ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನೂ ಬಿಡದು; ಹಿಡಿತಕ್ಕೂ ಸಿಗದು

ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು l ಸೋಲನ್ನು ಗೆಲುವಾಗಿಸುವ ಗುಣ ಮೈಗೂಡಿಸಬೇಕು
Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಹಿರಿಯರಲ್ಲಿ ಕಂಡುಬರುವ ಎಲ್ಲ ರೀತಿಯ ಮಾನಸಿಕ ಸಮಸ್ಯೆಗಳು ಇಂದಿನ ಮಕ್ಕಳಲ್ಲೂ ಕಂಡುಬರುತ್ತಿರುವುದು ವೈಜ್ಞಾನಿಕ ವಿಶ್ಲೇಷಣೆ­

ಗಳಿಂದ ತಿಳಿದುಬಂದಿದೆ. ಖಿನ್ನತೆ, ಆತಂಕ, ಮಂದಮಗ್ನತೆಯಂಥ (ಆಟಿಸಂ) ವಿಶೇಷ ಮಾನಸಿಕ ವ್ಯಸನಗಳು ಹೆಚ್ಚಾಗಿ ಮಕ್ಕಳಲ್ಲಿ ಗೋಚರಿಸುತ್ತಿವೆ. ಬೆಳವಣಿಗೆಯ ಯಾವುದೇ ಹಂತದಲ್ಲೂ ಮಕ್ಕಳು (ಶಾಲಾ ಪೂರ್ವ, ಶಾಲಾ ಹಂತ, ಕಿಶೋರಾವಸ್ಥೆ) ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ.

ಖಿನ್ನರಾಗುವ ವಯಸ್ಕರಲ್ಲಿ (18 ವರ್ಷ ಮೇಲಿನವರು) ಒಂದೇ ರೀತಿಯ ಲಕ್ಷಣಗಳು ಕಂಡುಬರುತ್ತವೆ. ಆದರೆ, ಮಕ್ಕಳಲ್ಲಿ ಏಕರೂಪದ ಲಕ್ಷಣಗಳನ್ನು ಗುರುತಿಸುವುದು ಅಸಾಧ್ಯ. ‘ಮಾಸ್‌್ಕಡ್‌ ಡಿಪ್ರೆಷನ್‌’ ಮತ್ತು ‘ಡಿಪ್ರೆಷನ್‌ ಇಕ್ವಿವಲಂಟ್’ ಎಂಬ ಎರಡು ಪರಿಕಲ್ಪನೆಗಳಿವೆ. ಒಳಗೆ ಖಿನ್ನತೆ ಇದ್ದರೂ ಅದು ಗೋಚರವಾಗದೇ ಇರುವುದನ್ನು ‘ಮಾಸ್‌್ಕಡ್‌ ಡಿಪ್ರೆಷನ್‌’ ಎನ್ನುತ್ತೇವೆ. ಮನಃಶಾಸ್ತ್ರಜ್ಞರು ಮಾತ್ರ ಇದರ  ಲಕ್ಷಣಗಳನ್ನು ಗುರುತಿಸಬಲ್ಲರು.

ಮಾನಸಿಕ ಖಿನ್ನತೆಯಿಂದಾಗಿ ದೈಹಿಕ ತೊಂದರೆಗಳು ಕಾಣಿಸಿಕೊಳ್ಳುವುದನ್ನು ‘ಡಿಪ್ರೆಷನ್‌ ಇಕ್ವಿವಲಂಟ್’ ಎನ್ನುತ್ತೇವೆ. ಉದಾಹರಣೆಗೆ, ಯಾವ ಚಿಕಿತ್ಸೆ ಕೊಡಿಸಿದರೂ ತಲೆನೋವು, ಹೊಟ್ಟೆನೋವು ಕಡಿಮೆಯಾಗದಿರುವುದು ಇತ್ಯಾದಿ. ಮಕ್ಕಳಲ್ಲಿ ಖಿನ್ನತೆ ಕಾಣಿಸಿಕೊಳ್ಳುವುದಕ್ಕೆ ವಿವಿಧ ಬಗೆಯ ಮಾನಸಿಕ, ಜೈವಿಕ ಮತ್ತು ಸಾಮಾಜಿಕ ಕಾರಣಗಳಿರುತ್ತವೆ. ಕೆಲವೊಮ್ಮೆ ತಂದೆ–ತಾಯಿ ಮತ್ತು ಕುಟುಂಬದ ಸದಸ್ಯರೊಂದಿಗೆ ಅತೀವ ಭಾವನಾತ್ಮಕ ಸಂಬಂಧ ಹೊಂದಿರುವ ಮಕ್ಕಳನ್ನು ಬಲವಂತವಾಗಿ ವಸತಿ ಶಾಲೆಗೆ ಸೇರಿಸಿದಾಗಲೂ ಅಂತಹ ಮಕ್ಕಳು ಖಿನ್ನರಾಗುವ ಸಾಧ್ಯತೆ ಇರುತ್ತದೆ.

ಇಂದಿನ ಮಕ್ಕಳು ಆಧುನಿಕ ಬದುಕಿನ ಆಕರ್ಷಣೆಗಳಿಗೆ ಒಳಗಾಗುತ್ತಿದ್ದಾರೆ. ತಂತ್ರಜ್ಞಾನದ ದಾಸರಾಗುತ್ತಿದ್ದಾರೆ. ಅವರಲ್ಲಿ ಸಂವಹನ ಪ್ರಜ್ಞೆಯೇ ಮಾಯವಾಗುತ್ತಿದೆ. ಭಾವನೆ ವ್ಯಕ್ತಪಡಿಸುವುದು ಮತ್ತು ಅರ್ಥ ಮಾಡಿಕೊಳ್ಳುವುದು ಎರಡೂ ಕಷ್ಟವಾಗುತ್ತಿದೆ. ನೈತಿಕ ಶಿಕ್ಷಣ ಇಲ್ಲವಾಗಿದೆ.

ನಾವು ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಪಡಬಾರದು ಎಂದು ಹೇಳುವ ಪರಿಪಾಠವನ್ನು ಪೋಷಕರು ಬಿಡಬೇಕು. ಕಷ್ಟ ಎದುರಿಸುವುದನ್ನು ಮಕ್ಕಳಿಗೆ ಕಲಿಸಬೇಕು. ಐಷಾರಾಮಿ ಸೌಕರ್ಯ, ಆಟಿಕೆ ಮೊದಲಾದವು ಮಕ್ಕಳಿಗೆ ಬಾಂಧವ್ಯದ ಬೆಸುಗೆಯನ್ನು ನೀಡಲಾರವು. ಪ್ರತಿ ವಿಷಯದ ಇತಿಮಿತಿಯನ್ನೂ ಅವರಿಗೆ ತಿಳಿಸಿಕೊಡಬೇಕು. ತಂದೆ, ತಾಯಿ ಅಥವಾ ಕುಟುಂಬದ ಇತರ ಸದಸ್ಯರು ಮಕ್ಕಳಿಗೆ ಮಾದರಿಯಾಗಬೇಕು. ಅವರಲ್ಲಿ ಕುತೂಹಲವನ್ನು ಬೆಳೆಸಬೇಕು.

ಹುಚ್ಚುಕೋಡಿ ಮನಸು
ತಾಂತ್ರಿಕ ಸಾಧನ, ಸಲಕರಣೆಗಳ ಅತಿಯಾದ ಬಳಕೆಯಿಂದಾಗಿ ಹದಿಹರೆಯದವರು ಹೆಚ್ಚಾಗಿ ಖಿನ್ನತೆಗೆ ಬಲಿಯಾಗುತ್ತಿದ್ದಾರೆ. ‘ಫೇಸ್‌ಬುಕ್‌’, ‘ವಾಟ್ಸ್‌ಆ್ಯಪ್‌’, ‘ಮೊಬೈಲ್‌ ಗೇಮ್ಸ್‌’, ‘ಮೆಸೇಜ್‌’, ‘ಕಂಪ್ಯೂಟರ್‌’ ಮುಂತಾದವುಗಳ ದಾಸರಾಗುತ್ತಿದ್ದಾರೆ. ‘ಫೇಸ್‌ಬುಕ್‌ ಡಿಪ್ರೆಶನ್‌’ ಇಂದು ಬಹಳಷ್ಟು ಯುವಜನರಲ್ಲಿ ಕಂಡುಬರುತ್ತಿದೆ. ‘ಅಯ್ಯೋ ನನಗೆ ಹೆಚ್ಚು ಫ್ರೆಂಡ್ಸ್‌ ಇಲ್ಲ’ ‘ಅವರಿಗಿರುವ ಸೌಕರ್ಯ ನಮಗಿಲ್ಲ’ ಇತ್ಯಾದಿ ಕಾರಣಗಳಿಗೆ ಖಿನ್ನತೆಗೆ ಒಳಗಾಗುತ್ತಿದ್ದಾರೆ.

ಕ್ಷಿಪ್ರ ಮತ್ತು ತಕ್ಷಣದ ಸಂತೋಷಕ್ಕಾಗಿ ಹಾತೊರೆಯುತ್ತಿರುವುದು ಎಲ್ಲರನ್ನೂ ಹಾದಿ ತಪ್ಪಿಸುತ್ತಿದೆ. ಮಾಧ್ಯಮಗಳ ಪ್ರಭಾವದಿಂದಾಗಿ  ಪ್ರೀತಿ– ಪ್ರೇಮ, ದೈಹಿಕ ಆಕರ್ಷಣೆ, ವೈಫಲ್ಯ ಎಲ್ಲವೂ ಶೀಘ್ರದಲ್ಲಿ ಜರುಗುತ್ತಾ, ಹತಾಶೆಗೆ ಒಳಗಾಗುವ ಹದಿಹರೆಯದವರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಧೂಮಪಾನ, ಗುಟ್ಕಾ, ಮಾದಕದ್ರವ್ಯ ಸೇವನೆಯಂತಹ ವ್ಯಸನಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಕೆಲವು ಶ್ರೀಮಂತ ಕುಟುಂಬಗಳ ಮಕ್ಕಳಲ್ಲಿ ಹತಾಶೆ, ತಾಳ್ಮೆಯ ಕೊರತೆ ಇರುತ್ತದೆ.

ಒಂಟಿತನ, ಪ್ರೀತಿಯ ಕೊರತೆ, ಇದೇ ಕೋರ್ಸ್‌ ಓದಬೇಕು, ಇಂಥದ್ದೇ ವೃತ್ತಿ ಮಾಡಬೇಕು ಎಂಬಂತಹ ಪೋಷಕರ ಒತ್ತಡ ಹದಿಹರೆಯದವರನ್ನು ಖಿನ್ನತೆಯತ್ತ ನೂಕುತ್ತಿದೆ. ಖಿನ್ನತೆ ಆನುವಂಶೀಯವಾಗಿ ಬಂದಿದ್ದರೆ ಗುಣಪಡಿಸಲು ದೀರ್ಘಕಾಲದ ಚಿಕಿತ್ಸೆ ಅಗತ್ಯ. ಬಹಳಷ್ಟು ಮಂದಿ ಖಿನ್ನತೆಗೆ ಚಿಕಿತ್ಸೆ ಪಡೆದುಕೊಳ್ಳಲು ಮನೋವೈದ್ಯರ ಬಳಿ ಬರುವುದಕ್ಕೆ ಹಿಂದೇಟು ಹಾಕುತ್ತಾರೆ. ಸಮಸ್ಯೆ ಮಿತಿಮೀರಿದ ನಂತರ ವೈದ್ಯರತ್ತ ಬರುವವರೇ ಹೆಚ್ಚು. ಮಕ್ಕಳು ಚಿಕಿತ್ಸೆಗೆ ಪ್ರತಿಕ್ರಿಯಿಸಬೇಕಾದರೆ 6ರಿಂದ 12 ವಾರಗಳು ಹಿಡಿಯುತ್ತವೆ. ಸರಿಯಾದ ಕಾರಣ ತಿಳಿದುಕೊಂಡರೆ ಸಮಸ್ಯೆಯನ್ನು ಗುಣಪಡಿಸಬಹುದು.

ಈ ರೋಗಕ್ಕೆ ಹಿರಿಯರಲ್ಲಿ ಮಾತ್ರೆಗಳು ಕೆಲಸ ಮಾಡುತ್ತವೆ. ಆದರೆ,  ಅಡ್ಡಪರಿಣಾಮದ ಸಾಧ್ಯತೆಯಿಂದಾಗಿ ಈ ಎಲ್ಲ ಮಾತ್ರೆಗಳನ್ನೂ ಮಕ್ಕಳಿಗೆ ಕೊಡಲು ಸಾಧ್ಯವಿಲ್ಲ. ಮಗುವಿನ ತೂಕ ಆಧರಿಸಿ ಕಡಿಮೆ ಪ್ರಮಾಣದಿಂದ ಮಾತ್ರೆ ಆರಂಭಿಸಬೇಕಾಗುತ್ತದೆ. ಯಾವುದೇ ಚಿಕಿತ್ಸೆ ನೀಡದಿದ್ದರೂ 18ರಿಂದ 20 ತಿಂಗಳ ನಂತರ ರೋಗಿ ಖಿನ್ನತೆಯಿಂದ ಹೊರಬರುವ ಸಾಧ್ಯತೆ ಇರುತ್ತದೆ.

ಇದು ಚಿಕಿತ್ಸೆಯ ಮಾತಾಯಿತು. ಖಿನ್ನತೆ ಬಾರದಂತೆ ತಡೆಯುವುದು ಅತ್ಯಂತ ಮುಖ್ಯ. ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷಣ, ನೈತಿಕ ಶಿಕ್ಷಣ ನೀಡಬೇಕು. ಸೋಲುಗಳನ್ನು ಗೆಲುವಿನ ಮೆಟ್ಟಿಲನ್ನಾಗಿ ಸ್ವೀಕರಿಸುವ ಗುಣವನ್ನು ಮೈಗೂಡಿಸಬೇಕು. ಕಡಿಮೆ ಅಂಕ ಗಳಿಸಿದ ಮಾತ್ರಕ್ಕೆ ತೆಗಳಿ ಅವರಲ್ಲಿ ತಪ್ಪಿತಸ್ಥ ಭಾವನೆ ಮೂಡುವಂತೆ ಮಾಡಬಾರದು. ಸೂಕ್ತ ಮಾರ್ಗದಲ್ಲಿ ನಿರ್ದಿಷ್ಟ ಗುರಿಯತ್ತ ಸಾಗುವುದನ್ನು ತಿಳಿಸಿಕೊಡಬೇಕು.

‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ’ ಎಂಬಂತೆ ಚಿಕ್ಕಂದಿನಲ್ಲೇ ದುಶ್ಚಟಗಳಿಗೆ ದಾಸರಾಗಿ ಖಿನ್ನತೆಗೆ ಒಳಗಾಗುವವರನ್ನು ಗುಣಪಡಿಸಲು ಬಹಳಷ್ಟು  ಸಮಯ ಹಿಡಿಯುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ, ಮಕ್ಕಳ ಚಟುವಟಿಕೆಗಳ ಮೇಲೆ ಪೋಷಕರು ಸದಾ ನಿಗಾ ಇಟ್ಟಿರಬೇಕು. ತಂದೆ–ತಾಯಿಯಷ್ಟು ಪ್ರೀತಿಯನ್ನು, ಭರವಸೆಯನ್ನು ಮಕ್ಕಳಿಗೆ ಕೊಡಲು ಬೇರಾರಿಗೂ ಸಾಧ್ಯವಿಲ್ಲ. ಹೀಗಾಗಿ ಅವರನ್ನು ಸಮಸ್ಯೆಗಳ ಸುಳಿಯಿಂದ ಹೊರತರುವಲ್ಲಿ ಪೋಷಕರ ಪಾತ್ರ ಮಹತ್ವದ್ದು.

ಮಕ್ಕಳು ಖಿನ್ನರಾದಾಗ...
ಶಾಲೆಗೆ ಹೋಗಲು ಹಿಂದೇಟು
ಕಲಿಕೆಯಲ್ಲಿ ಹಿಂದುಳಿಯುವುದು
ಆಟೋಟಗಳಲ್ಲಿ ಪಾಲ್ಗೊಳ್ಳದಿರುವುದು
ಊಟ, ತಿಂಡಿಯಲ್ಲಿ ನಿರಾಸಕ್ತಿ
ಚುರುಕುತನ ಕ್ಷೀಣಿಸುವುದು
ನಡವಳಿಕೆಯಲ್ಲಿ ವ್ಯತ್ಯಾಸ
ನಿದ್ರೆ ಸಮಸ್ಯೆ
ಹೊಟ್ಟೆನೋವು, ತಲೆನೋವು, ವಾಂತಿ

ಮಾನಸಿಕ/ಜೈವಿಕ ಕಾರಣ
ಹಾರ್ಮೋನ್‌ ವ್ಯತ್ಯಯ
ಆನುವಂಶೀಯತೆ
ಪದೇ ಪದೇ ದೈಹಿಕ ಕಾಯಿಲೆಗಳಿಗೆ ತುತ್ತಾಗುವುದು
ಔಷಧಿಗಳ ಅಡ್ಡ ಪರಿಣಾಮ
ನಾಚಿಕೆ, ಗಾಬರಿ ಸ್ವಭಾವ
ಹಿಂಜರಿಕೆ, ಆತಂಕ, ಅರಿವಿನ ಕೊರತೆ

ಸಾಮಾಜಿಕ ಕಾರಣ
ಪೋಷಕರ ಕಲಹ
ಅತಿಯಾದ ನಿರ್ಬಂಧಗಳು
ತಾಯಿಯ ಅತಿ ಕಾಳಜಿ, ತಂದೆಯ ವ್ಯಸನಗಳು
ಶಾಲೆಯಲ್ಲಿ ಅನಾರೋಗ್ಯಕರ ಸ್ಪರ್ಧೆ
ಅವಾಸ್ತವಿಕ ಶೈಕ್ಷಣಿಕ ನಿರೀಕ್ಷೆಗಳು
ಪಠ್ಯೇತರ ಚಟುವಟಿಕೆ ಕೊರತೆ
ಆಹಾರ ಪದ್ಧತಿ (ಜಂಕ್‌ಪುಡ್‌, ಸಂಸ್ಕರಿಸಿದ ಪಾನೀಯ ಇತ್ಯಾದಿ)
ಇತರ ಮಕ್ಕಳೊಂದಿಗೆ ಬೆರೆಯುವುದನ್ನು ತಡೆಯುವುದು

ವೈದ್ಯ ವಿದ್ಯಾರ್ಥಿಗೆ ಚಿಕಿತ್ಸೆ
ಖಿನ್ನತೆಯಿಂದ ಬಳಲುತ್ತಿರುವ ವೈದ್ಯಕೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಡಾ. ಮನೋಜ್‌ (26) ಎಂಬುವವರಿಗೆ ಮೈಸೂರಿನ  ಕೆ.ಆರ್‌.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು  ವಾರಗಳಿಂದ ಚಿಕಿತ್ಸೆ ಪಡೆಯುತ್ತಿರುವ ಅವರು ದಿನದಿಂದ ದಿನಕ್ಕೆ ಗುಣಮುಖರಾಗುತ್ತಿದ್ದಾರೆ. 

ಕಳೆದ ಐದು ತಿಂಗಳ ಹಿಂದೆ ವೈದ್ಯೆ ಡಾ.ಮನಸ್ವಿ (24) ಎಂಬುವವರನ್ನು ಮದುವೆಯಾಗಿದ್ದ ಮನೋಜ್‌ಗೆ ಪದೇ ಪದೇ ವಾಂತಿ, ಊಟದಲ್ಲಿ ನಿರಾಸಕ್ತಿ, ನಿದ್ರಾಹೀನತೆ, ಲೈಂಗಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಪತ್ನಿ ಅವರನ್ನು ಮಾನಸಿಕ ವೈದ್ಯರ ಬಳಿ ಕರೆತಂದಿದ್ದರು. ಪರೀಕ್ಷೆ ಮಾಡಿಸಿದಾಗ ಆತ ಖಿನ್ನತೆಯಿಂದ ಬಳಲುತ್ತಿರುವುದು ಪತ್ತೆಯಾಯಿತು.

ಮಧುಮೇಹ, ನಿದ್ರೆ ಕೊರತೆ, ನಿರುತ್ಸಾಹ, ಆಹಾರ ಪದ್ಧತಿಯಲ್ಲಿ ವ್ಯತ್ಯಯದಂತಹ  ಕಾರಣಗಳಿಂದ ಮನೋಜ್‌ಗೆ ಖಿನ್ನತೆ ಆವರಿಸಿಕೊಂಡಿತ್ತು. ಆದರೆ ಮಗನ ವರ್ತನೆಯಲ್ಲಿನ ವ್ಯತ್ಯಯಕ್ಕೆ ಸೊಸೆಯ ಕಾಲ್ಗುಣವೇ ಕಾರಣ  ಎಂದು ಮೊದಲು ಆತನ ತಂದೆ–ತಾಯಿ ದೂಷಿಸತೊಡಗಿದರು. ಕ್ರಮೇಣ ಅವರಿಗೆ ವಾಸ್ತವದ ಅರಿವಾಯಿತು. ಬಳಿಕ ಮನೋಜ್‌ ಸಹ ಚಿಕಿತ್ಸೆಗೆ ಸ್ಪಂದಿಸಲಾರಂಭಿಸಿದ್ದರಿಂದ ಅವರಲ್ಲಿ ಈವರೆಗೆ ಶೇ 30ರಷ್ಟು ಸುಧಾರಣೆ ಕಂಡುಬಂದಿದೆ. (ದಂಪತಿಯ ಹೆಸರು ಬದಲಿಸಲಾಗಿದೆ)

(ಲೇಖಕರು ನಿರ್ದೇಶಕರು, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT