ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ನೀಡಿ ಮನೆಯೂಟ

Last Updated 12 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಸಮಯದ ಬೆನ್ನು ಹತ್ತಿ ಓಡುತ್ತಿರುವ ಈ ಕಾಲದಲ್ಲಿ ಮಕ್ಕಳ ಆರೋಗ್ಯವನ್ನು ಕಡೆಗಣಿಸಿದ್ದೇವೆಯೇ? ಸೂಕ್ಷ್ಮ ಪೋಷಕಾಂಶಗಳ ಅಗತ್ಯವನ್ನು ಸರಿಯಾಗಿ ಅರಿಯದೇ ಅವರ ಬೆಳವಣಿಗೆ ನಿರ್ಲಕ್ಷಕ್ಕೊಳಗಾಗಿದೆ? ಹೌದು ಎನ್ನುತ್ತಿವೆ ಹಲವು ಅಂಶಗಳು. ಈ ಕುರಿತು ಮಕ್ಕಳ ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಗಂಟೆಗಟ್ಟಲೆ ಕೈಯಲ್ಲಿ ಊಟದ ಬಟ್ಟಲು ಹಿಡಿದು, ಕತೆ–ಚಂದಮಾಮ ಎಂದೆಲ್ಲ ರಮಿಸುತ್ತ ಮಕ್ಕಳಿಗೆ ಊಟ ತಿನ್ನಿಸುವ ಅಮ್ಮಂದಿರ ಸಂಖ್ಯೆ ಈಗ ಕಡಿಮೆಯಾಗಿದೆ. ಟಿಫನ್ ಬಾಕ್ಸ್‌ಗಳಲ್ಲೂ ಅನ್ನ, ಪಲ್ಯಗಳು ಕಾಣೆ. ‘ನೀಡ್ ಆಫ್ ದಿ ಅವರ್’ ಲೆಕ್ಕದಲ್ಲಿ ಆಹಾರ ಸೇವಿಸುವ ಜನರು ಫಟ್ ಎಂದು ಮಾಡಿ ಮುಗಿಸುವ, ಅಷ್ಟೇ ಧಾವಂತದಲ್ಲಿ ಮಕ್ಕಳಿಗೆ ತಿನ್ನಿಸಿ ಶಾಲೆಗೆ ಓಡಿಸುವಲ್ಲಿ ಮುಂದು. ‘ಪ್ರೊಟೀನ್‌ಯುಕ್ತ ಆಹಾರ’ ಎಂಬ ಲೇಬಲ್ ಹೊತ್ತ ಉತ್ಪನ್ನಗಳ ಪ್ಯಾಕೆಟ್‌ಗಳು ಇವರಿಗೆ ತಾತ್ಕಾಲಿಕ ಸಮಾಧಾನ ನೀಡುತ್ತಿವೆ. ಅಲ್ಲದೇ ಮಕ್ಕಳ ಬಾಯಲ್ಲಿ ಹೆಚ್ಚು ಆಹಾರವನ್ನು ತುರುಕಿದಷ್ಟೂ ಹೆಚ್ಚು ಪೌಷ್ಟಿಕಾಂಶ ಕೊಟ್ಟಿದ್ದೇವೆ ಎಂಬ ತಪ್ಪು ತಿಳಿವಳಿಕೆಗೂ ಕಡಿಮೆಯಿಲ್ಲ.

ಆದರೆ ನಿಜಕ್ಕೂ ನಾವು ಮಕ್ಕಳಿಗೆ ನೀಡುವ ಆಹಾರಗಳಲ್ಲಿ ಪೌಷ್ಟಿಕಾಂಶಗಳು ತುಂಬಿಕೊಂಡಿದೆಯೇ? ಮಕ್ಕಳ ಬೆಳವಣಿಗೆಗೆ ಅತ್ಯಗತ್ಯವಾಗಿರುವ ಸೂಕ್ಷ್ಮ ಪೋಷಕಾಂಶಗಳನ್ನು ಅವುಗಳು ಒದಗಿಸುತ್ತಿವೆಯೇ? ಈ ಬಗ್ಗೆ ಗಂಭೀರವಾಗಿ ಯೋಚಿಸುವವರು ಕಡಿಮೆಯೇ.

ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದ ಮಕ್ಕಳ ಬಗ್ಗೆಯೇ ಎಲ್ಲ ಪೋಷಕರ ದೂರು. ಜೊತೆಗೆ ಓದಿನಲ್ಲೂ ಹಿಂದುಳಿದಿರುವ ಬಗ್ಗೆ ಅಸಮಾಧಾನ. ಪಾಲಕರ ಈ ದೂರನ್ನು ಅವಲಂಬಿಸಿಯೇ ಪೋಷಕಾಂಶಗಳ ಸಪ್ಲಿಮೆಂಟ್‌ ಉತ್ಪನ್ನಗಳೂ ಹುಟ್ಟಿಕೊಂಡವು. ಬೇರೆ ರೂಪದಲ್ಲಿ ಲಭ್ಯವಿರುವ ಪೌಷ್ಟಿಕಾಂಶದ ಉತ್ಪನ್ನಗಳನ್ನು ತಂದು, ಮಕ್ಕಳಿಗೆ ತಿನ್ನಿಸಿ ದಿನಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಮಕ್ಕಳಿಗೆ ನೀಡಿದ್ದೇವೆಂಬ ನಿಟ್ಟುಸಿರಿನೊಂದಿಗೆ ನಿರಾಳರಾಗುವ ತಂದೆ ತಾಯಿಗಳೇ ಹೆಚ್ಚು.

ಆದರೆ ಹೀಗೆ ಸಿದ್ಧರೂಪದ ಪ್ಯಾಕೆಟ್‌ಗಳ ಆಚೆಗೂ ಮಕ್ಕಳ ದೇಹ ಕೆಲವು ಸೂಕ್ಷ್ಮ ಪೋಷಕಾಂಶಗಳನ್ನು ಬೇಡುತ್ತದೆ. ಮಕ್ಕಳ ಬೌದ್ಧಿಕ, ದೈಹಿಕ ಬೆಳವಣಿಗೆಗೆ ಇಂಬು ನೀಡುವ ಇವು ಸ್ವಲ್ಪ ಪ್ರಮಾಣದಲ್ಲಾದರೂ ಆಹಾರ ಕ್ರಮದಲ್ಲಿ ಸೇರಿರಲೇಬೇಕು. ಈ ಕುರಿತ ಆಯ್ಕೆಯಲ್ಲಿ ಮಕ್ಕಳ ಆಹಾರದ ಬಗ್ಗೆ ತುಂಬಾ ಕಾಳಜಿ ವಹಿಸುವ ಪೋಷಕರೂ ಬಹಳ ಸಲ ಎಡವುತ್ತಾರೆ. ಒಳ್ಳೊಳ್ಳೆ ಸೊಪ್ಪು, ತರಕಾರಿ, ಹಣ್ಣುಗಳನ್ನು ತಂದು, ವಾರಾನುಗಟ್ಟಲೆ ಫ್ರಿಜ್‌ನಲ್ಲಿ ಇಟ್ಟು ತಿನ್ನಿಸುವ ಅಮ್ಮಂದಿರಿಗೆ, ಕೆಡದೇ ಉಳಿವ ಆಹಾರದಲ್ಲಿ ಪೌಷ್ಟಿಕಾಂಶ ಹಾಗೇ ಇರುತ್ತದೆಂಬ ನಂಬಿಕೆ.

ತಾಜಾ ಆಹಾರಕ್ಕೇ ಆದ್ಯತೆ

ಕೆಲಸಕ್ಕೆ ಹೋಗುವುದರಿಂದ ಮಕ್ಕಳೆಡೆಗೆ ಪ್ರತಿ ಕ್ಷಣವೂ ನಿಗಾ ವಹಿಸುವುದು ಸ್ವಲ್ಪ ಕಷ್ಟವೇ. ಆದರೆ ಅವರ ಆರೋಗ್ಯ ಎಲ್ಲಕ್ಕಿಂತ ಮುಖ್ಯವಾದ್ದರಿಂದ ಅವರ ತಿಂಡಿ, ಮಧ್ಯಾಹ್ನದ ಊಟ ಎಲ್ಲದರಲ್ಲೂ ಅತಿ ಶುದ್ಧತೆ ಕಾಯ್ದುಕೊಳ್ಳುತ್ತೇನೆ. ಬೇಕರಿ ತಿಂಡಿಗಳನ್ನು ಆದಷ್ಟೂ ದೂರವಿಡುತ್ತೇನೆ. ಕಾಳುಗಳನ್ನು ಮೊಳಕೆ ಕಟ್ಟಿ ಕೊಡುತ್ತೇನೆ. ಮೊದಲು ಅದನ್ನು ತಿನ್ನುವುದಿಲ್ಲ ಎಂದು ಹಟ ಹಿಡಿಯುತ್ತಿದ್ದವು. ಈಗ ತಿನ್ನಲು ರೂಢಿ ಮಾಡಿಕೊಂಡಿದ್ದಾರೆ. ಈಗಿನ ಆಹಾರಗಳೂ ನಮ್ಮ ಕೈ ಸೇರುವಷ್ಟರಲ್ಲಿ ಅದರ ಸತ್ವವನ್ನೇ ಕಳೆದುಕೊಂಡುಬಿಟ್ಟಿರುತ್ತವೆ. ಆದರೆ ಬೇರೆ ಆಯ್ಕೆಯಿಲ್ಲವಲ್ಲ. ಅದಕ್ಕಾಗಿ ಆಗಾಗ ತಂದು ಬೇಯಿಸಿ ಕೊಡುತ್ತೇನೆ. ಶೇಖರಿಸಿಟ್ಟಿದ್ದನ್ನು ಕೊಡುವುದಿಲ್ಲ. ಇದು ಮಕ್ಕಳ ಆರೋಗ್ಯ ಕಾಪಾಡಲು ನಾನು ಕಂಡುಕೊಂಡಿರುವ ದಾರಿಗಳಲ್ಲಿ ಒಂದು.
–ರೂಪ, ಉದ್ಯೋಗಸ್ಥ ಮಹಿಳೆ.

ಪ್ರತಿದಿನ, ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 6000ಕ್ಕೂ ಅಧಿಕ ಮಕ್ಕಳು ಸಾಯುತ್ತಿದ್ದು, ಇದರಲ್ಲಿ, ಅರ್ಧಕ್ಕಿಂತ ಹೆಚ್ಚು ಅಪೌಷ್ಟಿಕತೆಗೆ ಸಂಬಂಧಿಸಿದ ಕಾರಣಗಳಿಂದ ಸಾವನ್ನಪ್ಪುತ್ತಿರುವ ಸಂಗತಿ ಎದೆ ನಡುಗುವಂತೆ ಮಾಡುವುದೂ ಸುಳ್ಳಲ್ಲ.

ಮಕ್ಕಳಿಗೆ ಏನು ತಿನ್ನಿಸಬೇಕು, ಏನು ತಿನ್ನಿಸಬಾರದು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದರೂ ಮೈಕ್ರೋ ನ್ಯೂಟ್ರಿಯಂಟ್ಸ್‌ಗಳ ಕೊರತೆ ಬಗ್ಗೆ ತಿಳಿಯದವರೇ ಹೆಚ್ಚು. ಈ ಕುರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳುವವರೂ ಇಲ್ಲ ಎನ್ನುತ್ತಾರೆ ಬೆಂಗಳೂರಿನ ಸ್ಯಾಮಿ ಲ್ಯಾಬ್‌ನ ಆಹಾರ ತಜ್ಞೆ ಡಾ. ಪಲ್ಲವಿ. ಸೂಕ್ಷ್ಮ ಪೋಷಕಾಂಶಗಳ ಬಗ್ಗೆ ಅವರ ಸರಳ ವ್ಯಾಖ್ಯಾನವನ್ನೂ ನೀಡಿದ್ದಾರೆ.

ಸೂಕ್ಷ್ಮ ಪೋಷಕಾಂಶಗಳೆಂದರೆ....
ಸೂಕ್ಷ್ಮ ಪೋಷಕಾಂಶಗಳೆಂದರೆ ವಿಟಮಿನ್ ಮತ್ತು ಖನಿಜಾಂಶಗಳು. ಸ್ವಲ್ಪ ಪ್ರಮಾಣದ ದಿನನಿತ್ಯದ ಅಗತ್ಯವನ್ನು ಇವು ಬೇಡುತ್ತವೆ. ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಡಿ, ಝಿಂಕ್‌, ಫೋಲಿಕ್ ಆಸಿಡ್, ಕಬ್ಬಿಣಂಶ, ಐಯೋಡಿನ್ ಇವು ಪ್ರಮುಖ ಮೈಕ್ರೋ ನ್ಯೂಟ್ರಿಯಂಟ್ಸ್. ಮಕ್ಕಳ ಮೆದುಳಿನ ಕಾರ್ಯವೈಖರಿ, ಶಕ್ತಿ, ಆರೋಗ್ಯ, ಸಮರ್ಥ ಚಟುವಟಿಕೆ ಇವೆಲ್ಲವೂ ಈ ಅಂಶಗಳ ಮೇಲೇ ಅವಲಂಬಿತ. ದಿನವೂ ಈ ಅಂಶಗಳು ಮಕ್ಕಳ ಊಟದಲ್ಲಿರುವುದು ಕಡ್ಡಾಯ.

ಜಾಹೀರಾತಿಗೆ ಮರುಳಾಗದಿರಿ

ಮಕ್ಕಳ ಆಹಾರದ ವಿಚಾರಕ್ಕೆ ಬಂದರೆ ಮನೆ ಊಟವೇ ಆದ್ಯತೆಯಾಗಿರಬೇಕು. ಈಗಿನದ್ದು ತುಂಬಾ ಬ್ಯುಸಿ ಜೀವನ, ತಂದೆ ತಾಯಿ ಇಬ್ಬರೂ ದುಡಿಯುವರು. ಇಂಥದ್ದೇ ಹಲವು ಕಾರಣವಿರಬಹುದು. ಆದರೆ ಅವರ ಆದ್ಯತೆಯೇ ಇಲ್ಲಿ ಮುಖ್ಯವಾಗುತ್ತದೆ. ಇನ್ನು ಪೋಷಕಾಂಶಗಳ ಸಪ್ಲಿಮೆಂಟ್‌ಗಳಿಂದ ಯಾವುದೇ ಉಪಯೋಗವಿಲ್ಲ. ಸಿರಪ್, ಮಲ್ಟಿನ್ಯೂಟ್ರಿಯಂಟ್ಸ್‌ಗಳ ಉತ್ಪನ್ನಗಳಿದ್ದರೂ, ಅವು ಮನೆ ಊಟಕ್ಕೆ ಎಂದಿಗೂ ಸರಿಹೊಂದಲಾರವು. ಆದರೆ ಪದ್ಧತಿಯಲ್ಲಿ ಕೆಲವೇ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಕಬ್ಬಿಣದ ಬಾಣಲೆಯಲ್ಲಿ ಆಹಾರ ತಯಾರಿಸುವುದು, ಸಕ್ಕರೆ ಬದಲು ಬೆಲ್ಲ ಬಳಸುವುದು, ಬರೀ ಸಾರಲ್ಲದೆ, ಅದರಲ್ಲಿ ದ್ವಿದಳ ಧಾನ್ಯಗಳಿರುವಂತೆ ಮಾಡುವುದು ತುಂಬಾ ಮುಖ್ಯ. ಆಹಾರದಲ್ಲಿ ವೈವಿಧ್ಯವಿರಬೇಕು. ಎಲ್ಲ ರೀತಿಯ ಮೈಕ್ರೋ ನ್ಯೂಟ್ರಿಯಂಟ್‌ಗಳು ಒಂದೇ ಆಹಾರದಿಂದ ಸಿಗುವಂಥದ್ದಲ್ಲ. ಆದ್ದರಿಂದ ಬಗೆ ಬಗೆ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಜಾಹೀರಾತಿಗೆ ಮರುಳಾಗಿ ಮಕ್ಕಳನ್ನು ತಪ್ಪು ದಾರಿಗೆ ದೂಡಬೇಡಿ. ಎಷ್ಟೇ ಒಳ್ಳೆಯ ಉತ್ಪನ್ನವಾದರೂ ಶೇಖರಿಸಿಟ್ಟರೆ ದಿನೇ ದಿನೇ ಅದರ ಪೋಷಕಾಂಶಗಳೂ ಕುಂದುತ್ತವೆ. ಜೊತೆಗೆ ಅವುಗಳಲ್ಲಿ ಬಳಸಿರುವ ಇನ್ನಿತರ ಅಂಶಗಳೂ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ
–ಅರುಂಧತಿ, ಮಕ್ಕಳ ತಜ್ಞೆ, ಕಲಬುರ್ಗಿ.

ಮಕ್ಕಳಿಗೆ ಮನೆ ಊಟ ನೀಡುವುದರಲ್ಲೇ ಪ್ರಾಶಸ್ತ್ಯ ನೀಡಿ. ಚಾಕ್‌ಲೇಟ್, ಜಂಕ್‌ ಫುಡ್‌ಗಳೆಡೆಗೆ ಮಕ್ಕಳು ಆಕರ್ಷಿತರಾಗುವುದು ಸಹಜ. ಹಾಗೆಂದು ಅದೇ ರೂಢಿಯಾಗದಂತೆ ನೋಡಿಕೊಳ್ಳಿ. ಸೊಪ್ಪುಗಳು, ತರಕಾರಿಗಳು, ಹಣ್ಣುಗಳು ಯಥೇಚ್ಛವಾಗಿರಲಿ. ಅದರಲ್ಲೂ ಕ್ಯಾರೆಟ್, ಪಾಲಕ್, ಮೊಳಕೆ ಹೆಸರು ಕಾಳು, ಸಪೋಟ, ಬಾಳೆಹಣ್ಣು, ಕಿವಿ, ದಾಳಿಂಬೆ ಹಣ್ಣುಗಳನ್ನು ಸೇವಿಸಲು ಹೆಚ್ಚು ಕೊಡಿ. ರಾಗಿಯ ಆಹಾರ ಮಕ್ಕಳಿಗೆ ತುಂಬಾ ಒಳ್ಳೆಯದು. ಉಪ್ಪಿಟ್ಟು, ದೋಸೆ, ಚಪಾತಿಗಳಲ್ಲಿ ತರಕಾರಿ ಪಲ್ಯಗಳನ್ನು ಸೇರಿಸಿ ನೀಡಿದರೆ ಒಳ್ಳೆಯದು.

ಇನ್ನೂ ಒಂದು ಮುಖ್ಯ ಅಂಶವೆಂದರೆ, ಮೊಸರು, ಬೆಣ್ಣೆ, ತುಪ್ಪದಂಥ ಪದಾರ್ಥಗಳು ಬೊಜ್ಜನ್ನು ಹೆಚ್ಚಿಸುತ್ತವೆ ಎಂಬ ಮಾತಿದೆ. ಹಾಗೆಂದು ಇದನ್ನು ಮಕ್ಕಳಿಗೆ ಕೊಡದೇ ಇರುವುದು ದೊಡ್ಡ ತಪ್ಪು. ಇವುಗಳನ್ನು ಒಂದು ಮಟ್ಟದಲ್ಲಾದರೂ ಮಕ್ಕಳ ಆಹಾರ ಕ್ರಮದಲ್ಲಿರುವಂತೆ ನೋಡಿಕೊಳ್ಳಲೇಬೇಕು.

ಜೀವನ ಚಕ್ರ ಸರಾಗ ಸಾಗಲು
ದೇಹಕ್ಕೆ ಆ್ಯಂಟಿಯಾಕ್ಸಿಡೆಂಟ್‌ಗಳನ್ನು ಒದಗಿಸುವ ಈ ಸೂಕ್ಷ್ಮ ಪೋಷಕಾಂಶಗಳ ಕೊರತೆ ಉಂಟಾದರೆ, ಆ ಜಾಗ ತುಂಬಲು ತುಂಬಾ ಕಷ್ಟ. ದೇಹದ ಚಿಕ್ಕ ಚಿಕ್ಕ ಚಟುವಟಿಕೆಗಳಿಗೆ ಅಗತ್ಯವಿರುವ, ಆದರೆ ತುಂಬಾ ಅವಶ್ಯವಿರುವ ಈ ಪೋಷಕಾಂಶಗಳ ಕೊರತೆಯನ್ನು ಭಾರತದಂಥ ದೇಶ ಹೆಚ್ಚಾಗಿ ಎದುರಿಸುತ್ತಿದೆ. ಲೈಫ್‌ ಸೈಕಲ್‌ ಸರಾಗವಾಗಿ ಸಾಗಲು ಈ ಪೋಷಕಾಶಗಳು ಇಂಧನವಿದ್ದಂತೆ. ಮಕ್ಕಳಲ್ಲಿ ಉಂಟಾಗುವ ಇದರ ಸಮಸ್ಯೆ ಹದಿಹರೆಯಕ್ಕೂ ಮುಂದುವರೆಯುತ್ತದೆ. ಅದೇ ಜೀವನದುದ್ದಕ್ಕೂ ನೆರಳಿನಂತೆ ಹಿಂಬಾಲಿಸುತ್ತದೆ. ಹೆಣ್ಣು ಮಕ್ಕಳಿಗಂತೂ ಈ ಪೋಷಕಾಂಶಗಳು ಎಲ್ಲರಿಗಿಂತ ಹೆಚ್ಚಿನ ಅಗತ್ಯ. ಮಕ್ಕಳಿಗೆ ಓದಿನಲ್ಲಿ ನಿರಾಸಕ್ತಿ, ಏಕಾಗ್ರತೆ ಕೊರತೆ ಉಂಟಾಗುವುದು ಇಂಥದ್ದೇ ಕಾರಣದಿಂದ. 0–1 ಹಾಗೂ ಹದಿ ಹರೆಯ ಜೀವನದ ಅತಿ ಮುಖ್ಯ ಕಾಲಘಟ್ಟ. ಇದು ಅತಿ ವೇಗದಲ್ಲಿ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಕಾಣುತ್ತದೆ. ಆದ್ದರಿಂದ ಆ ಹಂತವನ್ನು ಆದಷ್ಟೂ ಒಳ್ಳೆಯ ಮಟ್ಟದಲ್ಲಿ ಮುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT