ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕಮಲ್ಲಿನ ಪ್ರಣಯ ಪ್ರಸಂಗ

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮಧುಗಿರಿ ತಾಲ್ಲೂಕು ಮೈದನಹಳ್ಳಿ ಹುಲ್ಲುಗಾವಲಿನಲ್ಲಿ ಹುಲ್ಲು ಸುಟ್ಟ ಕಪ್ಪು ಮಣ್ಣಿನ ಮೇಲೆ ಸಮವಸ್ತ್ರ ಧರಿಸಿದ ಶಾಲಾ ಮಕ್ಕಳಂತೆ ಮಕಮಲ್ಲು ಹುಳುಗಳು ಅಡ್ಡಾಡುತ್ತಿದ್ದವು. ಮುಂಜಾನೆ ಏಳರ ಎಳೆ ಬಿಸಿಲಿಗೆ ಚಿಣಮಿಣ ಹೊಳೆಯುತ್ತಿದ್ದ ಅವು ಊಟ ಮಾಡಿ ಎಷ್ಟೋ ದಿನವಾಗಿದ್ದವರಂತೆ ಒಂದೇ ಸಮನೆ ಸಿಕ್ಕಿದ್ದನ್ನೆಲ್ಲಾ ಮುಕ್ಕುತ್ತಿದ್ದವು.

ಚಿಗರಿ ನೋಡಲು ಹೋದವರಿಗೆ ಸಿಕ್ಕ ಬೋನಸ್ ಅದೃಷ್ಟ ಮಕಮಲ್ಲು ಹುಳುವಿನ ದರ್ಶನ. ಭೂಮಿಗೆ ಭೂತಕನ್ನಡಿ ಹಾಕಿ ಹುಡುಕಿದರೂ ಇದು ಎಲ್ಲರಿಗೂ, ಎಲ್ಲ ಕಾಲದಲ್ಲೂ ಕಾಣಿಸುವುದಿಲ್ಲ. ಒಂದು ಹದದ ಮಳೆ ಬಿದ್ದು ದೂಳು ಅಣಗಿದ ನಂತರ ಮಕಮಲ್ಲು ಹುಳುಗಳು ಭೂಮಿಯಿಂದ ಮೇಲೆದ್ದು ಬರುತ್ತವೆ. ಹಸಿವು ಇಂಗಿಸಿಕೊಳ್ಳುವ ತವಕದಲ್ಲಿ ತನಗಿಂತಲೂ ಸಣ್ಣದಾದ, ತನ್ನ ಬಾಯಿಗೆ ಎಟುಕುವ ಎಲ್ಲ ಕೀಟಗಳನ್ನೂ ಬಲಿ ಹಾಕುತ್ತವೆ. ಹೀಗೆ ಮುಕ್ಕುವಾಗಲೇ ಸಂತಾನಾಭಿವೃದ್ಧಿಯ ಕರ್ತವ್ಯ ಪ್ರಜ್ಞೆ ಗಂಡಿಗೆ ಜಾಗೃತವಾಗುತ್ತದೆ.

ಮಕಮಲ್ಲು ಹುಳುಗಳಲ್ಲಿ ಗಂಡಿಗಿಂತಲೂ ಹೆಣ್ಣು ಗಾತ್ರದಲ್ಲಿ ದೊಡ್ಡದು. ಶಕ್ತಿಯಲ್ಲಿ ಹಿರಿದು. ತನ್ನ ಹಸಿವು ಇಂಗುವ ಮೊದಲು ಗಂಡು ಕೀಟ ಪ್ರಣಯ ಚೇಷ್ಟೆ ಮಾಡಿ ಛೇಡಿಸಿದರೆ ಮುಲಾಜಿಲ್ಲದೆ ಅದನ್ನೇ ತಿಂದು ತೇಗುತ್ತದೆ. ಹೆಣ್ಣಿಗಾಗಿ ಹಪಹಪಿಸುವ ಗಂಡು ಹುಳು ಮನದನ್ನೆಯನ್ನು ಒಲಿಸಿಕೊಳ್ಳಲು ಎಲ್ಲ ಬುದ್ಧಿ ಖರ್ಚು ಮಾಡುತ್ತದೆ. ಕೊನೆಗೆ ಅಡ್ಡದಾರಿ ಹಿಡಿದು, ಹೆಣ್ಣು ಕೀಟ ಸುಖ ಭೋಜನದಲ್ಲಿ ಮೈಮರೆತಿದ್ದಾಗ ಸದ್ದಿಲ್ಲದೆ ಕೂಡಿ ಓಡಿ ಹೋಗುತ್ತವೆ. ಇದು ಗಂಡಿನ ಬದುಕಿನ ಅಂತಿಮ ಕ್ಷಣ.

ಇಲ್ಲಿಂದಾಚೆಗೆ ಹೆಣ್ಣಿಗೆ ಜವಾಬ್ದಾರಿ ಹೆಚ್ಚು. ಅದು ಹುಲ್ಲಿನಡಿ ಇರುವ ತನ್ನ ಮಣ್ಣಿನ ಗೂಡಿಗೆ ಹೋಗಿ, ಮೊಟ್ಟೆ ಇಟ್ಟು ಒಂದೆರಡು ದಿನದಲ್ಲಿಯೇ ಸತ್ತು ಹೋಗುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಗಳು ಒಂದಿಡೀ ವರ್ಷ ಭೂಮಿಯಡಿಯಲ್ಲಿಯೇ ದೊರಕುವ ಸಣ್ಣ ಸಣ್ಣ ಕೀಟಗಳು, ಕೊಳೆತ ಎಲೆಗಳನ್ನು ತಿಂದು ಜೀವ ಹಿಡಿದಿರುತ್ತವೆ. ಸಾಮಾನ್ಯವಾಗಿ ಆಷಾಢದ ಮೊದಲ ಎರಡು ಮಳೆಯ ನಂತರ (ಹವೆ ತಂಪಾದಾಗ) ಹೊರ ಜಗತ್ತಿಗೆ ಬಂದು ಸೂರ್ಯನನ್ನು ಕಾಣುತ್ತವೆ. ಮತ್ತದೇ ಜೀವನ ಚಕ್ರ.

ಇಲ್ಲೇ ಹೆಚ್ಚು
ಒಣ ಬಯಲುಸೀಮೆ ಎನಿಸಿಕೊಂಡಿರುವ ಶಿರಾ, ಪಾವಗಡ, ಕೊರಟಗೆರೆ, ಮಧುಗಿರಿ ತಾಲ್ಲೂಕಿನಲ್ಲಿ ಈ ಕೀಟಗಳು ಹೆಚ್ಚಾಗಿ ಕಾಣಿಸುತ್ತವೆ. ತುಮಕೂರು, ಗುಬ್ಬಿ, ತಿಪಟೂರು ತಾಲ್ಲೂಕುಗಳಲ್ಲಿಯೂ ಅಪರೂಪಕ್ಕೆ ಕಂಡವರುಂಟು. ಬೇಸಾಯ ದಲ್ಲಿ ಕೀಟನಾಶಕ ಬಳಕೆ ಮತ್ತು ಗೋಮಾಳದಲ್ಲಿ ಮಾನವ ಚಟುವಟಿಕೆ ಹೆಚ್ಚಾದ ನಂತರ ಮಕಮಲ್ಲು ಹುಳುಗಳ ಸಂತತಿಗೆ ಅಪಾಯ ತಟ್ಟಿದೆ. ಮೊದಲಿನಂತೆ ಇವು ಎಲ್ಲೆಡೆ ಕಾಣುತ್ತಿಲ್ಲ.

ಮಾಹಿತಿಯೇ ಇಲ್ಲ
ಇಂಗ್ಲಿಷ್‌ನಲ್ಲಿ ‘ರೆಡ್‌ ವೆಲ್ವೆಟ್ ಮೈಟ್’ ಎಂದು ಕರೆಯುವ ಮಕಮಲ್ಲು ಹುಳುವಿಗೆ ರೇಷ್ಮೆ ಹುಳು ಎಂಬ ಅಡ್ಡ ಹೆಸರೂ ಇದೆ. ನಾಲ್ಕು ಜೊತೆ ಕಾಲು (ಒಟ್ಟು 8 ಕಾಲು) ಇರುವ ಈ ಕೀಟಗಳು ಜೇಡ ಮತ್ತು ಉಣ್ಣೆಯ ವಂಶಕ್ಕೆ ಸೇರುತ್ತವೆ. ಮಣ್ಣಿನ ಒಳಗಿದ್ದು ಬೆಳೆಗೆ ಹಾನಿ ಮಾಡುವ ಕೀಟಗಳನ್ನು ತಿಂದು ರೈತರಿಗೆ ನೆರವಾಗುತ್ತವೆ. ಮರಿ ಎಷ್ಟು ದಿನಕ್ಕೆ ಮೊಟ್ಟೆಯೊಡೆದು ಹೊರಗೆ ಬರುತ್ತವೆ? ಮರಿ ಎಷ್ಟು ದಿನಕ್ಕೆ ಪ್ರೌಢಾವಸ್ಥೆ ತಲುಪುತ್ತದೆ? ಮಣ್ಣಿನೊಳಗೆ ಅದರ ಜೀವನ ಕ್ರಮ ಏನು? ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ.

ವ್ಯಾಖ್ಯಾನ ಬದಲಿಸಬೇಕು
ವನ್ಯಜೀವಿ ಸಂರಕ್ಷಣೆ, ಪರಿಸರ ಕಾಳಜಿ ಎಂದು ಮಾತನಾಡುವವರು ಆನೆ, ಹುಲಿ, ಕರಡಿಯಂಥ ದೊಡ್ಡ ಪ್ರಾಣಿಗಳತ್ತ ಹೆಚ್ಚು ಗಮನ ಕೇಂದ್ರೀಕರಿಸುತ್ತಾರೆ. ಆದರೆ ಕೀಟಗಳ ಅಧ್ಯಯನಕ್ಕೆ ಸಿಗುತ್ತಿರುವ ಒತ್ತು ಬಹು ಕಡಿಮೆ. ಹುಡುಕುತ್ತಾ ಹೋದರೆ ಅದ್ಭುತ ಲೋಕವನ್ನೇ ತೆರೆದಿಡುವ ಕೀಟ ಲೋಕವನ್ನು ಇನ್ನಾದರೂ ನಮ್ಮ ಸಮಾಜ ಸೂಕ್ಷ್ಮವಾಗಿ ಗಮನಿಸಬೇಕು ಎನ್ನುತ್ತಾರೆ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಬಿ.ವಿ.ಗುಂಡಪ್ಪ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT