ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಅಭಿರಕ್ಷೆ ಮತ್ತು ಪೋಷಣೆ

ನಿಮಗಿದು ತಿಳಿದಿರಲಿ
Last Updated 17 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

‘ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು’ ಎಂಬ ಮಾತು ತಂದೆ ತಾಯಿಯರ ವಿಚ್ಛೆದನೆಯ ನಡುವೆ ಸಿಲುಕಿ ನಲುಗುವ ಮಕ್ಕಳ ವಿಷಯದಲ್ಲಿ ಅಕ್ಷರಶಃ ಸತ್ಯ.

ವಿಚ್ಛೇದನೆಯ ನಂತರ ಮಗು ಯಾರ ಬಳಿ ಇರಬೇಕು ಎಂಬ ಬಗ್ಗೆ ನಡೆಯುವ ಗಂಡ ಹೆಂಡಿರ ಜಗಳದಲ್ಲಿ, ಅವರ ’ಅಹಂ’ ಗಳ ಸೆಣಸಾಟದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗುವುದು ಮಕ್ಕಳೇ. ಮಕ್ಕಳಿಗೆ ಹದಿನೆಂಟು ವರ್ಷಗಳಾಗುವವರೆಗೆ ಅವರು ಅಪ್ರಾಪ್ತವಯಸ್ಕರು. ಅವರ ಪೋಷಣೆ ತಂದೆ ತಾಯಿಯರ ಜವಾಬ್ದಾರಿ. ಮಕ್ಕಳು ಪೋಷಕರ ಪೋಷಣೆಗೆ ಒಳಪಡುವುದು ಅವರಿಗೆ ಹದಿನೆಂಟು ವರ್ಷ ತುಂಬುವವರೆಗೆ. ಆವರು ಪ್ರಾಪ್ತ ವಯಸ್ಕರಾದ ಕೂಡಲೇ ಪೋಷಕತ್ವ ರದ್ದಾಗುತ್ತದೆ.

ಭಾರತದಲ್ಲಿ ಅಪ್ರಾಪ್ತ ವಯಸ್ಕ ಮಕ್ಕಳ ಪೋಷಣೆಗೆ ಸಂಬಂಧಿಸಿದಂತೆ ಹಿಂದೂಗಳಿಗೆ ಅನ್ವಯವಾಗುವ ಕಾನೂನು: ‘ಹಿಂದೂ ಅಪ್ರಾಪ್ತ ವಯಸ್ಕತೆ ಮತ್ತು ಪೋಷಕರ ಅಧಿನಿಯಮ,1956’.

ಎಲ್ಲ ಧರ್ಮಗಳಿಗೂ ಅನ್ವಯವಾಗುವ ಕಾನೂನು-‘ಪಾಲಕರ ಮತ್ತು ಪ್ರತಿಪಾಲಿತರ ಅಧಿನಿಯಮ,1890’.

ಒಂದು ಮಗುವಿನ ಅಭಿರಕ್ಷೆಯನ್ನು ನಿರ್ಧರಿಸುವಾಗ ಈ ಎರಡೂ ಕಾನೂನುಗಳೂ ಅನ್ವಯವಾಗುತ್ತವೆ.
ಹಿಂದೂ ಅಪ್ರಾಪ್ತ ವಯಸ್ಕ  ಮತ್ತು ಪೋಷಕರ ಅಧಿನಿಯಮ, 1956 (ಹಿಂದೂ ಮೈನಾರಿಟಿ ಅಂಡ್ ಗಾರ್ಡಿಯನ್‌ಶಿಪ್ ಆಕ್ಟ್, 1956) ಇದರ ಪ್ರಕಾರ,

*ಅಪ್ರಾಪ್ತ ವಯಸ್ಕ ಬಾಲಕ ಮತ್ತು ಅವಿವಾಹಿತ ಬಾಲಕಿಯ ಸಂಬಂಧದಲ್ಲಿ, ಮೊದಲು ತಂದೆ ಅವಳ/ನ ಸಹಜ ಪೋಷಕ ಮತ್ತು ಅವನ/ಳ ಆಸ್ತಿಗೂ ಅವನೇ ಸಹಜ ಪೋಷಕನಾಗಿರುತ್ತಾನೆ ಮತ್ತು ಅವನ ನಂತರ ತಾಯಿ ಪೋಷಕಳಾಗಿರುತ್ತಾಳೆ. ಮಕ್ಕಳು ಐದು ವರ್ಷ ವಯಸ್ಸಿನೊಳಗಿದ್ದರೆ ಅವರನ್ನು ತಾಯಿಯ ವಶಕ್ಕೆ ಒಪ್ಪಿಸಲಾಗುತ್ತದೆ.

*ಔರಸ ಸಂತಾನವಲ್ಲದಿದ್ದರೆ, ಮೊದಲು ತಾಯಿ ಸಹಜ ಪೋಷಕಿಯಾಗಿರುತ್ತಾಳೆ, ನಂತರ ತಂದೆ ಪೋಷಕನಾಗಿರುತ್ತಾನೆ.

*ಅಪ್ರಾಪ್ತ ವಯಸ್ಕ ವಿವಾಹಿತ ಮಹಿಳೆಗೆ ಗಂಡ ಪೋಷಕನಾಗಿರುತ್ತಾನೆ.

*ದತ್ತಕ ತಂದೆ ಮತ್ತು ದತ್ತಕ ತಾಯಿಯನ್ನು ಸಹಜ ಪೋಷಕರೆಂದೇ ಪರಿಗಣಿಸಲಾಗುತ್ತದೆ.

*ಆದರೆ ಮಲ ತಂದೆ ಅಥವಾ ಮಲ ತಾಯಿಯನ್ನು ಸಹಜ ಪೋಷಕರೆಂದು ಪರಿಗಣಿಸಲಾಗುವುದಿಲ್ಲ.

*ಸಹಜ ಪೋಷಕ(ತಂದೆ ಅಥವಾ ತಾಯಿ ಅಥವಾ ಪತಿ) -ಹಿಂದೂ ಧರ್ಮಕ್ಕೆ ಸೇರಿರುವುದು ಕೊನೆಗೊಂಡರೆ, -ಅಥವಾ ಸನ್ಯಾಸಿಯಾಗಿ ಸಾಂಸಾರಿಕ ಜೀವನವನ್ನು ತ್ಯಜಿಸಿದರೆ, ಅಂಥ ವ್ಯಕ್ತಿ ಪೋಷಕನಾಗಿ ಮುಂದುವರಿಯುವುದಿಲ್ಲ.

*ಆಸ್ತಿಗೆ ಸಂಬಂಧಿಸಿದಂತೆ ಹೇಗೆ ಉಯಿಲು ಬರೆಯಬಹುದೋ ಹಾಗೆಯೇ ತನ್ನ ಮರಣಾನಂತರ ತನ್ನ ಮಕ್ಕಳು ಯಾರ ಪೋಷಣೆಯಲ್ಲಿರಬೇಕು ಎಂಬುದನ್ನು ಸೂಚಿಸಿ ಪೋಷಕನನ್ನು ನೇಮಕಮಾಡಿ ಉಯಿಲು ಬರೆಯಬಹುದು.

ವಿಚ್ಛೇದನೆಯ ಪ್ರಕರಣಗಳಲ್ಲಿ ಗಂಡ ಹೆಂಡಿರ ನಡುವೆ ಹೋರಾಟ ನಡೆಯುವುದು ಮಗು ಯಾರ ಬಳಿ ಇರಬೇಕು ಎಂಬ ಬಗ್ಗೆ, ಎಂದರೆ ಮಗುವಿನ ಅಭಿರಕ್ಷೆಯ ಬಗ್ಗೆ(ಕಸ್ಟಡಿ). ಅವರು ತಮ್ಮ ನಡುವೆಯೇ ಇದನ್ನು ಬಗೆಹರಿಸಿಕೊಂಡರೆ ಮಗುವಿನ ಅಭಿರಕ್ಷೆಗಾಗಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತುವ ಪ್ರಮೇಯ ಉಂಟಾಗುವುದಿಲ್ಲ. ಇಲ್ಲದಿದ್ದಲ್ಲಿ ಮಗು ಯಾರ ಬಳಿ ಇರಬೇಕು, ಬೆಳೆಯಬೇಕು ಎಂಬುದನ್ನು, ಮಗುವಿಗೆ ಯಾವುದು ಹಿತ ಎಂಬುದನ್ನು ಗಮನದಲ್ಲಿರಿಸಿಕೊಂಡು ನ್ಯಾಯಾಲಯ ನಿರ್ಧರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT