ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ರಕ್ಷಣೆ ಸಮಾಜದ ಎಲ್ಲರ ಹೊಣೆ

Last Updated 25 ಜುಲೈ 2015, 19:30 IST
ಅಕ್ಷರ ಗಾತ್ರ

ರಾಜ್ಯದ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗಕ್ಕೆ ಮಂಗಳೂರಿನ ಕೃಪಾ ಆಳ್ವಾ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಆಗಬೇಕಾದ ಕೆಲಸಗಳು ಬೆಟ್ಟದಷ್ಟು ಬಾಕಿ ಇರುವ ಈ ಸಂದರ್ಭದಲ್ಲಿ ಹೊಸ ಅಧ್ಯಕ್ಷರ ನಡೆಯ ಬಗ್ಗೆ ಕುತೂಹಲವಿದೆ.

ಮಾದಕ ವಸ್ತುಗಳ ಸಾಗಾಣಿಕೆಗೆ ಮಕ್ಕಳ ಬಳಕೆ,  ಆಧುನಿಕತೆ ವ್ಯಾಪಿಸುತ್ತಿದ್ದರೂ ಅಲ್ಲಲ್ಲಿ ವರದಿಯಾಗುತ್ತಿರುವ ಬಾಲ್ಯ ವಿವಾಹ, 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಹಚ್ಚಬಾರದು ಎನ್ನುವ ಬಾಲಕಾರ್ಮಿಕ ನಿಷೇಧ ಕಾಯ್ದೆಯ ಇತಿಮಿತಿಗಳು, ಶಾಲೆಗಳಲ್ಲಿ ಮಕ್ಕಳಲ್ಲಿ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ಎದುರಾಗುವ ಸವಾಲುಗಳು... ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಸುಧಾರಣೆಗಳು ಅಗತ್ಯ. ಪುನರ್ವಸತಿ ಕ್ಷೇತ್ರವನ್ನು ಗಮನಿಸಿದರೆ ಮಕ್ಕಳ ಪಾಡು ದಯನೀಯವೆನಿಸುತ್ತದೆ.  ಇಂತಹ ಸಂದರ್ಭದಲ್ಲಿ ಕೃಪಾ ಆಳ್ವ ಅವರು ಹಮ್ಮಿಕೊಳ್ಳುವ ಯೋಜನೆಗಳೇನು ಎಂಬ ಬಗ್ಗೆ ಅವರೊಡನೆ ಒಂದಿಷ್ಟು ಮಾತುಕತೆ:

*ಆಯೋಗದ ಅಧ್ಯಕ್ಷರಾಗಿ ನೀವು ಆಯ್ಕೆಯಾಗುವ ಸುದ್ದಿ ಬಹಳ ದಿನದಿಂದಲೇ ವ್ಯಾಪಿಸಿದೆ. ನಿಮ್ಮ ತಕ್ಷಣದ ಯೋಜನೆಗಳೇನು?
ಈಗ  ವಿಧಾನ ಸಭೆಯ ಅಧಿವೇಶನ ನಡೆಯುತ್ತಾ ಇರುವುದರಿಂದ ಆಯೋಗ ಹಮ್ಮಿಕೊಂಡಿರುವ ಕೆಲವು ಕಾರ್ಯಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಮತ್ತು ವಿವಿಧ ಇಲಾಖೆಯ ಸಚಿವರ ಜೊತೆಗೆ ಚರ್ಚೆ ನಡೆಸುವುದು ಸಾಧ್ಯವಾಗಿಲ್ಲ. ಅಧಿವೇಶನ ಮುಗಿದ ತಕ್ಷಣವೇ ಆಯೋಗ ಕೆಲವು ಶಿಫಾರಸುಗಳನ್ನು ಸಲ್ಲಿಸಲಿದೆ.

*ಪ್ರಸ್ತುತ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಬದಲಾವಣೆಗಳ ಅಗತ್ಯವಿದೆ ಎಂಬ ಕೂಗು ಕೇಳಿ ಬರುತ್ತಿದೆ....
ಐದು ವರ್ಷದ ಮಗುವಿನ ಸಮಸ್ಯೆಯನ್ನು ಬಗೆಹರಿಸಲು ಕಾನೂನಿನ ಮೊರೆ ಹೋಗಬೇಕೆಂದೇ ಇಲ್ಲ. ಮಾನವೀಯವಾಗಿ ಮಗುವಿನ ಬೆಳವಣಿಗೆಗೆ ಏನು ಬೇಕೋ ಅದನ್ನು ಕಲ್ಪಿಸುವ ನಿಟ್ಟಿನಲ್ಲಿ ಯೋಚಿಸಬೇಕು. ನಾನು ಅಧಿಕಾರ ವಹಿಸಿಕೊಂಡ ಒಂದು ತಿಂಗಳ ಅವಧಿಯಲ್ಲಿ ಹಲವಾರು ದೂರುಗಳು ಬಂದಿವೆ. ಎರಡೂ ಕಡೆಯವರಿಗೆ ಸಮಾಧಾನವಾಗುವ ರೀತಿಯಲ್ಲಿ ನಾನು ಸಮಸ್ಯೆಗಳನ್ನು ಪರಿಹರಿಸಿದ್ದೇನೆ. ಕಾನೂನುಗಳಿಗೆ ಸಂಬಂಧಿಸಿದಂತೆ ನಾನೇನೂ ಯೋಚನೆ ಮಾಡಿಲ್ಲ. ಈಗಾಗಲೇ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳು ನಮ್ಮಲ್ಲಿ ಸಾಕಷ್ಟು ಬಿಗಿಯಾಗಿಯೇ ಇವೆ. ಆದರೆ ಅವುಗಳನ್ನು ಜಾರಿ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ ಎನಿಸುತ್ತದೆ. ಆದ್ದರಿಂದ ಹೊಸ ಕಾನೂನುಗಳ ಅಗತ್ಯವಿದೆ ಎಂದೇನೂ ನನಗೆ ಅನಿಸುವುದಿಲ್ಲ. ಇರುವ ವ್ಯವಸ್ಥೆಯಲ್ಲಿಯೇ ಕೆಲಸ ಮಾಡಬೇಕಾಗಿದೆ.

*18 ವರ್ಷದವರೆಗಿನ ಮಕ್ಕಳು ಕೆಲಸ ಮಾಡಬಾರದು ಎಂಬ ನಿಟ್ಟಿನಲ್ಲಿ ಬಾಲಕಾರ್ಮಿಕ ಕಾಯ್ದೆ ತಿದ್ದುಪಡಿ, ಮಕ್ಕಳಿಗೆ ದೈಹಿಕ ಶಿಕ್ಷೆ ನೀಡಬಾರದು ಎಂಬ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಶಿಸ್ತು ತರಲು ಬೇಕಾದ ನೀತಿ ನಿರೂಪಣೆ... ಹೀಗೆ ಚರ್ಚೆಗಳು ನಡೆಯುತ್ತಿವೆ. ಏನಂತೀರಿ?
ಮಕ್ಕಳಿಗೆ ಶಿಕ್ಷೆ ನೀಡಲೇಬಾರದು ಎಂದರೆ ಹೇಗೆ? ಆದರೆ ಅತಿರೇಕದ ಶಿಕ್ಷೆ ಖಂಡಿತಾ ಸರಿಯಲ್ಲ. ಮಕ್ಕಳಲ್ಲಿ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ನೀತಿ ನಿರೂಪಣೆ ಸರಿಯಾದುದೇ. ಶಾಲೆಗಳಲ್ಲಿ ಮಕ್ಕಳು ಕೆಲಸವನ್ನೇ ಮಾಡಬಾರದು ಎನ್ನುವುದನ್ನು ಒಬ್ಬ ತಾಯಿಯಾಗಿ ನಾನು ಸಮರ್ಥಿಸುವುದಿಲ್ಲ. ಚಿಕ್ಕಪುಟ್ಟ ಕೆಲಸಗಳನ್ನು ನಿರ್ವಹಿಸುವುದನ್ನು ಅವರು ಕಲಿಯಬೇಕು. ನಾವೆಲ್ಲ ಶಾಲೆಗಳಲ್ಲಿ ಬೆಂಚು ಅತ್ತಿತ್ತ ಇಡುವುದು, ಗುಡಿಸುವುದು... ಮುಂತಾದ ಕೆಲಸಗಳನ್ನು ಬಹಳ ಖುಷಿಯಿಂದಲೇ ನಿರ್ವಹಿಸಿದ್ದು ನೆನಪಿದೆ. ಮಕ್ಕಳು ಅಂತಹ ಪುಟ್ಟ ಕೆಲಸಗಳನ್ನು ಸಂಭ್ರಮದಿಂದ ಮಾಡುತ್ತಾರೆ. ಅವರ ಸುರಕ್ಷತೆಯ ಬಗ್ಗೆ ಶಾಲೆಯವರು ಗಮನ ಹರಿಸಬೇಕಷ್ಟೆ.

ಇನ್ನು ಬಾಲಕಾರ್ಮಿಕತೆಯ ಬಗ್ಗೆ ಕೇಳಿದರೆ ಅವರ ವಯಸ್ಸಿನ ಮಿತಿಯನ್ನು 20ಕ್ಕೇರಿಸಬೇಕು ಎನ್ನುವವಳು ನಾನು. ಯಾಕೆಂದರೆ ಸಮಾಜದ ಪ್ರತಿಯೊಂದು ಮಗು ಕನಿಷ್ಠ ಪದವಿ ಶಿಕ್ಷಣವನ್ನು ಪಡೆಯಬೇಕು ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ. ಆದ್ದರಿಂದ ಅಂತಹ ಕಾನೂನು ತಿದ್ದುಪಡಿ ಕುರಿತ ಚರ್ಚೆ ಬಂದಾಗ ಖಂಡಿತಾ ನಮ್ಮ ಆಯೋಗ ಸಮರ್ಥವಾಗಿ ಸಲಹೆಗಳನ್ನು ಸಲ್ಲಿಸಲಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯಬೇಕು ಎನ್ನುವುದು ನನ್ನ ಉದ್ದೇಶ. ಅದಕ್ಕಾಗಿ ಈಗ ಇರುವ ಆರ್‌ಟಿಇ ಸಮರ್ಥವಾಗಿ ಜಾರಿ ಆಗಬೇಕು ಎಂಬ ಆಶಯದೊಂದಿಗೆ ಕೆಲಸ ಶುರು ಮಾಡುತ್ತಿದ್ದೇನೆ. ಬೆಂಗಳೂರಿನ ಶಾಲೆಗಳಲ್ಲಿ ಆರ್‌ಟಿಇ ಜಾರಿ ಕುರಿತು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ರಾಜ್ಯದ ವಿವಿಧೆಡೆಗಳಿಂದ ದೂರುಗಳು ಬರುತ್ತಿವೆ. ಅವುಗಳನ್ನು ಪರಿಶೀಲಿಸುತ್ತಿದ್ದೇನೆ. ಆದರೆ ಅದೃಷ್ಟವಶಾತ್‌ ಮಂಗಳೂರಿನಲ್ಲಿಯೇ ಆರ್‌ಟಿಇ ಸೀಟುಗಳಿಗೆ ಹೆಚ್ಚಿನ ಬೇಡಿಕೆ ಇಲ್ಲ ಎಂದು ಗೊತ್ತಾಯಿತು. ಅದು ಸಂತೋಷದ ವಿಷಯ.

*ಖಾಸಗಿ ಶಾಲೆಯಲ್ಲಿ ಬಡಮಕ್ಕಳಿಗೆ ಪ್ರವೇಶ ಒದಗಿಸುವುದಷ್ಟೇ ಅಲ್ಲ.  ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಜಾರಿ ಮಾಡುವುದೂ ಆರ್‌ಟಿಇಯ ಆಶಯ ಅಲ್ಲವೇ...
ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಮತ್ತು ಶಿಕ್ಷಕರ ಕೊರತೆ ಇದ್ದಲ್ಲಿ ವಿದ್ಯಾರ್ಥಿಗಳು ಅತ್ತ ಮುಖ ಮಾಡುವುದಾದರೂ ಹೇಗೆ. ಆದ್ದರಿಂದ ಸದ್ಯದಲ್ಲಿಯೇ ಕೆಲವು ಕಾರ್ಪೊರೇಟ್‌ ಕಂಪೆನಿಗಳ ಮುಖ್ಯಸ್ಥರ ಸಭೆಯೊಂದನ್ನು ಕರೆಯಲಾಗುವುದು. ಅವರ ಸಿಎಸ್‌ಆರ್‌ ನಿಧಿಯನ್ನು ಬಳಕೆ ಮಾಡಿಕೊಂಡು ಆಯಾ ಊರಿನ ಶಾಲೆಗಳಿಗೆ ಅಗತ್ಯವಿರುವ ಶಿಕ್ಷಕರನ್ನು ನೇಮಿಸಲು ಸಾಧ್ಯವಿದೆಯೇ ಎಂಬ ಪ್ರಯತ್ನ ಮಾಡಬೇಕು.

ಮಹಾರಾಷ್ಟ್ರದಲ್ಲಿ ಇಂತಹ ಪ್ರಯತ್ನಗಳು ಯಶಸ್ವಿಯಾಗಿವೆ. ಅಂಬಾನಿ ಸಮುದಾಯ ಇಡೀ ಹಳ್ಳಿಯನ್ನೇ ಸಮಗ್ರ ಅಭಿವೃದ್ಧಿ ಮಾಡುವ ಜವಾಬ್ದಾರಿಗಳನ್ನು ಕೆಲವೆಡೆ ವಹಿಸಿಕೊಂಡು ಯಶಸ್ವಿಯಾಗಿದೆ. ಒಟ್ಟಿನಲ್ಲಿ ಆದಷ್ಟು ಹೆಚ್ಚು ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ಉಳಿಯಬೇಕು ಎಂಬುದು ಆಯೋಗದ ಆಶಯ. ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಹಾಗೂ ಬಾಲ್ಯ ವಿವಾಹ ತಡೆಯಲು ಆಗಸ್ಟ್‌ ಅಂತ್ಯದ ವೇಳೆಗೆ ಉತ್ತರ ಕರ್ನಾಟಕಕ್ಕೆ ಹೆಚ್ಚು ಒತ್ತುಕೊಟ್ಟು ಹಲವಾರು ಜಾಗೃತಿ ಅಭಿಯಾನಗಳನ್ನು ಮಾಡಲಾಗುವುದು. ಉತ್ತರ ಕರ್ನಾಟಕದಲ್ಲಿ ಬಾಲಕಾರ್ಮಿಕ ಪದ್ಧತಿ ಹೆಚ್ಚಾಗಿರುವುದು ಗಮನಕ್ಕೆ ಬಂದ ಕಾರಣ ಈ ಪ್ರಯತ್ನ.

*ಬೀದಿಮಕ್ಕಳಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರಂಭಿಸಲಾಗಿರುವ ಚಿಣ್ಣರ ತಂಗುಧಾಮದಲ್ಲಿ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ವ ಶಿಕ್ಷಣ ಅಭಿಯಾನ ಉದ್ದೇಶಿಸಿದೆ. ಈಗಾಗಲೇ ತುಂಬಿ ತುಳುಕುತ್ತಿರುವ ತಂಗುಧಾಮಗಳ ಮಕ್ಕಳನ್ನು ಎಲ್ಲಿ ಕಳುಹಿಸುತ್ತೀರಿ ?
ಈ ಬಗ್ಗೆ ಇನ್ನೂ ಯಾವುದೇ ಯೋಚನೆ ಮಾಡಿಲ್ಲ. ಆದರೆ ಈ ಕೇಂದ್ರ ಸರ್ಕಾರ ಅತ್ಯುತ್ತಮವಾಗಿರುವ ಕೆಲವು ವ್ಯವಸ್ಥೆಗಳನ್ನು ಯಾಕೆ ಬದಲಿಸಲು ಹೊರಟಿದೆಯೋ ಗೊತ್ತಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಚಿಣ್ಣರ ತಂಗುಧಾಮದಲ್ಲಿರುವ ಅನಾಥ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಿದ್ದೇನೆ. ಬೀದಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಎನ್ನುವ ಆಶಯದಲ್ಲಿ ನಡೆಯುತ್ತಿರುವ ತಂಗುಧಾಮದಲ್ಲಿರುವ ಮಕ್ಕಳನ್ನು ಹೊರಕಳಿಸುವುದು ಸಾಧ್ಯವಿಲ್ಲ. ಮುಖ್ಯಮಂತ್ರಿಗಳ ಜೊತೆಗೆ ಈ ಕುರಿತು ಮಾತನಾಡಲಿದ್ದೇನೆ.

*ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ...
ಸರ್ಕಾರ ಸದ್ಯದಲ್ಲೇ ವಲಸೆ ನೀತಿಯನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಆಯೋಗದ ವತಿಯಿಂದ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿ ವಿವರವಾದ ಸಲಹೆ ಮತ್ತು ಶಿಫಾರಸುಗಳನ್ನು ಕಳುಹಿಸಿದೆ. ಅವುಗಳ ಪೈಕಿ ಮುಖ್ಯವಾದುದು ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಂಬಂಧಿಸಿದ್ದು. ಪ್ರತಿಯೊಬ್ಬ ಗುತ್ತಿಗೆದಾರರು ತಮ್ಮ ಕೈ ಕೆಳಗೆ ಕೆಲಸ ಮಾಡುವ ಕಾರ್ಮಿಕರ ಮಾಹಿತಿ ಹೊಂದಿರಬೇಕು. ಕಾರ್ಮಿಕರ ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿದ್ದಾರೆ ಎಂಬ ಮಾಹಿತಿಯನ್ನೂ ಅವರು ಕೊಡಬೇಕು. ಈ ಮಾಹಿತಿ ಸರ್ಕಾರದ ಬಳಿ ಇದ್ದಾಗ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಬಹುದು. ಆಗ ಮಕ್ಕಳು ಶಾಲೆಯಿಂದ ಹೊರಗುಳಿಯುವ ಸಂಭವ ಕಡಿಮೆಯಾಗಬಹುದು ಎನಿಸುತ್ತದೆ.

*ದಕ್ಷಿಣ ಕನ್ನಡವೂ ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ಬಾಲಕಿಯರ ವಸತಿ ನಿಲಯಗಳಿಲ್ಲ. ಸಾಮಾಜಿಕವಾಗಿ ಸಮಸ್ಯೆಗಳನ್ನು ಎದುರಿಸಿದ, ಸವಾಲುಗಳನ್ನು ಎದುರಿಸಿದ ಹೆಣ್ಣು ಮಕ್ಕಳಿಗೆ ವಸತಿ ನಿಲಯಗಳು ಅತ್ಯಂತ ಮುಖ್ಯ ಅಲ್ಲವೇ...
ಹೌದು. ಈ ಎಲ್ಲ ಅಂಶಗಳನ್ನು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ನನ್ನ ಗಮನಕ್ಕೆ ತಂದಿದ್ದಾರೆ. ಇಲ್ಲಿನ ಚೈಲ್ಡ್‌ಲೈನ್‌ನ ನಿರ್ದೇಶಕರು ಕೂಡ ಈ ವಿಷಯವನ್ನು ನನ್ನ ಗಮನಕ್ಕೆ ತಂದಿದ್ದಾರೆ. ಅಮ್ಮ ಮತ್ತು ಮಗುವಿಗೆ ಒಟ್ಟಿಗೇ ವಸತಿ ವ್ಯವಸ್ಥೆ ಕಲ್ಪಿಸುವ ಅಗತ್ಯವೂ ಇಡೀ ರಾಜ್ಯದಲ್ಲಿರುವುದು ಗೊತ್ತಾಯಿತಷ್ಟೇ. ಈ ವಿಷಯವನ್ನೂ ನಾನು ಮುತುವರ್ಜಿಯಿಂದ ಗಮನಿಸುತ್ತೇನೆ. ಉಳಿದಂತೆ ಸಲಹೆಗಳಿಗೆ ಸದಾ ಮುಕ್ತವಾಗಿದ್ದೇನೆ. ಮಕ್ಕಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ಸಲಹೆ ಇದ್ದರೂ ದಯವಿಟ್ಟು ಆಯೋಗದ ಗಮನಕ್ಕೆ ತರಬೇಕೆಂದು ನಾನು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

*ಸಮಸ್ಯೆಗಳನ್ನು ಬಗೆಹರಿಸುವುದು ಬಿಟ್ಟು ಹೊಸ ಯೋಜನೆಗಳೇನಿವೆ?
ಹಾಗೇನೂ ಯೋಚನೆ ಮಾಡಿಲ್ಲ. ಇರುವ ವ್ಯವಸ್ಥೆಯಲ್ಲಿ ಕೆಲಸ ಆರಂಭಿಸಿದ್ದೇನಷ್ಟೆ. ಆದರೆ ರಾಜ್ಯದಾದ್ಯಂತ ಜಾಗೃತಿ ಅಭಿಯಾನಗಳನ್ನು ಆದಷ್ಟು ಮಟ್ಟಿಗೆ ನಡೆಸಬೇಕು ಎನ್ನುವ ಉದ್ದೇಶವಿದೆ. ಇನ್ನು ಮಾಧ್ಯಮಗಳ ಮುಂದೆ ನನ್ನದೊಂದು ಮನವಿ ಇದೆ. ಮಕ್ಕಳ ಸಂರಕ್ಷಣೆ ಸರ್ಕಾರದಿಂದ, ಆಯೋಗದಿಂದ ಮಾತ್ರ ಆಗಬೇಕಾದ ಕೆಲಸವಲ್ಲ. ಇಡೀ ಸಮಾಜ ಮಕ್ಕಳನ್ನು ಪ್ರೀತಿಯಿಂದ ಸಂರಕ್ಷಿಸಬೇಕು. ಎಲ್ಲ ಮಕ್ಕಳೂ ನಮ್ಮವರೇ ಎಂಬ ಆಪ್ತಭಾವನೆ ಇರಬೇಕಾಗುತ್ತದೆ.

ಆದ್ದರಿಂದ ನಾನು ಮಾಧ್ಯಮದವರ ಬಳಿ ಮನವಿ ಮಾಡಿಕೊಳ್ಳುವುದೇನೆಂದರೆ, ದಯವಿಟ್ಟು ಪ್ರತಿದಿನ ಪತ್ರಿಕೆಯಲ್ಲಿ ನಾಲ್ಕು ಇಂಚಿನಷ್ಟಾದರೂ ಜಾಗವನ್ನು ಮೀಸಲಿಟ್ಟು ಮಕ್ಕಳ ಸಹಾಯವಾಣಿಯ ಸಂಖ್ಯೆಯನ್ನು ಪ್ರಕಟಿಸಿ. ಕಚೇರಿ ವಿಳಾಸವನ್ನು ಪ್ರತಿನಿತ್ಯ ಪ್ರಕಟಿಸಿ. ದೃಶ್ಯಮಾಧ್ಯಮದಲ್ಲಿಯೂ ಒಂದಿಷ್ಟು ಹೊತ್ತು ಪ್ರತಿದಿನ ಮೀಸಲಿಡಿ. ಎಲ್ಲ ಮಕ್ಕಳನ್ನೂ ಕಾಳಜಿ ಮಾಡುವುದು ಎಲ್ಲರ ಜವಾಬ್ದಾರಿ. ಆದ್ದರಿಂದ ಯಾವುದೇ ಮಗುವಿಗೆ ಅನ್ಯಾಯವಾಗಿರುವುದು ಗೊತ್ತಾದಲ್ಲಿ ದಿನದಲ್ಲಿ ಒಂದಿಷ್ಟು ಹೊತ್ತು ಸಮಯ ತಗೊಂಡು ಸಹಾಯವಾಣಿಗೆ ಫೋನ್‌ ಮಾಡಿ ಅಥವಾ ಹತ್ತಿರದ ಪೊಲೀಸ್‌ ಠಾಣೆಗೆ ಫೋನ್‌ ಮಾಡಬೇಕು ಎನ್ನುವುದು ನನ್ನ ವಿನಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT