ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಜನನ ತಂದಿತ್ತ ಚೀನಾ –ಹಾಂಕಾಂಗ್‌ ಸಂಘರ್ಷ

Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹಾಂಕಾಂಗ್‌ ‘ಚೆಕ್ ಲಾಪ್ ಕೊಕ್‌’ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳ ಬಳಿ ಗರ್ಭಿಣಿ ಮತ್ತು ಆಕೆಯ ಗಂಡ ದೈನೇಸಿಯಿಂದ ಏನನ್ನೋ ಬೇಡಿಕೊಳ್ಳುತ್ತಿದ್ದರು.

ಅಂಗಲಾಚುತ್ತಿದ್ದ ದಂಪತಿ ಗೋಳನ್ನು ಕೇಳಿಸಿಕೊಳ್ಳದ ಅಧಿಕಾರಿಗಳು ಅವರನ್ನು ಕೋಣೆಯೊಂದಕ್ಕೆ ಕರೆದೊಯ್ದರು.
‘ಗರ್ಭಿಣಿಯೊಂದಿಗೆ ಎಷ್ಟೊಂದು ಒರಟಾಗಿ ವರ್ತಿಸುತ್ತಿದ್ದಾರಲ್ಲ’ ಎಂದು ಅಂದುಕೊಳ್ಳುತ್ತಿರುವಾಗಲೇ ಮುಂದಿದ್ದ ವ್ಯಕ್ತಿಗಳಿಬ್ಬರು ಆಕೆ ‘ಮೇನ್‌ಲ್ಯಾಂಡ್‌ ಪ್ರೆಗ್ನೆಂಟ್‌’ ಎಂದು ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದರು. ಮೇನ್‌ಲ್ಯಾಂಡ್‌ ಎಂದರೆ ಚೀನಾ. ಆಕೆ ಚೀನಾದಿಂದ ಹೆರಿಗೆಗಾಗಿ ಹಾಂಕಾಂಗ್‌ಗೆ ಬಂದಿದ್ದಳು.

‘ಅನ್ಯ ದೇಶದ ಗರ್ಭಿಣಿಯರ ಹೆರಿಗೆಗೆ ಇಲ್ಲೀಗ ಅವಕಾಶವಿಲ್ಲ. ಜನನ ಪ್ರವಾಸೋದ್ಯಮವನ್ನು (ಬರ್ತ್ ಟೂರಿಸಂ) ಕಳೆದ ವರ್ಷ ದಿಂದ ಸಂಪೂರ್ಣ ನಿಷೇಧಿಸಲಾಗಿದೆ. ಗರ್ಭಿಣಿಯಾದ ಆಕೆಗೆ ಈ ನೆಲದ ನಿಯಮದ ಪ್ರಕಾರ ಹಾಂಕಾಂಗ್‌ ಒಳಗೆ ಪ್ರವೇಶವಿಲ್ಲ.

ಇಲ್ಲಿಂ­ದಲೇ ಆಕೆಯನ್ನು ಬೇರೊಂದು ವಿಮಾನದಲ್ಲಿ ಮರಳಿ ಕಳಿಸು ತ್ತಾರೆ’ ಎಂದು ಅವರು ಹೇಳಿದರು. ‘ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಈ ರೀತಿ ಬಂದು, ಹೋಗುತ್ತಿರುತ್ತಾರೆ. ಕಳೆದ ವರ್ಷದಿಂದ ಈ ದೃಶ್ಯ ಸಾಮಾನ್ಯವಾಗಿ ಹೋಗಿದೆ’ ಎಂದು ಗೊಣಗತೊಡಗಿದರು.

ಹೆರಿಗೆಗಾಗಿ ಇಲ್ಲಿಗೆ ಬರುವ ಚೀನಿ ಮಹಿಳೆಯರ ಹಾವಳಿ ವಿಪರೀತವಾದಾಗ ಸ್ಥಳೀಯರ ಒತ್ತಡಕ್ಕೆ ಕಟ್ಟುಬಿದ್ದ ಸರ್ಕಾರ ಕಳೆದ ವರ್ಷ ಜನನ ಪ್ರವಾಸೋದ್ಯಮವನ್ನು ಸಂಪೂರ್ಣವಾಗಿ ನಿಷೇಧಿಸಿತು. ಕಳೆದ ಎರಡು ಮೂರು ವರ್ಷಗಳ ಹಿಂದೆ ಅವರಿಗೆ ದೊರೆಯುತ್ತಿದ್ದ ‘ಹಾರ್ದಿಕ ಸ್ವಾಗತ’ ನಿಂತಿದೆ. ಗರ್ಭಿಣಿಯರನ್ನು ಹಾಂಕಾಂಗ್‌ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ವಿಮಾನ, ದೋಣಿಗಳ ಮೂಲಕ ಕದ್ದು ಮುಚ್ಚಿ ದೇಶದ ಒಳಗೆ ನುಸುಳಲು ಯತ್ನಿಸುವವರನ್ನು ಹಿಡಿದು ಮರಳಿ ಕಳಿಸಲಾಗುತ್ತಿದೆ. ದಶಕಗಳಿಂದ ಚೀನಾದ ಮಹಿಳೆಯರ ಪಾಲಿಗೆ ಹೆರಿಗೆಯ ಸ್ವರ್ಗವಾಗಿದ್ದ ಹಾಂಕಾಂಗ್‌ನ ಬಾಗಿಲು ಇದೀಗ ಸಂಪೂರ್ಣವಾಗಿ ಮುಚ್ಚಿದೆ.

ವಾಯುಗಡಿಯ ವ್ಯಾಪ್ತಿಯಲ್ಲಿ ಹಾರಾಡುತ್ತಿರುವ ವಿಮಾನ ದಲ್ಲಿ ಮಹಿಳೆಗೆ ಜನಿಸುವ ಮಗು ಕೂಡ ಪೌರತ್ವಕ್ಕೆ ಅರ್ಹತೆ ಪಡೆಯುತ್ತದೆ. ಹೀಗಾಗಿ ಹಾಂಕಾಂಗ್‌ಗೆ ಬರುವ ವಿಮಾನದೊಳಗೆ ಗರ್ಭಿಣಿಯರಿಗೆ ಪ್ರವೇಶವಿಲ್ಲ. ಒಂದು ವೇಳೆ ಕಣ್ತಪ್ಪಿಸಿ ಬಂದರೂ ವಿಮಾನ ನಿಲ್ದಾಣದಲ್ಲಿ ತಡೆದು ವಾಪಸ್‌ ಕಳುಹಿಸುತ್ತಾರೆ.

ದಾಯಾದಿ ಕಲಹಕ್ಕೆ ನಾಂದಿಯಾದ ಸಬ್‌ವೇ ಘಟನೆ ಮೂರ್‍್ನಾಲ್ಕು ವರ್ಷಗಳ ಹಿಂದೆ ಹಾಂಕಾಂಗ್‌ನ ಸುರಂಗ ಮಾರ್ಗದಲ್ಲಿ (ಸಬ್‌ ವೇ) ನಡೆದ ಒಂದು ಪುಟ್ಟ ಘಟನೆ ಚೀನಾದ ಗರ್ಭಿಣಿಯರ ಪಾಲಿಗೆ ಕರಾಳವಾಗಿ ಪರಿಣಮಿಸಿತು!

ಹಾಂಕಾಂಗ್‌ ಸುರಂಗಮಾರ್ಗಗಳಲ್ಲಿ ತಿಂಡಿ, ತಿನಿಸು ನಿಷಿದ್ಧ ಎಂದು ಗೊತ್ತಿರದ ಚೀನಾದ ಮಹಿಳೆಯೊಬ್ಬಳು ತನ್ನ ಮಗಳಿಗೆ ನೂಡಲ್ಸ್‌ ತಿನ್ನಲು ಕೊಟ್ಟಿದ್ದು ದೊಡ್ಡ ಅವಾಂತರಕ್ಕೆ ಕಾರಣವಾ ಯಿತು. ಈ ಕ್ಷುಲ್ಲಕ ಘಟನೆ ‘ಹೆರಿಗೆ ಪ್ರವಾಸೋದ್ಯಮ’ ನಿಷೇಧಿಸುವ ಮಟ್ಟಕ್ಕೆ ತಲುಪುತ್ತದೆ ಎಂದು ಯಾರೂ ಭಾವಿಸಿರಲಿಲ್ಲ.

ಸುರಂಗ ಮಾರ್ಗದಲ್ಲಿ ಮಗುವಿಗೆ ತಿಂಡಿ ನೀಡದಂತೆ ಅಧಿಕಾರಿಗಳು ಹಾಗೂ ಉಳಿದ ಪ್ರಯಾಣಿಕರು ಚೀನಿ ಮಹಿಳೆಗೆ ಹೇಳಿದರು. ಇದೇ ವಿಷಯವಾಗಿ ಆ ಮಹಿಳೆ ಮತ್ತು ಅಧಿಕಾರಿಗಳ ಮಧ್ಯೆ ಆರಂಭವಾದ ಮಾತಿನ ಚಕಮಕಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದು ಹೇಗೊ ಆ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣ ಮತ್ತು ಅಂತರ್ಜಾಲಗಳಲ್ಲಿ ಹರಿದಾಡಿತು. ಕೊನೆಗೆ ಸುದ್ದಿವಾಹಿನಿಗಳಲ್ಲಿಯೂ ಪ್ರಸಾರವಾಯಿತು. ಇದು ಚೀನಿಯರನ್ನು ಕೆರಳಿಸಿತು.

ಘಟನೆ ಕುರಿತು ನಡೆದ ಟಿ.ವಿ ಸಂವಾದದಲ್ಲಿ ಚೀನಿ ಪ್ರಾಧ್ಯಾಪಕ ರೊಬ್ಬರು, ‘ಸ್ವಚ್ಛತೆಯ ಗುಂಗು ಹಿಡಿಸಿಕೊಂಡ ಆಂಗ್ಲರ ನಾಯಿಗಳು’ ಎಂದು ಹಾಂಕಾಂಗ್‌ ಜನರನ್ನು ಹೀಯಾಳಿಸಿದರು. ಅನೇಕ ವರ್ಷಗಳಿಂದ ಚೀನಿಯರ ಬಗ್ಗೆ ನಾನಾ ಕಾರಣಗಳಿಗಾಗಿ ಸ್ಥಳೀಯರಲ್ಲಿ ಹೆಪ್ಪುಗಟ್ಟಿದ್ದ ಆಕ್ರೋಶ ಸ್ಫೋಟಗೊಳ್ಳಲು ಇಷ್ಟು ಸಾಕಾಗಿತ್ತು. ಇದೇ ನೆಪದಲ್ಲಿ ಸಂಘರ್ಷ ಆರಂಭವಾಯಿತು. ಶಾಪಿಂಗ್‌, ಹೆರಿಗೆಗಾಗಿ ಹಿಂಡು ಹಿಂಡಾಗಿ ಹಾಂಕಾಂಗ್‌ಗೆ ಬರುವ ಚೀನಿಯರನ್ನು ‘ಮಿಡತೆಗಳು’ ಎಂದು ಸ್ಥಳೀಯರು ಲೇವಡಿ ಮಾಡಿದರು. ಚೀನಿಯರನ್ನು ಹೀಯಾಳಿಸಲು ಜಪಾನಿಯರು ಬಳಸುವ ಪದ ಇದು.

ಹಾಂಕಾಂಗ್‌ನಲ್ಲಿ ಮಗುವನ್ನು ಹೆತ್ತರೆ, ವೈಭವೋಪೇತ ಮಾಲ್‌, ಹೋಟೆಲ್‌ಗಳಲ್ಲಿ ರಾಜಮರ್ಯಾದೆ ಪಡೆಯುವುದು ಗೊತ್ತಿದ್ದರೆ ಮಾತ್ರ ಸಾಲದು, ಸುರಂಗಮಾರ್ಗದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ‘ಮಿಡತೆಗಳು’ ಮೊದಲು ಕಲಿಯಬೇಕು. ಸಭ್ಯತೆ, ಸೌಜನ್ಯ, ನಾಗರಿಕತೆ ಹೋಗಲಿ, ಕನಿಷ್ಠ ಪಕ್ಷ ಸ್ವಚ್ಛತೆ ಎಂದರೆ ಏನು ಎಂದಾದರೂ ಗೊತ್ತಿರಬೇಕು ಎಂದು ಕೆಣಕಿದರು.

ಸಾರ್ವಜನಿಕರಿಂದ ಸಾವಿರಾರು ಡಾಲರ್‌ ಚಂದಾ ಎತ್ತಿ ‘ಆ್ಯಪಲ್‌ ಡೇಲಿ’ ಎಂಬ ಸ್ಥಳೀಯ ಜನಪ್ರಿಯ ಪತ್ರಿಕೆಯಲ್ಲಿ ‘ಚೀನೀಯರು ಮಿಡತೆಗಳು’ ಎಂದು ಅಣಕಿಸುವ ಜಾಹೀರಾತು ನೀಡಿದರು. ಇದು ಮುಂದೆ ಹಾಂಕಾಂಗ್‌ಗೆ ಹೆರಿಗೆಗೆ ಬರುವ ಚೀನಾ ಗರ್ಭಿಣಿಯರ ವಿರುದ್ಧದ ಆಂದೋಲನದ ಸ್ವರೂಪ ಪಡೆಯಿತು. ಅವರ ಎದುರು ಬೇರೆ ಆಯ್ಕೆ ಉಳಿದಿರಲಿಲ್ಲ. ಇದಕ್ಕೆ ಪ್ರತಿಯಾಗಿ ಚೀನಿಯರು ‘ಹಾಂಕಾಂಗ್‌ಗೆ ಚೀನಾ ಸರಬರಾಜು ಮಾಡುತ್ತಿರುವ ಕುಡಿಯುವ ನೀರು ಮತ್ತು ವಿದ್ಯುತ್‌ ಸಂಪರ್ಕವನ್ನು ತಕ್ಷಣ ನಿಲ್ಲಿಸಿ’ ಎಂದು ಜಾಹೀರಾತು ನೀಡಿದರು. ನೆಲದ ಅಡಿ ನಡೆದ ಸಣ್ಣದೊಂದು ಘಟನೆ ದಾಯಾದಿ ಕಲಹಕ್ಕೆ ನಾಂದಿ ಹಾಡಿತು.


ಆಕ್ರೋಶದ ಹಿಂದಿನ ಕಾರಣವೇ ಬೇರೆ!
ಹಾಂಕಾಂಗ್‌ ಜನರ ಆಕ್ರೋಶಕ್ಕೆ ಈ ಘಟನೆ ಒಂದು ನೆಪವಾಗಿತ್ತು. ಅವರ ಸಿಟ್ಟಿನ ಹಿಂದಿನ ನಿಜವಾದ ಕಾರಣವೇ ಬೇರೆಯಾಗಿತ್ತು. 

ಜೂಜು ತಾಣ: ಮುಕ್ತ ಮಾರುಕಟ್ಟೆ ಮತ್ತು ಜಾಗತೀಕರಣಕ್ಕೆ ತೆರೆದುಕೊಂಡ ನಂತರ ಚೀನಿಯರ ಕೈಯಲ್ಲಿ ಹಣ ಓಡಾಡತೊಡಗಿತು. ಸಹಜವಾಗಿ ಅವರ ಖಯಾಲಿಗಳು ಗಡಿ ದಾಟಿ ಬೆಳೆದವು. ಪಕ್ಕದ ಮಕಾವ್‌ನಂತಹ ಪುಟ್ಟ ದ್ವೀಪ ಅವರ ಜೂಜಾಟದ ತಾಣವಾಯಿತು. ಹಾಂಕಾಂಗ್‌ನಲ್ಲಿ ಶಾಪಿಂಗ್‌, ಚಿನ್ನಾಭರಣ, ಭೂಮಿ ಖರೀದಿಗೆ ಹಣದ ಹೊಳೆ ಹರಿಯತೊಡ ಗಿತು. ಚೀನಿಯರಿಗೆ ಭಾರಿ ಸ್ವಾಗತ ನೀಡಲಾಯಿತು. ಹೋದ ಕಡೆ ಎಲ್ಲ ರಾಜಮರ್ಯಾದೆ ದೊರೆಯತೊಡಗಿತು. ಇತ್ತ ಹಾಂಕಾಂಗ್‌ ಜನರಿಗೆ ತಮ್ಮ ನೆಲದಲ್ಲಿಯೇ ತಾವು ಎರಡನೇ ದರ್ಜೆಯ ನಾಗರಿಕರಾಗುತ್ತಿದ್ದೇವೆ ಎಂಬ ಅಸಮಾಧಾನ ಮೊಳಕೆಯೊಡೆದಿತ್ತು.

ನಿಯಂತ್ರಣ ತಂದ ಸಮಸ್ಯೆ: ಜನಸಂಖ್ಯೆ ನಿಯಂತ್ರಿಸಲು ಚೀನಾ ಸರ್ಕಾರ ಜಾರಿಗೆ ತಂದ ‘ಒಂದು ಕುಟುಂಬಕ್ಕೆ ಒಂದು ಮಗು’ ನೀತಿಯಿಂದ ಬೇಸತ್ತ ಶ್ರೀಮಂತ ಕುಟುಂಬಗಳು ಹೆರಿಗೆಗಾಗಿ ಅಮೆರಿಕದ ಸೈಪನ್‌ ದ್ವೀಪ ಮತ್ತು ಹಾಂಕಾಂಗ್‌ಗೆ ಹಾರತೊಡಗಿದರು. ಶ್ರೀಮಂತರು ಸೈಪನ್‌ನತ್ತ ಹೊಟರೆ, ಮಧ್ಯಮ ಮೇಲ್ವರ್ಗದವರು ಹಾಂಕಾಂಗ್‌ಗೆ ಧಾವಿಸತೊಡಗಿದರು.

ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯ, ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹಾಂಕಾಂಗ್ ತೋರುತ್ತಿರುವ ಕಾಳಜಿಯಿಂದಾಗಿ ಜಾಗತಿಕ ಮಟ್ಟದ ‘ಹೆರಿಗೆ ಪ್ರವಾಸೋದ್ಯಮ ಕೇಂದ್ರ’ವಾಗಿ ಪ್ರಸಿದ್ಧಿ ಪಡೆದಿತ್ತು. ಏಷ್ಯಾದ ಪ್ರಮುಖ ಆರ್ಥಿಕ, ಬ್ಯಾಂಕಿಂಗ್‌, ವಾಣಿಜ್ಯ ಕೇಂದ್ರದ ಜತೆ ಪ್ರವಾಸೋದ್ಯಮ ಕೇಂದ್ರವಾಗಿದ್ದ ಹಾಂಕಾಂಗ್‌ ‘ಹೆರಿಗೆ ಪ್ರವಾಸೋದ್ಯಮ ತಾಣ’ವಾಗಿಯೂ ಭೂಪಟದಲ್ಲಿ ಗುರುತಿಸಲ್ಪಟ್ಟಿತು.

ಪ್ಯಾಕೇಜ್‌ ಹೆರಿಗೆ ಪ್ರವಾಸೋದ್ಯಮ
ಹಾಂಕಾಂಗ್‌ನ ಸಂವಿಧಾನದ ಪ್ರಕಾರ ಆ ನೆಲದಲ್ಲಿ ಜನಿಸುವ ಮಗು ಅಲ್ಲಿಯ ಪೌರತ್ವಕ್ಕೆ ಅರ್ಹತೆ ಪಡೆಯುತ್ತದೆ. ಅಷ್ಟೇ ಅಲ್ಲ,12 ವರ್ಷ ಬ್ರಿಟನ್ ಮಾದರಿ ಉಚಿತ ಶಿಕ್ಷಣ, ಜೊತೆಗೆ ವಿಶ್ವದ ಯಾವುದೇ ಭಾಗಕ್ಕೆ ಮುಕ್ತವಾಗಿ ಸಂಚರಿಸಲು ಹಾಂಕಾಂಗ್ ಪಾಸ್‌ಪೋರ್ಟ್ ಪಡೆಯುತ್ತದೆ. ಪತ್ನಿ ಗರ್ಭ ಧರಿಸುತ್ತಿದ್ದಂತೆಯೇ ಗಂಡ ಹೆರಿಗೆಗೆ ಆರೇಳು ತಿಂಗಳು ಮೊದಲೇ ಹಾಂಕಾಂಗ್‌ ಆಸ್ಪತ್ರೆ
ಕಾಯ್ದಿರಿಸುತ್ತಿದ್ದರು.

ಆಸ್ಪತ್ರೆ, ಹೋಟೆಲ್‌, ವಿಮಾನ ಸೀಟು ಕಾಯ್ದಿರಿಸಲು ಎರಡೂ ರಾಷ್ಟ್ರಗಳಲ್ಲಿ ನಾಯಿಕೊಡೆಗಳಂತೆ ಮಧ್ಯವರ್ತಿಗಳು ಹುಟ್ಟಿಕೊಂಡರು. ಗ್ರಾಹಕರ ಆಯ್ಕೆಯ ಮೇಲೆ ಪ್ಯಾಕೇಜ್ ದರ ನಿಗದಿಯಾದವು. ಪ್ಯಾಕೇಜ್ ಹೆರಿಗೆ ಪ್ರವಾಸೋದ್ಯಮ ಗರಿಗೆದರತೊಡಗಿದವು.

ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಆಸ್ಪತ್ರೆಗಳೂ ನೆರೆ ದೇಶದವರಿಗೆ ಮಣೆ ಹಾಕತೊಡಗಿದವು. ಹೆರಿಗೆಗೆ ಬರುವ ದಂಪತಿಗಳು ಹಣ ಚೆಲ್ಲತೊಡಗಿದರು. ಇದರಿಂದ ಹಾಂಕಾಂಗ್‌ ಆದಾಯವೂ ಹೆಚ್ಚತೊಡಗಿತು. ನೋಡು, ನೋಡುತ್ತಿ ದ್ದಂತೇ ಹಾಂಕಾಂಗ್‌ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಚೀನಾದ ಗರ್ಭಿಣಿಯರು ಮತ್ತು ಶಿಶುಗಳಿಂದ ತುಂಬಿ ತುಳುಕತೊಡಗಿ­ದವು. ವರ್ಷಗಳು ಉರುಳಿದಂತೆ ಸಂಖ್ಯೆ ಎರಡು ಪಟ್ಟಾಯಿತು. ಕೊನೆಗೆ ಸ್ಥಳೀಯರಿಗೇ ಹಾಸಿಗೆ ಸಿಗದಷ್ಟು ಸಮಸ್ಯೆ ಬೃಹದಾಕಾರವಾಗಿ ಬೆಳೆಯಿತು. ತಮ್ಮ ಸೌಲಭ್ಯ ಮತ್ತು ಹಕ್ಕುಗಳು ಅನ್ಯರ ಪಾಲಾಗ ತೊಡಗಿದ್ದನ್ನು ಕಂಡ ಸ್ಥಳೀಯರ ಸಹನೆಯ ಕಟ್ಟೆ ಒಡೆದಿತ್ತು.

ಹೆರಿಗೆಗೂ ಕೋಟಾ!
ಹೆರಿಗೆಗಾಗಿ ಬರುವ ಗರ್ಭಿಣಿಯರ ಸಂಖ್ಯೆಗೆ ಕಡಿವಾಣ ಹಾಕುವಂತೆ ಸ್ಥಳೀಯರ ಒತ್ತಡಕ್ಕೆ ಮಣಿದ ಸರ್ಕಾರ ಕೋಟಾ ವ್ಯವಸ್ಥೆ ಜಾರಿ ಮಾಡಿತು. ಅದರಂತೆ ವಿದೇಶಿಯರಿಗೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವರ್ಷಕ್ಕೆ 3,400 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 31 ಸಾವಿರ ಹೆರಿಗೆಗೆ ಮಾತ್ರ ಅವಕಾಶ ನೀಡಲಾಯಿತು. ಇಷ್ಟಾದರೂ ಹಾವಳಿಗೆ ಕಡಿವಾಣ ಬೀಳಲಿಲ್ಲ. ವಿಮಾನ, ದೋಣಿಗಳಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಗಡಿ ದಾಟಿ ಬರುವ ಗರ್ಭಿಣಿಯರನ್ನು ದಲ್ಲಾಳಿಗಳು ರಹಸ್ಯ ತಾಣಗಳಲ್ಲಿ ಅಡಗಿಸಿ ಇಡುತ್ತಿದ್ದರು. ಗರ್ಭಿಣಿಯರು ತಂಗಲು ದಲ್ಲಾಳಿಗಳು ಅನೇಕ ಫ್ಲಾಟ್‌ಗಳನ್ನು ಬಾಡಿಗೆಗೆ ಪಡೆಯುತ್ತಿದ್ದರು. ಹೆರಿಗೆಯ ಕೊನೇ ಹಂತದಲ್ಲಿ ಆಸ್ಪತ್ರೆಯ ತುರ್ತು ವಾರ್ಡ್‌ಗಳಿಗೆ ಅವರನ್ನು ದಾಖಲಿಸುತ್ತಿದ್ದರು. ಹೀಗಾಗಿ ಕೋಟಾ ವ್ಯವಸ್ಥೆ ಜಾರಿಯಾದ ಮೇಲೂ ಅಕ್ರಮವಾಗಿ ಹೆರಿಗೆ ಮುಂದುವರಿದವು.

2000ದಲ್ಲಿ ಕೇವಲ 709ರಷ್ಟಿದ್ದ ಚೀನಾ ಗರ್ಭಿಣಿಯರ ಹೆರಿಗೆ ಸಂಖ್ಯೆ 11ವರ್ಷದಲ್ಲಿ35 ಸಾವಿರ ಗಡಿ ದಾಟಿತು. 2010ರಲ್ಲಿ ಆದ 88 ಸಾವಿರ ಹೆರಿಗೆಗಳ ಪೈಕಿ ಶೇ 45ರಷ್ಟು ಪಾಲು ಚೀನಾ ಮಹಿಳೆಯರದಾಗಿತ್ತು. ಹಾಂಕಾಂಗ್‌ನಲ್ಲಿ ಜನಿಸುವ ಪ್ರತಿ ಹತ್ತರಲ್ಲಿ ನಾಲ್ಕು ಚೀನಾದ ಶಿಶುಗಳಿದ್ದವು. ಸ್ಥಳೀಯರ ಒತ್ತಡಕ್ಕೆ ಕಟ್ಟುಬಿದ್ದ ಸರ್ಕಾರ 2013ರಲ್ಲಿ ಕೋಟಾವನ್ನು ಶೂನ್ಯಕ್ಕೆ ಇಳಿಸಿದೆ. ಈಗ ಇಲ್ಲಿಗೆ ಬರುವ ಗರ್ಭಿಣಿಯರನ್ನು ಬಂಧಿಸಿ, ದಂಡ ವಿಧಿಸಲಾಗುತ್ತಿದೆ. ವರ್ಷದ ಆರಂಭದಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಕಳ್ಳ ಮಾರ್ಗದ ಮೂಲಕ ಹಾಂಕಾಂಗ್‌ ಪ್ರವೇಶಿಸಿ ಸಿಕ್ಕಿ ಹಾಕಿಕೊಂಡ ಮೂವರು ಚೀನಾ ದೇಶದ ಗರ್ಭಿಣಿಯರನ್ನು ಬಂಧಿಸಲಾಗಿದೆ. ಜೈಲಿಗೆ ಅಟ್ಟಿ ದಂಡ ವಿಧಿಸಲಾಗಿದೆ.

ಆದಾಯ ಮತ್ತು ಚೀನಾ ಜೊತೆ ಸಂಬಂಧದ ಮೇಲೆ ಪರಿಣಾಮ ಬೀರುವ ಆತಂಕದ ನಡುವೆಯೂ ಹಾಂಕಾಂಗ್‌ ಸರ್ಕಾರ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಂಡಿದೆ. ಸಮಸ್ಯೆ ಪರಿಹಾರಕ್ಕೆ ಕೈಜೋಡಿಸಿರುವ ಚೀನಾ ತನ್ನ ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿಯನ್ನು ಕಳೆದ ವರ್ಷ ಸಡಿಲಿಸಿದೆ ಮತ್ತು ಗಡಿಯಲ್ಲಿ ಪಹರೆ ಹೆಚ್ಚಿಸಿದೆ. ಒಂದೇ ಭಾಷೆ, ಲಿಪಿ ಮತ್ತು ಸಂಸ್ಕೃತಿಯನ್ನು ಹೊಂದಿದ್ದರೂ ಚೀನಿ ಮತ್ತು ಹಾಂಕಾಂಗ್‌ ಜನರಲ್ಲಿ ಸ್ವಚ್ಛತೆ ವಿಷಯವಾಗಿ ಭಿನ್ನತೆ ಮೂಡಿದೆ. ಹೆರಿಗೆ ಆಸ್ಪತ್ರೆ ಮತ್ತು ಸಬ್‌ವೇ ಘಟನೆ ಎರಡೂ ರಾಷ್ಟ್ರಗಳ ಜನರ ಮಧ್ಯೆ ದೊಡ್ಡ ಕಂದಕವನ್ನೇ ಸೃಷ್ಟಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT