ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಖಿನ್ನತೆಗೆ ‘ಕ್ಯಾಂಪ್‌ ಔಟ್‌’ ಪರಿಹಾರ

Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನಗರದ ಕಾಂಕ್ರೀಟ್‌ ಕಾಡಿನಲ್ಲಿ ಹುಟ್ಟಿ ಬೆಳೆದ ಮಕ್ಕಳು ಎಷ್ಟೇ ಜಾಣರಾಗಿದ್ದರೂ ಗ್ರಾಮೀಣ ಪ್ರದೇಶದ ಮಕ್ಕಳಂತೆ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರುವುದಿಲ್ಲ. ಇದಕ್ಕೆ ಕಾರಣ ಪ್ರಕೃತಿಯೊಂದಿಗಿನ ಒಡನಾಟದ ಕೊರತೆ.

ಶಾಲೆ, ಟ್ಯೂಷನ್‌, ನಂತರ ಟಿವಿ, ಕಂಪ್ಯೂಟರ್‌ ಇವುಗಳ ಭರಾಟೆಯಲ್ಲಿ ಮಕ್ಕಳು ನೆಲ ನೋಡುವುದನ್ನೂ ಮುಗಿಲು ಕಾಯುವುದನ್ನೂ ಮರೆತು ಬಿಟ್ಟಿವೆ. ಪ್ರಕೃತಿಯಿಂದ ದೂರವಾದಂತೆ ಮಕ್ಕಳಲ್ಲಿ ವಿಕೃತಿಯ ಗುಣಗಳು ಕಾಣತೊಡಗುತ್ತವೆ. ಅಸಹನೆ, ಅಸೂಯೆ, ಸಿಡಿಮಿಡಿಗೊಳ್ಳುವುದು, ಸಿಟ್ಟು ಮಾಡಿಕೊಳ್ಳುವುದು ಮುಂತಾದ ಲಕ್ಷಣಗಳು ಕಾಣ ತೊಡಗುತ್ತವೆ. ವಿಜ್ಞಾನದ ಭಾಷೆಯಲ್ಲಿ ಇದಕ್ಕೆ ‘ನೇಚರ್‌ ಡೆಫಿಸಿಟ್‌ ಡಿಸ್‌ಆರ್ಡರ್‌’ ಎಂದು ಕರೆಯಲಾಗುತ್ತದೆ.

ಈ ತೊಳಲಾಟದಿಂದ ಮಕ್ಕಳನ್ನು ಪಾರು ಮಾಡಲು ಯುರೇಕಾ ಸಂಸ್ಥೆ ಕಾರ್ಯಕ್ರಮ ರೂಪಿಸಿದೆ. ಶಾಲೆಗಳ ಮೂಲಕ ನಿಸರ್ಗಕ್ಕೆ ಸಮೀಪವಾಗಿಸುವ ಶಿಬಿರಗಳನ್ನು ಈ ಸಂಸ್ಥೆ ಆಯೋಜಿಸುತ್ತಿದೆ. ಇದರ ಉಪಯೋಗಗಳೇನು? ಸ್ವರೂಪವೇನು? ಅಗತ್ಯವೇನು? ಮುಂತಾದ ವಿಷಯಗಳ ಬಗ್ಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ರೋನಿ ಗುಲಾಟಿ ಚರ್ಚಿಸಿದ್ದಾರೆ.

‘ನೇಚರ್‌ ಡೆಫಿಸಿಟ್‌ ಡಿಸ್‌ಆರ್ಡ್‌ರ್‌’ ಸಮಸ್ಯೆಯ ಲಕ್ಷಣಗಳೇನು?
ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಲ್ಲಿ ವಿಟಮಿನ್‌ ಡಿ ಕೊರತೆ ಇರುತ್ತದೆ. ಅಲ್ಲದೇ ಸಾಕಷ್ಟು ಖಿನ್ನತೆ, ಭಾವಶೂನ್ಯತೆ ಆವರಿಸಿಕೊಂಡಿರುತ್ತದೆ. ನಿಸರ್ಗದ ಒಡನಾಟದಲ್ಲಿ ಬೆಳೆದ ಮಕ್ಕಳಿಗೆ ಹೋಲಿಸಿದರೆ ಈ ಮಕ್ಕಳು ಸದೃಢರಾಗಿರುವುದಿಲ್ಲ.

ಈ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಎದುರಾಗುವ  ಅಪಾಯಗಳೇನು?
ಈ ರೋಗದಿಂದ ಬಳಲುತ್ತಿರುವ ಮಕ್ಕಳಲ್ಲಿ ಎಳ್ಳಷ್ಟು ತಾಳ್ಮೆ ಇರುವುದಿಲ್ಲ. ಸಣ್ಣಪುಟ್ಟ ವಿಷಯಗಳಿಗೂ ಮುನಿಸಿಕೊಳ್ಳುತ್ತಾರೆ. ಮತ್ತು ಹಿಂದೆ ಮುಂದೆ ಯೋಚಿಸದೇ ಯಾವುದೇ ರೀತಿಯ ಅನಾಹುತ ಮಾಡಿಕೊಳ್ಳಲು ಹಿಂಜರಿಯುವುದಿಲ್ಲ.

ಈ ಸಮಸ್ಯೆಯನ್ನು ಮೊದಲ ಬಾರಿಗೆ ಪತ್ತೆ ಹಚ್ಚಿದವರು ಯಾರು?
ಈ ಕುರಿತು ಜಗತ್ತಿನಲ್ಲಿ ಮೊದಲ ಬಾರಿಗೆ ಅಧ್ಯಯನ ನಡೆಸಿದವರು ಅಮೆರಿಕದ ವಿಜ್ಞಾನಿ ರಿಚರ್ಡ್‌ ರೌ. ನೂರಾರು ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿದ ನಂತರ ಅಂತಿಮವಾಗಿ ಇದಕ್ಕೆ ‘ನೇಚರ್‌ ಡೆಫಿಸಿಟ್‌ ಡಿಸ್‌ಆರ್ಡರ್‌’ ಎಂಬ ಹೆಸರಿಟ್ಟರು.

ಇದನ್ನು ಹೋಗಲಾಡಿಸಲು ನೀವು ರೂಪಿಸಿದ ಕಾರ್ಯಕ್ರಮವೇನು?
‘ಕ್ಯಾಂಪ್‌ ಔಟ್‌’ ಹೆಸರಿನಲ್ಲಿ ನಿಸರ್ಗದ ಮಡಿಲಿನಲ್ಲಿ ಶಿಬಿರ ಆಯೋಜಿಸುತ್ತೇವೆ. 9ರಿಂದ 17 ವರ್ಷದ ಮಕ್ಕಳಿಗಾಗಿ ಇದು ಇರುತ್ತದೆ. ಪೋಷಕರು ಅಥವಾ ಕುಟುಂಬ ಸದಸ್ಯರೊಂದಿಗೂ ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತೇವೆ. ಬೆಟ್ಟ ಹತ್ತುವುದು, ಚಾರಣ, ಮೌಂಟೇನ್‌ ಬೈಕಿಂಗ್‌, ಮರಕೋತಿ ಸೇರಿದಂತೆ ವಿವಿಧ ರೀತಿಯ ಆಟೋಟಗಳನ್ನು ನಡೆಸುತ್ತೇವೆ. ಕಾಡಿನ ಪ್ರಾಣಿಗಳನ್ನು ತೋರಿಸಿ ಮಕ್ಕಳಲ್ಲಿ

ಆತ್ಮವಿಶ್ವಾಸ, ನೈತಿಕ ಶಕ್ತಿ ತುಂಬುತ್ತೇವೆ.

ನೀವು ನಡೆಸುತ್ತಿರುವ ಶಿಬಿರಗಳು ಎಲ್ಲೆಲ್ಲಿವೆ?
ಸದ್ಯ ದೇಶದ ಆರು ಕಡೆಗಳಲ್ಲಿ ಇಂತಹ ಶಿಬಿರಗಳನ್ನು ನಡೆಸುತ್ತಿದ್ದೇವೆ. ತಮಿಳುನಾಡಿನ ಯರಕಾಡ, ಮಹಾರಾಷ್ಟ್ರದ ಕಾಂಬ್ರೆ, ಹಿಮಾಚಲ ಪ್ರದೇಶದ ಧಾಮ, ಝೋಂಗಾ, ಉತ್ತರಾಖಂಡದ ರಾಣಿಖೇತ್‌ ಮತ್ತು ಹಿಮಾಲಯದ ತೀರ್ಥನ್‌ ಕಣಿವೆ.
ಶಿಬಿರ ಕುರಿತು ವಿವರಿಸಿ.

ಐದು ದಿವಸ, ಒಂದು ಅಥವಾ ಎರಡು ವಾರದ ಶಿಬಿರಗಳನ್ನು ನಡೆಸುತ್ತೇವೆ. ಕೆಲವರು ಇನ್ನೂ ಹೆಚ್ಚಿನ ದಿನಗಳವರೆಗೆ ಇರಲು ಬಯಸಿದರೆ ಅದಕ್ಕೂ ವ್ಯವಸ್ಥೆ ಕಲ್ಪಿಸುತ್ತೇವೆ. ನಮ್ಮದೇ ಕಾಯಂ ಸಿಬ್ಬಂದಿ ಇದ್ದಾರೆ. ಊಟ, ಭದ್ರತೆ ಎಲ್ಲವನ್ನೂ ಒದಗಿಸುತ್ತೇವೆ. ರೆಸಾರ್ಟ್‌ಗಳಂತೆ ಮನಬಂದಂತೆ ಹಣ ತೆಗೆದುಕೊಳ್ಳುವುದಿಲ್ಲ. ಹೆಸರಿಗೆ ಮಾತ್ರ ಶುಲ್ಕ ವಿಧಿಸಲಾಗುತ್ತದೆ.

ಕರ್ನಾಟಕದಲ್ಲಿ ಶಿಬಿರ ನಡೆಸುವ ಯೋಚನೆ ಇದೆಯಾ?
ಕರ್ನಾಟಕದ ಕೊಡಗಿನಲ್ಲಿ ಶಿಬಿರ ಆರಂಭಿಸುವ ಯೋಜನೆ ಇದೆ. ಇದಕ್ಕಾಗಿ ಸೂಕ್ತವಾದ ಸ್ಥಳಕ್ಕಾಗಿ ಹುಡುಕಾಟ ನಡೆಸಿದ್ದೇವೆ. ಸ್ಥಳ ಸಿಕ್ಕೊಡನೆ ಶಿಬಿರ ಆರಂಭಿಸುತ್ತೇವೆ.

ಇದರ ಯೋಚನೆ ಹೊಳೆದದ್ದು ಹೇಗೆ?
ನನ್ನ ತಂದೆ ಮಿಲಿಟರಿಯಲ್ಲಿ ಇದ್ದರು. ಅವರಿಗೆ ದೇಶದ ಹಲವು ಕಡೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಸಹಜವಾಗಿಯೇ ಅನೇಕ ಸ್ಥಳಗಳನ್ನು ನೋಡುವ ಅವಕಾಶ ನನಗೂ ಸಿಕ್ಕಿತ್ತು. ಆದರೆ, ಇಂಥ ಅದೃಷ್ಟ ನನ್ನ ಮಕ್ಕಳಿಗೆ ಸಿಗಲಿಲ್ಲ. ನನ್ನ ಮಕ್ಕಳು ಸೇರಿದಂತೆ ಹಲವು ಮಹಾನಗರಗಳಲ್ಲಿ ಮಕ್ಕಳು ಶಾಲೆ ಬಿಟ್ಟರೆ ಕಂಪ್ಯೂಟರ್‌ ಎದುರು ಕುಳಿತುಕೊಳ್ಳುತ್ತಾರೆ. ಅದೇ ಅವರಿಗೆ ಪ್ರಪಂಚ. ಅವರು ಕೇವಲ ಪುಸ್ತಕದ ಹುಳುಗಳಾಗಿರುತ್ತಾರೆ ಹೊರತು ಬೌದ್ಧಿಕ, ಲೌಕಿಕ ಜ್ಞಾನ ಇರುವುದಿಲ್ಲ. ಇದನ್ನು ಹೇಗಾದರೂ ಮಾಡಿ ಹೋಗಲಾಡಿಸಬೇಕು ಅಂದುಕೊಂಡಿದ್ದೆ. ರಿಚರ್ಡ್‌ ರೌ ಅವರ ಸಂಶೋಧನಾ ಪ್ರಬಂಧ ಓದಿದ ಬಳಿಕ ಇಂತಹ ಶಿಬಿರಗಳನ್ನು ನಡೆಸಲು ತೀರ್ಮಾನಿಸಿದೆ. ಈ ಕ್ಷೇತ್ರದಲ್ಲಿ 18 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ.

ನಿಮಗೆ ದೊರೆತ ಪ್ರತಿಕ್ರಿಯೆ
ಆರಂಭದಲ್ಲಿ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ, ಈಗ ಜನರಲ್ಲಿ ತಿಳಿವಳಿಕೆ ಬರುತ್ತಿದೆ. ಇದೀಗ ಸಾಕಷ್ಟು ಜನ ಬರುತ್ತಿದ್ದಾರೆ. ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಕಡ್ಡಾಯ ಮಾಡಿರುವುದರಿಂದ ಅವರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ.

ಸಮಸ್ಯೆಯ ನಿವಾರಣೆಗೆ ವಿದೇಶಗಳಲ್ಲಿ ಏನಾದರೂ ಕಾರ್ಯಕ್ರಮ ಇದೆಯೇ?
ಒಳ್ಳೆಯ ಪ್ರಶ್ನೆ. ನಮ್ಮ ದೇಶದಲ್ಲಿ ಈ ಸಮಸ್ಯೆಯ ಬಗ್ಗೆ ಜನರಿಗೆ ಗೊತ್ತೇ ಇಲ್ಲ. ಆದರೆ, ಅಮೆರಿಕ, ಸಿಂಗಪುರದಂತಹ  ದೇಶಗಳಲ್ಲಿ ಇದನ್ನು ಕಡ್ಡಾಯ ಮಾಡಿದ್ದಾರೆ. ವರ್ಷದಲ್ಲಿ 15 ದಿವಸ ಕಡ್ಡಾಯವಾಗಿ ಮಕ್ಕಳನ್ನು ನಿಸರ್ಗಧಾಮ ಅಥವಾ ಇತರ ಪ್ರಕೃತಿಯ ರಮಣೀಯ ಸ್ಥಳಕ್ಕೆ ಕೊಂಡೊಯ್ಯಬೇಕು. ಸಕಾರಾತ್ಮಕ ಫಲಿತಾಂಶ ಬಂದಿದೆ. ನಮ್ಮ ದೇಶದಲ್ಲೂ ಸರ್ಕಾರ ಇದನ್ನು ಕಡ್ಡಾಯಗೊಳಿಸಬೇಕು.

ಮಾಹಿತಿಗೆ: ronny@youreka.in, nalini.dhariwal@youreka.in
ಮೊಬೈಲ್‌ ಸಂಖ್ಯೆ: 919810065331, 919873117071

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT