ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ಅಂಕ ಗಳಿಸುವ ಯಂತ್ರಗಳಲ್ಲ...

Last Updated 18 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಆ ಹುಡುಗನ ಹೆಸರು ಅನಿಕೇತನ. ಶಾಲೆಯೊಂದರಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ. ವಿಜ್ಞಾನ ಮತ್ತು ಗಣಿತ ವಿಷಯಗಳ ಮನೆಪಾಠಕ್ಕಾಗಿ ಹತ್ತಿರದ ಕೋಚಿಂಗ್ ಸೆಂಟರ್ ಒಂದಕ್ಕೆ ಸೇರಿಕೊಂಡಿದ್ದ. ಒಂದು ದಿನ ಶಾಲಾ ವಾಹನದಲ್ಲಿ ತೆರಳುವಾಗ ಜತೆಗಾರ ವಿದ್ಯಾರ್ಥಿ­ಯೊಬ್ಬ ಆ ಕೋಚಿಂಗ್ ಸೆಂಟರ್ ಬಗ್ಗೆ ಅವನ ಅಭಿಪ್ರಾಯ ಕೇಳಿದ. ಆ ಕೇಂದ್ರದ ಗುಣಮಟ್ಟದ ಬಗ್ಗೆ ತನಗೆ ತೃಪ್ತಿ ಇಲ್ಲವೆಂದು ಅನಿಕೇತನ ತನ್ನ ಪ್ರಾಮಾಣಿಕ ಅಭಿಪ್ರಾಯವನ್ನು ನೀಡಿದ. ಇದಿಷ್ಟೂ ವಿದ್ಯಾರ್ಥಿಗಳ ನಡುವೆ ಸಹಜವಾಗಿ ನಡೆದ ಸಂಭಾಷಣೆ.

ಅನಿಕೇತನನ ಈ ಅಭಿಪ್ರಾಯ ಮರುದಿನ ಅದ್ಹೇಗೋ ಕೋಚಿಂಗ್‌ ಸೆಂಟರಿನ ಮಾಲೀಕ– - ಶಿಕ್ಷಕನ ಕಿವಿ ತಲುಪಿದೆ. ಆಗ ಆ ಶಿಕ್ಷಕ ತನ್ನ ಕೇಂದ್ರ ಕುರಿತ ವಿದ್ಯಾರ್ಥಿಯ ಅಭಿಪ್ರಾಯವನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಂಡು ಆತ್ಮಾ­ವ­ಲೋಕನ ಮಾಡಿಕೊಳ್ಳಬೇಕಿತ್ತು. ಇಂತಹ ಆರೋಗ್ಯ­ಕಾರಿ ಕ್ರಿಯೆ ಶಿಕ್ಷಕನ ವೃತ್ತಿ ನೈಪುಣ್ಯದ ಉನ್ನತೀಕರಣ ದೃಷ್ಟಿಯಿಂದ ಅಪೇಕ್ಷಣೀಯವೂ ಆಗಿತ್ತು.

ಆದರೆ ಆ ಶಿಕ್ಷಕನ ಮನೋಧರ್ಮವೇ ಬೇರೆ ಇತ್ತು. ಅನಿಕೇತನನ ವಸ್ತುನಿಷ್ಠ ಅಭಿಪ್ರಾಯವನ್ನು ಬೇರೆಯದೇ ರೀತಿಯಲ್ಲಿ ಅರ್ಥೈಸಿಕೊಂಡ ಶಿಕ್ಷಕ ವಿದ್ಯಾರ್ಥಿಯ ಮೇಲೆ ವಿಪರೀತ ಕೋಪ ಮಾಡಿ­ಕೊಂಡು ಇದು ತನಗೆ ಮಾಡಿದ ಅವಮಾನ­ವೆಂದೇ ಬಗೆದ. ತರಗತಿಯಲ್ಲಿ ಈ ಬಗ್ಗೆ ಬಾಲಕ­ನನ್ನು ನಿರೀಕ್ಷೆಯಂತೆ ಪ್ರಶ್ನಿಸಿದ. ಆಗ ಬಾಲಕ ಇಂತಹ ಮುಜುಗರದ ಸನ್ನಿವೇಶದಿಂದ ಪಾರಾ­ಗಲು ತಾನು ಹಾಗೆ ಹೇಳೇ ಇಲ್ಲವೆಂದು ಸುಳ್ಳು ಉಸುರಬಹುದಿತ್ತು. ಆದರೆ ಬಾಲಕನ ಸ್ವಭಾವ ಮತ್ತು ಸಂಸ್ಕಾರ ಸುಳ್ಳಿನ ಆಶ್ರಯಕ್ಕೆ ಸಹಜ­ವಾಗಿಯೇ ಅಡ್ಡಿ ಬಂದಿತು.

ಕೋಪೋದ್ರಿಕ್ತ ಶಿಕ್ಷಕನ ಎದುರು ಬಾಲಕ ತಾನು ಹಾಗೆ ಹೇಳಿದ್ದು ನಿಜ ಹಾಗೂ ಅದು ತನ್ನ ಪ್ರಾಮಾಣಿಕ ಅಭಿಪ್ರಾಯ-­ವೆಂದು ದಿಟ್ಟವಾಗಿ ಉತ್ತರಿಸಿದ್ದಾನೆ. ಇದರಿಂದ ಇನ್ನಷ್ಟು ಕೆರಳಿದ ಶಿಕ್ಷಕ ಅನಿಕೇತನನನ್ನು ತರ­ಗತಿಯಲ್ಲಿ ಎಲ್ಲ ಸಹಪಾಠಿಗಳ ಎದುರಿಗೆ ಮನ­ಬಂದಂತೆ ನಿಂದಿಸಿದ್ದಲ್ಲದೇ ಅಸಹಾಯಕ ಬಾಲಕನ ಕಪಾಳಕ್ಕೆ ಪಟಪಟನೇ ಬಾರಿಸಿದ. ಅಷ್ಟೇ ಅಲ್ಲ, ಕೂಡಲೇ ಹುಡುಗನನ್ನು ತರಗತಿಯಿಂದ ಹೊರಗೆ ಕಳುಹಿಸಿದ.

ಹೀಗೆ ಸತ್ಯ ನುಡಿದದ್ದೇ ಮಹಾಪರಾಧವಾಗಿ ಶಿಕ್ಷಕನಿಂದ ಹೊಡೆಸಿಕೊಂಡು ಗಾಸಿಗೊಂಡ ಅನಿ­ಕೇತನ ಪೆಚ್ಚು ಮೋರೆ ಹಾಕಿಕೊಂಡು ಮನೆಗೆ ಮರ­ಳಿದ. ಈಗ ಕಸಿವಿಸಿಗೊಳ್ಳುವ ಸರದಿ ಪೋಷ­ಕ­ರದು. ತಮ್ಮ ಮಗ ಬೇರೇನಾದರೂ ತಪ್ಪೆಸಗಿ  ಶಿಕ್ಷಕರ ಮೇಲೆ ದೂರುತ್ತಿರಬಹುದೇ ಎಂಬ ಅನುಮಾನ­ದಿಂದ ಅವನನ್ನು ವಿಶ್ವಾಸದಿಂದ ಮಾತನಾಡಿಸಿ ಇಡೀ ಪ್ರಕರಣದ ಸಂಪೂರ್ಣ ವಿವರಗಳನ್ನು ಕೆದಕಿ­ದರು. ಕೊನೆಗೆ ತಮ್ಮ ಮಗ ತಪ್ಪು ಮಾಡಿಲ್ಲ­ವೆಂಬುದು ಖಾತ್ರಿಯಾಯಿತಷ್ಟೇ ಅಲ್ಲ, ಅವನು ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಸತ್ಯ ನುಡಿಯುವ ದಿಟ್ಟತನ ತೋರಿದ್ದು ಹೆಮ್ಮೆ ಮೂಡಿಸಿತು.

ಶಿಕ್ಷಕರ ವರ್ತನೆಯಿಂದ ಬೇಸರಗೊಂಡ ಪೋಷ­ಕರು ಕೂಡಲೇ ಆ ಶಿಕ್ಷಕರನ್ನು ಭೇಟಿಯಾಗಲು ಯತ್ನಿಸಿದರೆ ಅವರ ಸಹಾಯಕರಿಂದ ಅಡ್ಡಿ, ಒರಟು ವರ್ತನೆ, ಅಸಭ್ಯ ಭಾಷಾ ಪ್ರಯೋಗ. ಕೊನೆಗೂ ಭೇಟಿಯಾದ ಶಿಕ್ಷಕರು ತಮ್ಮದೇನೂ ತಪ್ಪಿಲ್ಲವೆಂದೇ ವಾದಿಸಿದರು.

ಮಕ್ಕಳನ್ನು ದೈಹಿಕ­ವಾಗಿ ಶಿಕ್ಷಿಸುವ ಹಕ್ಕು ತಮಗಿದೆ ಎಂಬ ಧೋರಣೆ ಅವರದು. ಶಿಕ್ಷಕರಿಗೆ ಸುತ್ತುವರಿದ ಅವರ ಸಹಾ­ಯಕರು ಹಾಗೂ ಬೆಂಬಲಿಗರ ಪಡೆಯ ಸಾಥ್. ಮಾತಿನ ಮಧ್ಯೆ ಪೊಲೀಸರಿಗೆ ದೂರು ನೀಡುವ ಪ್ರಸ್ತಾಪ ಬಂದಾಗ ಆ ಶಿಕ್ಷಕರು ನಾನು ಒಬ್ಬ ಡಿಸಿಪಿ (ಪೊಲೀಸ್ ಅಧಿಕಾರಿ) ಮಗ ಎಂದು ಅಬ್ಬರಿ­ಸಿದರು. ಹೀಗೆಂದು ಹೇಳಿಕೊಂಡು ಹೆದರಿ­ಸು­ವುದು ಅವರ ಚಾಳಿಯಂತೆ. ವಿಚಿತ್ರವೆಂದರೆ ಅಲ್ಲಿ ನೆರೆದ ಬಹುಪಾಲು ಪೋಷಕರು ಶಿಕ್ಷಕರ ಕ್ರಮವನ್ನು ಖಂಡಿಸಿದರೂ, ಶಿಕ್ಷಕರು ಹೊಡೆದರೆ ತಪ್ಪೇನು ಎಂಬ ನಿಲುವಿನ ಕೆಲವರೂ ಅಲ್ಲಿದ್ದರು. ಈ ಮುಂಗೋಪಿ ಶಿಕ್ಷಕ ತರಗತಿಯಲ್ಲಿ ವಿದ್ಯಾರ್ಥಿ­ಗಳ ಮೇಲೆ ಪುಸ್ತಕ, ಪೆನ್ನು ಎಸೆಯುವುದು, ಕಪಾಳಕ್ಕೂ ಬಿಗಿಯುವುದು, ಉತ್ತರ ಪತ್ರಿಕೆಗಳನ್ನು ಹರಿದು ವಿದ್ಯಾರ್ಥಿಗಳ ಮೇಲೆ ಎಸೆಯುವುದು ದಿನಂಪ್ರತಿ ನಡೆಯುವುದಂತೆ. 

ಮಕ್ಕಳ ಮನಸ್ಸನ್ನು, ಗೌರವವನ್ನು ಪ್ರೀತಿ­ಯಿಂದ ಗೆಲ್ಲಬೇಕಾದ ಶಿಕ್ಷಕರು ಅದನ್ನು ಭಯ ಹುಟ್ಟಿಸುವ ಮೂಲಕ ಸಾಧಿಸಹೊರಟಿರುವುದು ದುರಂತ. ಒಬ್ಬ ವ್ಯಕ್ತಿಯಾಗಿ ಇವರ ಧೋರಣೆ, ವರ್ತನೆ ಅಷ್ಟೇನೂ ಅಪಾಯಕಾರಿಯಲ್ಲ. ಅದು ಅವರ ಅನಾರೋಗ್ಯಕರ ಧೋರಣೆ ಸಮಸ್ಯೆ ಎಂದು ನಿರ್ಲಕ್ಷಿಸಬಹುದು. ಆದರೆ ಒಬ್ಬ ಶಿಕ್ಷಕ­ರಾಗಿ ಇವರ ವರ್ತನೆ ಅಪಾಯಕಾರಿ ಹಾಗೂ ಆಕ್ಷೇಪಾರ್ಹ.
ಈ ಘಟನೆ ನಡೆದದ್ದು ಮೊನ್ನೆ ಆಚರಿಸಿದ ಮಕ್ಕಳ ದಿನದಂದು! ಅದೂ ಆದರ್ಶ ಗುರು­ಪರಂಪರೆಯ ಇತಿಹಾಸವನ್ನು ಹೊಂದಿದ ಮೈಸೂರಿನಲ್ಲಿ!

ಮೇಲಿನ ಘಟನೆಯು ಮೇಲ್ನೋಟಕ್ಕೆ ಉಪೇಕ್ಷಣೀಯ ಬಿಡಿ ಘಟನೆ ಎನ್ನಿಸುತ್ತದೆ. ಆದರೆ ಮಕ್ಕಳ ಸೂಕ್ಷ್ಮ ಮನಸ್ಸನ್ನು ತಲ್ಲಣಗೊಳಿಸುವ ಇಂತಹ ಸಂದರ್ಭಗಳ ಆಳಕ್ಕೆ ಇಣುಕಿದರೆ ಅಪಾ­ಯದ ವಿಸ್ತಾರ ಮನವರಿಕೆಯಾಗುತ್ತದೆ. ಇತ್ತೀ­ಚೆಗೆ ಪೋಷಕರು, ಶಿಕ್ಷಕರು ಮಕ್ಕಳನ್ನು ಅಂಕ ಗಳಿ­ಸುವ ಯಂತ್ರ ಎಂದೇ ಭಾವಿಸುತ್ತಿದ್ದಾರೆ. ಮೂಷಿಕ ಓಟದಲ್ಲಿ ತಮ್ಮ ಮಕ್ಕಳು ಮೊದಲಿಗರಾಗ­ಬೇಕೆಂಬ ಭ್ರಮೆಯಲ್ಲಿ ಪೋಷಕರು ಸಿಲುಕಿದ್ದಾರೆ. ಒಟ್ಟಾರೆ ಮಕ್ಕಳು ಹೆಚ್ಚು ಹೆಚ್ಚು ಅಂಕ ಗಳಿಸಬೇಕು. ಅದಕ್ಕಾಗಿ ಪೋಷಕರು ಯಾವುದೇ ಬೆಲೆ ತೆರ­ಲಾದರೂ ಸಿದ್ಧ. ಶಾಲೆ, ಮನೆ, ಟ್ಯೂಷನ್ ಹೀಗೆ ಎಲ್ಲೆಡೆ ಅಂಕ ಗಳಿಕೆಗಾಗಿ ಮಕ್ಕಳ ಮೇಲೆ ಒತ್ತಡ. ಈ ಹಿನ್ನೆಲೆಯಲ್ಲಿಯೇ ಶಿಕ್ಷಕರಿಂದ ಮಕ್ಕಳ ಮೇಲಾ­ಗುವ ದೈಹಿಕ, ಮಾನಸಿಕ ಹಿಂಸೆಗೆ ಪೋಷ­ಕರೂ ಪರೋಕ್ಷವಾಗಿ ಕಾರಣರಾಗುತ್ತಾರೆ. ಪರಿ­ಣಾಮವಾಗಿ ಮಕ್ಕಳ ವಯೋಮಾನ ಸಹಜ ವರ್ತ­ನೆಗಳು, ಸೂಕ್ಷ್ಮ ಸಂವೇದನೆಗಳು ಬಲಿ­ಯಾಗು­ತ್ತಿವೆ.

ಅಂಕ ಗಳಿಕೆಯೇ ಅಂತಿಮ ಎಂದು ಭಾವಿಸು­ವವರ ಎದುರಿಗೆ ಮಕ್ಕಳ ಹಕ್ಕುಗಳ ರಕ್ಷಣೆ, ಅವರ ಆಸಕ್ತಿ-ಅಭಿರುಚಿಗಳ ಪೋಷಣೆ, ಸರ್ವಾಂಗೀಣ ಬೆಳವಣಿಗೆ ಮುಂತಾದುವೆಲ್ಲಾ ಗೌಣ. ಮಕ್ಕಳಲ್ಲಿ ಆದರ್ಶ, ನೈತಿಕತೆ, ಜೀವನ ಮೌಲ್ಯಗಳನ್ನು ತುಂಬುವ ಕರ್ತವ್ಯಕ್ಕೆ ಎಲ್ಲರೂ ವಿಮುಖ. ವಿಪ­ರ್ಯಾಸವೆಂದರೆ ಮಕ್ಕಳ ಮೇಲಿನ ಇಂತಹ ಅಂತ­ರ್ಗತ ಅನ್ಯಾಯ, ದೌರ್ಜನ್ಯಗಳನ್ನು ಮಕ್ಕಳ ಉಜ್ವಲ ಭವಿಷ್ಯದ ಹೆಸರಿನಲ್ಲೇ ಎಸಗಲಾಗುತ್ತದೆ! ಈ ಬಗ್ಗೆ ವಿಚಾರವಂತ ಪೋಷಕರು, ಜವಾ­ಬ್ದಾರಿ­ಯುತ ಶಿಕ್ಷಕರು, ಸಮಾಜ ಗಂಭೀರವಾಗಿ ಆಲೋಚಿಸಬೇಕಲ್ಲವೇ?
ಅಂದಹಾಗೆ ಅನಿಕೇತನ ನನ್ನ ಮಗ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT