ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಂಗದಲಿ ಅರ್ಥಪೂರ್ಣ ಬದುಕು

ನೆನಪಿನ ಗಣಿ : ಮಕ್ಕಳ ತಜ್ಞ ಬೆನಕಪ್ಪರ ಬದುಕಿನ ಕೆಲವು ಪುಟಗಳು
Last Updated 18 ಜೂನ್ 2016, 19:30 IST
ಅಕ್ಷರ ಗಾತ್ರ

ನಮ್ಮೂರಿಗೂ ನನ್ನ ಹೆಸರಿಗೂ ಒಂದು ನಂಟಿದೆ. ನನ್ನ ಹೆಸರಿಗೆ ಮಾತ್ರವಲ್ಲ, ನಮ್ಮ ಹಳ್ಳಿಯಲ್ಲಿ ಹುಟ್ಟಿದ ಬಹುತೇಕರಿಗೆ ಕೂಡ. ಆಗ ಶಿವಮೊಗ್ಗ ಜಿಲ್ಲೆಗೆ ಸೇರಿದ್ದ ಹೊನ್ನಾಳಿ ತಾಲ್ಲೂಕಿನ ಬೆನಕನಹಳ್ಳಿ ಎಂಬ ಪುಟ್ಟ ಹಳ್ಳಿ ನಮ್ಮೂರು. ಈ ಊರಿನ ಗ್ರಾಮ ದೇವತೆ ಬೆನಕ– ಅಂದರೆ, ವಿನಾಯಕ. ಊರಿನಲ್ಲಿ ನಡೆಯುವ ಪ್ರತಿ ಕಾರ್ಯಕ್ಕೂ ಗ್ರಾಮದೇವತೆಯನ್ನು ನೆನಪಿಸಿಕೊಳ್ಳುವುದು ರೂಢಿ. ಹೀಗಾಗಿ ಈ ಊರಿನ ಕುಟುಂಬಗಳಲ್ಲಿ ಹುಟ್ಟುವ ಮೊದಲ ಗಂಡು ಮಗುವಿನ ಹೆಸರು ಬೆನಕಪ್ಪ ಆದರೆ, ಹೆಣ್ಣು ಮಗುವಿನ ಹೆಸರು ಬೆನಕಮ್ಮ. ನನಗೆ ಬೆನಕಪ್ಪ ಎಂಬ ಹೆಸರು ಇಟ್ಟದ್ದು ಈ ಕಾರಣಕ್ಕಾಗಿಯೇ. ಈ ವಾಡಿಕೆ ಈಗಿನ ಆಧುನಿಕ ಕಾಲದಲ್ಲಿಯೂ ಉಳಿದುಕೊಂಡಿದೆ.

ನಮ್ಮದು ಬರೋಬ್ಬರಿ 40 ಜನರಿದ್ದ ತುಂಬು ಕುಟುಂಬ. ದೊಡ್ಡಮನೆ ಕುಟುಂಬ ಎಂದರೆ ದೊಡ್ಡ ಹೆಸರು. ತಂದೆ ದೊಡ್ಡ ವೀರಪ್ಪ ಆಗಿನ ಕಾಲದಲ್ಲಿಯೇ ಹತ್ತನೇ ತರಗತಿ ಓದಿ, ಕೆಲ ಕಾಲ ಮಾಸ್ತರರಾಗಿ ಕೆಲಸ ಮಾಡಿದ್ದವರು. ಅವರಿಗೆ ಆರು ಮಂದಿ ಸಹೋದರರು, ಒಬ್ಬರು ಸಹೋದರಿ. ವೃತ್ತಿಯಲ್ಲಿ ಕೃಷಿಯನ್ನು ನೆಚ್ಚಿಕೊಂಡಿದ್ದ ಕುಟುಂಬ. ಮನೆ ನನ್ನ ಪಾಲಿಗೆ ನೀತಿ, ಶಿಸ್ತು ಕಲಿಕೆಯ ಶಾಲೆಯೂ ಹೌದು. ಚಿಕ್ಕಂದಿನಲ್ಲಿ ತಂದೆಯೇ ಪಾಠ ಹೇಳಿಕೊಡುತ್ತಿದ್ದರು. ಮಾಧ್ಯಮಿಕ ವಿದ್ಯಾಭ್ಯಾಸ ಮುಗಿಸಿದ್ದು ಚೆನ್ನಗಿರಿ ತಾಲ್ಲೂಕಿನ ಕೋಟೇಹಾಳ್‌ ಗ್ರಾಮದಲ್ಲಿ. ಚಿಕ್ಕಪ್ಪನ ಮಗ, ಅಣ್ಣ ಹಾಲಣ್ಣ ದಿನವೂ ಮನೆಯಿಂದ 15 ಕಿ.ಮೀ. ದೂರದಲ್ಲಿರುವ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ. ಓದಿನ ವಿಚಾರದಲ್ಲಿ ನಾನು ಅದೃಷ್ಟವಂತ. ಏಕೆಂದರೆ ಮನೆಯಲ್ಲಿ ಸಾಹಿತ್ಯಿಕ ಮತ್ತು ಕಲಿಕೆಯ ವಾತಾವರಣವಿತ್ತು. ಶಾಲೆಯಲ್ಲಿ ಅನುಭವಿ, ಪಾಂಡಿತ್ಯವುಳ್ಳ ಮಾಸ್ತರುಗಳು ಸಿಕ್ಕಿದ್ದರು. ಬದುಕು ಮತ್ತು ವೃತ್ತಿಯ ಮಾರ್ಗದ ಗುರಿಯ ಸ್ಪಷ್ಟತೆ ಆಗಲೇ ಗೋಚರವಾಗತೊಡಗಿತ್ತು. ಮುಂದೆ ಶಿವಮೊಗ್ಗದಲ್ಲಿ ಪ್ರೌಢಶಾಲೆ ಓದುವಾಗ ತಂದೆಯನ್ನು ಕಳೆದುಕೊಂಡೆ. ಬಹುಶಃ ನನ್ನ ಓದು ಇಲ್ಲಿಗೇ ಕೊನೆಗೊಂಡಿತೇನೋ ಎನಿಸಿತ್ತು. ಆದರೆ ದೊಡ್ಡಪ್ಪ ನನ್ನ ಓದಿನ ಬಯಕೆಗೆ ನೀರೆರೆದರು.

ಸುಳ್ಳು ಮತ್ತು ತಪ್ಪಿನ ಪಾಠ
ನನ್ನ ತಮ್ಮನಿಗೆ ಆಗ ಎರಡು ವರ್ಷ. ಅಮ್ಮನ ಬಳಿಯಿದ್ದ ಪೆಟ್ಟಿಗೆಯಿಂದ 90 ಪೈಸೆ ಕದ್ದು 9 ಲಾಡುಗಳನ್ನು ತಂದಿದ್ದ. ತಾನೂ ತಿಂದು ಸ್ನೇಹಿತರಿಗೂ ಕೊಟ್ಟಿದ್ದ. ನಾನು ಕೇಳಿದಾಗ ‘ದಾರಿಯಲ್ಲಿ ಸಿಕ್ಕಿದ್ದು’ ಎಂದು ಹೇಳಿದ. ಅದನ್ನು ನಂಬದೆ ಅಮ್ಮನ ಬಳಿ ದೂರಿತ್ತೆ. ಅಮ್ಮ ಪೆಟ್ಟಿಗೆ ತೆಗೆದು ನೋಡಿದಾಗ 9 ಬಿಲ್ಲೆ ಮಾಯವಾಗಿದ್ದು ಗೊತ್ತಾಯಿತು. ಆದರೆ ತಮ್ಮ ‘ತಾನು ಕದ್ದಿಲ್ಲ’ ಎಂದು ವಾದಿಸಿದ. ಹೊಡೆತ ಬಿದ್ದಾಗ ತಪ್ಪೊಪ್ಪಿಕೊಂಡ. ಮಗ ಕಳ್ಳತನ ಮಾಡಿದ್ದು ಮತ್ತು ಸುಳ್ಳು ಹೇಳಿದ್ದು ಅಮ್ಮನಿಗೆ ಕೋಪ ಮತ್ತು ಬೇಸರ ಎರಡನ್ನೂ ಉಂಟುಮಾಡಿತ್ತು. ದನದ ಕೊಟ್ಟಿಗೆಯಲ್ಲಿ ಹಗ್ಗದಿಂದ ಕಟ್ಟಿಹಾಕಿ ಮೂರು ಗಂಟೆ ಕೂಡಿ ಹಾಕಿದ್ದರು. ನಾನು ಅವನನ್ನು ಬಿಡಿಸಲು ಹೋದಾಗ ನನಗೂ ಎರಡೇಟು ಬಿದ್ದವು. ಸುಳ್ಳು ಹೇಳುವುದು ಮತ್ತು ಕಳ್ಳತನ ಮಾಡುವುದು ಅತಿ ಕೆಟ್ಟದ್ದು ಎಂಬ ನೀತಿ ಪಾಠವನ್ನು ಅಂದು ಕಲಿಸಿದ ಆ ಘಟನೆ ನನ್ನನ್ನು ಪ್ರಭಾವಿಸಿತ್ತು.

ಸ್ವಾತಂತ್ರ್ಯದ ಪುಳಕ, ಪ್ರಾಮಾಣಿಕತೆ ಪಾಠ
ವೈದ್ಯಕೀಯದಷ್ಟೇ ನನ್ನನ್ನು ಪ್ರಭಾವಿಸಿದ್ದು ರಾಜಕೀಯ. ಅದಕ್ಕೆ ಮುಖ್ಯ ಕಾರಣ ಆಗಿನ ಸ್ವಾತಂತ್ರ್ಯ ಹೋರಾಟದ ಹುಮ್ಮಸ್ಸು. ಸ್ವಾತಂತ್ರ್ಯ ಬಂದಾಗ ನಮ್ಮೂರಿನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಿಹಿ ಹಂಚಿ ಭಾಷಣವನ್ನೂ ಮಾಡಿದ್ದೆ. ಭಾರತ ಅಂದು ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದರೂ ಮೈಸೂರು ಭಾರತದ ಭಾಗವಾಗಿರಲಿಲ್ಲ. ಹೀಗಾಗಿ ಆಂತರಿಕ ಸ್ವಾತಂತ್ರ್ಯದ ಹೋರಾಟ ತೀವ್ರಗೊಂಡಿತ್ತು. ಕೆಂಗಲ್‌ ಹನುಮಂತಯ್ಯ, ಟಿ. ಸಿದ್ದಲಿಂಗಯ್ಯ, ಗೋಪಾಲಗೌಡರು, ವೈ.ಆರ್‌. ಪರಮೇಶ್ವರ್‌ ಅವರ ಚಳವಳಿ ನನ್ನಲ್ಲೂ ಕೆಚ್ಚು ಹಚ್ಚಿತ್ತು. ಹೋರಾಟದ ಭಾಗವಾಗಿ ಸ್ವಇಚ್ಛೆಯಿಂದ ಸೆರೆಮನೆಗೂ ಹೋಗಿಬಂದಿದ್ದೆ.

ಶಿವಮೊಗ್ಗದ ‘ಕರ್ನಾಟಕ ಸಂಘ’ದಲ್ಲಿ ಕುವೆಂಪು, ಮಾಸ್ತಿ, ಶಿವರಾಮ ಕಾರಂತ ಮುಂತಾದ ಸಾಹಿತಿಗಳು ಆಗಾಗ್ಗೆ ಭಾಷಣ ಮಾಡುತ್ತಿದ್ದರು. ಅವು ಸಾಹಿತ್ಯದೊಂದಿಗಿನ ನನ್ನ ಸಖ್ಯವನ್ನು ಗಾಢಗೊಳಿಸಿದ್ದವು.

ಆಗ ದಕ್ಷಿಣ ಭಾರತದಲ್ಲಿ ಚೆನ್ನೈ ಹೊರತುಪಡಿಸಿದರೆ ವೈದ್ಯಕೀಯ ಕಾಲೇಜು ಇದ್ದದ್ದು ಮೈಸೂರಿನಲ್ಲಿ ಮಾತ್ರ. ಆಗ ಶಿಕ್ಷಣ ಸಚಿವರ ಸಹೋದರ ಒಬ್ಬರು ವೈದ್ಯಕೀಯ ವಿದ್ಯಾರ್ಥಿ. ಅನಾಟಮಿ ವಿಷಯದಲ್ಲಿ ಅನುತ್ತೀರ್ಣರಾಗಿದ್ದರು. ಶಿಕ್ಷಣ ಸಚಿವರು ಅನಾಟಮಿ ಪ್ರಾಧ್ಯಾಪಕರಿಗೆ ದೂರವಾಣಿ ಕರೆ ಮಾಡಿ ತಮ್ಮನಿಗೆ ನೆರವು ನೀಡುವಂತೆ ಮನವಿ ಮಾಡಿದ್ದರು. ಆದರೆ ಆ ಪ್ರಾಧ್ಯಾಪಕರು ತರಗತಿಯಲ್ಲಿ ಎಲ್ಲರ ಸಮ್ಮುಖದಲ್ಲಿ ಆ ವಿದ್ಯಾರ್ಥಿಗೆ ಛೀಮಾರಿ ಹಾಕಿದ್ದರು. ಇತ್ತೀಚೆಗೆ ನಡೆಯುತ್ತಿರುವ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ ಮುಂತಾದ ಶಿಕ್ಷಣ ಕ್ಷೇತ್ರದಲ್ಲಿನ ಅವ್ಯವಹಾರದ ದೃಷ್ಟಾಂತಗಳನ್ನು ಕಂಡಾಗ ನನಗೆ ಪಾಠ ಮಾಡಿದ ಪ್ರಾಮಾಣಿಕ ಮತ್ತು ದಕ್ಷ ಶಿಕ್ಷಕರು ನೆನಪಾಗುತ್ತಾರೆ.

ವೈದ್ಯಕೀಯ ಪದವಿ ಮುಗಿಸಿದ ಬಳಿಕ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಒಂದು ವರ್ಷ ಕಿರಿಯ ವೈದ್ಯನಾಗಿ ಕೆಲಸ ಮಾಡಿದೆ. ಕೆಲ ಕಾಲ ಹುಣಸೂರಿನ ಕ್ಲಿನಿಕ್ ಒಂದರಲ್ಲಿ ಸೇವೆ ಸಲ್ಲಿಸಿ, 1957ರಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಹಾಯಕ ವೈದ್ಯನಾಗಿ ಕೆಲಸ ಮಾಡಿದೆ. ಆ ಕಾಲದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು ಖ್ಯಾತ ವಕೀಲ ಬೇಲೂರು ಶ್ರೀನಿವಾಸ್‌ ಅಯ್ಯಂಗಾರ್‌ ಅವರ ಮನೆಯಲ್ಲಿ ಆರು ಕೊಲೆಗಳಾದ ಪ್ರಕರಣ. ಕೊಲೆಯಾದ ಹಿಂದಿನ ದಿನ ನಾನು ರಾತ್ರಿ ಪಾಳಿಯಲ್ಲಿದ್ದೆ. ಬೆಳಿಗ್ಗೆ ಎಂಟು ಗಂಟೆಗೆ ಬೇರೆ ವೈದ್ಯರು ಬಂದು ನಾನು ರಿಲೀವ್ ಆಗಬೇಕಿತ್ತು. ಆದರೆ ಆ ವೈದ್ಯರು ಬರುವುದು ತಡವಾಗಿತ್ತು. ಅವರಿಗಾಗಿ ಕಾಯುವಾಗಲೇ ಆರು ಮೃತದೇಹಗಳು ಆಸ್ಪತ್ರೆಗೆ ಬಂದವು. ವೈದ್ಯನಾಗಿ ನನ್ನ ಕರ್ತವ್ಯದ ಅವಧಿ ಮುಗಿದಿದೆ ಎಂದು ಹೇಳಿ ಹೋಗುವಂತಿರಲಿಲ್ಲ. ಹೀಗಾಗಿ ಇತರೆ ಕೆಲವು ವೈದ್ಯರ ಸಹಾಯ ಪಡೆದು ದೇಹಗಳನ್ನು ಶವಾಗಾರಕ್ಕೆ ಕಳುಹಿಸಿ ಕಾನೂನಿನ ಪ್ರಕಾರ ನಡೆಸಬೇಕಾದ ಕ್ರಮಗಳನ್ನು ಮುಗಿಸಿದೆ. ಅಂದು ನನ್ನ ಕೆಲಸದ ಅವಧಿ ಮುಗಿಯಿತೆಂದು ಆ ವೈದ್ಯರು ಬರುವ ಮೊದಲೇ ಮನೆಗೆ ಹೋಗಿದ್ದರೆ ಅದರಿಂದಾಗುತ್ತಿದ್ದ ಪರಿಣಾಮ ಊಹಿಸಲೂ ಸಾಧ್ಯವಿಲ್ಲ.

ನಾಲ್ಕಾಣೆ ಮಸಾಲೆ ದೋಸೆ!
ಮದುವೆಗೆ ಮುನ್ನ ನಾನು ನೆಲೆಸಿದ್ದು ಜಯದೇವ ವಿದ್ಯಾರ್ಥಿ ನಿಲಯದಲ್ಲಿ. ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಯನ್ನು ಸೈಕಲ್‌ನಲ್ಲಿ ತಲುಪಲು ಆಗಿನ ದಿನಗಳಲ್ಲಿ 10 ರಿಂದ 15 ನಿಮಿಷವಷ್ಟೇ ಸಾಕಾಗಿತ್ತು. ಬಳೆಪೇಟೆಯಲ್ಲಿ ಉಡುಪಿ ಕೃಷ್ಣ ಭವನ್‌ದಲ್ಲಿ ಬರೀ ನಾಲ್ಕಾಣೆಗೆ ಮಸಾಲೆ ದೋಸೆ ತಿಂದು ಕಾಫಿ ಕುಡಿಯುತ್ತಿದ್ದೆ. 1957ರಲ್ಲಿ ಸುವರ್ಣಮ್ಮಳ ಜತೆ ಸಾಂಸಾರಿಕ ಬಂಧನಕ್ಕೊಳಗಾದ ಬಳಿಕ ಈ ದಿನಚರಿ ಬದಲಾಯಿತು.

ದಿಕ್ಕು ಬದಲಿಸಿದ ಗುರು
ಹೆಚ್ಚಿನ ಓದಿಗಾಗಿ ವಿದೇಶಕ್ಕೆ ಹೋಗಲು ಸಿದ್ಧತೆ ನಡೆಸಿದ್ದೆ. ಅದಕ್ಕೂ ಮುನ್ನ ವಾಣಿ ವಿಲಾಸ ಆಸ್ಪತ್ರೆಯ ಪ್ರಸಿದ್ಧ ಮಕ್ಕಳ ತಜ್ಞ ಡಾ. ಸಂಪತ್‌ ಲೋಕನಾಥನ್‌ ಅವರ ಸಹಾಯಕನಾಗಿ ಸೇರಿಕೊಂಡಿದ್ದೆ. ನನ್ನ ಪಾಲಿನ ಆದರ್ಶ ವ್ಯಕ್ತಿ ಅವರು. ಮಕ್ಕಳ ತಜ್ಞನಾಗುವಂತೆ ನನ್ನಲ್ಲಿ ಪ್ರಭಾವ ಬೀರಿದವರೇ ಅವರು. 1959ರಲ್ಲಿ ಡಾ. ಕೆ.ಎಸ್‌. ಷಡರಕ್ಷಪ್ಪ ಅವರ ನೆರವಿನಿಂದ ಅಮೆರಿಕದ ಷಿಕಾಗೊದ ‘ಚಿಲ್ಡ್ರನ್ಸ್‌ ಮೆಮೋರಿಯಲ್‌ ಆಸ್ಪತ್ರೆ’ಯಲ್ಲಿ ಕೆಲಸ ಮಾಡುವ ಅವಕಾಶ ದೊರಕಿತು. ಈಗ ವೈದ್ಯಕೀಯ ಲೋಕದಲ್ಲಿ ಮಕ್ಕಳ ತಜ್ಞೆಯಾಗಿ ಹೆಸರು ಮಾಡಿರುವ ಮಗಳು ಆಶಾ ಆಗ ಹತ್ತು ತಿಂಗಳ ಮಗು. ಹೀಗಾಗಿ ತುಸು ಬೇಸರದಿಂದಲೇ ತಾಯಿ–ಮಗುವನ್ನು ಬಿಟ್ಟು ಸಪ್ತಸಾಗರ ದಾಟಬೇಕಾದ ಅನಿವಾರ್ಯತೆಗೆ ಸಿಲುಕಿದ್ದೆ.

ಆಗ ವಿಮಾನದಲ್ಲಿ ಪ್ರಯಾಣಿಸುವಷ್ಟು ಹಣ ನನ್ನ ಬಳಿ ಇರಲಿಲ್ಲ. ಮಿಗಿಲಾಗಿ ವಿಮಾನ ಪ್ರಯಾಣ ಎಂದರೆ ಮೈಯಲ್ಲಿ ನಡುಕ. ಸ್ಟ್ರಥಡಾನ್‌ ಎಂಬ ಹಡಗಿನಲ್ಲಿ 21 ದಿನಗಳ ಪಯಣವದು. 600 ಪ್ರಯಾಣಿಕರಿದ್ದರು. ಊಟ ತಿಂಡಿಯ ಸೌಲಭ್ಯಕ್ಕೆ ಕೊರತೆ ಇರಲಿಲ್ಲ, ಮನರಂಜನೆಗೂ. ಹಡಗಿನಲ್ಲಿ ಲಂಡನ್‌ ತಲುಪಿ, ಅಲ್ಲಿಂದ ಲಿವರ್‌ಪೂಲ್‌ಗೆ ರೈಲಿನಲ್ಲಿ ಪ್ರಯಾಣ. ಮತ್ತೆ ಹಡಗಿನಲ್ಲಿ ನ್ಯೂಯಾರ್ಕ್‌ಗೆ ಯಾನ. ಅದು ಜಗತ್ತಿನಲ್ಲಿಯೇ ಅತಿ ದೊಡ್ಡ ಹಡಗು. ಆಟಕ್ಕೆ, ಈಜಾಡಲು ಸಹ ಸೌಲಭ್ಯವಿದ್ದ ಅತ್ಯಾಧುನಿಕ ಹಡಗು. ಆರನೇ ದಿನ ಬೆಳಗಿನ ಜಾವ ನ್ಯೂಯಾರ್ಕಿನ ದಡ ತಲುಪುವ ಮುನ್ನ ಕಂಡ ಲಿಬರ್ಟಿ ಪ್ರತಿಮೆಯ ಸೊಬಗು ಹೊಸತೊಂದು ಜಗತ್ತಿಗೆ ಕಾಲಿಟ್ಟೆನೇನೋ ಎನ್ನಿಸಿತು.

ಬಿಡುವಿಲ್ಲದ ಒತ್ತಡದ ಕೆಲಸದ ನಡುವೆಯೇ ಷಿಕಾಗೊದ ಆಸ್ಪತ್ರೆಯ ಪರಿಸರ ಕಲಿಸಿದ್ದು ಸಾಕಷ್ಟು. ಆಸ್ಪತ್ರೆಯ ಮುಖ್ಯ ನಿರ್ದೇಶಕ ಡಾ. ಬಿಗ್ಲರ್‌ ಅವರ ಗರಡಿಯಲ್ಲಿ ಕಠಿಣ ತರಬೇತಿ. ಮೂರು ದಿನಕ್ಕೊಮ್ಮೆ 24 ಗಂಟೆ ಕರ್ತವ್ಯ. ಉಳಿದಂತೆ ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ರೋಗಿಗಳ ತಪಾಸಣೆ, ಚಿಕಿತ್ಸೆ ಕೆಲಸ. ಅಲ್ಲಿ ತರಬೇತಿ ಪೂರ್ಣಗೊಳಿಸಿದ ಬಳಿಕ ಲಿವರ್‌ಪೂಲ್‌ಗೆ ತೆರಳಿ ಉಷ್ಣ ಪ್ರದೇಶಗಳಲ್ಲಿ ಕಂಡು ಬರುವ ಕಾಯಿಲೆಗಳ ಕುರಿತು ತರಬೇತಿ ಪಡೆದೆ. ‘ಗ್ರೇಟ್‌ ಆರ್ಮನ್‌ ಸ್ಟ್ರೀತ್‌’ ಆಸ್ಪತ್ರೆಯಲ್ಲಿ 18 ತಿಂಗಳು ಸ್ಥಾನಿಕ ವೈದ್ಯನಾಗಿ ಕೆಲಸ ಮಾಡಿದೆ.

ಮಗ ನವೀನ್ ಹುಟ್ಟಿದ್ದು ಲಂಡನ್‌ನಲ್ಲಿ. ವಿಪರೀತ ಚಳಿಯ ಕಾಲವದು. ಇಡೀ ಲಂಡನ್‌ ಚಳಿಯಿಂದ ತತ್ತರಿಸಿತ್ತು. ನೀರು ಹೆಪ್ಪುಗಟ್ಟುವಂತಹ ಶೀತ. ಅನೇಕರು ಶ್ವಾಸಕೋಶದ ಕಾಯಿಲೆಗಳಿಂದ ಮೃತಪಟ್ಟಿದ್ದರು. ಒಮ್ಮೆ ಕರ್ತವ್ಯದಲ್ಲಿದ್ದಾಗ ಮನೆಯಿಂದ ಫೋನ್ ಬಂತು. ‘ಮಗುವಿಗೆ ಹುಷಾರಿಲ್ಲ’ ಎಂದು ಹೆಂಡತಿ ಗಾಬರಿಗೊಂಡಿದ್ದಳು. ಅಂದು ನನ್ನ ಆರು ತಿಂಗಳ ಮಗುವಿಗೆ ನಾನೇ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ.

ಆಸ್ಪತ್ರೆಯಲ್ಲಿ ಪಾಪ್ ಗಾಯಕ
1962ರಲ್ಲಿ ಡಯಾನಾ ಎಂಬ ಬಾಲಕಿ ಮೂತ್ರಪಿಂಡ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಆಕೆ ಬದುಕುವುದು ಅಸಾಧ್ಯ ಎಂದು ಖಚಿತವಾಗಿತ್ತು. ನಾನು ಬಾಲಕಿಯೊಂದಿಗೆ ಮಾತನಾಡಿ ಆಕೆಯ ಆಸೆ ತಿಳಿದುಕೊಂಡೆ. ಪ್ರಸಿದ್ಧ ಪಾಪ್‌ ಗಾಯಕ ಕ್ಲಿಫ್ ರಿಚರ್ಡ್‌ನನ್ನು ನೋಡಬೇಕೆನ್ನುವುದು ಆಕೆಯ ಅಂತಿಮ ಬಯಕೆಯಾಗಿತ್ತು. ಸದಾ ಬಿಜಿಯಾಗಿರುವ ಆತ ಬರುತ್ತಾನೋ ಇಲ್ಲವೋ ಎಂಬ ಅನುಮಾನದೊಂದಿಗೇ ದೂರವಾಣಿ ಮೂಲಕ ಸಂಪರ್ಕಿಸಿ ಮನವಿ ಮಾಡಿದೆ. ಆತ ನಾನೇ ನಿಮ್ಮ ಆಸ್ಪತ್ರೆಗೆ ಬರುತ್ತೇನೆ ಎಂದು ತಿಳಿಸಿದ. ಹೂವು, ಹಣ್ಣು, ಚಾಕೊಲೆಟ್‌, ಹೊಸ ಬಟ್ಟೆಗಳನ್ನು ತಂದು ಆಸ್ಪತ್ರೆಯಲ್ಲಿನ ಮಕ್ಕಳಿಗೆಲ್ಲ ಹಂಚಿದ. ಡಯಾನಾ ಜತೆ ಕಾಲ ಕಳೆದು ಆಕೆಗಾಗಿ ಹಾಡೊಂದನ್ನು ಹಾಡಿದ. ಇದಾದ ಕೆಲವೇ ದಿನಗಳಲ್ಲಿ ಡಯಾನಾ ಕೊನೆಯುಸಿರೆಳೆದಳು. ರೋಗಿಯು ಕೊನೆ ಕಾಲದಲ್ಲಿ ಸಂತೋಷದಿಂದ ಇರಬೇಕೆಂದು, ಆತನ ಕೊನೆಯ ಆಸೆಯನ್ನು ಈಡೇರಿಸುವುದು ಅಲ್ಲಿನ ಸಂಪ್ರದಾಯ. ಅದಕ್ಕೆ ಅಲ್ಲಿನ ಕಲಾವಿದರು, ತಾರೆಯರು ಕೂಡ ಸ್ಪಂದಿಸುತ್ತಾರೆ. ಬೆಂಗಳೂರಿನಲ್ಲಿ ಮಕ್ಕಳ ಆಸ್ಪತ್ರೆಗೆ ದೇಣಿಗೆ ಸಂಗ್ರಹಿಸುವಾಗ ರಾಜ್ಯದ ಮಹಾನ್ ಕಲಾವಿದರೊಬ್ಬರನ್ನು ಸಂಪರ್ಕಿಸಿದ್ದೆ. ನಾಲ್ಕಾರು ಬಾರಿ ಅಲೆದಾಡಿದ ಬಳಿಕ ಅವರಿಂದ ಸಿಕ್ಕಿದ್ದು ನಕಾರಾತ್ಮಕ ಪ್ರತಿಕ್ರಿಯೆ.

ಇದೇ ರೀತಿ 12 ವರ್ಷದ ಬಾಲಕನೊಬ್ಬನಿಗೆ ಓಡಾಡಲು ಗಾಲಿ ಕುರ್ಚಿಯ ಅಗತ್ಯವಿತ್ತು. ಪೋಷಕರು ಗಾಲಿ ಕುರ್ಚಿಗಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದು ಇನ್ನೂ ಬಾರದಿದ್ದರಿಂದ ನಾನೇ ಸಚಿವಾಲಯಕ್ಕೆ ಕರೆ ಮಾಡಿದೆ. ಅಲ್ಲಿ ನೇರವಾಗಿ ನನ್ನ ಬಳಿ ಮಾತನಾಡಿದ್ದು ಅಲ್ಲಿನ ಆರೋಗ್ಯ ಸಚಿವರು! ನನಗೆ ಗಾಬರಿಯಾಗಿ ಕ್ಷಮೆ ಕೋರಿದೆ. ಆದರೆ ಅವರು ‘ಗಾಲಿ ಕುರ್ಚಿ ಕಳಿಸಲು ತಡವಾದುದ್ದಕ್ಕೆ ಕ್ಷಮಿಸಿ’ ಎಂದು ಮರುದಿನವೇ ಅದನ್ನು ಆಸ್ಪತ್ರೆಗೆ ತಲುಪಿಸಿದ್ದರು.

ಮರಳಿ ತವರಿಗೆ
1963ರ ಜೂನ್‌ನಲ್ಲಿ ಲಂಡನ್‌ನಿಂದ ಭಾರತಕ್ಕೆ ಮರಳಿದೆ. ನನ್ನೂರು ಬೆನಕನಹಳ್ಳಿಗೆ ಹೋದಾಗ ಅದ್ದೂರಿ ಸ್ವಾಗತ ಸಿಕ್ಕಿತ್ತು. ಆಗಸ್ಟ್‌ನಲ್ಲಿ ನನ್ನ ಗುರುಗಳಾದ ಡಾ. ಸಂಪತ್‌ ಲೋಕನಾಥನ್‌ ಅವರು ವಾಣಿ ವಿಲಾಸ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡುವುದರ ಜತೆಗೆ ಆ ಹೊಣೆಯನ್ನು ನನಗೇ ವಹಿಸಿಕೊಟ್ಟರು.

ಎರಡು ವರ್ಷ ಹುಬ್ಬಳ್ಳಿಯ ‘ಕೆಎಂಸಿ’ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕನಾಗಿದ್ದೆ. 1963ರಿಂದ 1988ರವರೆಗೆ ವಾಣಿ ವಿಲಾಸದಲ್ಲಿ ಸಹಾಯಕ ವೈದ್ಯ, ಸಹಾಯಕ ಪ್ರಾಧ್ಯಾಪಕ ಮತ್ತು ಅಧೀಕ್ಷಕ ಹುದ್ದೆಗಳಲ್ಲಿ ಕೆಲಸ ಮಾಡಿದೆ. ಈ ಅವಧಿಯಲ್ಲಿ ಇಲ್ಲಿ ಅನೇಕ ಅತ್ಯಾಧುನಿಕ ಸೌಲಭ್ಯ, ಉಪಕರಣಗಳನ್ನು ಅಳವಡಿಸಲಾಯಿತು ಎಂಬ ಹೆಮ್ಮೆ ನನ್ನದು. ಈ ಮಧ್ಯೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಅಧೀಕ್ಷಕನಾಗಿ, ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದೆ.

ಒಮ್ಮೆ ಶಿಕ್ಷಕರೊಬ್ಬರು ತಮ್ಮ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದರು. ವಾಂತಿ–ಬೇಧಿಯಿಂದ ಬಳಲುತ್ತಿದ್ದ ಮಗು ಸಂಪೂರ್ಣ ಚೇತರಿಸಿಕೊಂಡಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಅವರು ನನ್ನ ಕೆನ್ನೆಗೆ ಬಾರಿಸಿದ್ದರು. ತಾಳ್ಮೆಯಿಂದಲೇ ಆ ಸನ್ನಿವೇಶ ಎದುರಿಸಬೇಕಾಗಿತ್ತು. ಮಗು ಚೇತರಿಸಿಕೊಂಡು ಮನೆಗೆ ಕಳುಹಿಸುವಾಗ, ಆ ಶಿಕ್ಷಕರು ಎಲ್ಲರೆದುರು ನನ್ನ ಕಾಲಿಗೆ ಬಿದ್ದು ಕ್ಷಮಿಸುವಂತೆ ಕೇಳಿದ್ದರು. ಕೆಲವೊಮ್ಮೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾವು ಧೃತಿಗೆಡಬಾರದು ಎಂಬ ಪಾಠವನ್ನು ಕಲಿತಿದ್ದೆ. ಆದರೆ ಎಲ್ಲ ಸಂದರ್ಭಗಳಲ್ಲಿಯೂ ಅದು ಸಾಧ್ಯವಾಗುವುದಿಲ್ಲ. 1980ರಲ್ಲಿ ಅಖಿಲ ಭಾರತ ಮಕ್ಕಳ ತಜ್ಞರ ಸಮ್ಮೇಳನ ನಡೆಸಲು ನನ್ನನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ಮಗಳು ನಿಶಾಳ ಸಾವಿನ ನೋವಿನಲ್ಲಿದ್ದ ನಾನು ಮಾನಸಿಕ ಸ್ಥೈರ್ಯ ಕಳೆದುಕೊಂಡಿದ್ದೆ. ಸಹೋದ್ಯೋಗಿಗಳು, ವಿದ್ಯಾರ್ಥಿಗಳೆಲ್ಲರೂ ನನ್ನ ಜೊತೆಗೆ ನಿಂತು ‘ನಾವಿರುತ್ತೇವೆ’ ಎಂಬ ಧೈರ್ಯ ತುಂಬಿದ್ದರು. 

ಅರಳಿದ ಹೂವು
‘ವಾಣಿ ವಿಲಾಸ ಆಸ್ಪತ್ರೆ’ಯಲ್ಲಿ ಮಕ್ಕಳ ವಿಭಾಗವಿತ್ತು. ಆದರೆ ಮಕ್ಕಳಿಗಾಗಿಯೇ ಪ್ರತ್ಯೇಕ ಆಸ್ಪತ್ರೆ ನಿರ್ಮಿಸುವುದು ಡಾ. ಬೋಪಯ್ಯ ಮತ್ತು ಡಾ. ಸಂಪತ್‌ ಲೋಕನಾಥನ್‌ ಅವರ ಕನಸಾಗಿತ್ತು. ಅದು ನನ್ನ ಕನಸಾಗಿಯೂ ಬೆಳೆಯಿತು. ಆಸ್ಪತ್ರೆಯ ಶಿಶು ವಿಭಾಗದ ಮುಖ್ಯಸ್ಥನಾಗಿದ್ದಾಗ ಕೊನೆಗೂ ಈ ಕನಸು ಸಾಕಾರಗೊಳ್ಳುವ ದಿನ ಬಂತು. ನಾನೇ ನಿಂತು ಮೂರು ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದೆ. ಇನ್ನೂ ಹಲವರು ಸಂಸದರು ತಮ್ಮ ನಿಧಿಯಿಂದ ನೆರವು ನೀಡಿದರು. ಉತ್ತರ ಕರ್ನಾಟಕದ ಶಿಕ್ಷಕರೊಬ್ಬರು ಒಳ್ಳೆಯ ಕೆಲಸ ಮಾಡುತ್ತಿದ್ದಿರೆಂದು ₹500 ಕಳುಹಿಸಿದ್ದನ್ನು ಇನ್ನೂ ಮರೆತಿಲ್ಲ. ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಹಕಾರದಿಂದ 1989ರಲ್ಲಿ ‘ಕರ್ನಾಟಕ ಮಕ್ಕಳ ಆರೋಗ್ಯ ಸಂಸ್ಥೆ’ ಪ್ರಾರಂಭವಾಯಿತು. ವಾಣಿ ವಿಲಾಸದಲ್ಲಿಯೇ ಅದಕ್ಕೊಂದು ಜಾಗ ಕಲ್ಪಿಸಲಾಗಿತ್ತು. ಕೆಲವರು ಅದರ ಫಲಕವನ್ನು ಕಿತ್ತುಹಾಕಿದ ಘಟನೆಗಳೂ ನಡೆದವು. ಆದರೆ ಅದಕ್ಕೊಂದು ಪ್ರತ್ಯೇಕ ಕಟ್ಟಡ ದೊರಕಿಸುವ ಪ್ರಯತ್ನ ಕೈ ಬಿಡಲಿಲ್ಲ. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೊನೆಗೂ ಕನಸು ನನಸಾಯಿತು.

ಅಂದಿನ ಆರೋಗ್ಯ ಸಚಿವೆ ‘ಇದಕ್ಕೆ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಎಂಬ ಹೆಸರಿಡಬೇಕು’ ಎಂದು ಒತ್ತಾಯಿಸಿದರು. ‘ಇಂದಿರಾ ಗಾಂಧಿ ಅಥವಾ ಸಂಜಯ್‌ ಗಾಂಧಿ– ಯಾವ ಹೆಸರು ಇಟ್ಟರೂ ತೊಂದರೆ ಇಲ್ಲ. ಮಕ್ಕಳಿಗಾಗಿ ಆಸ್ಪತ್ರೆ ಬೇಕು ಅಷ್ಟೇ’ ಎಂದಿದ್ದೆ ನಾನು. ಅನೇಕರ ನೆರವಿನಿಂದ 1999ರಲ್ಲಿ ಜೆ.ಎಚ್‌. ಪಟೇಲರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಸಂಸ್ಥೆ ದೇಶಕ್ಕೆ ಸಮರ್ಪಣೆಯಾಯಿತು. ಆಗಿನ ರಾಜಕಾರಣಿಗಳು ನೀಡಿದ ನೆರವನ್ನು ಈಗಿನವರು ನೀಡುತ್ತಾರೆ ಎಂದು ಊಹಿಸುವುದೇ ಕಷ್ಟ.

ಅಲ್ಲಿಂದ ಇಲ್ಲಿಯವರೆಗೂ ಹಂತ ಹಂತವಾಗಿ ಸಂಸ್ಥೆ ಬೆಳೆದು ಭಾರತದಲ್ಲಿಯೇ ಪ್ರಮುಖ ಮಕ್ಕಳ ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿದೆ. ಬದುಕಿನುದ್ದಕ್ಕೂ ವೈದ್ಯಕೀಯ ರಂಗದಲ್ಲಿ ಸಾಕಷ್ಟು ಸಿಹಿ–ಕಹಿಗಳನ್ನು ಉಂಡಿದ್ದೇನೆ. ಗೌರವ ಸಮ್ಮಾನಗಳನ್ನು ಪಡೆದಿದ್ದೇನೆ. ಸಾವು ಬದುಕಿನೊಂದಿಗೆ ಹೋರಾಡುವ ಮಕ್ಕಳನ್ನು ಕಂಡು ಹೃದಯ ಕಲಕಿದರೂ ವೈದ್ಯನ ದೃಷ್ಟಿಯಿಂದ ಅವರಿಗೆ ಚಿಕಿತ್ಸೆ ನೀಡುವ ಅನೇಕ ಸವಾಲಿನ ಗಳಿಗೆಗಳನ್ನು ಎದುರಿಸಿದ್ದೇನೆ. 86ರ ಹರೆಯದಲ್ಲಿ ಜೀವನೋತ್ಸಾಹ ಕುಂದಿಲ್ಲ. ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ನಿತ್ಯವೂ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಹೋಗುತ್ತೇನೆ. ಅಲ್ಲಿ ಒಂದು ಗಂಟೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತೇನೆ. ಅಂದುಕೊಂಡದ್ದನ್ನು ಸಾಧಿಸಿದ ಬದುಕಿನ ಸಾರ್ಥಕತೆಯ ನೆಮ್ಮದಿ ನನ್ನದು.

ನಿರೂಪಣೆ: ಅಮಿತ್‌ ಎಂ.ಎಸ್.
ಚಿತ್ರ: ಚಂದ್ರಹಾಸ ಕೋಟೆಕಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT