ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿ ಎಮ್ಮೆಗಳಿಗೆ ರಾಜವೈಭೋಗ!

Last Updated 21 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಸಹಾರನ್‌­ಪುರ­ದಲ್ಲಿ ಗುರುವಾರ ಕೆಂಪುದೀಪದ ಪೊಲೀಸ್‌ ವಾಹನಗಳು ಸೈರನ್‌ ಕೂಗುತ್ತ  ದೂಳೆಬ್ಬಿಸುತ್ತ ಹೊರಟಾಗ ತಮ್ಮ ಊರಿಗೆ ಯಾರೋ ಗಣ್ಯರು ಬಂದಿರಬಹುದು ಎಂದು  ಜನರು ರಸ್ತೆಯತ್ತ ಕುತೂಹಲದ ದೃಷ್ಟಿ ನೆಟ್ಟಿದ್ದರು.
ಆದರೆ, ಸಹಾರನ್‌ಪುರಕ್ಕೆ  ಬಂದದ್ದು ಗಣ್ಯ ವ್ಯಕ್ತಿಗಳಲ್ಲ,  ಐದು ಎಮ್ಮೆಗಳು!  ಯಾವ ಗಣ್ಯರಿಗೂ ಕಡಿಮೆ ಇಲ್ಲದಂತೆ ಎಮ್ಮೆಗಳಿಗೆ ಅದ್ಧೂರಿ ಸ್ವಾಗತ ದೊರೆಯಿತು. 

ಸಮಾಜವಾದಿ ಪಕ್ಷದ ಪ್ರಭಾವಿ  ಮುಖಂಡ ಹಾಗೂ ಹಿರಿಯ ಸಚಿವ ಅಜಂಖಾನ್‌ ಅವರಿಗೆ ಸೇರಿದ ಎಮ್ಮೆಗಳು ಎನ್ನುವ ಕಾರಣಕ್ಕೆ ವಿಶೇಷ ರಾಜೋಪಚಾರ ಮಾಡಲಾಗಿತ್ತು. ತಮ್ಮ ಎಮ್ಮೆ ಪ್ರಿತಿಯಿಂದಲೇ ರಾಜ್ಯದಲ್ಲಿ  ಖ್ಯಾತರಾಗಿರುವ ಸಚಿವರು ಈ ವಿಶೇಷ ತಳಿಯ ಎಮ್ಮೆಗಳನ್ನು ಪಂಜಾಬ್‌ನಿಂದ ತರಿಸಿದ್ದಾರೆ.

‘ವಿಐಪಿ’ ಎಮ್ಮೆಗಳನ್ನು ಹೊತ್ತ ಲಾರಿ ಬುಧವಾರ ಸಂಜೆ ಉತ್ತರ ಪ್ರದೇಶವನ್ನು ಪ್ರವೇಶಿಸುತ್ತಲೇ ಮೊದಲೇ ಸ್ವಾಗತಕ್ಕೆ ಸಜ್ಜಾಗಿ ನಿಂತಿದ್ದ ಪೊಲೀಸರ ಬೆಂಗಾವಲಿನಲ್ಲಿ ಸಹಾರನ್‌­ಪುರದ ಗಗಲ್‌ಹೆದಿ ಪೊಲೀಸ್‌ ಠಾಣೆಗೆ ಕರೆದೊಯ್ದರು.
ಪಟ್ಟಣದ ಜನರು ಕುತೂಹಲದಿಂದ ಪೊಲೀಸರ ಸಾಹಸವನ್ನು ವೀಕ್ಷಿಸುತ್ತಿದ್ದರು.

ಠಾಣೆಯಲ್ಲಿ ಎಮ್ಮೆಗಳಿಗೆ ಬಿಸಿಲು ತಾಗದಂತೆ ಹಾಗೂ ಸೊಳ್ಳೆಗಳು ಕಚ್ಚದಂತೆ ಮೊದಲೇ ವಿಶೇಷ ವ್ಯವಸ್ಥೆ  ಮಾಡಲಾಗಿತ್ತು. ಎಮ್ಮೆಗಳು ಬರುತ್ತಲೇ ಪೊಲೀಸರು ಅವುಗಳಿಗೆ ಪ್ರಿಯವಾದ ಬೆಲ್ಲ ಹಾಗೂ ಇನ್ನಿತರ ವಸ್ತುಗಳನ್ನು ತಿನ್ನಿಸಿದರು.

ಪೊಲೀಸ್‌ ಠಾಣೆಯ ಬಳಿ ಬುಧವಾರ ರಾತ್ರಿ ಕಳೆದ ಎಮ್ಮೆಗಳಿಗೆ ದೊರೆತ ರಾಜಾತಿಥ್ಯ ಎಲ್ಲರೂ ಕರುಬುವಂತಿತ್ತು. ರಾಜಮರ್ಯಾದೆಯಿಂದ ಗುರುವಾರ ಬೆಳಿಗ್ಗೆ ರಾಂಪುರದಲ್ಲಿರುವ ಸಚಿವ ಅಜಂ ಖಾನ್‌ ತೋಟದ ಮನೆಗೆ ಅವುಗಳನ್ನು ಕೊಂಡೊಯ್ಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT