ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಬೆಳವಣಿಗೆ: ಶಿಕ್ಷಕರು ನುಣುಚಿಕೊಳ್ಳಲಾಗದು!

Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ನಮ್ಮ ದೇಶ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ ಎಂಬುದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳು­ತ್ತೇವೆ. ದೇಶದ ನಾಗರಿಕರ ಅರಿವಿನ ಮಟ್ಟ ಎಷ್ಟು ಎಂಬುದರ ಮೇಲೆ ಪ್ರಜಾಪ್ರಭುತ್ವದ ಯಶಸ್ಸು ನಿಂತಿರುತ್ತದೆ. ಹಾಗಾಗಿ ನಮ್ಮ ಪುಟಾಣಿಗಳ ಸರ್ವಾಂಗೀಣ ಬೆಳವಣಿಗೆ ಬಗ್ಗೆ ನಾವು ಕಡ್ಡಾಯವಾಗಿ ಗಮನಹರಿಸಲೇಬೇಕು.

ಆದರೆ ಬಹುತೇಕ ಸಂದರ್ಭಗಳಲ್ಲಿ ಈ ವಿಚಾರ ಶೈಕ್ಷಣಿಕ ಶಿಸ್ತು ಮತ್ತು ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆದುಕೊಳ್ಳುವ ಭರದ ಎದುರು ಗೌಣವಾಗುತ್ತದೆ. ಬಹಳ ಹಿಂದಿನಿಂದ, ಬಹುಪಾಲು ಶಾಲೆಗಳ ಮಕ್ಕಳು ಕಡಿಮೆ ಸಂಬಳದ, ಪೂರ್ವ ಸಿದ್ಧತೆ ಇರದ ಶಿಕ್ಷಕರ ಪಾಠ ಕೇಳುತ್ತಿದ್ದಾರೆ. ಇದರಿಂದ ಆ ಮಕ್ಕಳು ಖಾಸಗಿ ಟ್ಯೂಷನ್ ಪಡೆಯ­ಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ. ಇದು ಮಕ್ಕಳ ಪೋಷಕರ ಮೇಲೆ ಹಣಕಾಸಿನ ಅನಗತ್ಯ ಭಾರ ಹೊರಿಸುವುದೊಂದೇ ಅಲ್ಲ, ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಬಳಸ­ಬಹುದಿದ್ದ ಸಮಯವನ್ನೂ ಕಿತ್ತುಕೊಳ್ಳುತ್ತಿದೆ.

ಮಕ್ಕಳ ಮನಸ್ಸನ್ನು ಅರಿಯುವ ವಿಧಾನ ಮತ್ತು ಶಿಕ್ಷಣ ಕ್ರಮ ರೂಪಿಸುವ ಶಾಸ್ತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಬೆಳವಣಿಗೆ ಆಗಿದೆ. ಈ ಅರಿವಿನ ಮೂಲಕ ಪ್ರತಿಯೊಂದು ಮಗುವನ್ನು ಜವಾಬ್ದಾರಿಯುತ ಮತ್ತು ಸಂತೃಪ್ತಿಯ ಜೀವನ ಸಾಗಿಸುವಂತೆ ನಾಗರಿಕನನ್ನಾಗಿ ರೂಪಿಸುವ ಸವಾಲು ಶಿಕ್ಷಣ ಸಂಸ್ಥೆಗಳು, ಪಾಲಕರು ಮತ್ತು ಸಮಾಜದ ಮೇಲಿದೆ.

ಒಂದು ರಾಜ್ಯಕ್ಕೆ ಅಥವಾ ದೇಶಕ್ಕೆ ಶಿಕ್ಷಣ ನೀತಿ ರೂಪಿಸುವುದು, ಶಾಲೆಯೊಂದನ್ನು ನಡೆಸುವುದು, ವಿದ್ಯಾರ್ಥಿಯೊಬ್ಬನಿಗೆ ಪಾಠ ಮಾಡುವುದು ಮುಂತಾದ ಕೆಲಸಗಳೆಲ್ಲ ಬೇರೆ ಬೇರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆದರೆ ಇವೆಲ್ಲ ಕೆಲಸಗಳಿಗೂ ಮಗುವಿಗೆ ಶಿಕ್ಷಣ ಕೊಡಿಸುವ ಏಕ ಉದ್ದೇಶ ಇರುತ್ತದೆ. ಹಾಗಾಗಿ, ಈ ಕೆಲಸಗಳು ಒಂದಕ್ಕೊಂದು ಪೂರಕವಾಗಿ ನಡೆಯಬೇಕು. ಹಾಗೆ ಆಗಲು ಒಂದು ಚೌಕಟ್ಟು ಬೇಕು. ಅದನ್ನೇ ನಾವು ಪಠ್ಯಕ್ರಮ ಎಂದು ಕರೆಯುತ್ತೇವೆ. ಮಕ್ಕಳ ಅಗತ್ಯಗಳಿಗೆ ಸ್ಪಂದಿಸುವ ಮತ್ತು ರಾಜ್ಯ ಅಥವಾ ರಾಷ್ಟ್ರದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಬೆಳೆಸುವಂಥ ಗುಣ ಈ ಪಠ್ಯಕ್ರಮಕ್ಕೆ ಇರಬೇಕು.

ಬಹುತೇಕ ಸಂದರ್ಭಗಳಲ್ಲಿ ಪಠ್ಯಕ್ರಮ ಎಂದರೆ ಪಾಠಸೂಚಿಕೆ ಎಂದೇ ಅರ್ಥೈಸಿ­ಕೊಳ್ಳಲಾಗುತ್ತದೆ. ಪಠ್ಯಕ್ರಮ ಎಂದರೆ ಯಾವುದನ್ನು ಕಲಿಸಬೇಕು ಎಂಬುದಷ್ಟೇ ಅಲ್ಲ. ಹೇಗೆ ಪಾಠ ಮಾಡಬೇಕು, ಪಾಠ ಮಾಡುವುದರ ಗುರಿ ಏನು, ಕಲಿಸಿದ್ದನ್ನು ಮಕ್ಕಳು ಅರ್ಥ ಮಾಡಿಕೊಂಡಿದ್ದಾರಾ ಎಂಬುದನ್ನು ಪರಿಶೀಲಿಸು­ವುದು ಹೇಗೆ, ಅರ್ಥ ಮಾಡಿಕೊಂಡಿರದಿದ್ದರೆ ಪಾಠ ಮಾಡುವ ವಿಧಾನದಲ್ಲಿ ಯಾವ ಬದಲಾವಣೆ ತಂದುಕೊಳ್ಳಬೇಕು ಎಂಬೆಲ್ಲ ವಿಷಯಗಳು ಪಠ್ಯಕ್ರಮದ ವ್ಯಾಪ್ತಿಗೆ ಬರುತ್ತವೆ.

ಒಳ್ಳೆಯ ಪಠ್ಯಕ್ರಮ ಸಿದ್ಧಪಡಿಸುವುದು ಕಟ್ಟಡ ನಿರ್ಮಾಣಕ್ಕೆ ಉತ್ತಮ ನೀಲನಕ್ಷೆ ಸಿದ್ಧ ಮಾಡಿಕೊಂಡಂತೆ. ಆದರೆ ಇದಷ್ಟೇ ಸಾಲದು. ಈ ನೀಲನಕ್ಷೆಯ ಅನುಷ್ಠಾನಕ್ಕೆ ಸರಿಯಾದ ಮನಸ್ಥಿತಿಯ, ತರಬೇತಿ  ಮತ್ತು ಮಾಹಿತಿ ಹೊಂದಿರುವ ವ್ಯಕ್ತಿಗಳು ಬೇಕು. ನಿಮ್ಮ ಮಗು ತರಗತಿಯಲ್ಲಿ ಸರಿಯಾಗಿ ವರ್ತಿಸುವುದಿಲ್ಲ ಎಂಬ ದೂರು ಇರುವ ಪತ್ರಗಳು ಶಾಲೆಗಳಿಂದ ಪಾಲಕರಿಗೆ ಇಂದಿಗೂ ಬರುತ್ತವೆ. ಆದರೆ ಆ ಮಗು ಏಕೆ ಹಾಗೆ ಮಾಡುತ್ತಿದೆ, ಅದನ್ನು ಸರಿಪಡಿಸುವುದು ಹೇಗೆ ಎಂಬ ಬಗ್ಗೆ ಯಾವ ಮಾಹಿತಿಯೂ ಆ ಪತ್ರದಲ್ಲಿ ಇರುವುದಿಲ್ಲ. ನಿಮ್ಮ ಮಗುವಿನ ಆರೋಗ್ಯ ಸರಿಯಿಲ್ಲ, ಅದಕ್ಕೆ ಚಿಕಿತ್ಸೆ ಏನೆಂಬುದು ಗೊತ್ತಿಲ್ಲ ಎಂದು ವೈದ್ಯರು ಪಾಲಕರಿಗೆ ಹೇಳಿದಂತೆ ಇರುತ್ತವೆ ಈ ಪತ್ರಗಳು.

ಶಿಕ್ಷಕರು ಮಾಹಿತಿ ನೀಡುವ ವ್ಯಕ್ತಿಗಳು ಮಾತ್ರವಲ್ಲ. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು, ಕಲಿಕಾ ಮಾದರಿ­ಯನ್ನು ರೂಪಿಸುವ ಜವಾಬ್ದಾರಿಯೂ ಅವರ ಮೇಲಿರುತ್ತದೆ.

ನೋಡುವ ಮೂಲಕ, ಮಾತು ಆಲಿಸುವ ಮೂಲಕ, ತರ್ಕದ ಮೂಲಕ ಮಕ್ಕಳು ಕಲಿಯುತ್ತಾರೆ ಎಂಬುದು ಈಗ ಎಲ್ಲರ ಅರಿವಿಗೂ ಬಂದಿರುವ ವಿಚಾರ. ಪ್ರತಿಯೊಂದು ಮಗುವಿನ ಕಲಿಕಾ ಶೈಲಿಯನ್ನು ಗುರುತಿಸುವಲ್ಲಿ ಶಿಕ್ಷಕ ಸಫಲನಾದರೆ, ಆತನ ಪಾಠ ಪರಿಣಾಮಕಾರಿ­ಯಾಗುತ್ತದೆ. ಹೀಗೆ ಅರ್ಥ ಮಾಡಿಕೊಂಡಾಗ, ಮಗು ಏಕೆ ಪಾಠ ಕಲಿಯುತ್ತಿಲ್ಲ ಎಂಬುದು ಶಿಕ್ಷಕರಿಗೆ ತಿಳಿಯುತ್ತದೆ. ಆ ಮಗುವಿಗೆ ಸೂಕ್ತವಾದ ಬೋಧನಾ ವಿಧಾನವನ್ನು ರೂಪಿಸಲು ಸಾಧ್ಯವಾಗುತ್ತದೆ.

ಮನೋವಿಜ್ಞಾನ ಮತ್ತು ಪಠ್ಯಕ್ರಮ ರಚಿಸುವ ಕುರಿತ ನಮ್ಮ ತಿಳಿವಳಿಕೆ ವಿಸ್ತಾರ ಆಗುತ್ತಲೇ ಇರುವ ಕಾರಣ, ಹೊಸ ವಿಚಾರಗಳಿಗೆ ಶಿಕ್ಷಕರು ಮುಕ್ತ ಮನಸ್ಸು ಹೊಂದಿರಬೇಕು.

ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಯ ಭದ್ರತೆ ಶಾಲೆಯಲ್ಲಿರುವ ಎಲ್ಲರ ಜವಾಬ್ದಾರಿ. ಮಕ್ಕಳ ಮನಸ್ಸು ಗಾಸಿಗೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ಇವರ ಮೇಲಿರುತ್ತದೆ.

ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವಂತಿಲ್ಲ ಎಂದು ದೇಶದ ನ್ಯಾಯಾಲ­ಯಗಳು ಸಾರಿವೆ. ಮಕ್ಕಳು ಅಶಿಸ್ತಿನಿಂದ ಏಕೆ ವರ್ತಿಸುತ್ತವೆ, ಮಕ್ಕಳ ನಡವಳಿಕೆ ತಿದ್ದುವುದು ಹೇಗೆ ಎಂಬುದನ್ನು ಶಿಕ್ಷಕರು ಅರ್ಥ ಮಾಡಿಕೊಳ್ಳಲು ನ್ಯಾಯಾಲ­ಯಗಳ ಆದೇಶ­ಗಳು ಸಹಕಾರಿ. ಮಕ್ಕಳು ಶಾಲೆ ಆವರಣದಲ್ಲಿ ದೈಹಿಕವಾಗಿ ಅಥವಾ ಮಾನಸಿಕ­ವಾಗಿ ಹಲ್ಲೆಗೆ ಒಳಗಾಗದಂತೆ ನೋಡಿಕೊಳ್ಳುವ ವಿಚಾರದಲ್ಲಿ ಶಿಕ್ಷಕರು ಕ್ರಿಯಾಶೀಲರಾಗಿರಬೇಕು.

ಶಿಕ್ಷಕರು ಒಬ್ಬಿಬ್ಬರು ವಿದ್ಯಾರ್ಥಿಗಳನ್ನು ಮಾತ್ರ ತಮ್ಮ ನೆಚ್ಚಿನವರು ಎಂದು ಭಾವಿಸದೆ, ಎಲ್ಲ ವಿದ್ಯಾರ್ಥಿಗಳನ್ನೂ ಒಂದೇ ಭಾವನೆಯಿಂದ ನೋಡಬೇಕು.

ಮಕ್ಕಳ ಶಿಕ್ಷಣದ ವಿಚಾರದಲ್ಲಿ ಪಾಲಕರು ಸಕ್ರಿಯರಾಗಿರಬೇಕು. ಹಾಗಾದಾಗ, ಮಕ್ಕಳು ತೋರುವ ಸಾಧನೆ ಕೂಡ ಹೆಚ್ಚಿನ ಪ್ರಮಾಣ­ದಲ್ಲಿರುತ್ತದೆ. ಇದು ಸಂಶೋಧನೆಗಳು ಕಂಡು­ಕೊಂಡಿರುವ ಸಂಗತಿ. ಮಕ್ಕಳು ಮನೆಯಲ್ಲಿ ಕಲಿಯಬೇಕಾದ ಅಂಶಗಳ ಬಗ್ಗೆ ಗಮನಹರಿಸಿ ಎಂದು ಪಾಲಕರಿಗೆ ಹೇಳುವ ಜೊತೆಗೆ, ಶಾಲೆಯಲ್ಲಿ ರೂಪಿಸುವ ಕಲಿಕಾ ಕಾರ್ಯಕ್ರಮಕ್ಕೆ ಸಹಕರಿಸುವಂತೆಯೂ ಪಾಲಕ­ರಿಗೆ ತಿಳಿ ಹೇಳಬೇಕು. ಕೆಲವು ಪಾಲಕರಿಗೆ ಈ ವಿಚಾರ ಮನವರಿಕೆ ಮಾಡಿಕೊಡುವುದು ಆರಂಭದಲ್ಲಿ ತುಸು ಕಷ್ಟವಾಗಬಹುದು. ಆದರೆ ನಂತರದ ದಿನಗಳಲ್ಲಿ ಅಂತಹ ಪಾಲಕರೂ ಇದನ್ನು ಮೆಚ್ಚಿಕೊಳ್ಳುತ್ತಾರೆ.

ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಬೇಕು. ವಯಸ್ಸು, ನಂಬಿಕೆ, ಅಂತಸ್ತು ಮುಂತಾದ ಗಡಿಗಳನ್ನೆಲ್ಲ ಮೀರಿ ಇನ್ನೊಬ್ಬರಿಗೆ ಗೌರವ ನೀಡುವ ಮನಸ್ಸನ್ನು ಮಕ್ಕಳಲ್ಲಿ ಬೆಳೆಸಬೇಕು.

ಮುಕ್ತ ಮನಸ್ಸು ಹೊಂದಿರುವ ಭಾವನೆಯನ್ನು ಮಕ್ಕಳಲ್ಲಿ ಬೆಳೆಸಿದರೆ, ಅವು ಮುಂದೆ ಯಾವುದೇ ಪೂರ್ವಗ್ರಹಗಳಿಲ್ಲದೆ ಹೊಸ ವಿಚಾರಗಳನ್ನು ಸ್ವೀಕರಿಸಲು ಕಲಿಯುತ್ತವೆ. ‘ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಎಲ್ಲರೂ ಸಾಧನೆ ಮೆರೆಯಬಹುದು’ ಎಂಬ ಮನೋಭಾವ ಬೆಳೆಸುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ.

ಸಾಂಸ್ಕೃತಿಕವಾಗಿ, ಸಮುದಾಯಗಳ ನೆಲೆ­ಯಲ್ಲಿ ಮಾತ್ರವಲ್ಲದೆ ಎಲ್ಲ ಆಯಾಮ­ಗಳಿಂದಲೂ ವೈವಿಧ್ಯವನ್ನು ಪ್ರತಿನಿಧಿಸುವ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸಿದರೆ ಅವರಲ್ಲಿ ಸೃಜನಶೀಲತೆ ಬೆಳೆಯುತ್ತದೆ.

ಕಲಿಕೆಗೆ ಚುರುಕು ನೀಡುವಲ್ಲಿ ಶಾಲೆಗಳ ವಾತಾವರಣ ಪ್ರಮುಖ ಪಾತ್ರ ವಹಿಸುತ್ತದೆ. ಶುದ್ಧ ಗಾಳಿ, ಬೆಳಕು ಇರುವ ತರಗತಿ ಕೊಠಡಿಗಳು, ಉತ್ತಮ ಬೆಂಚು–ಟೇಬಲ್‌ಗಳು ಶಾಲೆಗಳಲ್ಲಿ ಲಭ್ಯವಿರಬೇಕು. ಅಂಗವಿಕಲ ಮಕ್ಕಳಿಗೆ ಅನುಕೂಲವಾಗುವಂಥ ವ್ಯವಸ್ಥೆಗಳು ಶಾಲೆಗಳಲ್ಲಿ ಇದ್ದರೆ ಅಂಥ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳತ್ತ ಬರುತ್ತಾರೆ.

ಇಲ್ಲಿ ಹೇಳಿರುವ ‘ಬೇಕು’ ಸಮಗ್ರವಲ್ಲ. ಆದರೆ ಹೀಗೆ ಹೇಳಿದರೆ, ಶಿಕ್ಷಣ ಎಂಬುದು ಮಾಹಿತಿ ನೀಡುವ ಕ್ರಿಯೆಗಿಂತ ಹೆಚ್ಚಿನದನ್ನು, ಮಕ್ಕಳನ್ನು ಜವಾಬ್ದಾರಿಯುತ ಮತ್ತು ಆತ್ಮವಿಶ್ವಾಸ ತುಂಬಿದ ನಾಗರಿಕರನ್ನಾಗಿಸಲು ಇರುವ ವ್ಯವಸ್ಥೆ ಎಂಬುದು ಎಲ್ಲರಿಗೂ ಅರಿವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT