ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಇಷ್ಟವಾಗುವ ಕುರುಕಲು ತಿನಿಸು

Last Updated 27 ಮೇ 2016, 19:50 IST
ಅಕ್ಷರ ಗಾತ್ರ

ಬೆಂಗಳೂರಿನ ರಾಜಾಜಿನಗರದ ಎಚ್‌.ಕೆ. ಗೋಪಿ ಅವರು ಕೆಎಲ್‌ಇ ಕಾಲೇಜಿನಲ್ಲಿ ಪಿಯುಸಿವರೆಗೂ ವಿದ್ಯಾಭ್ಯಾಸ ಮಾಡಿದರು. ಹೆಚ್ಚಿನ ಓದಿನತ್ತ ಗಮನ ನೀಡದೇ ತಂದೆ ನಡೆಸುತ್ತಿದ್ದ ಹೋಟೆಲ್‌ನ ಉಸ್ತುವಾರಿ ನೋಡಿಕೊಳ್ಳಲು ಮುಂದಾದರು. ಮನೆಯಲ್ಲೇ ಚಿಕ್ಕದಾಗಿ ಹೋಟೆಲ್‌ ನಡೆಸುತ್ತಿದ್ದರು. ಇಲ್ಲಿ ಇಡ್ಲಿ, ವಡೆ ಜೊತೆಗೆ ಜಿಲೇಬಿ, ಚಕ್ಕುಲಿ, ಕೋಡುಬಳೆ ಮಾಡಲಾಗುತ್ತಿತ್ತು. 1970ರಿಂದ ಹೋಟೆಲ್‌ನ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಿದ್ದರಿಂದ ಗೋಪಿ ಅವರಿಗೆ ಅಡುಗೆ ಮಾಡುವ ಕಲೆಯು ಕರಗತವಾಯಿತು. 1988ರಲ್ಲಿ ಹೋಟೆಲ್‌ಗೆ ಕರಿಗಿರಿ (ರಾಜಾಜಿನಗರ ರಾಮಮಂದಿರ ರಸ್ತೆ) ಎಂದು ಹೆಸರನ್ನೂ ಇಡಲಾಯಿತು. ಇಲ್ಲಿನ ವಿಶೇಷವೆಂದರೆ ಮೃದುವಾದ ಇಡ್ಲಿ ಮತ್ತು ವಡೆ. ಜೊತೆಗೆ ಹಳ್ಳಿಯ ಮನೆಗಳಲ್ಲಿ ಮಾಡುವ ಚಕ್ಕುಲಿ, ತೆಂಗುಳ್‌, ಹುರಿಗಾಳು, ಕಜ್ಜಾಯ, ಹೋಳಿಗೆ, ಎಳ್ಳುಂಡೆ, ಕಡುಬು, ಸಜ್ಜಪ್ಪ, ಪುರಿ ಉಂಡೆ...ಹೀಗೆ ಅಪರೂಪವೆನಿಸುವಂಥ ತಿನಿಸುಗಳು. ಮಾಲೀಕ ಹಾಗೂ ಬಾಣಸಿಗರೂ ಆಗಿರುವ ಗೋಪಿ ಅವರು ವಿವಿಧ ಕುರುಕಲು ತಿನಿಸುಗಳ ಮಾಡುವ ವಿಧಾನವನ್ನು ಇಲ್ಲಿ ವಿವರಿಸಿದ್ದಾರೆ.

ಚಕ್ಕುಲಿ
ಸಾಮಗ್ರಿ: ಅಕ್ಕಿ 1ಕೆ.ಜಿ, ಉದ್ದಿನ ಬೇಳೆ 150 ಗ್ರಾಂ, ಮೆಂತ್ಯೆ ಒಂದು ಟೀ ಚಮಚ, ಕಡ್ಲೆ 50 ಗ್ರಾಂ, ಸ್ವಲ್ಪ ಜೀರಿಗೆ. ಎಣ್ಣೆ 200 ಗ್ರಾಂ.
ವಿಧಾನ: ಮೊದಲು ಅಕ್ಕಿಯನ್ನು ತೊಳೆದು ಒಣಗಿಸಿಕೊಳ್ಳಿ, ನಂತರ ಉದ್ದಿನ ಬೇಳೆಯನ್ನು ಕೆಂಪಗೆ ಉರಿದುಕೊಳ್ಳಿ. ಉರಿದ ಉದ್ದಿನ ಬೇಳೆ, ಅಕ್ಕಿ ಹಾಗೂ ಕಡ್ಲೆಯನ್ನು ಪುಡಿ ಮಾಡಿಕೊಳ್ಳಬೇಕು. ಪುಡಿಮಾಡಿದ ಹಿಟ್ಟನ್ನು ಕಲೆಸುವಾಗ ಇಂಗು, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ ಅಥವಾ ತುಪ್ಪ ಹಾಕಿ ಕಲೆಸಿಕೊಳ್ಳಿ (ಚಪಾತಿಗೆ ಕಲೆಸಿಕೊಳ್ಳುವುದಕ್ಕಿಂತ ಸ್ವಲ್ಪ ತೆಳ್ಳಗೆ). ಒಂದೇ ಹದದಲ್ಲಿ ಎಣ್ಣೆಯನ್ನು ಕಾಯಿಸಿ ನಂತರ ಚಕ್ಕುಲಿ  ಒತ್ತಿರಿ. 8ರಿಂದ 10 ನಿಮಿಷದ ನಂತರ ತೆಗೆಯಿರಿ, ಚಕ್ಕುಲಿ ಬಿಳಿಬಣ್ಣದಲ್ಲಿ, ಮೃದುವಾಗಿರುತ್ತದೆ. ಖಾರ ಹೆಚ್ಚು ಬೇಕಾದಲ್ಲಿ ಖಾರದ ಪುಡಿ ಬೆರೆಸಿಕೊಳ್ಳಿ.

ಶಂಕರ ಪೋಳಿ
ಸಾಮಗ್ರಿ: ಮೈದಾಹಿಟ್ಟು 1 ಕೆ.ಜಿ, ಸಕ್ಕರೆ 300ಗ್ರಾಂ, ತುಪ್ಪ 300ಗ್ರಾಂ, ಗೋಡಂಬಿ 150 ಗ್ರಾಂ, ದ್ರಾಕ್ಷಿ 150 ಗ್ರಾಂ.
ವಿಧಾನ: ಮೊದಲು ದೊಡ್ಡ ತಟ್ಟೆಗೆ ಮೈದಾಹಿಟ್ಟನ್ನು ಹಾಕಿಕೊಂಡು ಮಧ್ಯೆದಲ್ಲಿ ಗುಂಡಿ ಮಾಡಿಕೊಳ್ಳಿ. ನಂತರ ಸಕ್ಕರೆ, ತುಪ್ಪ, ನೀರು ಹಾಕಿ ಸಕ್ಕರೆ ಕರಗುವವರೆಗೂ ಹದವಾಗಿ ಕಲೆಸಿಕೊಳ್ಳಿ. ಹಲಗೆ ಮಣೆ ಮೇಲೆ ಕಲೆಸಿದ ಹಿಟ್ಟನ್ನು ಹಾಕಿ ಚಪಾತಿ ರೀತಿ ಲಟ್ಟಣಿಗೆಯಲ್ಲಿ ಸ್ವಲ್ಪ ದಪ್ಪವಾಗಿ ಹರೆಯಿರಿ. ನಂತರ ಚಾಕುವಿನಿಂದ ಯಾವ ಆಕಾರಕ್ಕೆ ಬೇಕೋ ಆ ಆಕಾರ, ಅಳತೆಯಲ್ಲಿ ಕತ್ತರಿಸಿ. ಕಡಿಮೆ ಕಾವಿನಲ್ಲಿ ಎಣ್ಣೆಯನ್ನು ಕಾಯಿಸಿ ಕತ್ತರಿಸಿದ ಹಿಟ್ಟನ್ನು ಕರಿಯಿರಿ. ಹಿಟ್ಟಿನಲ್ಲಿ ಹಸಿ ಅಂಶ ಇರದ ಹಾಗೆ ಕರಿಯಬೇಕು. ಹೆಚ್ಚು ಕೆಂಪಾಗದಂತೆ 20 ನಿಮಿಷ ಬೇಯಿಸಿ ತೆಗೆಯಿರಿ. ಬಿಸಿ ಇದ್ದಾಗಲೇ ಕಾಳು ಮೆಣಸಿನ ಪುಡಿ, ಸಕ್ಕರೆ ಪುಡಿ ಎರಡನ್ನೂ ಮಿಶ್ರಣ ಮಾಡಿ ಉದುರಿಸಿ. ನಂತರ ದ್ರಾಕ್ಷಿ, ಗೋಡಂಬಿ ಕರಿದು, ಅದಕ್ಕೂ ಕಾಳು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಉದುರಿಸಿ. ಈ ಮಿಶ್ರಣವನ್ನು ಶಂಕರ ಪೋಳಿಯೊಂದಿಗೆ ಬೆರೆಸಿ.

ಮಸಾಲೆ ಗೋಡಂಬಿ
ಸಾಮಗ್ರಿ: ಗೋಡಂಬಿ ಕಾಲು ಕೆ.ಜಿ, ಕಡ್ಲೆ ಹಿಟ್ಟು 100 ಗ್ರಾಂ, ಖಾರದ ಪುಡಿ 2ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕಾರ್ನ್‌ ಫ್ಲೋರ್‌ ಒಂದು ಚಮಚ, ಕೆಂಪು ಬಣ್ಣ.
ವಿಧಾನ: ಮೊದಲು ಕಡ್ಲೆ ಹಿಟ್ಟು, ಖಾರದ ಪುಡಿ, ಕಾರ್ನ್‌ ಫ್ಲೋರ್‌, ಉಪ್ಪು, ಸ್ವಲ್ಪ ಬಣ್ಣ ಹಾಕಿ ಗಟ್ಟಿಯಾಗಿ ಕಲೆಸಿಕೊಳ್ಳಿ. ನಂತರ ಗೋಡಂಬಿ ಹಾಕಿ ಕಲೆಸಿ. ಕಡಿಮೆ ಉರಿಯಲ್ಲಿ ಹಾಕಿ ಕರಿಯಿರಿ. ಆಗಾಗ ಜಾಲರಿಯಲ್ಲಿ ಕೈಯಾಡಿಸುತ್ತಿರಬೇಕು.10ರಿಂದ 15 ನಿಮಿಷದ ನಂತರ ತೆಗೆದು ಹಗಲ ತಟ್ಟೆಯಲ್ಲಿ ಹಾಕಿ ತಣ್ಣಗೆ ಮಾಡಬೇಕು.

ಕಾಜು ಬರ್ಫಿ
ಸಾಮಗ್ರಿ: ಗೋಡಂಬಿ 1 ಕೆ.ಜಿ, ಸಕ್ಕರೆ ಅರ್ಧ ಕೆ.ಜಿ, ತುಪ್ಪ 200 ಗ್ರಾಂ.
ವಿಧಾನ: ಗೋಡಂಬಿಯನ್ನು ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆಸಿ, ನಂತರ ನೀರಿನಿಂದ ಗೋಡಂಬಿ ತೆಗೆದು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಗಟ್ಟಿಯಾಗಿ ಮಾಡಿದ ಸಕ್ಕರೆ ಪಾಕಕ್ಕೆ (ಬಿಸಿ ಇರುವಾಗಲೇ) ರುಬ್ಬಿದ ಗೋಡಂಬಿ ಹಾಕಿ ಮಿಶ್ರಣ ಮಾಡಿ. ಕೊನೆಗೆ ಮಿಶ್ರಣ ಮಾಡಿದ ಗೋಡಂಬಿಯನ್ನು ಟ್ರೇಗೆ ಹಾಕಿ 3ಗಂಟೆ ನಂತರ ಯಾವ ಆಕಾರಕ್ಕೆ ಬೇಕೋ ಆ ಆಕಾರಕ್ಕೆ ಕತ್ತರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT