ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಬೇಡ ಮೊಬೈಲ್‌

Last Updated 18 ಜುಲೈ 2014, 19:30 IST
ಅಕ್ಷರ ಗಾತ್ರ

ಮೊಬೈಲ್‌ ಕೆಟ್ಟದ್ದು ಎಂದು ನಾವು ಹೇಳಿಲ್ಲ. ನಾವು ಹೇಳಿರುವುದು ಎಳೆಯ ಮಗುವಿಗೆ, ವ್ಯಾಸಂಗದ ಅವಧಿಯಲ್ಲಿ ಮೊಬೈಲ್‌ ಬೇಡ ಎಂದು ಮಾತ್ರ...

ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ತನ್ನ 27ನೇ ವರದಿಯನ್ನು ಇತ್ತೀಚೆಗೆ ಸದನ­ದಲ್ಲಿ ಮಂಡಿಸಿದೆ. ಮಹಿಳೆ­ಯರು ಸಾರ್ವಜನಿಕ ಜೀವನ­ದಲ್ಲಿ ಎದುರಿಸುತ್ತಿ­ರುವ ವಿವಿಧ ಸ್ವರೂ­ಪದ ಸಮಸ್ಯೆಗಳ ಕುರಿತು ಸಮಿತಿ ನಡೆಸಿದ ಅಧ್ಯಯನ ಈ ವರದಿಯಲ್ಲಿದೆ. ಮಹಿಳೆ­ಯರ ಮೇಲಿನ ಅತ್ಯಾಚಾರ ಹಾಗೂ ಯುವತಿಯರ ನಾಪತ್ತೆ ಪ್ರಕರಣಗಳೂ ಸಮಿತಿಯ ಅಧ್ಯಯ­ನದ ವಸ್ತು­ವಾಗಿದ್ದವು.

ಸಮಿತಿಯು 272 ಪುಟಗಳ ವರದಿ­ಯಲ್ಲಿ ಮಾಡಿರುವ ಒಂದು ಶಿಫಾರಸು ಈಗ ಪರ–ವಿರೋಧ ಚರ್ಚೆಗಳ ಕೇಂದ್ರ ಬಿಂದುವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಯುವತಿಯರ ನಾಪತ್ತೆ ಪ್ರಕರಣಗಳ ತಡೆಗೆ ಸಮಿತಿ ಐದು ಶಿಫಾರಸುಗಳನ್ನು ನೀಡಿದೆ. ಐದ­ನೆಯ ಶಿಫಾರಸು ಹೀಗಿದೆ: ‘ಸರ್ಕಾರ ಶಿಕ್ಷಣ ಇಲಾಖೆಗೆ ಕೂಡಲೇ ಸೂಚನೆ ನೀಡಿ, ವಿದ್ಯಾರ್ಥಿಗಳು ಶಾಲಾ ಕಾಲೇಜು­ಗಳಲ್ಲಿ ಮೊಬೈಲ್‌ ಫೋನ್‌ ಬಳಸುವು­ದನ್ನು ಕಡ್ಡಾಯವಾಗಿ ನಿಷೇಧಿಸಬೇಕು’.

ಶಿಫಾರಸಿನಲ್ಲಿ ‘ವಿದ್ಯಾರ್ಥಿ’ ಎಂಬ ಪದ ಬಳಸಲಾಗಿದೆ. ಅಂದರೆ ಇದು ಬಾಲಕ–ಬಾಲಕಿಯರಿಬ್ಬರಿಗೂ ಸಮಾನ­ವಾಗಿ ಅನ್ವಯ ಆಗುತ್ತದೆ. ‘ಶಾಲಾ ಕಾಲೇ­ಜು­ಗಳಲ್ಲಿ’ ಎಂಬ ಸ್ಪಷ್ಟನೆ ಇರುವ ಕಾರಣ, ಒಂದನೆಯ ತರಗತಿಯಿಂದ ಆರಂಭಿಸಿ, ಕಾಲೇಜು ಶಿಕ್ಷಣದ ಕೊನೆಯ ಹಂತದ­ವರೆಗೂ ಶಾಲಾ ಕಾಲೇಜುಗಳ ಆವರಣದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ತಡೆಯ­ಬೇಕು ಎಂಬ ಆಶಯ ಶಿಫಾರಸಿನಲ್ಲಿದೆ.

ಅತ್ಯಾಚಾರದಂಥ ವಿಕೃತ ಕ್ರೌರ್ಯದ ತಡೆಗೆ, ನಾಪತ್ತೆ ಪ್ರಕರಣ­ಗಳನ್ನು ಇಲ್ಲ­ವಾಗಿ­ಸಲು ಮೊಬೈಲ್‌ ಬಳಕೆ ನಿಷೇಧಿ­ಸು­ವುದು ಪರಿಹಾ­ರವೇ? ಇಂಥ ಶಿಫಾರಸು ಮಾಡುವಾಗ ಸಮಿತಿ ಯಾವ ಅಂಶ­ಗ­ಳನ್ನು ಪರಿಗ­ಣಿಸಿದೆ? ಈ ಕುರಿತು ಸಮಿತಿ ಅಧ್ಯಕ್ಷೆ, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರೊಂದಿಗೆ ‘ಪ್ರಜಾ­ವಾಣಿ’ ನಡೆ­ಸಿದ ಸಂದ­ರ್ಶನದ ಆಯ್ದ ಭಾಗ ಇಲ್ಲಿದೆ:

*ಮೊಬೈಲ್‌ ಬಳಕೆ ನಿಷೇ­ಧಿ­­­ಸ­ಬೇಕು ಎಂಬ ಶಿಫಾರಸು ಮಾಡಲು ಕಾರಣ ಏನು?
ನಮ್ಮದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿ. ನಾವು ಮಹಿಳೆ ಮತ್ತು ಮಕ್ಕಳ ಕ್ಷೇಮವನ್ನು ಗಮನ ದಲ್ಲಿ ಇರಿಸಿಕೊಂಡಿದ್ದೆವು. ಪೊಲೀಸ್‌ ಇಲಾ­ಖೆಯ ಹಿರಿಯ ಅಧಿಕಾರಿಗಳ ಜೊತೆ ಮಾತ­ನಾಡುವ ಸಂದರ್ಭದಲ್ಲಿ, ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಐದರಿಂದ ಆರು ಸಾವಿರದಷ್ಟು ಮಹಿಳೆ/ ಯುವತಿ­ಯರ ಅಪಹರಣ ಮತ್ತು ನಾಪತ್ತೆ ಪ್ರಕರಣಗಳು ನಡೆದಿವೆ ಎಂಬ ಅಂಶ ಗೊತ್ತಾಯಿತು.

ಇದರಲ್ಲಿ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗಿ­ದ್ದವು. ಈ ಕುರಿತು ಸಮಿತಿ ಮಂಥನ ನಡೆ­ಸಿತು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅಪ­ಹ­ರಣ ಪ್ರಕರಣಗಳು ರಾಜ್ಯದಲ್ಲಿ ವರದಿ­ಯಾಗುವ ಸಂದರ್ಭದಲ್ಲಿ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ­ಯನ್ನೂ ನಾವು ಅಧಿಕಾರಿಗಳ ಮುಂದಿ­ಟ್ಟೆವು. ನಾಪತ್ತೆಯಾದವರಲ್ಲಿ ಹೆಚ್ಚಿನ­ವರು ಮೊಬೈಲ್‌ ಬಳಸುವ ಸಂದರ್ಭ­ದಲ್ಲಿ, ಅಪರಿಚಿತ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ, ಅವರ ಜೊತೆ ಹೋಗಿ ದೌರ್ಜ­ನ್ಯಕ್ಕೆ ಒಳಗಾಗಿದ್ದರು. ಅವರು ಮನೆಗೆ ವಾಪಸ್‌ ಬಂದು ತಂದೆ–ತಾಯಿಗೆ ವಿಚಾರ ತಿಳಿದ ನಂತರ, ‘ಅಪ­ಹ­ರಣ ಮತ್ತು ಅತ್ಯಾಚಾರ’ ಪ್ರಕರಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಅದು ನಿಜ ಅರ್ಥದಲ್ಲಿ ಅಪಹರಣ ಅಲ್ಲ.

* ಈ ಕುರಿತು ಸ್ವಲ್ಪ ವಿವರಣೆ ನೀಡು­ತ್ತೀರಾ? ಮೊಬೈಲ್‌ನಿಂದಾಗಿ ಕೆಟ್ಟ ಘಟನೆ ನಡೆದಿದೆಯೇ?
ಒಂದು ಉದಾಹರಣೆ­ಯನ್ನು ನಾನು  ನೀಡುತ್ತೇನೆ. ಪ್ರೌಢ­ಶಾಲೆ­ಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ ಯೊಬ್ಬಳು ತಾಯಿಯ ಮೊಬೈ­ಲ್‌ಗೆ ಬಂದ ದೂರವಾಣಿ ಕರೆ ಆಧರಿಸಿ, ಆ ಸಂಖ್ಯೆಗೆ ತಾನು ಕರೆ ಮಾಡಿದಳು. ಅತ್ತ ಕಡೆ ಯಾವುದೋ ವ್ಯಕ್ತಿ ಕರೆ ಸ್ವೀಕರಿಸಿ ಮಾತನಾಡಿದ, ಬಾಲಕಿಗೂ ಖುಷಿ ಯಾಯಿತು. ಆಕೆ ಬಾಲಕಿ, ಹೆಚ್ಚಿನ ತಿಳಿವಳಿಕೆ ಇರಲಿಲ್ಲ.

ನಂತರ ಆ ಬಾಲಕಿ ತನ್ನ ಮೊಬೈಲ್‌­ನಿಂದ ಆ ಸಂಖ್ಯೆಗೆ ಕರೆ ಮಾಡಲು ಆರಂಭಿ­ಸಿ­ದಳು. ಹಾಗೇ ಸ್ನೇಹ ಬೆಳೆ­ಯಿತು. ಆ ವ್ಯಕ್ತಿ, ‘ನೀನು ಚಿಕ್ಕಮ್ಮನ ಮನೆಗೆ ಹೋಗಿ ಬರುತ್ತೇನೆ ಎಂದು ಮನೆಯವರಿಗೆ ತಿಳಿಸಿ, ಹೊರಗಡೆ ಬಾ’ ಎಂದು ಪುಸಲಾಯಿಸಿದ. ಬಾಲಕಿಯ ಮನೆಯ ಸನಿಹಕ್ಕೇ ಬಂದು ಆಕೆಯನ್ನು ಕಾರಿನಲ್ಲಿ ಕರೆದೊಯ್ದ. ಆಕೆ ಮೂರು ದಿನ ಬೇರೊಂದು ಜಿಲ್ಲೆಯಲ್ಲಿ ಆ ವ್ಯಕ್ತಿಯ ಜೊತೆ ಇದ್ದು ಮನೆಗೆ ವಾಪಸಾ­ದಳು. ಆ ವ್ಯಕ್ತಿ ಬಾಲಕಿಯನ್ನು ಎಲ್ಲ ರೀತಿಯಲ್ಲೂ ಬಳಸಿಕೊಂಡ. ಇದು ಒಂದು ನಿದರ್ಶನ ಮಾತ್ರ, ನಾನೇ ಖುದ್ದಾಗ ಅರಿತ ವಿಚಾರ.

*ಆದರೆ ಇದಕ್ಕೆ ವಿದ್ಯಾರ್ಥಿಗಳು ಮೊಬೈಲ್‌ ಬಳಸುವುದನ್ನೇ ನಿಷೇಧಿ ಸಬೇಕೇ?
ಚಿಕ್ಕ ವಯಸ್ಸಿನಲ್ಲಿ ಮೊಬೈಲ್‌ ದೂರವಾಣಿಯನ್ನು ಕಿವಿಗೆ ಒತ್ತಿ ಹಿಡಿದು ಮಾತನಾಡುತ್ತ ಕೂರು­ವುದು ಆರೋ ಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಅಲ್ಲದೆ, ಮೊಬೈಲ್‌ನಲ್ಲಿ ಹರಿದಾಡುವ ಚಿತ್ರ–ವಿಚಿತ್ರ ದೃಶ್ಯಗಳನ್ನು ನೋಡು ವುದು ಸಣ್ಣ ವಯಸ್ಸಿನ ಮಕ್ಕಳಿಗೆ ಒಳ್ಳೆ ಯದಲ್ಲ. ಅವರು ಓದಿನ ಕಡೆ ಗಮನ ಕೊಡಲಿ, ನಂತರ ತಂತ್ರಜ್ಞಾನದ ಲಾಭ ಪಡೆದುಕೊಳ್ಳಲಿ. ಮೊಬೈಲ್‌ ಬಳಕೆಗಿಂತ ಮೊದಲು ಗ್ರಂಥಾಲಯ­ಗ­ಳನ್ನು ಎಡ ತಾಕಲಿ, ಸಾಹಿತಿಗಳ ಕೃತಿ ಓದಿ­ಕೊಳ್ಳಲಿ. ವಿದ್ಯಾ­ಭ್ಯಾಸದ ಕಡೆ ಹೆಚ್ಚಿನ ಗಮನ ನೀಡಲಿ. ಮೊಬೈ­ಲ್‌­ನಲ್ಲಿ ದೊರೆ­ಯುವ ಅಶ್ಲೀಲ ವಿಚಾರಗಳನ್ನು ನೋಡಿ ಮನಸ್ಸು ಕೆಡಿಸಿಕೊಳ್ಳುವುದು ಬೇಡ.

*ಎಲ್ಲ ಹಂತದ ವಿದ್ಯಾರ್ಥಿಗಳಿಗೂ ಮೊಬೈಲ್‌ ಬಳಕೆ ನಿಷೇಧಿಸಬೇಕೇ?
ಹದಿಹರೆಯದ ವಿದ್ಯಾರ್ಥಿಗಳು ಶಾಲೆ­ಯಲ್ಲಿ ಮೊಬೈಲ್‌ ಬಳಸುವುದನ್ನು ನಿಷೇ­ಧಿ­ಸಬೇಕು ಎಂಬುದು ನಮ್ಮ ಆಶಯ. ನಾವು ವರದಿ ಸಲ್ಲಿಸಿದ ನಂತರ, ನಮ್ಮ ಶಿಫಾರಸು ರಾಷ್ಟ್ರೀಯ ಸುದ್ದಿಯಾಗಿದೆ. ಆದರೆ ಒಂದು ಸಂತಸದ ಸಂಗತಿ­ಯೆಂದರೆ, ಸಾವಿರಾರು ಮಂದಿ ಹೆತ್ತ­ವರು ನನಗೆ ಕರೆ ಮಾಡಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮಾಧ್ಯಮ­ವೊಂದು, ವಿದ್ಯಾರ್ಥಿಗಳಿಗೆ ಮೊಬೈಲ್‌ ಬೇಕೇ, ಬೇಡವೇ ಎಂಬ ಬಗ್ಗೆ ಜನಾಭಿ­ಪ್ರಾಯ ಸಂಗ್ರಹಿಸಿತು. ಶೇಕಡ 87ರಷ್ಟು ಜನರು ವಿದ್ಯಾರ್ಥಿಗಳಿಗೆ ಮೊಬೈಲ್‌ ಬೇಡ ಎಂಬ ಅಭಿಪ್ರಾಯ ನೀಡಿದರು.

ನಮ್ಮ ವರದಿಯಲ್ಲಿ,  ಮೊಬೈಲ್‌ ಬಳಕೆಗೆ ಸಂಬಂಧಿಸಿದ ವಿಚಾರವಷ್ಟೇ ಇಲ್ಲ.  ಮಹಿಳೆಯರ ಸುರಕ್ಷತೆಗೆ ಸಂಬಂಧಿ­ಸಿ­ದಂತೆ ಒಟ್ಟು ಐದು ಶಿಫಾರಸುಗಳನ್ನು ನೀಡಿದ್ದೇವೆ. ಪೊಲೀಸರು ಹೆಣ್ಣು­ಮಕ್ಕಳನ್ನು ಗೌರವದಿಂದ ನಡೆಸಿಕೊಳ್ಳ­ಬೇಕು ಎಂಬ ಶಿಫಾರಸೂ ಇದೆ.

* ಶಾಲೆಗೆ ಹೋಗುವ ಮಕ್ಕಳಿಗೆ ಮೊಬೈಲ್‌ ಕೊಡಿಸುವುದರಿಂದ ಮಕ್ಕಳು ಏನು ಮಾಡುತ್ತಿವೆ ಎಂಬುದನ್ನು ಯಾವಾಗ ಬೇಕಿದ್ದರೂ ವಿಚಾರಿಸುವ ಅವ­ಕಾಶ ಪಾಲಕರಿಗೆ ದೊರೆಯುತ್ತದೆ, ಅಲ್ಲವೆ?
ಪಾಲಕರಿಗೆ ಮೊಬೈಲ್‌ ಖರೀದಿಸಿ ಮಕ್ಕಳಿಗೆ ನೀಡುವ ತಾಕತ್ತು ಇದೆ ಎಂದಾದರೆ, ಮಗುವನ್ನು ಶಾಲಾ ವಾಹ ನದಲ್ಲೇ ಕಳುಹಿಸುವ ಸಾಮ­ರ್ಥ್ಯವೂ ಇರುತ್ತದೆ. ನೀವು ಹೇಳುವ ವಾದವನ್ನು ನಾನು ತುಸು ಮಟ್ಟಿಗೆ ಗ್ರಾಮಾಂತರ ಪ್ರದೇಶದ ಪಾಲಕರ ವಿಚಾರದಲ್ಲಿ ಒಪ್ಪುವೆ.
ಕುಂದಾಪುರ ತಾಲ್ಲೂಕಿನ ಬೈಂದೂ­ರಿ­ನಲ್ಲಿ ಹೆಣ್ಣು ಮಗಳೊಬ್ಬಳ ಮೇಲೆ ಮೊನ್ನೆ ಅತ್ಯಾಚಾರ ನಡೆಯಿತು, ಕೊಲೆ ಯೂ ಆಯಿತು. ಪುತ್ತೂರಿನಲ್ಲಿ ಹಿಂದೆ ನಡೆದ ಸೌಮ್ಯಾ ಭಟ್‌ ಪ್ರಕರ­ಣವೂ ಒಂದು ಉದಾಹರಣೆ. ಹಳ್ಳಿ­ಗಳಲ್ಲಿ ನೆಟ್‌ವರ್ಕ್‌ ಇಲ್ಲದ ಪ್ರದೇಶಗಳೇ ಹೆಚ್ಚು, ಹಾಗಾಗಿ ಮೊಬೈಲ್‌ ಏಕೆ ಎಂಬ ಮಾತೂ ಇದೆ.

ಪೇಟೆಗಳಲ್ಲಿನ ಪಾಲಕರು ಬಡವರಿ­ರಲಿ ಶ್ರೀಮಂತರಿರಲಿ ರಿಕ್ಷಾ ಅಥವಾ ಬಸ್ಸಿ­ನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸು­ತ್ತಾರೆ. ಹೀಗಿರುವಾಗ ಮೊಬೈಲ್‌ ಏಕೆ ಬೇಕು? ಶಾಲೆಯಲ್ಲೇನೋ ಅನಾಹುತ ಸಂಭವಿಸಿದರೆ, ಅಲ್ಲಿ ಶಿಕ್ಷಕರು ಪಾಲಕ­ರಿಗೆ ವಿಚಾರ ತಿಳಿಸಬೇಕು. ಮಗುವಿಗೆ ಮೊಬೈಲ್‌ ಫೋನನ್ನು ಭದ್ರತೆಗೆ ಎಂದು ಕೊಡಿಸಿದರೂ, ಮಗು ಅದನ್ನು ಆಟಕ್ಕೇ ಬಳಸುತ್ತದೆ. ಮಕ್ಕಳ ಮನಸ್ಸೇ ಹಾಗೆ.

* ಮೊಬೈಲ್‌ ಬಳಕೆ ನಿಷೇಧಿಸಬೇಕು ಎಂಬ ಶಿಫಾರಸು ಮಾಡುವಾಗ ಇನ್ನೂ ಯಾವ ಸಂಗತಿಯನ್ನು ಸಮಿತಿ ಪರಿಗಣಿಸಿತ್ತು?
ಮೊಬೈಲ್‌ ನಿಷೇಧಿಸಬೇಕು ಎಂಬ ಶಿಫಾರಸು ಮಾಡುವಾಗ ಅತ್ಯಾಚಾರ­ವನ್ನು ಮಾತ್ರ ದೃಷ್ಟಿಯಲ್ಲಿ ಇಟ್ಟುಕೊಂಡಿ­ರ­ಲಿಲ್ಲ. ಮಕ್ಕಳ ಸಮಗ್ರ ಭವಿಷ್ಯದ ದೃಷ್ಟಿ­ಯಿಂದ ಈ ಶಿಫಾರಸು ಮಾಡಲಾಗಿದೆ. ಮೊಬೈಲ್‌ನ ಒಳಿತು – ಕೆಡುಕುಗಳು ಮಗು­­ವಿಗೆ ತಿಳಿಯಲಿ. ನಂತರ ಮೊಬೈಲ್‌ ಬಳಸಲಿ. ಅಸಭ್ಯ ದೃಶ್ಯಗಳನ್ನು ಎಳವೆ­ಯಲ್ಲೇ ನೋಡಿದರೆ ಆ ಮಗುವಿನ ಭವಿಷ್ಯ ಏನಾಗಬಹುದು? ಸತ್ಯ­ಹರಿಶ್ಚಂದ್ರ ನಾಟಕ ನೋಡಿದ ಮೋಹನ­ದಾಸ್‌ ಕರಮಚಂದ್‌ ಗಾಂಧಿ ಮುಂದೆ ಮಹಾತ್ಮ ಗಾಂಧಿಯಾದರು. ಮಗು ಯಾವುದೋ ಕೆಟ್ಟ ಹೊತ್ತಿನಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡಿದರೆ...?

* ಮೊಬೈಲ್‌ ಬಳಕೆ ಕೆಟ್ಟದ್ದು ಎಂಬ ನಿಲುವು ನಿಮ್ಮದಾ?
ಇಂದು ಗುಜರಿ ಕೆಲಸದವರೂ ಮೊಬೈಲ್‌ ಹೊಂದಿದ್ದಾರೆ. ಮೊಬೈಲ್‌ ಕೆಟ್ಟದ್ದು ಎಂದು ನಾವು ಹೇಳಿಲ್ಲ. ನಾವು ಹೇಳಿರುವುದು ಎಳೆಯ ಮಗುವಿಗೆ, ವ್ಯಾಸಂಗದ ಅವಧಿಯಲ್ಲಿ ಮೊಬೈಲ್‌ ಬೇಡ ಎಂದು ಮಾತ್ರ. ಮೊನ್ನೆ ಒಬ್ಬರ ಜೊತೆ ಮಾತನಾಡುವಾಗ ಹೇಳಿದರು, ‘ಅಮ್ಮಾ ಬೇಗ ಬಾ, ಟಿ.ವಿಯಲ್ಲಿ ರೇಪ್‌ ನಡೀತಾ ಇದೆ’ ಎಂದು ಒಂದು ಮಗು ಹೇಳಿತಂತೆ. ಮಗುವಿಗೆ ‘ರೇಪ್‌’ ಎನ್ನುವುದು ಹೇಗೆ ತಿಳಿಯಿತು? ಮಕ್ಕಳು ಹಾದಿ ತಪ್ಪಬಾರದಲ್ಲ? ತಂತ್ರಜ್ಞಾನ ಬೇಕು. ಆದರೆ ಅದನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT