ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿಗಳು, ಇಡೀ ದೇಶಕ್ಕೆ

Last Updated 1 ಜೂನ್ 2014, 19:30 IST
ಅಕ್ಷರ ಗಾತ್ರ

ಮೊದಲು ಚುನಾವಣೆ ಟಿಕೆಟ್‌ಗಾಗಿ ಪೈಪೋಟಿ. ಸಿಕ್ಕ ನಂತರ ಗೆಲ್ಲಲು ಕಸರತ್ತು. ಗೆದ್ದರೆ ಮಂತ್ರಿಗಿರಿ ಹಂಬಲ. ಮಂತ್ರಿ ಆಗಿಬಿಟ್ಟರೆ ಒಳ್ಳೆ ಖಾತೆ ಮೇಲೆ ಕಣ್ಣು. ಕೊಡದಿದ್ದರೆ ಅಸಮಾಧಾನ, ಮುನಿಸು. ಒಂದು ವೇಳೆ ಮಂತ್ರಿಗಿರಿಯ ಅನುಭವ ಇದ್ದರೆ ಹೊಸ ಸಂಪುಟದಲ್ಲಿ ಇನ್ನೂ ಮಹತ್ವದ, ಪ್ರಮುಖ ಖಾತೆ ಗಿಟ್ಟಿಸಲು ಸರ್ಕಸ್. ಇದು ಬಹುತೇಕ ರಾಜಕಾರಣಿಗಳ ಸ್ವಭಾವ. ಆದರೆ ಇದೆ­ಲ್ಲಕ್ಕಿಂತ ಭಿನ್ನವಾಗಿ ಆಲೋಚಿಸುವವರ ಸಾಲಿನಲ್ಲಿ ನಿಲ್ಲುತ್ತಾರೆ ಕರ್ನಾಟಕ­ದವರಾದ ಅನಂತ ಕುಮಾರ್.

ಬಿಜೆಪಿ ಮುಖಂಡ ಅಡ್ವಾಣಿ ಅವರ ಶಿಷ್ಯ ಎಂದೇ ಗುರುತಿಸಿಕೊಂಡ ಅವರು ಕೇಂದ್ರದ ಎನ್ ಡಿ ಎ ಸರ್ಕಾರ­ದುದ್ದಕ್ಕೂ ಮಂತ್ರಿಯಾಗಿದ್ದರು. ಅನೇಕ ಪ್ರಮುಖ ಖಾತೆಗಳನ್ನು ನಿಭಾಯಿಸಿ­ದ್ದರು. ಈ ಸಲ ಮೋದಿ ಸರ್ಕಾರದಲ್ಲಿ ಅವರಿಗೆ ಅವಕಾಶ ಇಲ್ಲ ಎಂಬ ವದಂತಿಗಳಿದ್ದವು. ಅದೆಲ್ಲ ಹುಸಿಯಾಗಿ ಮೊದಲ ಕಂತಿನಲ್ಲಿಯೇ ಅವರು ಮಂತ್ರಿಯಾದರು. ಅವರಿಗೆ ಸಿಕ್ಕದ್ದು, ಅಷ್ಟೊಂದು ಮಹತ್ವದ್ದಲ್ಲ ಎಂದೇ ಬಹಳ ಜನ ತಿಳಿದುಕೊಂಡಿರುವ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ. ಇದು ಮೋದಿ ಅವರು ಅನಂತ್ ಅವರನ್ನು ಕಡೆಗಣಿಸಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಕೆಲವರು ವ್ಯಾಖ್ಯಾನಿಸಿದ್ದೂ ಆಗಿತ್ತು. ಆದರೆ ಅವರಿಗೆಲ್ಲ ಉತ್ತರ ಕೊಡುವಂತೆ, ‘ಪ್ರಧಾನಿ ನನಗೆ ಕೊಟ್ಟಿರುವ ಖಾತೆಗಳು ಕಳಪೆಯಲ್ಲ.

ಹಿಂದೆ ಪ್ರಧಾನಿಯಾಗಿದ್ದ ಮೊರಾರ್ಜಿ, ರಾಜೀವ್ ಗಾಂಧಿ, ವಾಜಪೇಯಿ ಈ ಖಾತೆ­ಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಅದು ಇದಕ್ಕಿರುವ ಮಹತ್ವಕ್ಕೆ ಪುರಾವೆ. ಇಲ್ಲಿ ಒಳ್ಳೆಯ ಕೆಲಸ ಮಾಡಲು ಬೇಕಾದಷ್ಟು ಅವಕಾಶಗಳಿವೆ’ ಎಂದು ಅನಂತ್ ಪ್ರತಿಕ್ರಿಯಿಸಿದರು. ತಮ್ಮ ಖಾತೆಯಲ್ಲಿ ಪೂರ್ಣವಾಗಿ ತೊಡ­ಗಿ­ಸಿ­ಕೊಂಡರು. ಕೊಟ್ಟ ಖಾತೆ ಸರಿಯಿಲ್ಲ ಎಂದು ಸದಾ ಗೊಣಗುವವರಿಗೆ ಇದು ಮೇಲ್ಪಂಕ್ತಿ. ಏಕೆಂದರೆ ಯಾವುದೇ ಖಾತೆ ಕಡಿಮೆ- ಹೆಚ್ಚು ಎನ್ನುವ ಭಾವನೆಯೇ ಮೂಲತಃ ಸರಿಯಲ್ಲ. ತಮಗೆ ಒಪ್ಪಿಸಿದ ಹೊಣೆಯನ್ನು ಸರಿ­ಯಾಗಿ ನಿರ್ವಹಿಸುವುದು ಮುಖ್ಯ. ಈ ಸಂದ­ರ್ಭ­ದಲ್ಲಿ ಒಂದೆರಡು ದಶಕಗಳ ಹಿಂದೆ ನಮ್ಮ ರಾಜ್ಯದಲ್ಲಿ ಮಂತ್ರಿಯಾಗಿದ್ದ ತುಮಕೂರಿನ ವೀರಣ್ಣ ನೆನಪಿಗೆ ಬರುತ್ತಾರೆ. ಎಲ್ಲರೂ ಒಲ್ಲೆ ಎಂದು ಮೂಗು ಮುರಿಯುತ್ತಿದ್ದ ಸಣ್ಣ ಉಳಿ­ತಾಯ ಖಾತೆ ಮಂತ್ರಿಯಾಗಿ ಶ್ರಮವಹಿಸಿ ಕೆಲಸ ಮಾಡಿ ಮುಂದೆ ರಾಜ್ಯದ ಬೊಕ್ಕಸಕ್ಕೆ ಗಣನೀಯ ನೆರವು ನೀಡುವ ಖಾತೆಯಾಗುವಂತೆ ಬದಲಿಸಿದ್ದರು. ಈಗ ಬೇಕಿರುವುದು ಅಂಥ ಸ್ಫೂರ್ತಿಯ ರಾಜಕಾರಣಿಗಳು.

ಇನ್ನು, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ವೆಂಕಯ್ಯ ನಾಯ್ಡು ಅವರನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಮೋದಿ ಸರ್ಕಾರದಲ್ಲಿ ರಾಜ್ಯದ ನಾಲ್ವರು ಮಂತ್ರಿಗಳಾಗಿದ್ದಾರೆ. ನಾಯ್ಡು ಅವರಿಗೆ ನಗರಾಭಿವೃದ್ಧಿ, ಸದಾನಂದ­ಗೌಡರಿಗೆ ರೈಲ್ವೆ, ಸಿದ್ದೇಶ್ವರರಿಗೆ ವಿಮಾನಯಾನ ಸಿಕ್ಕಿದೆ. ಜನ ಮೆಚ್ಚುವ ರೀತಿ ಒಳ್ಳೆಯ ಕೆಲಸಗಳನ್ನು ಮಾಡಲು ಯಥೇಚ್ಛ ಅವಕಾಶಗಳೂ ಇವೆ. ಆದರೆ ತಾವು ಇಡೀ ದೇಶಕ್ಕೆ ಮಂತ್ರಿಗಳೇ ಹೊರತು ಒಂದು ರಾಜ್ಯಕ್ಕೆ ಅಲ್ಲ ಎನ್ನುವುದು ಸದಾ ಅವರ ಗಮನದಲ್ಲಿ ಇರಬೇಕು. ಅವರ ಚಿಂತನೆ, ಆಲೋಚನೆಗಳು ದೇಶದ ಸಮಗ್ರ ಹಿತಕ್ಕೆ ಪೂರಕವಾಗಿರಬೇಕು. ಹಾಗೆಂದು ಕರ್ನಾಟಕದ ಹಿತಾಸಕ್ತಿ ನಿರ್ಲಕ್ಷಿಸಬಾರದು, ಇತರ ರಾಜ್ಯಗಳನ್ನು ಕಡೆಗಣಿಸಲೂ ಬಾರದು. ರಾಜ್ಯಕ್ಕೆ ಸಿಗಲೇಬೇಕಾದ ಸವಲತ್ತು ಕೊಡಿಸುವಲ್ಲಿ ಸಂಕೋಚ ಪಡಬೇಕಿಲ್ಲ. ಒಳ್ಳೆಯ ಕೆಲಸದ ಮೂಲಕ ಛಾಪು ಮೂಡಿಸಬೇಕು. ಅದರ ಮೇಲೆ ಅವರ ಯಶಸ್ಸು ಅವಲಂಬಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT