ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ರಕ್ಷಣೆಗೆ ರೋಬೊ ಮಾದರಿ

ಎಪಿಎಸ್ ಪಾಲಿಟೆಕ್ನಿಕ್‌ ಕಾಲೇಜಿನ ವಿದ್ಯಾರ್ಥಿಗಳ ಪ್ರಯತ್ನ
Last Updated 27 ಮಾರ್ಚ್ 2015, 19:58 IST
ಅಕ್ಷರ ಗಾತ್ರ

ಬೆಂಗಳೂರು: ಕನಕಪುರ ರಸ್ತೆಯ ಸೋಮನಹಳ್ಳಿಯಲ್ಲಿರುವ ಆಚಾರ್ಯ ಪಾಠಶಾಲಾ (ಎಪಿಎಸ್‌) ಪಾಲಿಟೆಕ್ನಿಕ್‌ ಕಾಲೇಜು ವಿದ್ಯಾರ್ಥಿಗಳು ಕೊಳವೆ ಬಾವಿಯೊಳಗೆ ಬೀಳುವ ಮಕ್ಕಳ ರಕ್ಷಣೆಗೆ ರೋಬೊ ಮಾದರಿಯನ್ನು ರೂಪಿಸಿದ್ದಾರೆ.

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಡಿಪ್ಲೊಮಾ ವಿಭಾಗದ ವಿದ್ಯಾರ್ಥಿಗಳಾದ ಎಲ್‌.ಶರತ್‌ ಬಾಬು, ಎ.ಧನುಷ್‌ ಹಾಗೂ ಜಿ.ಗಿರಿಧರ್‌ ಅವರು ‘ಬೋರ್‌ವೆಲ್‌ ರೆಸ್ಕ್ಯೂ ರೋಬೊ’ ಹೆಸರಿನ ಮಾದರಿಯ ರೂವಾರಿಗಳು.  ಸುಮಾರು ₨ 10 ಸಾವಿರ ವೆಚ್ಚದಲ್ಲಿ ರೂಪಿಸಿರುವ ಈ ಮಾದರಿ ಬಳಸಿ ಪ್ರಾತ್ಯಕ್ಷಿಕೆ ಕೂಡ ನೀಡಿದ್ದಾರೆ.

‘ರೋಬೊ ಮಾದರಿಗೆ ಡಿಜಿಟಲ್‌ ಕ್ಯಾಮೆರಾ ಹಾಗೂ ನ್ಯೂಮೆಟಿಕ್‌ ಸಿಲಿಂಡರ್‌ ಜೋಡಿಸಿದ್ದೇವೆ. ಹಗ್ಗ ಅಥವಾ ಚೈನ್‌ ಬಳಸಿ ಕೊಳವೆ ಬಾವಿಯೊಳಗೆ ಇಳಿಸುತ್ತೇವೆ.  ರಿಮೋಟ್‌ ಮೂಲಕ ಈ ಯಂತ್ರವನ್ನು ನಿಯಂತ್ರಿಸಬಹುದು’ ಎನ್ನುತ್ತಾರೆ ಶರತ್‌.

‘ಕೊಳವೆ ಬಾವಿಯೊಳಗೆ ಬಿದ್ದಿರುವ ಮಗು ಯಾವ ಸ್ಥಿತಿಯಲ್ಲಿದೆ ಹಾಗೂ ಸುತ್ತಮುತ್ತ ಸ್ಥಳಾವಕಾಶ ಇದೆಯೇ ಎಂಬುದನ್ನು ಕ್ಯಾಮೆರಾ ಮೂಲಕ ತಿಳಿಯಬಹುದು. ಜತೆಗೆ ಈ ಯಂತ್ರದ ಮೂಲಕ ಮಗುವಿಗೆ ಆಮ್ಲಜನಕ  ಪೂರೈಸಬಹುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕೊಳವೆ ಬಾವಿಯ ಮಧ್ಯ ಭಾಗದಲ್ಲಿ ಮಗು ಸಿಲುಕಿಕೊಂಡಿದ್ದರೆ ನ್ಯೂಮೆಟಿಕ್‌ ಸಿಲಿಂಡರ್‌  ನೆರವಿನಿಂದ ಅಡಿಹಾಸು (ಸೇಫ್ಟಿ ಬಲೂನ್‌) ತೆರೆದುಕೊಳ್ಳುವಂತೆ ಮಾಡಬಹುದು. ಇದರಿಂದ ಮಗು ಮತ್ತಷ್ಟು ಕೆಳಗೆ ಹೋಗುವ ಸಾಧ್ಯತೆ ಇರುವುದಿಲ್ಲ. ಅಲ್ಲದೆ, ಮಗುವನ್ನು ಮೇಲಕ್ಕೂ ಎತ್ತಬಹುದು. ಕೆಳಗೆ ಸ್ಥಳಾವ ಕಾಶವಿಲ್ಲದಿದ್ದರೆ ‘ರೋಬೊಟಿಕ್‌ ಆರ್ಮ್‌’ ಸಹಾಯದಿಂದ ಮೇಲೆತ್ತಬಹುದು’ ಎಂದು ಧನುಷ್‌ ಮಾಹಿತಿ ನೀಡಿದರು.

ಈಗಾಗಲೇ ಕೊಯಮತ್ತೂರಿನ ಮಣಿಕಂಠನ್ ಎಂಬುವರು ರೋಬೊ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಆ ಯಂತ್ರದಲ್ಲಿ ನ್ಯೂಮೆಟಿಕ್‌ ಸಿಲಿಂಡರ್‌ ತಂತ್ರಜ್ಞಾನ ಬಳಸಿಲ್ಲ. ‘ರೋಬೊಟಿಕ್‌ ಆರ್ಮ್‌’ ಬಳಸುತ್ತಿದ್ದು ಇದರಿಂದ ಮಗುವಿಗೆ ಗಾಯವಾಗುವ ಸಾಧ್ಯತೆ ಇದೆ ಮತ್ತು ಮಗುವಿನ ಮೇಲೆ ಮಣ್ಣು ಬೀಳುವ ಅಪಾಯವಿರುತ್ತದೆ ಎಂದು ತಿಳಿಸಿದರು.

ಮಣಿಕಂಠನ್‌ ಅಭಿವೃದ್ಧಿಪಡಿಸಿರುವ ರೋಬೊ ಯಂತ್ರಕ್ಕಿಂತ  ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಮಾದರಿ ರೂಪಿ ಸಿದ್ದೇವೆ. ಆದರೆ, ಮಗುವಿನ ಮೇಲೆ ಮಣ್ಣು  ಬಿದ್ದಿದ್ದರೆ ಈ ಯಂತ್ರ ಕಾರ್ಯನಿರ್ವ ಹಿಸುವುದಿಲ್ಲ ಎಂದು ಅವರು ಹೇಳುತ್ತಾರೆ. 

ಕಾರ್ಯರೂಪಕ್ಕೆ ಇಳಿಯುವಂಥ ಯಂತ್ರ ತಯಾರಿಸಲು ಸುಮಾರು ₨ 2.5 ಲಕ್ಷ ವೆಚ್ಚ ಹಿಡಿಯುತ್ತದೆ. ಹಣಕಾಸು ನೆರವು ಲಭಿಸಿದರೆ ಯಂತ್ರ ಅಭಿವೃದ್ಧಿಪಡಿಸಲಾಗುವುದು ಎನ್ನುತ್ತಾರೆ.

ಸಂಪರ್ಕಕ್ಕೆ: 99006 27123 ಅಥವಾ 88921 73517

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT