ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ವರವಾದ ಕಂಪ್ಯೂಟರ್‌ ಪಾಠ!

Last Updated 6 ನವೆಂಬರ್ 2013, 6:06 IST
ಅಕ್ಷರ ಗಾತ್ರ

ಕಮಲನಗರ: ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಲಿಯು ತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸರ್ಕಾರ ಜಾರಿಗೆ ತಂದಿರುವ ‘ಕಂಪ್ಯೂಟರ್‌ ಶಿಕ್ಷಣ ಯೋಜನೆ’ ಔರಾದ್‌ ತಾಲ್ಲೂಕಿನ ಖತಗಾಂವ್‌ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಗೊಂಡಿದೆ.

ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಶಿಕ್ಷಣ ದೊರೆಯುತ್ತಿದೆ. ಈ ಮೂಲಕ ಕಂಪ್ಯೂಟರ್‌ ಬಳಕೆಯಲ್ಲಿ ನೈಪುಣ್ಯ ಸಾಧಿಸುತ್ತಿದ್ದಾರೆ. ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಓದಿದರೆ ಮಕ್ಕಳಿಗೆ ಭವಿಷ್ಯವಿಲ್ಲ ಎಂಬ ಭಾವನೆ ನಗರವಷ್ಟೆ ಅಲ್ಲ, ಗ್ರಾಮೀಣ ಪ್ರದೇಶದ ಪಾಲಕರಲ್ಲೂ ಬೆಳೆಯುತ್ತಿದೆ. ಇಂಥ ಸ್ಥಿತಿಯಲ್ಲಿ ಈ ಗ್ರಾಮದ ಮಕ್ಕಳು ಕಂಪ್ಯೂಟರ್‌ ಕಲಿಕಾಗಿ ಈ ಶಾಲೆಗೆ ದಾಖಲಾಗುತ್ತಿದ್ದಾರೆ.

ಖತಗಾಂವ್‌ ಸರ್ಕಾರಿ ಶಾಲೆ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎನ್ನುವ ಸಾಧನೆ ಮಾಡಿದೆ. ಹಸಿರು ಪರಿಸರ, ಗುಣಮಟ್ಟದ ಶಿಕ್ಷಣ ಇಲ್ಲಿ ಲಭ್ಯ. ಈಗ ಕಂಪ್ಯೂಟರ್‌ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಮೆಚ್ಚಿನ ಶಾಲೆಯಾಗಿ ರೂಪುಗೊಂಡಿದೆ. ಇದಕ್ಕೆ ಗ್ರಾಮಸ್ಥರ ಮತ್ತು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳ ಶ್ರಮವೂ ಕಾರಣ.

2006– 07ರಲ್ಲಿ ಅಜೀಂ ಪ್ರೇಮಜಿ ಪ್ರತಿಷ್ಠಾನದಿಂದ ಖತಗಾಂವ್‌ ಶಾಲೆಗೆ 5 ಕಂಪ್ಯೂಟರ್‌, 20 ಕುರ್ಚಿ, 5 ಟೇಬಲ್‌, ಎರಡು ಶುಷ್ಕಕೋಶ, 1 ಯುಪಿಎಸ್‌ ಲಭಿಸಿದೆ. ಈ ಸೌಲಭ್ಯ ಬಳಸಿಕೊಳ್ಳಲು ಶಾಲೆಯಲ್ಲಿ ಸುಸಜ್ಜಿತ ಗಣಕಯಂತ್ರ ಅಧ್ಯಯನ ಕೇಂದ್ರ ಆರಂಭವಾಯಿತು. ಆ ಕೇಂದ್ರ ಮಕ್ಕಳ ಪಾಲಿಗೆ ವರವಾಗಿದೆ. ಮಕ್ಕಳು ಖುಷಿಯಿಂದಲೇ ಕಂಪ್ಯೂಟರ್‌ ಅರಿಯಲು ಆರಂಭಿಸಿದರು.

ಮಕ್ಕಳ ಕಲಿಕೆಗೆ ಪೂರಕವಾಗಿ ಶೈಕ್ಷಣಿಕ ಸಿ.ಡಿಗಳು ಕಂಪ್ಯೂಟರ್‌ ಜತೆಗೆ ಬಂದಿವೆ.
ವಿಜ್ಞಾನ ವಿಷಯದಲ್ಲಿ ಜೀವಕೋಶ, ಬಲ ಮತ್ತು ಚಲನೆ, ರಕ್ತ ಪರಿಚಲನೆ, ಭೂಮಿ, ಪಚನಕ್ರಿಯೆ, ಪ್ರತಿಫಲನ, ವಕ್ರೀಭವನ, ಬೆಳಕು, ಆಹಾರ ಪಾಠಗಳಿವೆ. ಗಣಿತದಲ್ಲಿ ಭಿನ್ನರಾಶಿ, ಘಾತಸಂಖ್ಯೆ, ವರ್ಗಮೂಲ, ಲ.ಸಾ.ಅ ಮತ್ತು ಮ.ಸಾ.ಅ ಗಳೊಂದಿಗೆ ಸಾಹಸ ಎಂಬ ಪಾಠಗಳಿವೆ. ಸಮಾಜ ವಿಜ್ಞಾನದಲ್ಲಿ ಭೂಸಂಪತ್ತು, ಜೈನ ದರ್ಶನ, ಶಿಲ್ಪಿ ನುಡಿವ ಇತಿಹಾಸ, ಶಾಸನ ಸಾರುವ ಇತಿಹಾಸದ ಪಾಠಗಳಿವೆ. ಕನ್ನಡ ವ್ಯಾಕರಣ ಕಲಿಸುವ ಸಿ.ಡಿ ಸಂಗ್ರಹಿಸಲಾಗಿದೆ.

‘ಮಕ್ಕಳಿಗೆ ಕಂಪ್ಯೂಟರ್‌ ಮೂಲಕ ಪಾಠ ಮಾಡು ವಾಗ ಆಸಕ್ತಿಯಿಂದ ಕೇಳುತ್ತಾರೆ. ಪಾಠದ ನಂತರ ಕೇಳುವ ವಿಷಯ ಸಂಬಂಧಿ ಪ್ರಶ್ನೆಗಳಿಗೆ ಥಟ್‌ ಅಂತ ಉತ್ತರ ನೀಡುತ್ತಾರೆ. ಇದರಿಂದ ಕಂಪ್ಯೂಟರ್‌ ಶಿಕ್ಷಣ ಮಕ್ಕಳ ಶೀಘ್ರದಲ್ಲಿಯೇ ಪರಿಣಾಮ ಬೀರುತ್ತದೆ ಎಂದು ಗೊತ್ತಾಗುತ್ತದೆ’ ಎಂದು ಹೇಳುತ್ತಾರೆ ಶಿಕ್ಷಕರು.

ಇಲ್ಲಿನ ಗಣಕಯಂತ್ರ ಅಧ್ಯಯನ ಕೇಂದ್ರದಲ್ಲಿ 6 ಮತ್ತು 7ನೇ ತರಗತಿ ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಕಲಿಕೆ ವೇಗ ಹೆಚ್ಚುತ್ತಿದೆ. ಬೌದ್ಧಿಕ ವಿಕಾಸಕ್ಕೂ ಅನುಕೂ ಲವಾಗುತ್ತಿದೆ. ಸಾಂಪ್ರದಾಯಿಕ ವಿದ್ಯಾಭ್ಯಾಸ ಪದ್ಧತಿಗಿಂತ ಭಿನ್ನವಾಗಿ ಖತಗಾಂವ್‌ ಶಾಲೆಯ ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣ ದೊರೆಯುತ್ತಿದೆ.


ಯಾವುದೇ ಕಚೇರಿ ಸಂದರ್ಶಿಸಿದರೂ ಚಟುವಟಿಕೆಗಳು ಕಂಪ್ಯೂಟರ್‌ ಮೂಲಕ ಜರುಗುತ್ತಿವೆ. ಖತಗಾಂವ್‌ ಶಾಲೆಯ ಮಕ್ಕಳಿಗೆ ಕಂಪ್ಯೂಟರ್‌ ಶಿಕ್ಷಣ ಪ್ರಾಥಮಿಕ ಹಂತದಲ್ಲಿಯೇ ದೊರೆಯುತ್ತಿದ್ದು, ಅವರಿಗೆ ಮುಂದಿನ ದಿನಗಳಲ್ಲಿ ಉಪಯೋಗವಾಗಲಿದೆ.                           
–ಪ್ರಭುರಾವ ಬಿರಾದಾರ್‌,  ಮುಖ್ಯಗುರು

ಕಂಪ್ಯೂಟರ್‌ ಮೂಲಕ ಶಿಕ್ಷಣ ಪಡೆಯುವು ದರಿಂದ ನಮಗೆ ವಿಜ್ಞಾನ, ಗಣಿತ ವಿಷಯಗಳು ತುಂಬಾ ಸರಳವಾಗಿವೆ ಎಂದು ಅನಿಸುತ್ತಿದೆ. ಕನ್ನಡ ವ್ಯಾಕರಣವನ್ನು ಕಂಪ್ಯೂಟರ್‌ ಮೂಲಕ ಕಲಿಯುವುದು ಒಂದು ಅದ್ಭುತ ಅನುಭವ.
 –ಭೀಮರಾವ ಸುಭಾಷ್‌,  7ನೇ ತರಗತಿ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT