್ನು ಸುರಿಯುವುದನ್ನು ನಿಲ್ಲಿಸಿದಂತೆ ಊರಿನ ಸುತ್ತಮುತ್ತ ರಾತ್ರಿ ವೇಳೆ ಸ್ಥಳೀಯ ಕಸದ ಲಾರಿಗಳು ಕಸವನ್ನು ಸುರಿಯುವುದಕ್ಕೆ ಕಡಿವಾಣ ಹಾಕ­ಬೇಕು. ಒಂದುವೇಳೆ ಅಕ್ರಮವಾಗಿ ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲಿ ಕಸವನ್ನು ಸುರಿದರೆ ಮತ್ತೆ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ­ರುವ ಗ್ರಾಮಸ್ಥರು, ಈ ಬಗ್ಗೆ ಬಿಬಿಎಂಪಿ ಆಯುಕ್ತರು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈಗಾಗಲೇ ಘಟಕದಲ್ಲಿ ಸಂಗ್ರಹಗೊಂಡ ಕಸದಿಂದ ದುರ್ನಾತ ಹೊರಬರುತ್ತಲೇ ಇದೆ. ಆದಷ್ಟು ತ್ವರಿತಗತಿ­ಯಲ್ಲಿ ಕಸವನ್ನು ಸಂಸ್ಕರಣೆ ಮಾಡಬೇಕು. ದುರ್ನಾತ ಹೆಚ್ಚಾಗದಂತೆ ಅಗತ್ಯವಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಬೆಳವಣಿಗೆ ನೋಡಿದರೆ ಮಂಡೂರಿಗೆ ಕಸದಿಂದ ಮುಕ್ತಿ ಸಿಗುವುದು ಸಾಧ್ಯವೇ ಎನ್ನುವ ಅನುಮಾನ ಮೂಡಿದೆ ಎಂದು ಸ್ಥಳೀಯ ಮುನಿಕೃಷ್ಣ ಎಂಬುವವರು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT