ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಕಾಡುವ ಬಿಸಿಲು

Last Updated 11 ಮೇ 2016, 19:44 IST
ಅಕ್ಷರ ಗಾತ್ರ

ಬೇಸಿಗೆ ಕಳೆದು ಮಳೆ ಸುರಿದು ಮನಸ್ಸುಗಳನ್ನು ತಂಪು ಮಾಡಬೇಕಾದ ಈ ಹೊತ್ತಿಗೆ ಇನ್ನೂ ಬೆಂಗಳೂರು ಸೂರ್ಯನ ಕಿರಣಗಳಿಂದ ಮುಕ್ತಿ ಪಡೆದಿಲ್ಲ. ಪ್ರತಿ ಬೇಸಿಗೆ ರಜೆಯಲ್ಲಿ ಅಕ್ಕಪಕ್ಕದ ಮನೆಯವರೊಂದಿಗೆ ಸೇರಿ ದಾಂದಲೆ ಎಬ್ಬಿಸುತ್ತಿದ್ದ ಮಕ್ಕಳು ಈ ಬಾರಿ ಐಸ್‌ಕ್ರೀಂ ತಿನ್ನುತ್ತಾ ಟಿವಿ ಎದುರು ಕುಳಿತು ಬಿಟ್ಟಿದ್ದಾರೆ.

ಬೇಸಿಗೆ ರಜೆ ಎಂದರೆ ಮೋಜು ಮಸ್ತಿ ಎಂದು ರಜೆಗಾಗಿ ಕಾಯುತ್ತಿದ್ದ ಮಕ್ಕಳು ನಗರ ಜೀವನದ ಸಂಕೀರ್ಣತೆಯಲ್ಲಿ ತಮ್ಮ ಆಟದ ವ್ಯಾಪ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಬಿಸಿಲ ವಾತಾವರಣದಿಂದಾಗಿ ಮಕ್ಕಳನ್ನು ಹೊರ ಹೋಗಿ ಆಟವಾಡಲು ಪೋಷಕರು ಬಿಡುತ್ತಿಲ್ಲ.

ಹೆಚ್ಚಿನ ಪೋಷಕರು ಆತಂಕದಲ್ಲಿಯೇ ದಿನ ಕಳೆಯುತ್ತಾರೆ. ಮಹಡಿಯ ಮೇಲೆ ಆಟವಾಡಿದರೆ ಯಾವ ವಿದ್ಯುತ್ ತಂತಿ ತಗುಲುವುದೋ ಎಂಬ ಆತಂಕ, ಹೊರಗೆ ಬಿಸಿಲ ಝಳದಿಂದ ಹತ್ತು ನಿಮಿಷವೂ ಆಡಲು ಸಾಧ್ಯವಾಗುವುದಿಲ್ಲ.

ರಸ್ತೆಯಲ್ಲಿ ವಿಕೆಟ್‌ ನೆಟ್ಟು ಬ್ಯಾಟ್‌ ಹಿಡಿದರೆ ವಾಹನ ಸವಾರರು ಬೈಯುತ್ತಾರೆ, ಮನೆಯಲ್ಲೇ ಕೂರಲು ಬೇಸರ, ಒಟ್ಟಿನಲ್ಲಿ ಮಕ್ಕಳ ಆಟಕ್ಕೆ ಸರಿಯಾದ ನೈಸರ್ಗಿಕ ಹೊರಾಂಗಣ ಸ್ಥಳವಿಲ್ಲದಂತಾಗಿದೆ.

ಬಿಸಿಲು, ಟ್ರಾಫಿಕ್‌ಗೆ ಹೆದರಿದ ಪೋಷಕರು ಮಕ್ಕಳನ್ನು ಹೊರ ಹೋಗಲು ಬಿಡದೆ ಮನೆಯಲ್ಲೇ ವಿಡಿಯೊ ಗೇಮ್‌ಗಳನ್ನು ಆಡಿಸುತ್ತಿದ್ದಾರೆ.
ಸ್ವಾವಲಂಬಿಯಾಗಿ ಮಕ್ಕಳನ್ನು ಬೆಳಸುತ್ತೇವೆ ಎಂಬ ನೆಪದಲ್ಲಿ ತಮಗೆ ಅರಿವಿಲ್ಲದಂತೆ ಮಗುವಿನ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿದ್ದಾರೆ.

ಸದ್ದಿಲ್ಲದೆ  ಉದ್ವೇಗ, ಖಿನ್ನತೆಯಂಥ ಮನೋ ಕಾಯಿಲೆಗಳು ಮುಗ್ಧ ಮಗುವನ್ನು ಕಾಡುತ್ತಿವೆ. ಒಂದಿಷ್ಟು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡರೆ ಮಕ್ಕಳು ತಮ್ಮ ಇಷ್ಟದಂತೆ ಹೋರ ಹೋಗಿ ಆಡಬಹುದು. ಬಿಸಿಲ ಪ್ರಭಾವದಿಂದ ಪಾರಾಗಲು ಒಂದಿಷ್ಟು ಟಿಪ್ಪಣಿಗಳ ಇಲ್ಲಿವೆ.

ಮಕ್ಕಳ ಮೇಲೆ ಬಿಸಿಲ ಪ್ರಭಾವ
ಬೇಸಿಲ ಬೇಗೆ ಮೊದಲು ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಮಕ್ಕಳ ಎಳೆಯ ಚರ್ಮ ಬೇಗ ಬಿಸಿಲಿನ ಪ್ರಖರತೆಗೆ ತುತ್ತಾಗುತ್ತದೆ. ಬಿಸಿಲ ಕಿರಣಗಳನ್ನು ತಡೆಯುವ ಸಾಕಷ್ಟು ಲೇಪಗಳು ಮಾರುಕಟ್ಟೆಯಲ್ಲಿ ಇವೆ. ಎಸ್‌ಪಿಎಫ್‌ 40 ಇರುವ ಕ್ರೀಂಗಳು ಇಂದಿನ ಬಿಸಿಲಿಗೆ ಸೂಕ್ತ.

ಇನ್ನೂ ಈಜಲು ಹೋಗುವ ಮಕ್ಕಳಿಗೆ ವಿಶೇಷ ಬಗೆಯ ಲೋಷನ್‌ಗಳ ಅಗತ್ಯವಿದೆ. ಮನೆಯಲ್ಲೇ ಪರಂಗಿ ಹಣ್ಣು ಮತ್ತು ಲೋಳೆಸರ ಹಚ್ಚುವುದು ಒಳಿತು.
ಹೆಚ್ಚು ಕ್ರಿಯಾಶೀಲರಾಗಿರುವ ಮಕ್ಕಳ ದೇಹದ ನೀರಿನ ಅಂಶ ಕೂಡ ಬೆವರಿನಲ್ಲಿ ಹೊರಟು ಹೋಗುತ್ತದೆ. ಅವರ ದೇಹ ನೀರಿನ ಕೊರತೆಯಿಂದ ಪಾರಾಗಲು ಹೆಚ್ಚು ನೀರಿನಂಶ ಇರುವ ಹಣ್ಣು ತರಕಾರಿಗಳನ್ನು ಮಕ್ಕಳಿಗೆ ಕೊಡಬಹುದು.

ಕಲ್ಲಂಗಡಿ, ಕರಬೂಜ, ಸೌತೇಕಾಯಿ ಜ್ಯೂಸ್, ಸಲಾಡ್, ಗ್ಲೂಕೋಸ್‌ಯುಕ್ತ ಜ್ಯೂಸ್‌, ನಿಂಬೆಹಣ್ಣಿನ ಪಾನಕ, ಎಳನೀರು ಉತ್ತಮ ಆಹಾರ.
ಬಿಸಿಲು ಮಕ್ಕಳ ಮನಸ್ಸಿನ ಮೇಲು ಸಾಕಷ್ಟು ಪ್ರಭಾವನ್ನು ಬೀರುತ್ತದೆ. ಬೆವರು– ಸಖೆಯಿಂದ ಮನಸಿಗೆ ಕಿರಿಕಿರಿಯಾಗುತ್ತದೆ. ಕೋಪ ಮತ್ತು ಉದ್ವೇಗ ಮಕ್ಕಳಲ್ಲಿ ಸಾಮಾನ್ಯ.

ಬಿಸಿಲು ಕಡಿಮೆಯಾದ ನಂತರ ಸಂಜೆ ವೇಳೆ ಮಕ್ಕಳನ್ನು ಹತ್ತಿರದ ಉದ್ಯಾನಕ್ಕೆ ಕರೆದುಕೊಂಡು ಹೋಗಬಹುದು. ಜೊತೆ ಏಲಕ್ಕಿ ಸೇವನೆಯಿಂದ ಖಿನ್ನತೆ ಕೋಪ ಕೂಡ ಕಡಿಮೆಯಾಗುತ್ತದೆ. ಮೆಂತ್ಯಕಾಳು ನೆನೆಹಾಕಿ ಅದರ ನೀರಿನ ಸೇವನೆಯಿಂದ ದೇಹವನ್ನು ತಂಪಾಗಿಡಬಹುದು.

ಹೆಚ್ಚು ಪ್ರಖರ ಬೆಳಕು ಮಕ್ಕಳ ಕಣ್ಣಿನ ಮೇಲೆ ಬೇಗ ಪ್ರಭಾವ ಬೀರುತ್ತದೆ. ನೇರವಾಗಿ ಸೂರ್ಯನ. ತೀವ್ರ ಕಿರಣಗಳನ್ನು ನೋಡುವುದರಿಂದ ದೃಷ್ಟಿಗೆ ಹಾನಿಯಾಗುತ್ತದೆ.

‘ಬಿಸಿಲಿನ ಪ್ರಖರತೆಗೆ ಕಣ್ಣು ಉರಿ, ಕಣ್ಣಿನಲ್ಲಿ ನೀರು ಸೋರುವಿಕೆಯಂತಹ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ, ಕೆಲವು ಬಾರಿ ದೃಷ್ಟಿ ಹೀನತೆಯು ಸಂಭವಿಸಬಹುದು, ಬಿಸಿಲಿನಿಂದ ಮಕ್ಕಳ ಕಣ್ಣುಗಳನ್ನು ಸುರಕ್ಷಿತವಾಗಿ ಕಾಪಾಡಬೇಕು, ರೆಟಿನ ಪದರ ಸೂಕ್ಷ್ಮವಾಗಿದ್ದು ಅದು ಒಣಗದಂತೆ ಕಣ್ಣಿನಲ್ಲಿ ನೀರಿನ ಅಂಶವನ್ನು ಕಾಪಾಡಬೇಕು ಎನ್ನುತ್ತಾರೆ’ ಮಕ್ಕಳ ತಜ್ಞರಾದ ಶುಭಾ.

ಸೂರ್ಯನ ಕಿರಣಗಳಿಂದ ಪಾರಾಗಲು ಸನ್‌ಗ್ಲಾಸ್‌ ಬಳಸಬಹುದು, ಕಿರಣಗಳು ನೇರವಾಗಿ ಕಣ್ಣುಗಳ ಮೇಲೆ ಬೀಳದಂತೆ ಟೋಪಿ ಧರಿಸಬಹುದು. ಕಣ್ಣು ಉರಿ ಇದ್ದರೆ ಐಸ್‌ ಕ್ಯೂಬ್‌ಗಳನ್ನು ಕಣ್ಣಿನ ಮೇಲೆ ಇಟ್ಟು ಮಸಾಜ್‌ ಮಾಡಬಹುದು.

ಕಣ್ಣು, ಚರ್ಮಗಳಷ್ಟೆ ಅಲ್ಲದೆ, ನರಗಳ ಮೇಲೂ ಬಿಸಿಲಿನ ಪ್ರಭಾವ ಇದೆ. ತಾಪಮಾನ ಹೆಚ್ಚಾದಂತೆ ಸಣ್ಣ ನರಗಳು ಒಡೆದುಹೋಗುವ ಸಂಭವವಿರುತ್ತದೆ. ಅಂತರಿಕ ರಕ್ತಸ್ರಾವದ ಅಪಾಯವನ್ನೂ ತಳ್ಳಿಹಾಕುವಂತಿಲ್ಲ.  ದೇಹವನ್ನು ತಂಪಾಗಿಡಲು ಯತ್ನಿಸಬೇಕು ಎಂಬುದು ಅವರ ಸಲಹೆ.
ಮುಂಜಾಗ್ರತೆ ಕ್ರಮ ಅನುಸರಿಸಿದರೆ ಬೇಸಿಗೆಯಲ್ಲೂ ಮಕ್ಕಳು ಇಷ್ಟಪಟ್ಟಂತೆ ಹೊರಗೆ ಆಟವಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT